ಇಸ್ಲಾಮಾಬಾದ್: ಹಿಂದುಗಳು ಅಲ್ಪಸಂಖ್ಯಾತರಾಗಿರುವ ಪಾಕಿಸ್ತಾನದಲ್ಲಿ (Pakistan) ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ದಿನೇದಿನೆ ಹೆಚ್ಚಾಗುತ್ತಿದೆ. ಬಲವಂತದ ಮತಾಂತರಕ್ಕೆ ಹೆಣ್ಣು ಮಕ್ಕಳು ಒಪ್ಪದಿದ್ದಾಗ ಅವರ ಮೇಲೆ ಅತ್ಯಾಚಾರ ಮಾಡಿದ ಹಲವು ಘಟನೆಗಳು ವರದಿಯಾಗಿವೆ. ಅದೇ ರೀತಿ ಇದೀಗ ವಿವಾಹಿತ ಮಹಿಳೆಯೊಬ್ಬರು ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ಮೇಲೆ ಮೂರು ದಿನ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ: Richest Hindus of Pakistan : ಇವರು ಪಾಕಿಸ್ತಾನದ ಶ್ರೀಮಂತ ಹಿಂದೂಗಳು! ಎಷ್ಟಿದೆ ಆಸ್ತಿ?
ಸಿಂಧ್ ಪ್ರಾಂತ್ಯದ ಹಿಂದು ಕುಟುಂಬದ ಮಹಿಳೆಯನ್ನು ಇತ್ತೀಚೆಗೆ ಮೂವರು ಪುರುಷರು ಅಪಹರಿಸಿದ್ದಾರೆ. ಆಕೆಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ಆಕೆ ಅದಕ್ಕೆ ಒಪ್ಪದ ಹಿನ್ನೆಲೆ ಆಕೆಯನ್ನು ಅಪ್‌ಮಾರ್ಕೆಟ್ ಜಿಲ್ಲೆಯ ಸಮರೊ ನಗರದಲ್ಲಿ ಕೂಡಿಟ್ಟುಕೊಂಡು, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮೂರು ದಿನಗಳ ಕಾಲ ಅತ್ಯಾಚಾರಕ್ಕೆ ಒಳಗಾದ ಆಕೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಪೊಲೀಸರು ಕೂಡ ಈ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ತನ್ನನ್ನು ಅಪಹರಿಸಿದವರನ್ನು ಇಬ್ರಾಹಿಂ ಮ್ಯಾಂಗ್ರಿಯೊ, ಪುನ್ಹೋ ಮ್ಯಾಂಗ್ರಿಯೋ ಮತ್ತು ಅವರ ಸ್ನೇಹಿತ ಎಂದು ಆಕೆ ಗುರುತಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ಪೊಲೀಸ್ ಠಾಣೆಯ ಮುಂದೆ ಕುಳಿತಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Non-NATO Ally | ಪಾಕಿಸ್ತಾನಕ್ಕೆ ಮತ್ತೊಂದು ಸಂಕಟ! ಕಳಚಲಿದೆಯಾ ಅಮೆರಿಕದ ನ್ಯಾಟೋಯೇತರ ಮಿತ್ರ ರಾಷ್ಟ್ರ ಪಟ್ಟ?
ಇದೇ ರೀತಿ ಕಳೆದ ಡಿಸೆಂಬರ್‌ನಲ್ಲಿ 40 ವರ್ಷದ ಹಿಂದೂ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಳೆದ ಜೂನ್‌ನಲ್ಲಿ ಅಪ್ರಾಪ್ತ ಯುವತಿಯೊಬ್ಬಳು ತನಗೆ ಬಲವಂತವಾಗಿ ಮತಾಂತರ ಮಾಡಿ, ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿರುವುದಾಗಿ ನ್ಯಾಯಾಲಯದ ಎದುರು ಹೇಳಿದ್ದರು. ಮಾರ್ಚ್‌ನಲ್ಲಿ ಕೇವಲ ಎಂಟು ದಿನಗಳ ಅಂತರದಲ್ಲಿ ಮೂರು ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿ, ಮುಸ್ಲಿಂ ವ್ಯಕ್ತಿಗಳೊಂದಿಗೆ ಮದುವೆ ಮಾಡಲಾಗಿತ್ತು. ಹೀಗೆ ಹಿಂದೂಗಳು ಹೆಚ್ಚಿರುವ ಪ್ರಾಂತ್ಯದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯದ ಅನೇಕ ಪ್ರಕರಣಗಳು ನಡೆಯುತ್ತಿವೆ.