Site icon Vistara News

Murder Case: ತಾಯಿ, ಹೆಂಡತಿಯನ್ನು ಕೊಂದು ಪರಾರಿಯಾದ ಆಸ್ಪತ್ರೆ ನೌಕರ

raichur double murder case

ರಾಯಚೂರು: ಕೌಟುಂಬಿಕ ಕಲಹ ಉಲ್ಬಣಿಸಿ ತನ್ನ ತಾಯಿ ಹಾಗೂ ಹೆಂಡತಿಯನ್ನು (Double Murder Case) ಬರ್ಬರವಾಗಿ ಹತ್ಯೆ ಮಾಡಿ ವ್ಯಕ್ತಿ ಪರಾರಿಯಾಗಿದ್ದಾನೆ. ರಾಯಚೂರು (Raichur news) ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣದಲ್ಲಿ ದುರ್ಘಟನೆ ನಡೆದಿದೆ.

ದ್ಯಾಮಮ್ಮ (66) ಹಾಗೂ ಜ್ಯೋತಿ (23) ಕೊಲೆಯಾದ ದುರ್ದೈವಿಗಳು. ದುರಗಪ್ಪ ಇಬ್ಬರನ್ನೂ ಹತ್ಯೆಗೈದ ಆರೋಪಿ. ಮುದ್ಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರನಾದ ದುರಗಪ್ಪನ ಕುಟುಂಬ ಇಲ್ಲಿನ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಪ್ರತಿನಿತ್ಯ ಮನೆಯಲ್ಲಿ ಕಲಹ ನಡೆಯುತ್ತಿತ್ತು. ದುರಗಪ್ಪ ಮದ್ಯ ಸೇವಿಸಿ ಬಂದು ತಾಯಿ ಹಾಗೂ ಹೆಂಡತಿಗೆ ಮನಸೋಇಚ್ಛೆ ಥಳಿಸುತ್ತಿದ್ದ ಎಂದು ಗೊತ್ತಾಗಿದೆ. ಕೊಲೆ ಬಳಿಕ ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಮುದ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೀ ಕುಡಿಯಲು ಹೋದವ ಹಾಲು ತರಲು ಬಂದಿದ್ದವನಿಂದ ಹತ್ಯೆಯಾದ! ರೋಡ್‌ ರೇಜ್‌ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ ಎಂಬ ಕಳವಳದ ನಡುವೆಯೇ, ಇಂಥದೇ ಒಂದು ಪ್ರಕರಣದಲ್ಲಿ ರಸ್ತೆಯ ಮೇಲೆ ಒಂದು ಕೊಲೆ (Murder Case) ನಡೆದಿದೆ. ರೋಡ್‌ ರೇಜ್‌, ಮರ್ಡರ್‌ ಆಗಿ ಪರಿವರ್ತನೆ ಆಗಿದೆ. ಇಲ್ಲಿಯವರೆಗೆ ರಸ್ತೆ ಮೇಲೆ ಹಲ್ಲೆ ಪ್ರಕರಣ, ಗಲಾಟೆ ನಡೆದದ್ದನ್ನು ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಒಂದು ರೋಡ್ ರೇಜ್ ಘಟನೆಯಿಂದ ಒಬ್ಬ ಯುವಕನ ಕೊಲೆಯಾಗಿದೆ.

ಇಲ್ಲಿ ರೋಡ್ ರೇಜ್‌ನಲ್ಲಿ ಕೊಲೆಯಾದವನು ಮಹೇಶ್ ಎಂಬಾತ. ಕೊಂದವನು ಅರವಿಂದ್. ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ಮಹೇಶ್ ಆತನ ಗೆಳೆಯರಾದ ಬಾಲಾಜಿ ಮತ್ತು ನಿಕಿಲ್ ಜೊತೆಗೆ ಟೀ ಕುಡಿಯಲು ಹೋಗಿದ್ದಾರೆ. ಟೀ ಕುಡಿದು ಬೈಕ್‌ನಲ್ಲಿ ರಸ್ತೆಯಲ್ಲಿ ಬರುತ್ತಿದ್ದಾಗ, ಅರವಿಂದ್‌ ಚಲಾಯಿಸುತ್ತಿದ್ದ ಕಾರು ಸ್ಪೀಡ್ ಆಗಿ ಬಂದಿದೆ. ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ತಿರಕ್ಕೆ ಬಂದು ಹಾರ್ನ್ ಮಾಡಿದ್ದಾನೆ.

ಇದೇ ವೇಳೆ ಬೈಕು, ಕಾರ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಕಾರು ಚಾಲಕ ಅರವಿಂದ್ ಬೈಕ್ ಸವಾರರನ್ನು ವೇಗವಾಗಿ ಚೇಸ್ ಮಾಡಲು ಮುಂದಾಗಿದ್ದಾನೆ. ದಾರಿಯಲ್ಲಿ ಇಬ್ಬರು ಯುವಕರು ಮೇನ್ ರೋಡ್‌ನಿಂದ ಸಣ್ಣ ರೋಡ್‌ಗೆ ಬಂದಾಗ ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರನನ್ನು ಫಾಲೋ ಮಾಡಿ ವೇಗವಾಗಿ ಬಂದ ಕಾರು ಚಾಲಕ ಜಿ.ಕೆ.ವಿ.ಕೆ ಲೇಔಟ್‌ಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಇದ್ದ ಮನೆಗೆ ರಭಸವಾಗಿ ಬೈಕ್ ಗುದ್ದಿ ಸ್ಥಳದಲ್ಲೆ ಬೈಕ್‌ ಸವಾರ ಮಹೇಶ್ ಮೃತಪಟ್ಟಿದ್ದಾನೆ.

ಕೊಲೆಯಾದ ಮಹೇಶ್ ನಿನ್ನೆ ಸಂಜೆ ಆತನ ಗೆಳೆಯರ ಜೊತೆಗೆ ಟೀ ಕುಡಿಯಲು ಹೋಗಿದ್ದ. ಇತ್ತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಅರವಿಂದ್ ಆತನ ಗೆಳೆಯ ಕೇಶವ್ ಜೊತೆಗೆ ಹಾಲು ತರಲು ಹೋಗಿದ್ದನಂತೆ. ಸಂಬಂಧವೇ ಇಲ್ಲದ ಇಬ್ಬರು ಅವರವರ ಕೆಲಸ ಮುಗಿಸಿ ಮನೆಗೆ ಬಂದಿದ್ದರೆ ಇವತ್ತು ಪರಿಸ್ಥಿತಿ ಹೀಗಿರುತ್ತಿರಲಿಲ್ಲ! ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಕೇಶವ್ ಮತ್ತು ಅರವಿಂದರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗ ಥಳಿತ

ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪ ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಫುಡ್‌ ಡೆಲಿವರಿ ಬಾಯ್‌ಗೆ ನಾಲ್ಕೈದು ಮಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸೌತ್ ಎಂಡ್ ಸರ್ಕಲ್ ಸಿಗ್ನಲ್ ಬಳಿಯೇ‌ ಮನಸೋ ಇಚ್ಚೆ ಹಲ್ಲೆ ಮಾಡಿದ್ದು, ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಬಿಎಂಟಿಸಿ ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಗಲಾಟೆ ವಿಡಿಯೋ ಸೆರೆಯಾಗಿದೆ. ಸದ್ಯ ಹೊಡೆದಾಟದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

Exit mobile version