ಹುಬ್ಬಳ್ಳಿ: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದಲೇ ಖೆಡ್ಡಾ ತೋಡಲಾಗಿದೆ. ಇದರ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಈ ಪ್ರಕರಣದಲ್ಲಿ ವಿಡಿಯೊದಲ್ಲಿದ್ದ ಯಾವೊಬ್ಬ ಸಂತ್ರಸ್ತೆ ಸಹ ಸರ್ಕಾರದ ಬಳಿ ಬಂದು ದೂರು ಕೊಟ್ಟಿಲ್ಲ. ಮಹಿಳಾ ಆಯೋಗವು ನೀಡಿದ ವಿಡಿಯೊ ಸಾಕ್ಷ್ಯವನ್ನು ಇಟ್ಟುಕೊಂಡು ಕ್ರಮ ಕೈಗೊಂಡಿದೆ. ಇದಕ್ಕಿಂತ ಮೊದಲು ಮಹಿಳಾ ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯ ಅವರಿಗೆ ಏಪ್ರಿಲ್ 25ರಂದು ಪತ್ರ ಬರೆಯುತ್ತಾರೆ. ಕೊನೆಗೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಪ್ರಕರಣವನ್ನು ಕೊಡಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಮಹಿಳೆಯೊಬ್ಬಳಿಂದ ದೂರನ್ನು ಬರೆಸಿಕೊಂಡು ಟೈಪ್ ಮಾಡಿಸಿಕೊಂಡು ಆ ಪ್ರಕರಣವನ್ನು ಹೊಳೆನರಸೀಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪವನ್ನು ಮಾಡಿದರು.
ಆ ಸಂತ್ರಸ್ತೆಯನ್ನು ಯಾರು ಬೆಂಗಳೂರಿಗೆ ಕರೆದುಕೊಂಡು ಬಂದರು? ಇನ್ನು ದೂರಿನ ಅನ್ವಯ ನೋಡುವುದಾದರೆ ಆ ಹೆಣ್ಣು ಮಗಳು 2012-13 ರಲ್ಲಿ ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದಳು. ಜತೆಗೆ ಆಕೆ ಸಂಬಂಧಿ ಸಹ ಆಗಿದ್ದಳು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಈ ಘಟನೆ ನಡೆದಿರುವುದು 5 – 6 ವರ್ಷಗಳ ಹಿಂದೆ ನಡೆದಿರುವುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ, ಈ ಐದಾರು ವರ್ಷ ಕಂಪ್ಲೇಂಟ್ ಕೊಡದೆ ದೂರುದಾರರು ಏನು ಮಾಡುತ್ತಿದ್ದರು? ಈಗ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ 5 ದಿನ ಬಾಕಿ ಇರುವಾಗ ಬಿಡುಗಡೆ ಮಾಡಿದ್ದರ ಹಿಂದಿನ ಉದ್ದೇಶ ಏನು? ಇದರ ಹಿಂದೆ ಯಾವ ಮಹಾನ್ ನಾಯಕರು ಇದ್ದಾರೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಹಾಗಂತ ಈ ಪೆನ್ ಡ್ರೈವ್ ಬಿಡುಗಡೆಯಾದ ಬಳಿಕ ಯಾರೂ ಎಲ್ಲಿಯೂ ಪ್ರತಿಭಟನೆಯನ್ನು ಮಾಡಿಸಲಿಲ್ಲ. ಬದಲಾಗಿ ನಮ್ಮ ಬಿಜೆಪಿ – ಜೆಡಿಎಸ್ ಮೈತ್ರಿಗೆ ಹಿನ್ನಡೆ ತರಲು ಕಸರತ್ತು ಮಾಡಿದ್ದಾರೆ. ಚುನಾವಣೆ ಮುಗಿದ ಮೇಲೆ ಅಂದರೆ ಏಪ್ರಿಲ್ 28ರ ಬಳಿಕ 2012-13ರ ಪ್ರಕರಣದ ಕಂಪ್ಲೇಂಟ್ ಪಡೆದು, ಎಫ್‌ಐಆರ್ ಮಾಡಿ, ಬಳಿಕ ಎಸ್‌ಐಟಿಗೆ ಈಗ ವರ್ಗಾವಣೆ ಮಾಡಿದ್ದಾರೆ. ವಿಪರ್ಯಾಸವೆಂದರೆ ಸಾರ್ವಜನಿಕರಿಂದ ಯಾವುದೇ ದೂರು ಬರದೇ ಎಸ್‌ಐಟಿಯನ್ನು ರಚನೆ ಮಾಡಿದ್ದಾಗಿ ಸಿಎಂ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ನಮ್ಮ ಕುಟುಂಬದ ತೇಜೋವಧೆಯೇ ಇದರ ಉದ್ದೇಶ!
