ನವ ದೆಹಲಿ: ಗಾಯಕ- ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್ ಲಾರೆನ್ಸ್ ಬಿಷ್ಣೋಯಿ ಎಂದು ದೆಹಲಿ ಪೊಲೀಸರು ಬುಧವಾರ ಹೇಳಿದ್ದಾರೆ.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಈಗ ಜೈಲಿನಲ್ಲಿದ್ದಾನೆ. ಇವನ ಜೊತೆಗೆ ಐವರು ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಮಹಾಕಾಲ ಎಂಬ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರಿಗೆ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವನು ಶೂಟರ್‌ಗಳಲ್ಲಿ ಒಬ್ಬನ ನಿಕಟ ಸಹಚರನಾಗಿದ್ದಾನೆ. ಆದರೆ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಹತ್ಯೆಯಲ್ಲಿ ಕನಿಷ್ಠ ಐದು ಮಂದಿ ಭಾಗಿಯಾಗಿದ್ದಾರೆ. ನಿಜವಾದ ಶೂಟರ್‌ಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದೆಹಲಿ ವಿಶೇಷ ಪೊಲೀಸ್ ಕಮಿಷನರ್ ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ.
ಈ ಮಧ್ಯೆ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯನಾಗಿರುವ, ಕೆನಡಾ ಮೂಲದ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕೋರಲಾಗಿದೆ. ಈಗಾಗಲೇ ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಈ ನೋಟಿಸ್ ದಾರಿ ಮಾಡಿಕೊಡುತ್ತದೆ.
ಪರಾರಿಯಾಗಿರುವ ಬ್ರಾರ್, ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ. ಕಳೆದ ವರ್ಷ ನಡೆದ ಯುವ ಅಕಾಲಿ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ. ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಮೂಲದವನು. 2017ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದ.
ಪಂಜಾಬ್ ಸರ್ಕಾರದ ನೀಡಿರುವ ಮಾಹಿತಿ ಪ್ರಕಾರ, ದರೋಡೆಕೋರ- ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂದಾ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಕೋರಲಾಗಿದೆ.
ಪಂಜಾಬ್ ಸರ್ಕಾರ ಮೂಸೆವಾಲಾ ಅವರ ಭದ್ರತೆಯನ್ನು ಮೊಟಕುಗೊಳಿಸಿದ ಒಂದು ದಿನದ ನಂತರ, ಮೇ 29ರಂದು ಪಂಜಾಬ್‌ನ ಮಾನ್ಸಾದಲ್ಲಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಮತ್ತು ಸ್ನೇಹಿತ ಕೂಡ ಗಾಯಗೊಂಡಿದ್ದಾರೆ.
ಹತ್ಯೆಯ ನಂತರ ಸಿಕ್ಕಿದ ಸಿಸಿಟಿವಿ ಫೂಟೇಜ್ ಆಧರಿಸಿ ತನಿಖೆ ನಡೆಸಲಾಗಿತ್ತು. ಎಜಿಟಿಎಫ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಪಂಜಾಬ್ ಪೊಲೀಸರು ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು. ಇದು ಎರಡು ಗುಂಪುಗಳ ನಡುವಿನ ಗ್ಯಾಂಗ್‌ವಾರ್ ಎಂದು ರಾಜ್ಯ ಪೊಲೀಸರು ಬಣ್ಣಿಸಿದ್ದು, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೈವಾಡವನ್ನು ಮೊದಲೇ ಶಂಕಿಸಿದ್ದರು.
ಲಾರೆನ್ಸ್ ಬಿಷ್ಣೋಯಿ ಮತ್ತು ಮೂಸೆವಾಲಾ ನಡುವೆ ಹಗೆತನವಿತ್ತು. ಬ್ರಾರ್ ಮತ್ತು ಬಿಷ್ಣೋಯಿ ಸಂಚು ರೂಪಿಸಿ ಮೂಸೆವಾಲಾರನ್ನು ಕೊಂದಿದ್ದಾರೆ. ಕಳೆದ ವರ್ಷ ಆಗಸ್ಟ್ 7ರಂದು ಅಕಾಲಿ ದಳದ ಯುವ ನಾಯಕ ವಿಕ್ರಮಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿದ್ದುಖೇರಾ ಹತ್ಯೆಯಲ್ಲಿ ಮೂಸೆವಾಲಾ ಭಾಗಿಯಾಗಿದ್ದರು. ಇದು ಬಿಷ್ಣೋಯಿ ಪ್ರತೀಕಾರಕ್ಕೆ ಕಾರಣವಾಗಿದೆ.
