Site icon Vistara News

Mysterious Death: 41 ಕೋಟಿಯ ಬಂಗಲೆಯಲ್ಲಿ ದಂಪತಿ, ಮಗಳ ನಿಗೂಢ ಸಾವು

kamal

kamal

ನ್ಯೂಯಾರ್ಕ್‌: ಭಾರತೀಯ ಮೂಲದ ಶ್ರೀಮಂತ ದಂಪತಿ ಮತ್ತು ಅವರ ಹದಿಹರೆಯದ ಪುತ್ರಿ ಅಮೆರಿಕದ ಮ್ಯಾಸಚೂಸೆಟ್ಸ್ (Massachusetts) ರಾಜ್ಯದಲ್ಲಿ 5 ಮಿಲಿಯನ್ ಡಾಲರ್ (41 ಕೋಟಿ ರೂ.) ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ (Mysterious Death).

ರಾಕೇಶ್ ಕಮಲ್ (57), ಅವರ ಪತ್ನಿ ಟೀನಾ (54) ಮತ್ತು ಅವರ 18 ವರ್ಷದ ಮಗಳು ಅರಿಯಾನಾ ಅವರ ಶವಗಳು ಗುರುವಾರ (ಡಿಸೆಂಬರ್‌ 28) ಸಂಜೆ 7.30ರ ಸುಮಾರಿಗೆ ಅವರ ಡೋವರ್ ಬಂಗಲೆಯಲ್ಲಿ ಪತ್ತೆಯಾಗಿವೆ ಎಂದು ನಾರ್ಫೋಕ್ ಜಿಲ್ಲಾ ಅಟಾರ್ನಿ (ಡಿಎ) ಮೈಕೆಲ್ ಮೊರಿಸ್ಸೆ ತಿಳಿಸಿದ್ದಾರೆ. ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ರೀನಾ ಮತ್ತು ರಾಕೇಶ್ ಕಮಲ್ ಈ ಹಿಂದೆ ಎಜುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದರು. ಕೌಟುಂಬಿಕ ಹಿಂಸಾಚಾರದಿಂದಾಗಿ ಈ ಹತ್ಯೆ ನಡೆದಿರಬಹುದೇ ಎಂಬ ಶಂಕೆಯೂ ಮೂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಕೇಶ್ ಕಮಲ್ ಶವದ ಬಳಿ ಬಂದೂಕು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.

ಕಾರಣ ನಿಗೂಢ

ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಈ ಕೃತ್ಯ ಎಸಗಿದವರು ಯಾರು ಎನ್ನುವ ವಿವರ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಕೊಲೆ ಅಥವಾ ಆತ್ಮಹತ್ಯೆ ಎನ್ನುವುದು ವೈದ್ಯಕೀಯ ಪರೀಕ್ಷೆಯ ಬಳಿಕ ತಿಳಿದು ಬರಲಿದೆ. ಹತ್ಯೆಗಳ ಹಿಂದಿನ ಉದ್ದೇಶದ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಸಮಸ್ಯೆ?

ದಂಪತಿ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ಕುಟುಂಬ ಸದಸ್ಯರಿಂದ ಯಾವುದೇ ಕರೆ ಇಲ್ಲದ ಕಾರಣ ಸಂಬಂಧಿಕರೊಬ್ಬರು ಸಂದೇಹಗೊಂಡು ಪರೀಕ್ಷಿಸಿದ ಹಿನ್ನೆಲೆಯಲ್ಲಿ ಈ ದುರಂತ ಬೆಳಕಿಗೆ ಬಂದಿದೆ. ಈ ಕುಟುಂಬ ಸದಸ್ಯರ ಬಗ್ಗೆ ಈ ಹಿಂದೆ ಯಾವುದೇ ದೂರು ದಾಖಲಾಗಿಲ್ಲ. ʼʼಮೇಲ್ನೋಟಕ್ಕೆ ಕುಟುಂಬದ ಸದಸ್ಯರ ನಡುವೆ ಯಾವುದೇ ಸಮಸ್ಯೆಗಳಿರಲಿಲ್ಲ. ಕೌಟುಂಬಿಕ ಸಮಸ್ಯೆಗಳಿಲ್ಲ. ನೆರೆಹೊರೆಯವರು ಕೂಡ ಇದನ್ನೇ ಹೇಳಿದ್ದಾರೆʼʼ ಎಂದು ಜಿಲ್ಲಾ ಅಟಾರ್ನಿ ಮೈಕೆಲ್ ಮೊರಿಸ್ಸೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ರಾಕೇಶ್ ಕಮಲ್ ಕುಟುಂಬವು 19,000 ಚದರ ಅಡಿಯ ಈ ಬಂಗಲೆಯನ್ನು 2019ರಲ್ಲಿ 4 ಮಿಲಿಯನ್ ಡಾಲರ್‌ಗೆ (ಸುಮಾರು 33 ಕೋಟಿ ರೂ.) ಖರೀದಿಸಿದ್ದರು. ದುರಂತ ನಡೆದ ಸಮಯದಲ್ಲಿ ಕುಟುಂಬ ಸದಸ್ಯರು ಮಾತ್ರ ಬಂಗಲೆಯಲ್ಲಿ ವಾಸವಾಗಿದ್ದರು. ಡೋವರ್ ರಾಜ್ಯದ ಐಷರಾಮಿ ಪ್ರದೇಶಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Cyber Crime: ಕಾಣೆಯಾದ ಮಗು ಸಿಕ್ಕಿದೆ ಎಂದು 900 ಕುಟುಂಬಗಳಿಂದ ಹಣ ವಸೂಲಿ ಮಾಡಿದರು!

ಎಜುನೋವಾ ಕಂಪೆನಿಯನ್ನು ದಂಪತಿ 2016ರಲ್ಲಿ ಪ್ರಾರಂಭಿಸಿದ್ದರು. ಆದರೆ 2021ರಲ್ಲಿ ಇದನ್ನು ಮುಚ್ಚಲಾಗಿತ್ತು. ಟೀನಾ ಕಮಲ್ ಎಜುನೋವಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು. ಅವರು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನವದೆಹಲಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಿಯಾನಾ ವರ್ಮಾಂಟ್‌ನ ಮಿಡಲ್ಬರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಅವರು ನರವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version