ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯ ಮೂಲದ ಹೋಟೆಲ್ ಉದ್ಯಮಿಯೊಬ್ಬರು ದುಷ್ಕರ್ಮಿಯ ಗುಂಡಿನ ದಾಳಿಗೆ (Shoot Out) ಬಲಿಯಾಗಿದ್ದಾರೆ. ಅಮೆರಿಕದ ಉತ್ತರ ಕೆರೊಲಿನಾ (North Carolina) ರಾಜ್ಯದ ನ್ಯೂಪೋರ್ಟ್ (Newport) ನಗರದಲ್ಲಿ 46 ವರ್ಷದ ಭಾರತೀಯ ಮೂಲದ ಹೋಟೆಲ್ ಮಾಲೀಕನನ್ನು ಅತಿಕ್ರಮಣಕಾರನೊಬ್ಬ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ಯೇನ್ ನಾಯಕ್ ಕೊಲೆಗೀಡಾದವರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ.
“ಬುಧವಾರ (ಡಿಸೆಂಬರ್ 6) ಬೆಳಗ್ಗೆ 10 ಗಂಟೆಯ ಸುಮಾರಿಗೆ ಹೋಟೆಲ್‌ಗೆ ವ್ಯಕ್ತಿಯೊಬ್ಬ ನುಗ್ಗಿ ಅತಿಕ್ರಮಣ ಮಾಡಿದ ಬಗ್ಗೆ 911 ಕೇಂದ್ರಕ್ಕೆ ಕರೆ ಬಂದಿತ್ತು. ಸ್ವಲ್ಪ ಸಮಯದ ಬಳಿಕ ಗುಂಡು ಹಾರಿಸಲಾಗಿದೆ ಎಂದು ಎರಡನೇ ಕರೆ ಬಂದಿತ್ತು. ಹೀಗಾಗಿ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ್ದರು ಎಂದು ನ್ಯೂಪೋರ್ಟ್ ಪೊಲೀಸ್ ಮುಖ್ಯಸ್ಥ ಕೀತ್ ಲೂಯಿಸ್ ಹೇಳಿದ್ದಾರೆ. ಗಾಯಗೊಂಡಿದ್ದ ಸತ್ಯೇನ್ ನಾಯಕ್ ಅವರನ್ನು ನಮ್ಮ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊಲೆಗಾರನನ್ನು ಟ್ರಾಯ್ ಕೆಲ್ಲಮ್ (59) ಎಂದು ಗುರುತಿಸಲಾಗಿದೆʼʼ ಎಂದು ಅವರು ತಿಳಿಸಿದ್ದಾರೆ.
ಗುಜರಾತ್ ಮೂಲದ ಸತ್ಯೇನ್ ನಾಯಕ್ ತಮ್ಮ ಕುಟುಂಬದೊಂದಿಗೆ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ʼʼಇದ್ದಕ್ಕಿದ್ದಂತೆ ಹೋಟೆಲ್‌ಗೆ ನುಗ್ಗಿದ ಟ್ರಾಯ್ ಕೆಲ್ಲಮ್ ಬಾಗಿಲು ಭದ್ರ ಪಡಿಸಿ ಗುಂಡು ಹಾರಿಸಿದ್ದಾನೆʼʼ ಎಂದು ಸತ್ಯೇನ್ ನಾಯಕ್ ಅವರ ಸಂಬಂಧಿ ಹರ್ನಿಶ್ ಹೇಳಿದ್ದಾರೆ.
ಸ್ಥಳೀಯ ನಿವಾಸಿಯಾಗಿರುವ ಟ್ರಾಯ್ ಕೆಲ್ಲಮ್ ನಿರಾಶ್ರಿತರಾಗಿದ್ದರು. ಅವರು ಯಾವ ಕಾರಣಕ್ಕೆ ಕೊಲೆ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಗುಂಡಿನ ಮೊರೆತ
ಡಿಸೆಂಬರ್ 6ರಂದೇ ಅಮೆರಿಕ ವಿಶ್ವವಿದ್ಯಾನಿಯದಲ್ಲಿಯೂ ಗುಂಡಿನ ದಾಳಿ ನಡೆದಿದೆ. ಲಾಸ್ ವೇಗಾಸ್‌ನ ನೆವಾಡಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂದೂಕುಧಾರಿ 60ರ ಹರೆಯದ ಶಿಕ್ಷಣ ತಜ್ಞನಾಗಿದ್ದ ಎಂದು ತನಿಖೆಯ ಮೂಲಗಳು ಹೇಳಿವೆ. ಈ ಕ್ಯಾಂಪಸ್‌ನಲ್ಲಿ ಸುಮಾರು 30,000 ವಿದ್ಯಾರ್ಥಿಗಳಿದ್ದಾರೆ. ಘಟನೆಯ ಬಳಿಕ ವಿಶ್ವವಿದ್ಯಾಲಯಗಳನ್ನು ದಿನವಿಡೀ ಮುಚ್ಚಲಾಯಿತು ಮತ್ತು ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಲಾಯಿತು ಎಂದು ವರದಿ ತಿಳಿಸಿದೆ.
ಹಿಂದೆಯೂ ನಡೆದಿತ್ತು
ಲಾಸ್ ವೇಗಾಸ್ ಇಂತಹ ಭೀಕರ ಗುಂಡಿನ ಕಾಳಗಕ್ಕೆ ಸಾಕ್ಷಿಯಾಗುತ್ತಿರುವುದು ಇದು ಎರಡನೇ ಬಾರಿ. 2017ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಂದು ಮಾಂಡಲೆ ಬೇಯಲ್ಲಿರುವ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಉತ್ಸವಕ್ಕೆ ನುಗ್ಗಿದ್ದ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ 59 ಜನರನ್ನು ಕೊಂದು 400 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ. ಈ ವರ್ಷ ಅಮೆರಿಕದಲ್ಲಿ 600ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿ ನಡೆದಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಇದನ್ನೂ ಓದಿ: Shooting At University: ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಗುಂಡಿನ ಮೊರೆತ; ಮೂವರ ಸಾವು