ಹೊಸದಿಲ್ಲಿ/ನೋಯ್ಡಾ: ನಿಥಾರಿ ಸರಣಿ ಹತ್ಯೆಯ (Nithari Killings Case) ಆರೋಪಿ ಮೊನೀಂದರ್ ಸಿಂಗ್ ಪಂಧೇರ್ (Moninder Singh Pandher) ಇಂದು ಗ್ರೇಟರ್ ನೋಯ್ಡಾ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಹತ್ಯಾಕಾಂಡದ ಎಲ್ಲಾ ಆರೋಪದಿಂದ ಆತನನ್ನು ಅಲಹಾಬಾದ್ ಹೈಕೋರ್ಟ್ ಮುಕ್ತಗೊಳಿಸಿದ ಕೆಲವು ದಿನಗಳ ನಂತರ ಈತ ಹೊರಬಿದ್ದಿದ್ದಾನೆ.
ಅಲಹಾಬಾದ್ ಹೈಕೋರ್ಟ್ ಸೋಮವಾರ ಎರಡು ಪ್ರಕರಣಗಳಲ್ಲಿ ಮೊನೀಂದರ್ ಸಿಂಗ್ ಪಂಧೇರ್ ಮತ್ತು ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ, ಪಂಧೇರ್ ಮನೆಕೆಲಸಗಾರ ಸುರೇಂದ್ರ ಕೋಲಿಯನ್ನು (Surendra Koli) 12 ಪ್ರಕರಣಗಳಲ್ಲಿ ಖುಲಾಸೆಗೊಳಿಸಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಸುರೀಂದರ್ ಕೋಲಿ ಮತ್ತು ಮೊನೀಂದರ್ ಸಿಂಗ್ ಪಂಧೇರ್‌ರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಹೈಕೋರ್ಟ್ ಖುಲಾಸೆಗೊಳಿಸಿತ್ತು.
ನೋಯ್ಡಾದ ನಿಥಾರಿ ಸರಣಿ ಹತ್ಯೆಗಳ ಪ್ರಕರಣ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. 12 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ಸುರಿಂದರ್ ಕೋಲಿಯನ್ನು (Surendra Koli) ಹಾಗೂ ಎರಡು ಪ್ರಕರಣಗಳಲ್ಲಿ ಆತನ ಉದ್ಯೋಗದಾತ ಮೊನೀಂದರ್ ಸಿಂಗ್ ಪಂಧೇರ್‌ನನ್ನು (Moninder Singh Pandher) ಹೆಸರಿಸಲಾಗಿತ್ತು. ಕೆಳಗಿನ ಕೋರ್ಟ್ ನೀಡಿದ್ದ ಅವರ ಮರಣದಂಡನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಸೈಯದ್ ಅಫ್ತಾಬ್ ಹುಸೇನ್ ರಿಜ್ವಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಮರಣದಂಡನೆಗೆ ಗುರಿಯಾದ ಇಬ್ಬರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.
17 ವರ್ಷಗಳ ಹಿಂದೆ ಬೆಳಕಿಗೆ ಬಂದ ಪ್ರಕರಣ ಇದಾಗಿದೆ. 2006ರಲ್ಲಿ ಆರೋಪಿ ಪಂಧೇರ್ ಮನೆಯ ಹಿಂದಿನ ಚರಂಡಿಯಲ್ಲಿ ನೋಯ್ಡಾ ಪೊಲೀಸರು ಮಾನವ ಅವಶೇಷಗಳನ್ನು ಪತ್ತೆ ಮಾಡಿದ್ದರು. ತನಿಖೆಯ ವೇಳೆ ಕೋಲಿಯ ಬಗ್ಗೆ ಅನುಮಾನ ಮೂಡಿತ್ತು. ಕೋಲಿ ಹಾಗೂ ಈತನ ಮಾಲಿಕ ಪಂಧೇರ್‌ರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸರಣಿ ಹತ್ಯೆಗಳ ವಿಚಾರ ಬೆಳಕಿಗೆ ಬಂದಿತ್ತು. ಮನೆಯ ಸುತ್ತಮುತ್ತಲಿನ ಭೂಮಿಯನ್ನು ಅಗೆದಾಗ ಹತ್ತಾರು ಮಕ್ಕಳ ಶವಗಳು ಪತ್ತೆಯಾಗಿದ್ದವು.
ಪ್ರಕರಣವನ್ನು ನಂತರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ಗೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ವಿಚಾರಣೆಯ ಬಳಿಕ, 2005 ಮತ್ತು 2006ರ ಇವರಿಬ್ಬರೂ ಹಲವಾರು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಮಾಡಿ, ಕೊಲೆ ಎಸಗಿದ್ದಾರೆ ಎಂದು ಗೊತ್ತಾಯಿತು. ಸಿಬಿಐ ಇವರ ಮೇಲೆ 16 ಪ್ರಕರಣಗಳನ್ನು ದಾಖಲಿಸಿತು. ಇವೆಲ್ಲವೂ ಅಪಹರಣ, ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ್ದವು.
ಇವರ ಮೇಲಿನ ಆರೋಪಗಳನ್ನು ಸಿಬಿಐ ಕೋರ್ಟ್‌ನಲ್ಲಿ ಸಾಬೀತುಪಡಿಸಲಾಗಿತ್ತು. ಇವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇಬ್ಬರೂ ಹೈಕೋರ್ಟ್‌ಗೆ ಹೋಗಿದ್ದರು. ಈ ನಡುವೆ ಮಕ್ಕಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಬ್ಬರು ಪೊಲೀಸರನ್ನೂ ಅಮಾನತುಗೊಳಿಸಲಾಗಿದೆ.
ನೋಯ್ಡಾದ ಡಿ-5, ಸೆಕ್ಟರ್ 31ರಲ್ಲಿ ಈ ಭಯಾನಕ ಮನೆ ಇನ್ನೂ ನಿಂತಿದೆ. 435 ಚದರ ಮೀಟರ್‌ಗಳ ಈ ಮನೆಯನ್ನು ಪೂರ್ತಿ ಲೂಟಿ ಮಾಡಲಾಗಿದೆ. ಇದರೊಳಗಿರುವ ಎಲ್ಲ ವಸ್ತುಗಳು ಕಾಣೆಯಾಗಿವೆ. ಇದರ ಸುತ್ತಮುತ್ತ ವಾಸಿಸುತ್ತಿದ್ದ ಹಲವಾರು ಕುಟುಂಬಗಳು ಈ ಮನೆಯ ಬಳಿ ವಾಸಿಸಲು ಅಂಜಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಸಂತ್ರಸ್ತ ಮಕ್ಕಳ ಕುಟುಂಬಗಳಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಉದ್ಯೋಗಕ್ಕಾಗಿ ವಲಸೆ ಬಂದವರಾಗಿದ್ದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ನಿತಾರಿ ಹಂತಕರ ಖುಲಾಸೆ: ಸಮಾಜ ಯಾವ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು?