ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna Jailed) ಅವರಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದು, ಅವರ ನಂಬರ್ 4567 ಆಗಿದೆ. ನಿನ್ನೆ ರಾತ್ರಿ ಎಲ್ಲ ಕೈದಿಗಳಂತೆ ಜೈಲಿನ ಊಟ ಸೇವಿಸಿದ್ದ ರೇವಣ್ಣ ನಿದ್ರಿಸದೆ ಮೌನಿಯಾಗಿ ಯೋಚಿಸುತ್ತಾ ಕುಳಿತಿದ್ದರು ಎಂದು ತಿಳಿದುಬಂದಿದೆ. ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ರೇವಣ್ಣ ಅವರ ಜಾಮೀನು ಅರ್ಜಿ (bail plea) ವಿಚಾರಣೆ ಬುಧವಾರ (ಮೇ 8) ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.
ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆಯೇ ರೇವಣ್ಣಗೆ ವಿಚಾರಣಾಧೀನ ಬಂಧಿ 4567 ನಂಬರ್ ನೀಡಲಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟ ಸವಿಯಬೇಕಾದ ಪರಿಸ್ಥಿತಿ ಅವರದ್ದಾಗಿದೆ. ಜೈಲಿನ ಮೆನುವಿನಂತೆಯೇ ಅಧಿಕಾರಿಗಳು ಚಪಾತಿ, ಪಲ್ಯ, ಮುದ್ದೆ, ಅನ್ನ, ಸಾಂಬಾರ್ ಊಟ ನೀಡಿದ್ದಾರೆ. ಕೋರ್ಟ್ ಅನುಮತಿ ಇದ್ದರೆ ಮಾತ್ರ ಹೊರಗಿನ ಊಟ ತರಿಸಲು ಅವಕಾಶವಿದೆ. ಆದರೆ ರೇವಣ್ಣಗೆ ಹೊರಗಿನ ಊಟಕ್ಕೆ ಯಾವುದೇ ಅನುಮತಿ ಇಲ್ಲ. ಆದರೆ ರಾತ್ರಿ ಊಟ ನೀಡಿ ಒಂದು ಗಂಟೆ ಕಳೆದರೂ ಊಟ ಮಾಡದೆ ರೇವಣ್ಣ ಮೌನಕ್ಕೆ ಜಾರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸಚಿವರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ ಒಂದು ರಾತ್ರಿಯನ್ನು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ಕಳೆದಿದ್ದು, ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್ ಸಾಂಬಾರ್ ತಡವಾಗಿ ತಿಂದಿದ್ದಾರೆ. ಮನೆಯವರು ತಂದು ಕೊಟ್ಟಿರುವ ಬಟ್ಟೆ ಪಡೆದಿದ್ದಾರೆ. ರಾತ್ರಿ ಒಂದು ಗಂಟೆಯವರೆಗೂ ನಿದ್ರೆ ಮಾಡದೆ ಯೋಚಿಸುತ್ತಿದ್ದರು ಎನ್ನಲಾಗಿದೆ. ರೇವಣ್ಣ ಆರೋಗ್ಯ ಸರಿ ಇಲ್ಲದ ಕಾರಣ ಜೈಲಾಧಿಕಾರಿಗಳು ಹೆಚ್ಚು ನಿಗಾ ಇಟ್ಟಿದ್ದಾರೆ. ರೇವಣ್ಣ ಇರುವ ಕೊಠಡಿ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇಂದು ಬೆಳಿಗ್ಗೆ 5.30ಕ್ಕೆ ನಿದ್ರೆಯಿಂದ ಎದ್ದ ರೇವಣ್ಣ ಅವರಿಗೆ ಕಾಫಿ-ಟೀ ನೀಡಲಾಗಿದೆ. ಕೈದಿಗಳಿಗೆ ಟಿವಿ ವ್ಯವಸ್ಥೆ ಇಲ್ಲ. ಹೊರಗಿನ ಸುದ್ದಿ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದೆ. ರೇವಣ್ಣಗೆ ಓದಲು ಕನ್ನಡ-ಇಂಗ್ಲೀಷ್ ಪೇಪರ್ ನೀಡಲಾಗಿದೆ. ಪೇಪರ್ ಕಡೆ ಕಣ್ಣಾಡಿಸಿ ನಿನ್ನೆಯ ವಿದ್ಯಮಾನಗಳನ್ನು ರೇವಣ್ಣ ಓದಿದ್ದಾರೆ. ಜೈಲಿನ ಮೆನುವಿನಂತೆ ರೇವಣ್ಣಗೆ ಇಂದು ಬೆಳಗ್ಗಿನ ತಿಂಡಿಗೆ ಪುಳಿಯೋಗರೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ನಾನೇನೂ ಮಾಡಿಲ್ಲ: ರೇವಣ್ಣ
ವಾದ – ಪ್ರತಿವಾದ ಆಲಿಸಿದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನುದ್ದೇಶಿಸಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರೇವಣ್ಣ, ಕಸ್ಟಡಿಗೆ ಬಂದು 3 ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡ ಆಗುತ್ತಿದೆ. ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಕೇಳಿದ್ದನ್ನು ಹೇಳಿದ್ದೇನೆ. ಎಲ್ಲವೂ ದಾಖಲಿಸಿಕೊಂಡಿದ್ದಾರೆ. ಮೂರು ದಿನದಿಂದ ಹೊಟ್ಟೆ ನೋವು ಇದೆ. ಮಲಗಲು ಕೂಡ ಆಗಿಲ್ಲ. ಎಲ್ಲ ವಿಚಾರಣೆಯೂ ಮುಗಿದಿದೆ ಎಂದು ತನಿಖಾಧಿಕಾರಿ ನಿನ್ನೆಯೇ ಹೇಳಿದ್ದರು. ಆದರೆ, ಇಂದು ಮತ್ತೆ ವಿಚಾರಣೆ ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ನನಗೆ ಹೊಟ್ಟೆ ನೋವಿದೆ. ಮೂರು ದಿನಗಳಿಂದ ಸತತವಾಗಿ ನಿದ್ದೆ ಮಾಡಿಲ್ಲ ಸರ್. ನಾನು ತಪ್ಪೇ ಮಾಡಿಲ್ಲ ಅಂದಾಗ ಯಾಕೆ ಒಪ್ಪಿಕೊಳ್ಳಬೇಕು? ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾತು ಮುಂದುವರಿಸಿದ ಎಚ್.ಡಿ. ರೇವಣ್ಣ, ಪ್ರಜ್ವಲ್ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಬೇಕು ಎಂದೇ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನನಗೆ ಹುಷಾರಿಲ್ಲ, ಬೆಳಗ್ಗೆ ಡ್ರಿಪ್ಸ್ ಹಾಕಿದ್ದಾರೆ. ಹುಷಾರಿಲ್ಲ ಹೊಟ್ಟೆ ಉರಿ ಬಂದಿದೆ. ಗ್ಲುಕೋಸ್ ಹಾಕಿದ್ದಾರೆ. ನಾನು ಶಾಸಕನಾಗಿ 25 ವರ್ಷ ಕಳೆದಿದೆ. ಬೇಕಂತಲೇ ಈ ರೀತಿ ಮಾಡಲಾಗಿದೆ. ವಾರಂಟ್ ಇಲ್ಲದೆಯೆ ಮನೆಗೆ ಬಂದು ಅರೆಸ್ಟ್ ಮಾಡಿದರು ಎಂದೆಲ್ಲ ಮಾಹಿತಿ ನೀಡಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾದೀಶರು, ಮೇ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.
ಇದನ್ನೂ ಓದಿ: Prajwal Revanna Case: ಎಚ್.ಡಿ. ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಅಮಾವಾಸ್ಯೆ ದಿನವೇ ಜೈಲಿಗೆ ಶಿಫ್ಟ್!