ಈ ಪ್ರಕರಣವನ್ನು ಗಮನಿಸಿದಾಗ ಸರ್ಕಾರಕ್ಕೆ ನಮ್ಮ ಕುಟುಂಬದ ವರ್ಚಸ್ಸನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದಿದೆ ಎಂಬುದು ಗೊತ್ತಾಗುತ್ತದೆ. ಇಲ್ಲಿ ಇವರಿಗೆ ಮಹಿಳೆಯರನ್ನು ರಕ್ಷಣೆ ಮಾಡುವುದು ಬೇಕಾಗಿಲ್ಲ. ಈ ಪ್ರಕರಣವನ್ನು ಬಳಸಿಕೊಂಡು ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಜ್ವಲ್ ರೇವಣ್ಣ ಅವರ ಫೋಟೊವನ್ನು ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ. ಈ ಪ್ರಕರಣ ಸಂಬಂಧ ಮೋದಿ ಅವರು ಉತ್ತರ ಕೊಡಬೇಕು ಎಂದು ಅಭಿಯಾನ ಮಾಡಲಾಗುತ್ತಿದೆ. ಮೋದಿಗೂ ಈ ಕೇಸ್‌ಗೂ ಏನು ಸಂಬಂಧ ಇದೆ? ಅವರ ಪಾತ್ರ ಇದರಲ್ಲೇನಿದೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ; ಇಲ್ಲಿದೆ ಕಂಪ್ಲೀಟ್ ವಿಡಿಯೊ!
ಈ ಪ್ರಕರಣ ಹೊರಗೆ ಬಂದಾಗ ಸರ್ಕಾರದ ಭಾಗವಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನ್ನ ಮೇಲೆ ನಿರಂತರವಾಗಿ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ. ನಾನು ಈ ಹಿಂದೆ ಹೇಳಿದ್ದ ಪೆನ್‌ಡ್ರೈವ್ ಇದೇನಾ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ. ಆ ಪೆನ್‌ಡ್ರೈವ್ ನನ್ನ ಬಳಿ ಇದೆ. ಅದನ್ನು ಯಾವಾಗ ಬಿಡುಗಡೆ ಮಾಡಬೇಕೋ ಆಗ ಮಾಡುತ್ತೇನೆ. ನಾನು ನನ್ನ ಜೀವನದಲ್ಲಿ ಇಂಥ ಪೆನ್‌ಡ್ರೈವ್‌ಗಳನ್ನು ಮಾಡಿಲ್ಲ. ಇಂಥ ಪೆನ್‌ಡ್ರೈವ್‌ಗಳನ್ನು ಮಾಡುವುದು ಅವರ ಸಂಪ್ರದಾಯ. ಅವರು ಈ ಹಿಂದೆ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಹೆಣ್ಣು ಮಕ್ಕಳನ್ನು ಕೂಡಿ ಹಾಕಿಕೊಂಡು ಕೇಸ್ ಮಾಡಿದ್ದರಲ್ಲ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ರಾಕೇಶ್ ಸಿದ್ದರಾಮಯ್ಯ ಸಾವಿನ ವೇಳೆ ಏನಾಗಿತ್ತು ಎಂದೂ ಹೇಳುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಮನೆಯಲ್ಲಿ ನಡೆದಿದ್ದ ವಿಚಾರವನ್ನು ಹೊರಗಡೆ ತರುತ್ತೇನೆ ಎಂದು ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಸಾವಿನ ಸಂದರ್ಭದಲ್ಲಿ ನಡೆದ ವಿಚಾರವನ್ನು ಎಚ್‌ಡಿಕೆ ಎಳೆದು ತಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆತಿದ್ದೀರಿ. ಎಲ್ಲ ದಾಖಲೆಗಳನ್ನು ನಾವು ಹೊರಗಡೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ನಡೆದ ಘಟನೆ ಏನೇನಾಯಿತು ಎಲ್ಲವೂ ಹೊರಗೆ ಬರಲಿದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಮನೆಯ ಎದುರು ಏಕೆ ಪ್ರತಿಭಟನೆ ಮಾಡುತ್ತೀರಿ. ಇದನ್ನು ಇಷ್ಟಕ್ಕೆ ಬಿಡಲ್ಲ. ಎಲ್ಲ ವಿಷಯವೂ ತನಿಖೆಯಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಮನೆ ಬಳಿ ಬಂದು ಪ್ರತಿಭಟಿಸುತ್ತಿದ್ದಾರೆ. ಮಹಾನುಭಾವನ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿ. ಡಿಸಿಎಂ ಡಿ.ಕೆ. ಶಿವಕುಮಾರ್ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಿ. ಎಚ್.ಡಿ. ರೇವಣ್ಣ ಕುಟುಂಬದ ಬಗ್ಗೆ ವಿಷಯವನ್ನು ಕೆದಕಿದ್ದಾರೆ. ನಾನು ಚರ್ಚೆ ಮಾಡಲು ಸಿದ್ಧ. ಪಲಾಯಾನ ಮಾಡುವುದಿಲ್ಲ. ಕಾಂಗ್ರೆಸ್ ನಾಯಕ ಮಹಾಪರಾಧ ಮಾಡಿದ್ದಾನೆ. ಎಷ್ಟು ತಿಂಗಳ ಹಿಂದೆ ಆ ಮಹಾನ್ ನಾಯಕನಿಗೆ ಗೊತ್ತಿತ್ತು. ಪೆನ್‌ಡ್ರೈವ್ ಯಾರು ಸರಬರಾಜು ಮಾಡಿದರು ಎಲ್ಲವೂ ಗೊತ್ತಿದೆ. ಈ ಮಹಾನ್ ನಾಯಕನ ನಡವಳಿಕೆಯ ಬಗ್ಗೆಯೂ ಚರ್ಚಿಸೋಣ. ನಿನ್ನೆ ಹಾಸನ ಜಿಲ್ಲಾಧಿಕಾರಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.
ಹಲವು ವಿಷಯಗಳಿವೆ, ಎಲ್ಲವನ್ನೂ ಹೇಳುವೆ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ಹಲವು ವಿಷಯಗಳಿವೆ. ಅದನ್ನು ನಾನು ಹೇಳುತ್ತೇನೆ. ಮಹಾನ್ ನಾಯಕ ಮಹಿಳೆಯರ ಬದುಕನ್ನು ಬೀದಿಗೆ ತಂದಿದ್ದಾನೆ. ಇದರ ಬಗ್ಗೆಯೂ ನಾವು ಚರ್ಚೆ ಮಾಡಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಮಾತೃ ಶಕ್ತಿ ಪರ ನಿಲ್ಲುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಪ್ರಜ್ವಲ್ ರೇವಣ್ಣ ಬಗ್ಗೆ ಚರ್ಚೆ ಮಾಡಿಲ್ಲ. ಪ್ರಜ್ವಲ್ ವಿರುದ್ಧದ ಕ್ರಮ ತೆಗೆದುಕೊಳ್ಳುವ ವಿಷಯವನ್ನು ನಮಗೆ ಬಿಟ್ಟಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ: Hassan Pen Drive Case: ಪ್ರಜ್ವಲ್ ಪ್ರಕರಣದಲ್ಲಿ ರೇವಣ್ಣ-ಸಿದ್ದರಾಮಯ್ಯ ಒಪ್ಪಂದ; ಪ್ರಲ್ಹಾದ್ ಜೋಶಿ ಹೇಳಿದ್ದೇನು?
ನಿಮ್ಮ ಜತೆ ನಾವಿದ್ದೇವೆ
ತಪ್ಪಾಗಿದ್ದರೆ ಶಿಕ್ಷೆಯಾಗಬೇಕೆಂದು ನಾನೇ ಹೇಳಿದ್ದೇನೆ. ಕಾನೂನು ವ್ಯಾಪ್ತಿಯಲ್ಲಿ ಏನಾಗಬೇಕೆಂದು ಚರ್ಚಿಸುತ್ತೇವೆ. ಈ ಬಗ್ಗೆ ಯಾರೂ ಗಾಬರಿಯಾಗಬೇಡಿ, ಆತಂಕ ಬೇಡ. ಯಾವುದೇ ಮಹಿಳೆಯರಿಗೆ ಅನ್ಯಾಯವಾದರೂ ಧ್ವನಿ ಎತ್ತುತ್ತೇವೆ. ನಿಮ್ಮ ಜತೆ ಎಚ್.ಡಿ. ದೇವೇಗೌಡ ಹಾಗೂ ನಾವು ಇದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.