ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ (Prajwal Revanna Case) ಅಶ್ಲೀಲ ವೀಡಿಯೋ (Obscene video) ಹೊಂದಿದ ಪೆನ್‌ಡ್ರೈವ್ (pendrive) ವೈರಲ್ (viral video) ಆಗಿರುವ ಪ್ರಕರಣದಲ್ಲಿ, ಖತರ್‌ನಾಕ್ ಡ್ರೈವರ್ ಕಾರ್ತಿಕ್ ಬಗ್ಗೆ ಇನ್ನಷ್ಟು ವಿವರಗಳು ಹೊರಬೀಳುತ್ತಿವೆ. ಪ್ರಜ್ವಲ್ ರೇವಣ್ಣ ಮಾಡಿಕೊಂಡಿದ್ದ ಅಶ್ಲೀಲ ವಿಡಿಯೋಗಳು ಡ್ರೈವರ್ ಕಾರ್ತಿಕ್ ಮೊಬೈಲ್‌ಗೆ ದಾಟಿಕೊಂಡದ್ದು ಹೇಗೆ ಅನ್ನುವುದೇ ರೋಚಕವಾದ ಸಂಗತಿಯಾಗಿದೆ.
ಪ್ರಜ್ವಲ್ ರೇವಣ್ಣ ನಡೆಸಿದ ಪ್ರತಿಯೊಂದು ಲೈಂಗಿಕ ಸಾಹಸವನ್ನೂ ಮೊಬೈಲ್‌ನಲ್ಲಿ ಸೆಲ್ಫ್ ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆದರೆ ಎಲ್ಲೂ ಹಂಚಿಕೊಂಡಿರಲಿಲ್ಲ. ಇವು ಪ್ರಜ್ವಲ್ ಮೊಬೈಲ್‌ನಿಂದ ಲೀಕ್ ಆಗಿದ್ದೇ ರೋಚಕ ಎಪಿಸೋಡ್. ಪ್ರಜ್ವಲ್‌ಗೂ ಗೊತ್ತಾಗದಂತೆ ಅವರ ಮೊಬೈಲ್‌ನಿಂದ ವಿಡಿಯೋಗಳನ್ನು ಕಾರ್ತಿಕ್ ಎಗರಿಸಿದ್ದ.
ಕಾರ್ತಿಕ್ ಮತ್ತು ಪ್ರಜ್ವಲ್ ಸ್ನೇಹಿತರ ರೀತಿ ಇದ್ದರು. ಪ್ರಜ್ವಲ್ ಮೊಬೈಲ್‌ನಲ್ಲಿ ಈ ಅಶ್ಲೀಲ ವಿಡಿಯೋಗಳು ಇರುವುದು ಕಾರ್ತಿಕ್‌ಗೆ ಗೊತ್ತಿತ್ತು. ಇವನ್ನು ಕದಿಯಲು ಕಾರ್ತಿಕ್ ಖತರ್‌ನಾಕ್ ಪ್ಲಾನ್ ಮಾಡಿಕೊಂಡಿದ್ದ. ಅದಕ್ಕಾಗಿಯೇ ಹೊಸ ಮೊಬೈಲ್ ಖರೀದಿ ಮಾಡಿದ್ದ. 1.45 ಲಕ್ಷ ರೂ. ಕೊಟ್ಟು ಆಪಲ್ ಮೊಬೈಲ್ ಖರೀದಿಸಿ ಏರ್ ಡ್ರಾಪ್ ಮೂಲಕ ಸೆಂಡ್ ಮಾಡಿಕೊಂಡಿದ್ದ.
ನಂತರ ಪ್ರಜ್ವಲ್ ಮೊಬೈಲ್ ಪಾಸ್‌ವರ್ಡ್ ತಿಳಿದುಕೊಂಡಿದ್ದ. ʼBOSS’ ಎಂಬುದನ್ನು ಹೋಲುವ 8055 ಕೊನೆಯ ನಂಬರ್ ಇಟ್ಟುಕೊಂಡಿದ್ದ ಪ್ರಜ್ವಲ್ ರೇವಣ್ಣ ತಮ್ಮ ಮೊಬೈಲ್ ಜೊತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿಯೇ ನಿದ್ರೆಗೆ ಜಾರಿದಾಗ ಅದರಿಂದ ವಿಡಿಯೋಗಳನ್ನು ತನ್ನ ಹೊಸ ಮೊಬೈಲ್‌ಗೆ ಕಾರ್ತಿಕ್ ಬ್ಲೂಟೂತ್ ಮೂಲಕ ಸೆಂಡ್ ಮಾಡಿಕೊಂಡಿದ್ದ ಎಂದು ಗೊತ್ತಾಗಿದೆ.
ಎಲ್ಲಿದ್ದಾನೆ ಕಾರ್ತಿಕ್?
