Site icon Vistara News

SSLC Result 2024: ಎಸ್‌ಎಸ್‌ಎಲ್‌ಸಿ ಫೇಲ್‌, ಸರಣಿ ಸಾವಿಗೆ ಮತ್ತೊಂದು ಸೇರ್ಪಡೆ

sslc result 2024 vaishnavi self harming

ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ (SSLC Result 2024) ಬಂದ ಬಳಿಕ ಫೇಲ್ (SSLC fail) ಆದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ (Student self harming) ಮಾಡಿಕೊಳ್ಳುತ್ತಿರುವ ಸುದ್ದಿಗಳು ಆತಂಕ ಮೂಡಿಸುತ್ತಿವೆ. ಫೇಲ್‌ ಆದದ್ದರಿಂದ ನೊಂದುಕೊಂಡು ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ (chikkaballapur news) ತಾಲ್ಲೂಕಿನ ಗಂಗರೇಕಾಲುವೆ ಗ್ರಾಮದ ಜಿ.ಎನ್ ವೈಷ್ಣವಿ (15) ಮೃತ ವಿದ್ಯಾರ್ಥಿನಿ.

ವೈಷ್ಣವಿ ಮಂಚನಬೆಲೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಓದುತ್ತಿದ್ದಳು. ನಿನ್ನೆ ಎಸ್ಎಸ್ಎಲ್‌ಸಿ ಫಲಿತಾಂಶ ಬಂದಿತ್ತು. ಫಲಿತಾಂಶ ನೋಡಿ ತಾನು ಫೇಲ್ ಆಗಿದ್ದಕ್ಕೆ ನೊಂದುಕೊಂಡಿದ್ದಳು ಎಂದು ಗೊತ್ತಾಗಿದೆ. ನಂತರ ಮನೆಯಲ್ಲೇ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಎಸ್‌ಎಸ್‌ಎಲ್‌ಸಿ 1, 2, 3ರ ಹೊಸ ಪರೀಕ್ಷಾ ಮಾದರಿಯನ್ನು ಪರಿಚಯಿಸಿದೆ. ಇದರ ಕ್ರಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರಲ್ಲಿ ಅನುತೀರ್ಣರಾಗಿದ್ದರೆ ಅಥವಾ ಕಡಿಮೆ ಅಂಕ ಪಡೆದು ಜಸ್ಟ್‌ ಪಾಸ್‌ ಆಗಿದ್ದರೆ ಅಂತಹ ವಿದ್ಯಾರ್ಥಿಗಳು ಪರೀಕ್ಷೆ 2ರಲ್ಲಿ ಅಂಕವನ್ನು ಸರಿದೂಗಿಸಿಕೊಳ್ಳಬಹುದಾಗಿದೆ. ಕೇವಲ ಫೇಲ್‌ ಆದವರು, ಕಡಿಮೆ ಅಂಕ ಬಂದವರು ಮಾತ್ರವಲ್ಲ ಹೆಚ್ಚು ಅಂಕ ಗಳಿಸಲು ಯಾವುದೇ ವಿದ್ಯಾರ್ಥಿಯಾದರು ಪರೀಕ್ಷೆ 2 ಹಾಗೂ 3ರಲ್ಲಿ ಹಾಜರಾಗಬಹುದು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದಲೇ ಮುಂದಿನ 1 ತಿಂಗಳಲ್ಲಿ ಪರಿಹಾರ ಬೋಧನೆಯನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಪರೀಕ್ಷೆ 2-3ಕ್ಕೆ ಉತ್ತಮವಾಗಿ ಸಿದ್ಧರಾಗಲು ಸಹಾಯವಾಗುತ್ತದೆ. ಇಷ್ಟನ್ನು ಮನದಟ್ಟು ಮಾಡಿಸಿದ್ದರೂ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್‌ ಆದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಖಿಲ್ (16) ನೇಣಿಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಿಖಿಲ್, ಫಲಿತಾಂಶ ನೋಡಿ 3 ವಿಷಯದಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಹೊಲಕ್ಕೆ ತೆರಳಿ ಮರವೊಂದಕ್ಕೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪಾಸಾದರೂ ನೇಣು ಹಾಕಿಕೊಂಡು ವಿದ್ಯಾರ್ಥಿನಿ

ಮಂಡ್ಯ: ಮಂಡ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ್ದಾಳೆ. ಅಮೃತ (16) ನೇಣಿಗೆ ಶರಣಾದ ವಿದ್ಯಾರ್ಥಿನಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ ನಗರಕೆರೆ ಗ್ರಾಮದ ಸರ್ಕಾರಿ ಅನುದಾನಿತ ಪೂರ್ಣಿಮಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಅಮೃತ ಶೇ.57 ಅಂಕ ಪಡೆದು ತೇರ್ಗಡೆ ಹೊಂದಿದ್ದಳು.

ಆದರೆ ಪರೀಕ್ಷೆಯಲ್ಲಿ ಫೇಲ್‌ ಆಗಿಬಿಟ್ಟೆ ಎಂದು ತಿಳಿದು ಮನೆಯಲ್ಲಿ ಯಾರು ಇಲ್ಲದಾಗ ನೇಣಿಗೆ ಶರಣಾಗಿದ್ದಾಳೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತಿರ್ಣಗೊಂಡ ವಿದ್ಯಾರ್ಥಿನಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಜರುಗಿದೆ. ಸೃಷ್ಟಿ ಕಲ್ಲಪ್ಪ ಚೌವ್ಹಾಣ್ (16) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

Exit mobile version