ಚಿಕ್ಕಮಗಳೂರು/ಮೈಸೂರು/ಹುಬ್ಬಳ್ಳಿ: ರೇಣುಕಾಸ್ವಾಮಿ ಎಂಬಾತ (Renuka swamy Murder) ಕೊಲೆ ಕೇಸ್‌ನಲ್ಲಿ ಸೆರೆಯಾಗಿರುವ ನಟ ದರ್ಶನ್ (Actor Darshan) ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಪ್ರತಿಕ್ರಿಯಿಸಿದ್ದರು. ಸಿನಿಮಾದಲ್ಲಿ ಹೀರೋ ಆದವರೆಲ್ಲ ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ. ದರ್ಶನ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದರು ಅನ್ನಿಸುತ್ತದೆ.
ನಮ್ಮ ಪಕ್ಷದವರು ರೇಣುಕಾಸ್ವಾಮಿ ಕುಟುಂಬದ ಜತೆ ಇದೆ, ಅವರಿಗೆ ನ್ಯಾಯ ಸಿಗಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು. ರಾಜಕಾರಣಿಗಳ ಮೇಲಿನ ಟೀಕೆಗೆಲ್ಲ ಆ ರೀತಿಯೇ ಮಾಡುವುದಾದರೆ ಗಂಟೆಗೊಂದು ಹೆಣ ಬೀಳುತ್ತಿತ್ತು. ಆ ಕ್ರೌರ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.
ನಟ ದರ್ಶನ್‌ಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡುತ್ತಿದ್ದಾರೆ ಎನ್ನುವ ಸಂದೇಶವೇ ಒಳ್ಳೆದಲ್ಲ. ಆ ರೀತಿ ಇದ್ದರೆ ಬಲ ಇದ್ದವನಿಗೆ, ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಇದನ್ನೂ ಓದಿ: Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!
ಅವನು ಮನುಷ್ಯನೋ.. ರಾಕ್ಷಸನೋ – ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ
ದರ್ಶನ ವಿರುದ್ಧ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು. ನಟ ದರ್ಶನ್ ಮಾಡಿರುವ ಕೆಲಸ ನೋಡಿದರೆ, ಅವನು ಮನುಷ್ಯನೋ ಅಥವಾ ರಾಕ್ಷಸನೋ ಎಂಬುದು ತಿಳಿಯುತ್ತಿಲ್ಲ. ದರ್ಶನ್‌ನನ್ನು ಕೃಷಿ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಈ ಸರ್ಕಾರ ಮಾಡುತ್ತಿರುವ ತಪ್ಪು ಒಂದಲ್ಲ ಎರಡಲ್ಲ. ಸಮಾಜ ವಿರೋಧಿ, ಕ್ರಿಮಿನಲ್ ಕೆಲಸ ಮಾಡುತ್ತಿರುವವರಿಗೆ ರಾಜಾತಿಥ್ಯ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ – ಜಗದೀಶ್ ಶೆಟ್ಟರ್
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಸಹಚರರು ಸೆರೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಕಾನೂನುನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು ಎಂದರು.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ಕೊಲೆ ಯಾಕೆ ಮಾಡಬೇಕು . ಅದಕ್ಕಾಗಿಯೇ ಸೈಬರ್ ಕ್ರೈಂ ಇದೆ, ಅಲ್ಲಿ ದೂರು ಕೊಡಬಹುದಿತ್ತು. ಒಬ್ಬ ಸಿನಿಮಾ ನಟ ಆ ವ್ಯಕ್ತಿಯನ್ನು ಕೊಲೆ ಮಾಡಬಾರದಿತ್ತು. ನಟ ಆಗಲಿ ಸಾಮಾನ್ಯ ಜನರಾಗಲಿ ಅಪರಾಧ ಮಾಡಿದಾಗ ತಾರತಮ್ಯ ಮಾಡಬಾರದು ಎಂದರು.
ನಟರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು- ಜಯ ಮೃತ್ಯುಂಜಯ ಸ್ವಾಮೀಜಿ
ಕಲಾವಿದರ ಬದುಕು ಮತ್ತು ಬರಹ ಒಂದೆ ಆಗಿರಬೇಕು. ಪರದೆ ಮೇಲಿನ ನಟನೆಗೂ ಬದುಕಿಗೂ ಸಾಮೀಪ್ಯವಾಗುವಂತೆ ಬದಕುವ ಪ್ರಯತ್ನ ಮಾಡಬೇಕು. ಪರದೇ ಮೇಲೆ ಒಂದು ನಟನೆ, ಪರದೇ ಹಿಂದೆ ಒಂದು ನಟನೆ ಮಾಡಿದಾಗ ಇಂತಹ ಅವಘಡ ಆಗುತ್ತವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಪ್ರತಿಯೊಬ್ಬ ನಟರು ತಮ್ಮ ವ್ಯಕ್ತಿತ್ವ ರೂಪಿಸಿಕೋಳ್ಳಬೇಕು. ಡಾ ರಾಜಕುಮಾರ, ಡಾ ವಿಷ್ಣುವರ್ಧನ್ ಆದರ್ಶವಾಗಿದ್ದಾರೆ. ಅಂತಹ ಮಹಾನ್ ನಟರಂತೆ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ಇದನ್ನೂ ಓದಿ: Renuka Swamy Murder: ರೇಣುಕಾಸ್ವಾಮಿಗೆ 4 ಬಾರಿ ಎಲೆಕ್ಟ್ರಿಕ್ ಶಾಕ್; ಪೋಸ್ಟ್ ಮಾರ್ಟಂ ವರದಿಯಲ್ಲಿವೆ ಭಯಾನಕ ಅಂಶಗಳು!
ಚಿತ್ರರಂಗದಿಂದ ಬ್ಯಾನ್ ಮಾಡಿ
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಖಂಡಿಸಿ ಮೈಸೂರಿನ ತಿ.ನರಸೀಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟ ಪ್ರತಿಭಟಿಸಿದೆ. ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು ನಟ ದರ್ಶನ್ ಚಿತ್ರರಂಗದಿಂದ ಬ್ಯಾನ್ ಆಗಬೇಕು ಎಂದು ಒತ್ತಾಯಿಸಿದರು.
ನಟ ದರ್ಶನ್ ಚಿತ್ರಗಳು ತೆರೆಯ ಮೇಲೆ ಬರದಂತೆ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರವು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಪ್ರಕರಣದಲ್ಲಿ ಯಾರ ಒತ್ತಡಕ್ಕೂ ಮಣಿಯಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