ಚಿತ್ರದುರ್ಗ: ಬೆಂಗಳೂರಿನಲ್ಲಿ ನಟ ದರ್ಶನ್ (Actor Darshan) ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ (Renuka swamy Murder case) ಮನೆಗೆ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ (Home minister G Parameshwara), ಪ್ರತಿಪಕ್ಷ ನಾಯಕ ಬಿ.ವೈ ವಿಜಯೇಂದ್ರ (BY vijayendra), ಸಂಸದ ಗೋವಿಂದ ಕಾರಜೋಳ ಮುಂತಾದವರು ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ವಿಜಯೇಂದ್ರ ಅವರು ಮೃತನ ಕುಟುಂಬಕ್ಕೆ 2 ಲಕ್ಷ ರೂ.ಗಳ ಧನಸಹಾಯ ನೀಡಿದ್ದಾರೆ.
ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಹತ್ಯೆ ಪ್ರಕರಣ ಕುರಿತು ಮತ್ತಷ್ಟು ಮಾಹಿತಿ ಪಡೆದು, ಸೂಕ್ತ ತನಿಖೆ ಮಾಡಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ಮಗನ ಭೀಕರ ಹತ್ಯೆ ಕುರಿತು ಕಣ್ಣೀರಿಟ್ಟು ನ್ಯಾಯಕ್ಕಾಗಿ ಮನವಿ ಮಾಡಿದರು. ರೇಣುಕಸ್ವಾಮಿ ಪತ್ನಿಗೆ ಉದ್ಯೋಗ ನೀಡುವಂತೆ, ಸೂಕ್ತ ತನಿಖೆ ಮಾಡಿಸುವಂತೆ ಒತ್ತಾಯಿಸಿದರು. ಗೃಹ ಸಚಿವ ಜಿ.ಪರಮೇಶ್ವರ್‌ಗೆ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಸ್ಥಳೀಯ ಶಾಸಕರು ಸಾಥ್ ನೀಡಿದರು.
“ಕುಟುಂಬದವರಿಗೆ ಸಾಂತ್ವನ ಹೇಳಬೇಕು ಅಂತ ಬಂದಿದ್ದೇನೆ. ಇದು ಬಹಳ ನೋವು ಉಂಟು ಮಾಡಿದೆ. ಸರ್ಕಾರ ಯಾವುದೇ ಮುಲಾಜು ಇಲ್ಲದೇ ತನಿಖೆ ಮಾಡ್ತಿದೆ. ಈಗಾಗಲೇ ಸುಮಾರು 17 ಜನ ಆರೆಸ್ಟ್ ಆಗಿದ್ದಾರೆ. ರೇಣುಕಾ ಪತ್ನಿ ಗರ್ಭಿಣಿ ಆಗಿದ್ದಾರೆ. ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಉದ್ಯೋಗ ಕೊಡಿಸಬೇಕು ಎಂಬ ಬೇಡಿಕೆ ಇದೆ. ಸಿಎಂ ಜೊತೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದೇನೆ. ಯಾವುದೇ ರೀತಿ ತಪ್ಪು ಆಗದ ಹಾಗೆ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಯಾರೂ ರಾಜಕೀಯ ಮಾಡಬಾರದು. ನಮ್ಮ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಚೆನ್ನಾಗಿ ಕೆಲಸ ಮಾಡಿದ್ದಾರೆ” ಎಂದು ಪರಮೇಶ್ವರ ಈ ಸಂದರ್ಭದಲ್ಲಿ ನುಡಿದರು.
ಸರ್ಕಾರ ಧನಸಹಾಯ ನೀಡಲಿ: ವಿಜಯೇಂದ್ರ
“ರೇಣುಕಾ ಸ್ವಾಮಿ ಹತ್ಯೆ ಅಮಾನವೀಯ ಕೃತ್ಯ. ನಾಗರಿಕ ಸಮಾಜದ ಇದನ್ನು ಬೆಂಬಲಿಸಲು ಸಾಧ್ಯ ಇಲ್ಲ. ಪ್ರತಿಯೊಬ್ಬರೂ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸಬೇಕು. ಅವರ ಕುಟುಂಬ ನೋಡಿ ದುಃಖ ಆಗುತ್ತಿದೆ. ಆ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಆಗಬೇಕು. ರೇಣುಕಾ ಸ್ವಾಮಿ ಪತ್ನಿ 4 ತಿಂಗಳ ಗರ್ಭಿಣಿ. ಅವರಿಗೆ ಸರ್ಕಾರಿ ಉದ್ಯೋಗ ಜೊತೆಗೆ ಪರಿಹಾರ ಕೊಡಬೇಕು. ಯಾರೇ ಇದ್ದರೂ ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು. ಯಾವ ಒತ್ತಡಕ್ಕೂ ಮಣಿಯದೆ ತಪ್ಪಿತಸ್ತರಿಗೆ, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು. ಪ್ರಕರಣದ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದ್ದು, ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದು ಮೃತನ ಮನೆಗೆ ಭೇಟಿ ನೀಡಿದ ಬಳಿಕ ಬಿ.ವೈ ವಿಜಯೇಂದ್ರ ನುಡಿದರು.
“ನಾನು ಇಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ಸಿಎಂ ಕೂಡಲೇ ಪರಿಹಾರ ಕೊಡುವ ನಿರ್ಧಾರ ಮಾಡಬೇಕು. ಪಕ್ಷದ ವತಿಯಿಂದ 2 ಲಕ್ಷ ರೂ. ಚೆಕ್ ಕೊಟ್ಟಿದ್ದೇವೆ. ಪರಿಹಾರ ಜೊತೆ ಜೊತೆಗೆ ಸರ್ಕಾರದ ಉದ್ಯೋಗವೂ ಬೇಕಿದೆ” ಎಂದು ಅವರು ನುಡಿದರು. ಅವರ ಜೊತೆಗೆ ಸಂಸದ ಗೋವಿಂದ ಕಾರಜೋಳ ಕೂಡ ಇದ್ದರು.
ಇದನ್ನೂ ಓದಿ: Renuka Swamy Murder: ಸಿಸಿಟಿವಿ ದಾಖಲೆ ಸಂಪೂರ್ಣ ನಾಶ ಮಾಡಿದ ಪಾತಕಿಗಳು! ಆ ಭಯಾನಕ ಶೆಡ್‌ನಲ್ಲಿದೆ ಇನ್ನಷ್ಟು ರಹಸ್ಯ!