ಮಂಡ್ಯ: ಬೇಸಿಗೆಯಲ್ಲಿ ಸ್ವಚ್ಛತೆಯಿಲ್ಲದ ಬೀದಿ ಬದಿಯ ಆಹಾರ (Road side food) ಸೇವಿಸಿ ಅಸ್ಸಸ್ಥಗೊಳ್ಳುವ ಹಾಗೂ ಮೃತಪಡುವ ಪ್ರಕರಣಗಳು ಕಂಡುಬರುತ್ತಿವೆ. ಮಂಡ್ಯ (Mandy news) ಹಾಗೂ ದಾವಣಗೆರೆಯಲ್ಲಿ (Davanagere news) ಇವು ವರದಿಯಾಗಿವೆ. ಐಸ್ ಕ್ರೀಂ (Ice cream) ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಈ ದಾರುಣ ಘಟನೆ ನಡೆದಿದೆ.
ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ತಾಯಿ ಮತ್ತು ಮಕ್ಕಳು ಖರೀದಿಸಿ ತಿಂದಿದ್ದರು. ನಂತರ ಅಸ್ವಸ್ಥರಾಗಿದ್ದರು. ಮಕ್ಕಳು ಮನೆಯಲ್ಲಿ ಸಾವಿಗೀಡಾದರೆ, ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮಕ್ಕಳ ಮೃತ ದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ನಡೆಯುತ್ತಿದೆ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಮೋಕ್ ಬಿಸ್ಕೆಟ್ ತಿಂದು ಮಗು ಅಸ್ವಸ್ಥ
ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ ತಿಂದು ಅಸ್ವಸ್ಥನಾಗಿದ್ದಾನೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾನೆ. ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್‌ನಲ್ಲಿ ಘಟನೆ ನಡೆದಿದೆ. ಮಕ್ಕಳ ಮನರಂಜನೆಗಾಗಿ ನಡೆಯುತ್ತಿರುವ ಎಕ್ಸಿಬಿಷನ್‌ನ ಸ್ಟಾಲ್ ಒಂದರಲ್ಲಿ ಸ್ಮೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಅದನ್ನು ಏಕಾಏಕಿ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ.
ಸ್ಮೋಕ್ ಬಿಸ್ಕೆಟ್ ಸ್ಟಾಲ್ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ ಚಿಕ್ಕ ಬಿಸ್ಕೇಟ್ ನೀಡಲಾಗುತ್ತಿತ್ತು. ಹೀಗೆ ಕೊಟ್ಟ ಬಿಸ್ಕೇಟ್ ಅನ್ನು ಮಗು ಒಂದೇ ಸಲ ಬಾಯಿಗೆ ಹಾಕಿಕೊಂಡಿದೆ. ನಂತರ ನುಂಗಲೂ ಆಗದೇ ಉಗಿಯಲೂ ಆಗದೇ ಕಷ್ಟಪಟ್ಟಿದೆ.
ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಘಟನೆಯಿಂದ ಆಕ್ರೋಶಗೊಂಡ ಪೋಷಕರು ಎಕ್ಸಿಬಿಷನ್‌ನಲ್ಲಿ ಹಾಕಲಾಗಿದ್ದ ಸ್ಟಾಲ್ ಅನ್ನು ಕಿತ್ತು ಬಿಸಾಕಿದ್ದಾರೆ. ಇಂತಹ ಸ್ಮೋಕ್ ಬಿಸ್ಕೆಟ್ ಅನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ಹರಿಬಿಟ್ಟಿದ್ದಾರೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.
ಇದನ್ನೂ ಓದಿ: Kids Care: ಪ್ರಯಾಣದ ವೇಳೆ ಮಕ್ಕಳು ಅಸ್ವಸ್ಥರಾಗದಂತೆ ನೋಡಿಕೊಳ್ಳಲು ಹೀಗೆ ಮಾಡಿ