ಕೊಪ್ಪಳ/ ಚಿಕ್ಕೋಡಿ: ಕೊಪ್ಪಳದ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ವೀಣಾ ಬಸಯ್ಯ ಸಸಿ (25) ಆತ್ಮಹತ್ಯೆಗೆ ಶರಣಾದವರು.
ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ವೀಣಾ ಗುರುವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ವೀಣಾ ಪತಿ ರಾಜಸ್ಥಾನದಲ್ಲಿದ್ದು, ಅಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಅತ್ತೆ ಕಾಟಕ್ಕೆ ಬೇಸತ್ತು ನೇಣಿಗೆ ಶರಣಾದಳು
ಅತ್ತೆಯ ಕಾಟದಿಂದ ಬೇಸತ್ತ ಯೋಧನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಘಟನೆ ನಡೆದಿದೆ. ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡವರು.
ಪತಿ ಬಾಳು ರೂಪನವರ ಅರುಣಾಚಲಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತೆ ಸೇವಂತಾ ಸಿದರಾಯ ರೂಪಾಬಾಯಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ರೂಪಾಬಾಯಿಗೆ ಎರಡು ಮಕ್ಕಳಿದ್ದು, ಅನಾಥರಾಗಿವೆ.
ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ತಂದೆ ಸಾವಿನಿಂದ ಖಿನ್ನತೆಗೆ ಜಾರಿದವಳು ಬಾವಿಗೆ ಹಾರಿದಳು
ಉಡುಪಿ: ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಉಡುಪಿಯ (Udupi News) ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ಘಟನೆ ನಡೆದಿದೆ. ಮಲ್ಲಾರು ಚುಕ್ಕು ತೋಟ ನಿವಾಸಿ ಮೋಸಿನಾ (34) ಆತ್ಮಹತ್ಯೆ ಮಾಡಿಕೊಂಡವರು.
ಮೋಸಿನಾ ತಂದೆಯ ನಿಧನದ ನಂತರ ಖಿನ್ನತೆಗೊಳಗಾಗಿದ್ದರು. ಮೋಸಿನಾಗೆ 7 ವರ್ಷ ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದರು. ತಂದೆಯ ಕೊರಗಿನಲ್ಲೇ ಖಿನ್ನತೆಗೆ ಒಳಗಾದ ಮೋಸಿನಾ ಮನೆ ಬಳಿ ಇದ್ದ ಬಾವಿ ಹಾರಿ ಮೃತಪಟ್ಟಿದ್ದಾರೆ. ಸ್ಥಳೀಯರು ಇದನ್ನೂ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹ ಬಾವಿಯಿಂದ ತೆರವು ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾಪು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಾಗಿದೆ.
6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ
ಮೈಸೂರು: ಮದುವೆಯಾದ ಆರೇ ತಿಂಗಳಿಗೆ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಪತ್ತೆಯಾಗಿದ್ದಾಳೆ. ಮೈಸೂರಿನ ಮಾನಸಿ ನಗರ ಬಿಎಸ್ಎನ್ಎಲ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೌಮ್ಯಾಶ್ರೀ (27) ಮೃತ ದುರ್ದೈವಿ.
ಆರು ತಿಂಗಳ ಹಿಂದೆ ಮೈಸೂರಿನ ಮಂಜುನಾಥ್ ಎಂಬುವರ ಜತೆ ಸೌಮ್ಯಾಶ್ರೀ ಮದುವೆಯಾಗಿದ್ದರು. ಸೌಮ್ಯಾಶ್ರೀ ತಂದೆ ಶ್ರೀಧರ್ ಬೆಂಗಳೂರಿನಿಂದ ಮೈಸೂರಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಸೌಮ್ಯಾಳ ನಡತೆ ಮೇಲೆ ಪತಿ ಮಂಜುನಾಥ್ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.
ಈ ಕುರಿತು ಸೌಮ್ಯಾ ಹೆತ್ತವರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ಮಂಜುನಾಥ್ ಹಾಗೂ ಅವರ ಮನೆಯವರೆಲ್ಲ ಸೇರಿ ಸೌಮ್ಯಾಳನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳ ಶವ ಕಂಡು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮೈಸೂರಿನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