ಈ ನಡುವೆ ವೈರಲ್ ವೀಡಿಯೋದ ಮೂಲ ವ್ಯಕ್ತಿ, ಡ್ರೈವರ್ ಕಾರ್ತಿಕ್ ನಾಪತ್ತೆಯಾಗಿದ್ದಾನೆ. ಪ್ರಜ್ವಲ್ ರೇವಣ್ಣ ಸಂಸದ ಆಗುವ ಮೊದಲಿನಿಂದಲೂ ಸುಮಾರು 13 ವರ್ಷ ಈತ ಅವರ ಕಾರು ಚಾಲಕನಾಗಿದ್ದ. ಹೊಳೆನರಸೀಪುರ ತಾಲ್ಲೂಕಿನ ಕಡುವಿನಕೋಟೆ ಗ್ರಾಮದ ಕಾರ್ತಿಕ್, ಎರಡು ದಿನಗಳ ಹಿಂದೆಯೇ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿರುವ ವೀಡಿಯೋ ಬಿಡುಗಡೆ ಮಾಡಿದ್ದ. ಹೀಗಾಗಿ ಎಸ್‌ಐಟಿ ಕೂಡ ಆತನನ್ನು ಟ್ರೇಸ್ ಮಾಡಲು ಮುಂದಾಗಿರಲಿಲ್ಲ.
ತಾನೇ ಖುದ್ದು ಎಸ್ಐಟಿ ಮುಂದೆ ಹಾಜರಾಗುವ ಹೇಳಿಕೆ ನೀಡಿದ ಬಳಿಕ ಕಾರ್ತಿಕ್ ನಾಪತ್ತೆಯಾಗಿದ್ದಾನೆ. ವೀಡಿಯೋ ಇದ್ದ ಪೆನ್ ಡ್ರೈವ್ ವಕೀಲ ದೇವರಾಜೇ ಗೌಡಗೆ ಕೊಟ್ಟಿದ್ದು ನಾನೇ ಎಂದಿದ್ದ ಕಾರ್ತಿಕ್. ವೀಡಿಯೋಗಳ ಮೂಲ ವ್ಯಕ್ತಿ ನಾನೇ ಅಂದರೂ ಇನ್ನು ಆತನನ್ನು ವಿಚಾರಣೆಗೆ ಒಳಪಡಿಸಿಲ್ಲ. ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೆ ನೊಟೀಸ್ ಅನ್ನೂ ಎಸ್ಐಟಿ ನೀಡಿರಲಿಲ್ಲ.
ಇದೀಗ ಕಾರ್ತಿಕ್ ಮಲೇಷ್ಯಾಗೆ ತೆರಳಿದ್ದಾನೆ; ಈತನ ನಾಪತ್ತೆ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ʼರಾಮನಗರ ಬ್ರದರ್ಸ್ʼ ಕಡೆ ಕೈತೋರಿಸಿದ್ದಾರೆ. ಎರಡನೇ ಹಂತದ ಚುನಾವಣೆ ಮುಗಿಯುವವರೆಗೂ ಪ್ರಕರಣದ ಬಿಸಿಯನ್ನು ಚಾಲ್ತಿಯಲ್ಲಿಡಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ. ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿ ಎಸ್ಕೇಪ್ ಆಗಿರುವ ಬಗ್ಗೆ ಹಲವು ಅನುಮಾನ ಮೂಡಿದ್ದು, ಕಾರ್ತಿಕ್ ಇವರೆಲ್ಲರ ದಾರಿ ತಪ್ಪಿಸಿದನೇ ಅಥವಾ ಇದರ ಹಿಂದಿನ ಮಾಸ್ಟರ್ ಮೈಂಡ್‌ಗಳು ಬೇರೆ ಯಾರಾದರೂ ಇದ್ದಾರಾ ಎಂದು ಅನುಮಾನ ಮೂಡಿದೆ.
ಈ ನಡುವೆ ಎಸ್ಐಟಿ ತನಿಖೆ ಚುರುಕುಗೊಳಿಸಿದೆ ಎಂದು ಹೇಳಲಾಗಿದ್ದು, ದೂರುದಾರ ಸಂತ್ರಸ್ತ ಮಹಿಳೆಯರು ಹಾಗೂ ವಿಡಿಯೋಗಳಲ್ಲಿ ಇರುವ ಸಂತ್ರಸ್ತ ಮಹಿಳೆಯರ ವಿಚಾರಣೆ ಮುಂದುವರಿದಿದೆ. ಆದರೆ ದೂರುದಾರೆ ಹೊರತುಪಡಿಸಿ ಇತರ ಮಹಿಳೆಯರು, ತಮ್ಮನ್ನು ತನಿಖೆಗೆ ಬಲವಂತಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಗುರುತು ಪರಿಚಯ ಬಹಿರಂಗಪಡಿಸಿದರೆ ತಮ್ಮ ಕುಟುಂಬಕ್ಕೆ ಸಮಸ್ಯೆಯಾಗಲಿದ್ದು, ಹೀಗಾಗಿ ತನಿಖೆಗೆ ಬರುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ವಿಡಿಯೋ ಬಿಟ್ಟ ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದವರು ಯಾರು?