ಬೆಂಗಳೂರು: ಚೀನಾದಿಂದ ಕೋವಿಡ್ ಸೋಂಕು ಅಷ್ಟೇ ಭಾರತಕ್ಕೆ ಕಾಲಿಟ್ಟಿಲ್ಲ, ಜತೆಗೆ ಆನ್‌ಲೈನ್ ವಂಚನೆ ಮಾಡುವ ಖತರ್ನಾಕ್ ಗ್ಯಾಂಗು ಎಂಟ್ರಿ ಕೊಟ್ಟಿದ್ದು ಬರೋಬ್ಬರಿ 100 ಕೋಟಿ ರೂಪಾಯಿ ಲೂಟಿ ಮಾಡಿದೆ. 13 ಮಂದಿ ಚೀನಿಯರ ಗ್ಯಾಂಗ್ ಎರಡೇ ಎರಡು ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಅಂದಾಜು 100 ಕೋಟಿ ಲೂಟಿ ಮಾಡಿದೆ. ಚೈನೀಸ್ ಇನ್ವೆಸ್ಟ್ಮೆಂಟ್ ಆ್ಯಪ್ಗಳ ಗೋಲ್ಮಾಲ್ಗೆ ಭಾರತೀಯರ ಜೇಬು ಖಾಲಿಯಾಗಿದ್ದು, ಕೋಟಿ ಕೋಟಿ ಬಾಚಿ ಹೋದ 13 ವಂಚಕ ಚೀನಿಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಇದನ್ನೂ ಓದಿ | ಆನ್‌ಲೈನ್ ಬೆಟ್ಟಿಂಗ್ ಜಾಹೀರಾತುಗಳಿಂದ ದೂರವಿರುವಂತೆ ಮಾಧ್ಯಮಗಳಿಗೆ ಕೇಂದ್ರ ಸರಕಾರ ಸಲಹೆ
ಕೋವಿಡ್ ಕಾರಣದಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿದ್ದವರನ್ನೇ ಟಾರ್ಗೆಟ್ ಮಾಡಿದ್ದ ಚಾಲಾಕಿ ಚೀನಿಯರ ಗ್ಯಾಂಗ್, ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ನಂಬಿಸಿ, ಇನ್ವೆಸ್ಟ್ಮೆಂಟ್ ಆ್ಯಪ್ ಪರಿಚಯಿಸಿತ್ತು. ಕೀಪ್ ಶೇರರ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ, ಅದರಲ್ಲಿ ಸೆಲೆಬ್ರಿಟಿಗಳ ಫೋಟೋಗಳನ್ನು ಶೇರ್ ಮಾಡಿದರೆ ಇಷ್ಟು ಹಣ ನಿಮ್ಮ ಖಾತೆಗೆ ಬರಲಿದೆ ಎಂದು ದರ ನಿಗದಿ ಮಾಡುತ್ತಿದ್ದರು. ಅದರ ಜೊತೆಗೆ ಈ ಆ್ಯಪ್ನಲ್ಲಿ 3ರಿಂದ 6 ಸಾವಿರದ ಪ್ಲಾನ್ಗಳಲ್ಲಿ ಯಾವುದಾದರೂ ಒಂದನ್ನು ರಿಚಾರ್ಜ್ ಮಾಡಿಸಲೇಬೇಕೆಂಬ ನಿಯಮ ಸಹ ಇತ್ತು. ಇದನ್ನು ನಂಬಿದ ಜನರು ರಿಜಾರ್ಜ್ ಮಾಡಿ ಇತ್ತ ಕೆಲಸವೂ ಇಲ್ಲ, ಕಟ್ಟಿದ ಹಣವೂ ಇಲ್ಲದೇ ಕೈ ಖಾಲಿ ಮಾಡಿಕೊಂಡಿದ್ದರು. ಈ ಸಂಬಂಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.
ಚೀನಿಯರು ಕೆಲಸ ಕೊಡಿಸುವ ನೆಪದಲ್ಲಿ ಭಾರತೀಯರ ಆಧಾರ್, ಪ್ಯಾನ್ ಸೇರಿದಂತೆ ಇತರೆ ದಾಖಲೆಗಳನ್ನು ಪಡೆದು ಅವರ ಹೆಸರಿನಲ್ಲೇ ಸಾಲು ಸಾಲು ಕಂಪೆನಿಗಳನ್ನ ರಿಜಿಸ್ಟ್ರಾರ್ ಆಫ್ ಕಂಪನೀಸ್ನಲ್ಲಿ ರಿಜಿಸ್ಟರ್ ಮಾಡಿಸಿ, ಭಾರತೀಯರನ್ನೇ ಡೈರೆಕ್ಟರ್ಗಳಾಗಿ ಮಾಡುತ್ತಿದ್ದರು. ಆ್ಯಪ್ಗಳ ಮೂಲಕ ಬಂದ ಹಣವನ್ನು ಮೊದಲಿಗೆ ಕಂಪನಿ ನಿರ್ದೇಶಕರ ಖಾತೆಗೆ ಹಾಕಿಸಿ, ಅಲ್ಲಿಂದ ನಾನಾ ರೀತಿಯ ಖಾತೆಗಳಿಗೆ ಹಣವನ್ನು ವರ್ಗಾಯಿಸಿ, ಅಲ್ಲಿಂದ ಅದನ್ನು ವರ್ಚ್ಯುವಲ್ ಕರೆನ್ಸಿ ಆಗಿ ಬದಲಾಯಿಸಿ, ಸುಮಾರು 70-80 ಕೋಟಿಯಷ್ಟು ಹಣವನ್ನು ಚೀನಾಗೆ ರವಾನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ವಂಚನೆಯಾಗಿರುವುದು ಸುಮಾರು 100 ಕೋಟಿಯಾದರೆ, ಪೊಲೀಸರು ಸದ್ಯ 15 ಕೋಟಿ ಹಣವನ್ನು ಆರೋಪಿಗಳ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಿದ್ದಾರೆ. ಈ ಹಣವನ್ನು ಕಳೆದುಕೊಂಡಿರುವವರಿಗೆ ಹಿಂತಿರುಗಿಸಲು ಪೊಲೀಸರು ಮುಂದಾಗಿದ್ದಾರೆ.
ಕಳೆದ ವರ್ಷ ದಾಖಲಾಗಿದ್ದ 2 ವಂಚನೆ ಪ್ರಕರಣಗಳ ತನಿಖೆ ಆರಂಭಿಸಿದ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಆಗ 24 ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ 13 ಮಂದಿ ಚೀನಿಯರು ಸೇರಿದಂತೆ 99 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇವರಲ್ಲಿ ಈಗಾಗಲೇ ಬಂಧಿತರಾಗಿರುವ 24 ಮಂದಿಯಲ್ಲಿ ಕೆಲವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಈಗ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, 99 ಮಂದಿಗೆ ಸಮನ್ಸ್ ಕಳುಹಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ವಂಚಿಸಿರುವ 13 ಮಂದಿ ಚೀನಿಯರ ವಿರುದ್ಧ ಲುಕ್ ಔಟ್ ನೋಟೀಸ್ ನೀಡಲಾಗಿದೆ.
ಇದನ್ನೂ ಓದಿ | ಆನ್‌ಲೈನ್‌ನಲ್ಲಿ ಭಾರೀ ರಿಯಾಯಿತಿ ಆಸೆಗೆ ಬಿದ್ದು ₹3 ಲಕ್ಷ ಕಳೆದುಕೊಂಡ ಮಹಿಳೆ