ಹೊಸದಿಲ್ಲಿ: ನಾಲ್ಕು ವರ್ಷದ ಮಗನನ್ನು ಗೋವಾದ (Goa Murder Case) ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆಗೈದ ಆರೋಪದ (Killer CEO) ಮೇಲೆ ಬೆಂಗಳೂರಿನ ಮಹಿಳೆ ಸುಚನಾ ಸೇಠ್ (Suchana Seth) ಬಂಧಿತಳಾಗಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾಳೆ. ಈಕೆ ಪತಿಯಿಂದ ಗೃಹ ದೌರ್ಜನ್ಯಕ್ಕೆ (Domestic Violence) ತುತ್ತಾಗಿರುವ ಬಗ್ಗೆ ಈ ಹಿಂದೆ ದೂರು ದಾಖಲಿಸಿದ್ದ ಹಾಗೂ ಜೀವನಾಂಶ ಅಪೇಕ್ಷಿಸಿದ್ದ ವಿವರಗಳು ಇದೀಗ ಹೊರಗೆ ಬಂದಿವೆ.
ಮೈಂಡ್‌ಫುಲ್ ಎಐ ಲ್ಯಾಬ್ಸ್ (mindful AI labs) ಸಿಇಒ ಸುಚನಾ ಸೇಠ್, ಪತಿ ಪಿಆರ್ ವೆಂಕಟ್‌ರಾಮನ್ ಜತೆಗೆ ಕಹಿಯಾದ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದು, ಅದರ ಕೇಸ್ ಇನ್ನೂ ನಡೆಯುತ್ತಿದೆ. ಇದರ ಜೊತೆಗೇ ಆಕೆ ಆಗಸ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಪತಿಯ ವಿರುದ್ಧ ದಾಖಲಿಸಿದ್ದಳು. ಪತಿ ವೆಂಕಟರಾಮನ್ ತನ್ನ ಹಾಗೂ ಮಗುವಿನ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸುಚನಾ ಆರೋಪಿಸಿದ್ದಳು. ಪತಿಯಿಂದ ವಿಚ್ಛೇದನ ಕೋರಿದ್ದು, ವಾರ್ಷಿಕ ₹1 ಕೋಟಿಗೂ ಅಧಿಕ ಆದಾಯ ಹೊಂದಿರುವ ಪತಿಯಿಂದ ಮಾಸಿಕ ₹2.5 ಲಕ್ಷ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು.
ಗೃಹ ದೌರ್ಜನ್ಯದ ಪುರಾವೆಗಾಗಿ ನ್ಯಾಯಾಲಯದ ಮುಂದೆ ಸುಚನಾ ವಾಟ್ಸಾಪ್ ಸಂದೇಶಗಳು, ಚಿತ್ರಗಳು, ವೈದ್ಯಕೀಯ ದಾಖಲೆಗಳು ಮುಂತಾದ ಸಾಕ್ಷ್ಯಗಳನ್ನು ಸಲ್ಲಿಸಿದ್ದಾಳೆ. ದೌರ್ಜನ್ಯ ಆಪಾದಿತ ವೆಂಕಟರಾಮನ್, ಮಗುವಿನ ಕೊಲೆ ನಡೆದಾಗ ಇಂಡೋನೇಷ್ಯಾದಲ್ಲಿದ್ದ. ಈತ ಕೌಟುಂಬಿಕ ಹಿಂಸೆಯ ಆರೋಪಗಳನ್ನು ನಿರಾಕರಿಸಿದ್ದಾನೆ. ಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದರಡಿಯಲ್ಲಿ ಆತ ತನ್ನ ಹೆಂಡತಿಯ ಮನೆಗೆ ಪ್ರವೇಶಿಸುವುದಾಗಲೀ, ಅವಳೊಂದಿಗೆ ಅಥವಾ ಮಗುವಿನೊಂದಿಗೆ ಫೋನ್ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ಮಾಡುವುದಾಗಲೀ ನಿರ್ಬಂಧಿಸಲಾಗಿತ್ತು.
ಆದರೂ, ತಂದೆಗೆ ವಾರಕ್ಕೊಮ್ಮೆ ಮಗನನ್ನು ಭೇಟಿ ಮಾಡುವ ಹಕ್ಕುಗಳನ್ನು ನೀಡಲಾಗಿತ್ತು. ಪ್ರತಿ ಭಾನುವಾರ ಅವರು ಭೇಟಿಯಾಗುತ್ತಿದ್ದರು. ಇದು ಸುಚನಾ ಸೇಠ್‌ಳಲ್ಲಿ ಅಸಮಾಧಾನ ಹುಟ್ಟಿಸಿತ್ತು. ಇದರಿಂದ ತಂದೆ- ಮಗು ಅನ್ಯೋನ್ಯತೆ ಬೆಳೆಸಿಕೊಳ್ಳಬಹುದು ಎಂದು ಆಕೆ ಶಂಕಿಸಿದ್ದಳು. ಕೌಟುಂಬಿಕ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12ರಂದು ಕೊನೆಯದಾಗಿ ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ಒಂದು ವಾರದ ಬಳಿಕ ಸುಚನಾ ಸೇಠ್ ಮಗನನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್ ಚೆಕ್‌ಇನ್ ಆಗಿದ್ದಳು. ಅಲ್ಲಿಂದ ಮಗುವಿನ ಶವವನ್ನು ಸೂಟ್‌ಕೇಸ್‌ಗೆ ತುಂಬಿಸಿಕೊಂಡು ಹೊರಬಿದ್ದಿದ್ದಳು. ಅನುಮಾನದ ಆಧಾರದಲ್ಲಿ ಆಕೆಯನ್ನು ಬಂಧಿಸಿದಾಗ ಹತ್ಯೆ ನಡೆಸಿದ್ದು ತಿಳಿದುಬಂದಿತ್ತು. ಕೊಲೆಗೆ ಈಕೆ ಪೂರ್ವಯೋಜಿತ ಸಂಚು ನಡೆಸಿದ್ದಳು ಎಂಬುದಕ್ಕೆ ಪೂರಕ ಸಾಕ್ಷ್ಯವಾಗಿ ಈಕೆ ಉಳಿದಿದ್ದ ರೂಮಿನಲ್ಲಿದ್ದ ಖಾಲಿ ಕೆಮ್ಮು ಸಿರಪ್ ಬಾಟಲಿಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.
ಸುಚನಾ ಸೇಠ್ ಮತ್ತು ರಾಮನ್ 2010 ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಮಗ ಆಗಸ್ಟ್ 2019ರಲ್ಲಿ ಜನಿಸಿದ್ದ. ಮಾರ್ಚ್ 2021ರಿಂದ ಆಕೆ ತನ್ನ ಪತಿಯಿಂದ ದೂರವಾಗಿ ವಾಸಿಸಲು ಆರಂಭಿಸಿದ್ದಳು.
ಇದನ್ನೂ ಓದಿ: Killer CEO : ಸುಚನಾ ಸೇಠ್ ಬಂಧನವೇ ರೋಚಕ; ಪೊಲೀಸರ ಕೈಹಿಡಿದ ಕೊಂಕಣಿ