ಮಂಡ್ಯ / ಚಾಮರಾಜನಗರ: ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರತಕರ್ತರೊಬ್ಬರು ಅಸುನೀಗಿದರೆ ಚಾಮರಾಜನಗರದಲ್ಲಿ ಹಿಟ್ ಆ್ಯಂಡ್ ರನ್‌ಗೆ ಎರಡು ಜೀವಗಳು ಬಲಿಯಾಗಿವೆ (Road Accident)
ಮಂಡ್ಯ: ಪತ್ರಕರ್ತ ಸಾವು
ಶನಿವಾರ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಟಿ.ಬಿ.ವೃತ್ತದಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಪತ್ರಕರ್ತ ಬಿ.ಎ.ಮಧು ಕುಮಾರ್ (34) ಮೃತಪಟ್ಟಿದ್ದಾರೆ. ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ವಾಸವಿದ್ದ ಮೃತ ಮಧು ಕುಮಾರ್ ಅವರು ಪ್ರಾದೇಶಿಕ ದಿನಪತ್ರಿಕೆ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮದ್ದೂರು ಟಿ.ಬಿ. ವೃತ್ತದ ಬಳಿ ನಿಂತಿದ್ದ ಲಾರಿಯ ಹಿಂಬದಿಗೆ ಮಧು ಕುಮಾರ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿ ಈ ಅನಾಹುತ ಸಂಭವಿಸಿತ್ತು. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ಹಿಟ್ ಆ್ಯಂಡ್ ರನ್
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಹಿಟ್ ಆ್ಯಂಡ್ ರನ್ ಕೇಸ್‌ಗೆ ಎರಡು ಜೀವಗಳು ಬಲಿಯಾಗಿವೆ. ಬೈಕ್‌ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸೋಮಹಳ್ಳಿ ಗ್ರಾಮದ ಮಹಾದೇವಸ್ವಾಮಿ, ನಾಗೇಂದ್ರ ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳು ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು: ಬೈಕ್ ಸವಾರನಿಗಾಗಿ ಶೋಧ ಕಾರ್ಯ
ಬೆಂಗಳೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ರಾಜಕಾಲುಗೆ ಬಿದ್ದ ಬೈಕ್ ಸವಾರನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೈಸೂರು ರಸ್ತೆ ಯೂನಿವರ್ಸಿಟಿ ಗೇಟ್‌ನಿಂದ ಕೆಂಗೇರಿ ಮಾರ್ಗದಲ್ಲಿ ಶೋಧ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ ಬೈಕ್ ಸವಾರ ಹೇಮಂತ್ ರಾಜಕಾಲುವೆಗೆ ಬಿದ್ದಿದ್ದರು. ಬೈಕ್ ಸವಾರ ಹೇಮಂತ್‌ಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸುಮಾರು 25 ಗಂಟೆಗೂ ಹೆಚ್ಚು ಸಮಯದಿಂದ ಶೋಧ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ವೃಷಭಾವತಿ ಕಾಲುವೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ 10.30 ಸುಮಾರಿಗೆ ಹೇಮಂತ್ ರಾಜಕಾಲುಗೆ ಬಿದ್ದಿದ್ದರು.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ರಾತ್ರಿ ಸುಮಾರು 10:30ಕ್ಕೆ ಈ ದುರ್ಘಟನೆ ನಡೆದಿದೆ. ಜ್ಞಾನ ಭಾರತಿ ಮೆಟ್ರೋ ಸ್ಟೆಷನ್ ಬಳಿ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ, ಬೈಕ್ ಡಿವೈಡರ್‌ಗೆ ಗುದ್ದಿದ ಪರಿಣಾಮ ಸವಾರ ಚಿಮ್ಮಿ ರಾಜಕಾಲುವೆ ಒಳಗೆ ಬಿದ್ದಿದ್ದಾರೆ. ಸಣ್ಣದಾಗಿ ಮಳೆ ಬರುತ್ತಿದ್ದುದರಿಂದ ಡಿವೈಡರ್ ಗುರುತಿಸಲು ಸಾಧ್ಯವಾಗಿರಲಿಕ್ಕಿಲ್ಲ. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತಾದರೂ, ಸವಾರನ ಪತ್ತೆಯಾಗಲಿಲ್ಲ. ರಾಜಕಾಲುವೆಯಲ್ಲಿ ಸುಮಾರು 4 ಅಡಿ ನೀರು ತುಂಬಿದ್ದು, ಈ ನೀರಿನಲ್ಲಿ ವ್ಯಕ್ತಿ ಕೊಚ್ಚಿ ಹೋಗಲು ಸಾಧ್ಯವೇ ಎಂಬ ಅನುಮಾನವೂ ಮೂಡಿದೆ.
ಇದನ್ನೂ ಓದಿ: Road Accident : ಶಿವಮೊಗ್ಗದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು, ಮತ್ತಿಬ್ಬರು ಗಂಭೀರ