ಇನ್ನಷ್ಟು ಓದಿಗಾಗಿ: Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?
ಬಿಷ್ಣೋಯ್ ತನಿಖೆಗೆ ತುಂಬಾ ಅಸಹಕಾರ ತೋರಿದ್ದಾನೆ. ಆದರೆ ವಿಚಾರಣೆಯ ಸಮಯದಲ್ಲಿ ತಮ್ಮ ಗ್ಯಾಂಗ್ ಸದಸ್ಯರು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಸಂಚು ರೂಪಿಸಿದವರಲ್ಲಿ ಗೋಲ್ಡಿ ಬ್ರಾರ್ ಒಬ್ಬರು ಎಂದು ಬಹಿರಂಗಪಡಿಸಿದ್ದಾನೆ. ಆದರೆ ಕೊಲೆ ಮಾಡಿದವರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ಶ್‌ದೀಪ್ ಪಾತ್ರ?
ಈ ನಡುವೆ, ಕೊಲೆಯಲ್ಲಿ ಖಲಿಸ್ತಾನಿ ಕಾರ್ಯಕರ್ತ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ಪಾತ್ರವನ್ನೂ ತನಿಖೆ ನಡೆಸಲಾಗುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ಇತ್ತೀಚೆಗೆ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಕೆನಡಾ ಮೂಲದ ಈತ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನ ಸಹಚರ.
ಕಾನೂನುಬಾಹಿರ ಚಟುವಟಿಕೆ, ಮಾದಕ ದ್ರವ್ಯ ಪೂರೈಕೆ, ಶಸ್ತ್ರಾಸ್ತ್ರಗಳ ಕಾಯಿದೆಯ ಅಡಿಯಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಅರ್ಷದೀಪ್, ನಿಜ್ಜರ್ ಮತ್ತು ಇತರ ಐವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಪಂಜಾಬ್‌ನಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಇತರ ಧರ್ಮದ ವ್ಯಕ್ತಿಗಳನ್ನು ಅಪಹರಿಸಿ ನಂತರ ಕೊಲ್ಲುವ ನಿಜ್ಜರ್‌ನ ಯೋಜಿತ ಭಯೋತ್ಪಾದಕ ಸಂಚಿನ ಭಾಗವಾಗಿದ್ದಾರೆ ಅರ್ಶ್‌ದೀಪ್ ಮತ್ತು ಇತರರು.
ಎಂಟು ಮಂದಿಯ ಬಂಧನ
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎಂಟು ಮಂದಿಯನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಶೂಟರ್‌ಗಳನ್ನು ಗುರುತಿಸಲಾಗಿದೆ. ಬಂಧಿತರನ್ನು ಸಂದೀಪ್ ಸಿಂಗ್ ಅಲಿಯಾಸ್ ಕೆಕ್ಡಾ, ಮನ್‌ಪ್ರೀತ್ ಸಿಂಗ್ ಅಲಿಯಾಸ್ ಮನ್ನಾ, ತಲ್ವಾಂಡಿ ಸಾಬೋ, ಮನ್‌ಪ್ರೀತ್ ಭಾವು, ಸರಾಜ್ ಮಿಂಟು, ಪ್ರಭದೀಪ್ ಸಿಧು, ಮೋನು ದಾಗರ್, ಪವನ್ ಬಿಷ್ಣೋಯ್ ಮತ್ತು ನಸೀಬ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಬಳಸಿದ AN-94 ರೈಫಲ್, AK-47ಕ್ಕಿಂತ ಅಪಾಯಕಾರಿ