ಕೋಲ್ಕತಾ: ನಗರದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ (RG Kar Hospital) ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆ (Kolkata Doctor Murder Case) ಪ್ರಕರಣದಲ್ಲಿ ಇನ್ನಷ್ಟು ಬೀಭತ್ಸ (Kolkata horror) ವಿವರಗಳು ಹೊರಬೀಳುತ್ತಿವೆ. 31 ವರ್ಷದ ಕಿರಿಯ ವೈದ್ಯೆಯ (Junior Doctor) ಮೇಲೆ ಅತ್ಯಾಚಾರ (Physical Abuse) ಎಸಗಿ ಕೊಲೆಗೈದ ಕಾಮುಕ ಹಿಂದಿನ ದಿನ ರಾತ್ರಿ ನಗರದ ಎರಡು ವೇಶ್ಯಾಗೃಹಗಳಿಗೆ (brothels) ಭೇಟಿ ನೀಡಿದ್ದ ಎಂದು ಬಯಲಾಗಿದೆ.
ಆರೋಪಿ ಸಂಜಯ್ ರಾಯ್ ಆಗಸ್ಟ್ 8ರ ರಾತ್ರಿ ಕೋಲ್ಕತಾದ ಸೋನಾಗಚಿ ರೆಡ್ ಲೈಟ್ ಏರಿಯಾದಲ್ಲಿದ್ದ. ಅಲ್ಲಿ ಆತ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೂನಿಯರ್ ಡಾಕ್ಟರ್ ಮಲಗಿದ್ದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಆತ ಪ್ರವೇಶಿಸುತ್ತಿರುವುದು ಮತ್ತು ಹೊರಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಆತನ ಬಂಧನಕ್ಕೆ ನೆರವಾಗಿವೆ.
ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ದೇಶದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಮತ್ತೊಂದು ಅತ್ಯಾಚಾರ ಪ್ರಕರಣಕ್ಕಾಗಿ ದೇಶ ಕಾಯಲು ಸಾಧ್ಯವಿಲ್ಲ” ಎಂದು ಕಟುವಾಗಿ ಹೇಳಿದ್ದರು. ಅಸ್ತಿತ್ವದಲ್ಲಿರುವ ಕಾಯ್ದೆಗಳು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸಾಂಸ್ಥಿಕ ಸುರಕ್ಷತಾ ಮಾನದಂಡಗಳನ್ನು ಖಾತರಿಪಡಿಸುವುದಿಲ್ಲ. ಪುರುಷಪ್ರಭುತ್ವದಿಂದಾಗಿ ಮಹಿಳಾ ವೈದ್ಯರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಸಿಜೆಐ ಚಂದ್ರಚೂಡ್ ಗಮನಿಸಿದ್ದರು.
ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೇಳಿದೆ. ಕೋರ್ಟ್ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲನಾದ ಡಾ. ಸಂದೀಪ್ ಘೋಷ್, ಕೋಲ್ಕತ್ತಾ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅನುಪ್ ದತ್ತಾ, ಸಂಜಯ್ ರಾಯ್ ಜೊತೆಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಕೆಲವೇ ದಿನಗಳಲ್ಲಿ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದಾನೆ. ಈತ ಘಟನೆಯ ನಂತರ ಸೆಮಿನಾರ್ ಹಾಲ್ ಬಳಿಯ ಕೊಠಡಿಗಳನ್ನು ಕ್ಲೀನ್ ಮಾಡಲು ಆದೇಶಿಸಿದ್ದ. ಅಪರಾಧದ ಹಿಂದೆ ಪಿತೂರಿ ಇದೆಯೇ ಎಂದು ಕಂಡುಹಿಡಿಯಲು ಸಿಬಿಐ ಈತನನ್ನು ಪ್ರಶ್ನಿಸುತ್ತಿದೆ. ಅಂದು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಇಂಟರ್ನ್‌ಗಳೊಂದಿಗೆ ಸಂದೀಪ್ ಘೋಷ್ ಅವರ ಉತ್ತರಗಳನ್ನು ಸಿಬಿಐ ಪರಿಶೀಲಿಸುತ್ತಿದೆ.