ನವದೆಹಲಿ: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿಂದ ಆಕ್ರೋಶಕ್ಕೆ ಒಳಗಾಗಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹಾಗೂ ಎಸಿಬಿ ಮುಖ್ಯಸ್ಥ ಸೀಮಂತ್‌ಕುಮಾರ್ ಸಿಂಗ್‌ಗೆ ಮೂರು ದಿನ ರಿಲೀಫ್ ಸಿಕ್ಕಿದೆ.
ನ್ಯಾ. ಎಚ್.ಪಿ. ಸಂದೇಶ್ ಅವರು ತಮ್ಮ ವಿರುದ್ಧ ಮೌಖಿಕ ಹೇಳಿಕೆ ನೀಡುವುದರಿಂದ ರಕ್ಷಣೆ ನೀಡಬೇಕೆಂಬ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ. ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಮಂಗಳವಾರ ನಡೆಸಿದರು.
ತಮಗೆ ಹಾಲಿ ನ್ಯಾಯಮೂರ್ತಿಯೊಬ್ಬರ ಮೂಲಕ ವರ್ಗಾವಣೆ ಬೆದರಿಕೆ ಒಡ್ಡಲಾಗಿದೆ ಎಂದು ನ್ಯಾ. ಎಚ್.ಪಿ. ಸಂದೇಶ್ ಜುಲೈ 4ರಂದು ಮೌಖಿಕವಾಗಿ ತಿಳಿಸಿದ್ದರು. ನಂತರ ಜುಲೈ 11ರಂದು ವಿಚಾರಣೆ ನಡೆಸುವಾಗ, ಈ ಹಿಂದೆ ಹೇಳಿದ್ದನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದರು. ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನವೇ ಎಸಿಬಿ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್, ಜುಲೈ 11ರಂದು ನೀಡಿರುವ ತೀರ್ಪಿನ ಕುರಿತು ನಾವು ಪರಿಶೀಲನೆ ನಡೆಸಬೇಕಿದೆ. ಈ ಆದೇಶ ಇನ್ನೂ ಅಪ್‌ಲೋಡ್ ಆಗಿಲ್ಲ. ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ಮೂರು ದಿನ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡುತ್ತೇವೆ ಎಂದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು. ಈ ಮೂಲಕ ಎಸಿಬಿ ಹಾಗೂ ಸೀಮಂತ್‌ಕುಮಾರ್ ಸಿಂಗ್ ಅವರಿಗೆ ಮೂರು ದಿನಗಳ ಸಮಯಾವಕಾಶ ಲಭಿಸಿದೆ.
ಜುಲೈ 11ರಂದು ಲಿಖಿತವಾಗಿ ದಾಖಲು ಮಾಡಿಸಿದ್ದ ನ್ಯಾ. ಎಚ್.ಪಿ. ಸಂದೇಶ್, 2022ರ ಜೂನ್ 22ರಂದು ಪ್ರರಕಣದ ವಿಚಾರಣೆ ನಡೆಸುವಾಗ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಎಸಿಬಿ ನಿಷ್ಕ್ರಿಯತೆ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿ ಜುಲೈ 4ಕ್ಕೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಇದರ ನಡುವೆ, ಮುಖ್ಯನ್ಯಾಯಮೂರ್ತಿಗಳ ನಿವೃತ್ತಿ ಹಿನ್ನೆಲೆಯಲ್ಲಿ ಭೋಜನ ಕೂಟವನ್ನು ಜುಲೈ 1ರಂದು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರು ನನ್ನ ಪಕ್ಕದಲ್ಲಿ ಬಂದು ಕುಳಿತು, ತಮಗೆ ದೆಹಲಿಯಿಂದ ಈ ಕುರಿತು ಕರೆ ಬಂದಿರುವುದಾಗಿ ತಿಳಿಸಿದರು. ದೂರವಾಣಿ ಕರೆ ಮಾಡಿದವರು ನನ್ನ ಕುರಿತು ಮಾಹಿತಿ ಕೇಳಿದ್ದಾರೆ ಎಂದು ಹೇಳಿದರು. ನಾನು ಯಾವುದೇ ರಾಜಕೀಯ ಪಕ್ಷದ ಜತೆಗೆ ಸಂಬಂಧ ಹೊಂದಿಲ್ಲ ಎಂದು ನಾನು ಹೇಳಿದೆ. ಇಷ್ಟಕ್ಕೂ ನ್ಯಾಯಾಧೀಶರು ಸುಮ್ಮನಾಗದೆ, ಎಡಿಜಿಪಿ (ಸೀಮಂತ್‌ಕುಮಾರ್ ಸಿಂಗ್) ಉತ್ತರ ಭಾರತದವರಾಗಿದ್ದು, ಬಹಳ ಪ್ರಭಾವಶಾಲಿಯಾಗಿದ್ದಾರೆ. ನಿಮ್ಮ ವರ್ಗಾವಣೆಯನ್ನೂ ಮಾಡಿಸಬಹುದು ಎಂದು ತಿಳಿಸಿದ್ದರು.
ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಂದುವರಿಸಿದ್ದ ನ್ಯಾ. ಎಚ್.ಪಿ. ಸಂದೇಶ್ ಅವರು, ಎಸಿಬಿಯಂತಹ ಸಂಸ್ಥೆಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸಬಾರದು. ಮುಖ್ಯಕಾರ್ಯದರ್ಶಿಯವರು ಈ ಕುರಿತು ಎಚ್ಚರಿಕೆ ವಹಿಸಬೇಕು. ಇಲ್ಲಿಗೆ ನೇಮಕವಾಗುವ ಅಧಿಕಾರಿ ವಿಶ್ವಾಸಾರ್ಹತೆಯನ್ನು ಹೊಂದಿರಬೇಕು ಹಾಗೂ ಬಾಹ್ಯ ಒತ್ತಡದ ಕಾರಣಕ್ಕೆ ನೇಮಿಸಬಾರದು. ಯಾವುದೇ ಅಧಿಕಾರಿ ಅಥವಾ ಆತನ ಕುಟುಂಬದವರು ಎಸಿಬಿ ಅಥವಾ ಲೋಕಾಯುಕ್ತದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದರೆ ಅಂತಹ ಅಧಿಕಾರಿಯನ್ನು ನೇಮಕ ಮಾಡಬಾರದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತ್ತು. ಇದೀಗ ಶುಕ್ರವಾರದವರೆಗೆ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್ ಮನವಿ ಮಾಡಿದೆ.
ಇದನ್ನೂ ಓದಿ | ಎಡಿಜಿಪಿ ಆತ್ಮಸಾಕ್ಷಿ ಕೇಳಿಕೊಳ್ಳಲಿ: ಎಸಿಬಿ ವಿರುದ್ಧ ಮತ್ತೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಆಕ್ರೋಶ