ಬೆಂಗಳೂರು: ಬೆಂಗಳೂರಿನ (Bangalore Bomb Blast) ವೈಟ್‌ಫೀಲ್ಡ್‌ನಲ್ಲಿರುವ (Whitfield) ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ (Rameshwaram Cafe Blast) ಬೆಚ್ಚಿ ಬೀಳಿಸಿದ್ದ ಪ್ರಕರಣದಲ್ಲಿ, ಬಾಂಬ್ ಇರಿಸಿದ ಉಗ್ರನನ್ನು (Terrorist) ಕರೆತಂದು ಇಡೀ ಘಟನೆಯನ್ನು ರಿಕ್ರಿಯೇಟ್ ಮಾಡಿ ದಾಖಲಿಸಿಕೊಳ್ಳಲಾಗುತ್ತಿದೆ. ಇಂದು ಬೆಳಗ್ಗೆ ಎನ್‌ಐಎ (NIA) ಟೀಮ್ ಬಂಧಿತ ಉಗ್ರನನ್ನು ಸ್ಥಳಕ್ಕೆ ಕರೆತಂದು ಹಲವು ಬಾರಿ ಈ ಡ್ರಿಲ್ ನಡೆಸಿತು.
ರಾಮೇಶ್ವರಂ ಕೆಫೆ ಸ್ಫೋಟ ಕೇಸ್ ತನಿಖೆ ಭರದಿಂದ ಸಾಗಿದ್ದು, ಇಂದು ಮುಂಜಾನೆ ರಾಮೇಶ್ವರಂ ಕೆಫೆಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿದರು. ಜೊತೆಗೆ ಬಾಂಬ್ ಇರಿಸಿದ ಭಯೋತ್ಪಾದಕ ಮುಜಾವೀರ್ ಹುಸೇನ್ ಶಾಜಿಬ್‌ನನ್ನೂ ಕರೆತರಲಾಗಿದೆ. ಕಳೆದ ಮಾರ್ಚ್ 1ರಂದು ನಡೆದಿದ್ದ ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್ಐಎ, ಪ್ರಮುಖ ಶಂಕಿತ ಉಗ್ರರನ್ನು ಈಗಾಗಲೇ ಬಂಧಿಸಿದೆ.
ರಾಮೇಶ್ವರಂ ಕೆಫೆಯ ಸುತ್ತಮುತ್ತಲಿನ ಪ್ರದೇಶವನ್ನು ಇಂದು ಸಾರ್ವಜನಿಕರಿಗೆ ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಬ್ಲಾಸ್ಟ್ ಸೀನ್ ರೀಕ್ರಿಯೇಟ್ ಮಾಡಿಸಲಾಯಿತು. ಆರೋಪಿ ಮುಜಾವೀರ್ ಹುಸೇನ್ ಶಾಜಿಬ್ ಕೃತ್ಯದ ದಿನ ಎಲ್ಲಿಂದ, ಹೇಗೆ ನಡೆದುಕೊಂಡು ಬಂದ, ಕೆಫೆಯ ಒಳಗಡೆ ಎಲ್ಲೆಲ್ಲಿ ಸುತ್ತಾಡಿದ್ದ, ಎಲ್ಲಿ ಬ್ಯಾಗ್ ಇಟ್ಟಿದ್ದ, ನಂತರ ತೆರಳಿದ್ದು ಹೇಗೆ, ಇದೆಲ್ಲವನ್ನೂ ಉಗ್ರನಿಂದಲೇ ರೀಕ್ರಿಯೆಟ್ ಮಾಡಿಸಿ ವಿಡಿಯೋ ಮಾಡಿಕೊಳ್ಳಲಾಯಿತು.
ಕೃತ್ಯ ನಡೆಸಿದ ಸಂದರ್ಭದಲ್ಲಿ ಆತ ಧರಿಸಿದ್ದ ಬಟ್ಟೆ ಹಾಗೂ ಕ್ಯಾಪ್ ಅನ್ನು ಆತನಿಗೆ ತೊಡಿಸಲಾಗಿದೆ. ಅವತ್ತಿನ ರೀತಿ ಬ್ಲಾಕ್ ಬ್ಯಾಗ್ ಹೆಗಲಿಗೆ ಹಾಕಿಕೊಂಡು ವಿಡಿಯೋ ಮರುಸೃಷ್ಟಿ ಮಾಡಿಸಲಾಗಿದೆ. ಎಲ್ಲವನ್ನೂ ಎನ್ಐಎ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡರು. ಹಲವು ಬಾರಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಕೆಫೆಗೆ ಸಮೀಪದ ಬಸ್ ನಿಲ್ದಾಣದಲ್ಲಿಯೂ ಈ ಚಿತ್ರಣವನ್ನು ಚಿತ್ರೀಕರಿಸಲಾಗಿದೆ. ಬಸ್ಸಿಗಾಗಿ ಎಷ್ಟು ಹೊತ್ತು, ಎಲ್ಲಿ ಕುಳಿತು ಕಾದಿದ್ದ ಎಂಬುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.
ಮಾರ್ಚ್ 1, 2024ರ ಮಧ್ಯಾಹ್ನ 12:56ಕ್ಕೆ ಬಾಂಬ್ ಸ್ಫೋಟಿಸಲಾಗಿತ್ತು. ಮೂವರು ಹೋಟೆಲ್ ಸಿಬ್ಬಂದಿ ಸೇರಿ ಹತ್ತು ಜನರಿಗೆ ಗಾಯವಾಗಿತ್ತು. ಆರಂಭದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದ್ದು, ಮಾರ್ಚ್ 3ರಂದು ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಮಾರ್ಚ್ 5ರಂದು ಎನ್‌ಐಎನಿಂದ ಶಂಕಿತ ಆರೋಪಿಗಳ ಸುಳಿವು ನೀಡಿದರೆ 10 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು.
ಮಾರ್ಚ್ 15ರಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜ್ ಮುನೀರ್ ಆಹಮ್ಮದ್‌ನನ್ನು, ಮಾರ್ಚ್ 28ರಂದು ಚಿಕ್ಕಮಗಳೂರಿನಲ್ಲಿ ಮುಜಾಮಿಲ್ ಷರೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಮಾರ್ಚ್ 29ರಂದು ಪ್ರಮುಖ ಆರೋಪಿಗಳಾದ ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹ ಇಬ್ಬರ ಫೋಟೋ ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್ 12ರಂದು ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹರನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಬಂಧಿಸಿತ್ತು.
ಮೇ 21ರಂದು ಈ ಪ್ರಕರಣದ ಸಂಬಂಧಿಸಿ ದೇಶದ 11 ಕಡೆ ಎನ್ಐಎ ದಾಳಿ ನಡೆಸಿತ್ತು. ಮೇ 24ರಂದು ಪ್ರಕರಣದಲ್ಲಿ ಐದನೆ ಆರೋಪಿಯಾಗಿ ಶೋಯೆಬ್ ಅಹಮ್ಮದ್ ಮಿರ್ಜಾ ಎಂಬವನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Rameshwaram Cafe: ಗ್ರಾಹಕರ ಕ್ಷಮೆ ಕೋರಿದರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮೇಶ್ವರಂ ಕೆಫೆ ಮಾಲೀಕ; ಕಾರಣ ಇದು