ಮೈಸೂರು: ಈಜಲು (Swimming) ಹೋಗಿ ಇಬ್ಬರು ಬಾಲಕರು ನೀರು ಪಾಲಾದ ಘಟನೆ (Drowned) ಮೈಸೂರಿನ ಸೌಕಾರಹುಂಡಿ ಕೆರೆಯಲ್ಲಿ (Lake) ನಡೆದಿದೆ. ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸಿ ವರುಣ್ (16) ಹಾಗೂ ಬಸವನಪುರ ನಿವಾಸಿ ಜಸ್ವಂತ್ (14) ಮೃತ ದುರ್ದೈವಿಗಳು.
ಮುಸ್ಸಂಜೆ ವೇಳೆ ಈಜಲು ತೆರಳಿದ್ದ ಈ ಯುವಕರು ಈಜುವ ವೇಳೆ ದುರ್ಘಟನೆ ನಡೆದಿದೆ. ನಡು ಕೆರೆಯಲ್ಲಿದ್ದಾಗ ಬಳಲಿ ತೀರಕ್ಕೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾವರೆ ಕೊಯ್ಯಲು ಹೋಗಿ ಹೂವಿನ ವ್ಯಾಪಾರಿ ಸಾವು
ತುಮಕೂರು: ಕೆರೆಯಲ್ಲಿದ್ದ ಕಮಲ ಕೀಳಲು ಹೋಗಿದ್ದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವಿಗೀಡಾದ ಘಟನೆ ತುಮಕೂರು ತಾಲೂಕಿನ ಅರಕೆರೆ ಕೆರೆಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಮಧ್ಯವೆಂಕಟಪುರದ ನಿವಾಸಿ ಶ್ರೀನಿವಾಸ್ (35) ಮೃತ ದುರ್ದೈವಿ.
ಹೂವಿನ ವ್ಯಾಪಾರಿಯಾಗಿದ್ದ ಶ್ರೀನಿವಾಸ್ ಅವರು, ಅದೇ ಊರಿನ ಕೆಂಪರಾಮಯ್ಯ, ಚಿಕ್ಕಹನುಮಯ್ಯ ಜೊತೆ ಕಮಲದ ಹೂ ಕೀಳಲು ಹೋಗಿದ್ದರು. ಈ ವೇಳೆ ಕೆಸರಲ್ಲಿ ಸಿಲುಕಿ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ದುರ್ಘಟನೆ ನಡೆದಿದ್ದು, ಜೊತೆಗಿದ್ದವರು ಊರಿಗೆ ಹೋಗಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ತಿಬೆಲಯಲ್ಲಿ ಬಾಲಕ ನೀರುಪಾಲು
ಆನೇಕಲ್: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲಾಗಿರುವ ಘಟನೆ (Drowns in lake) ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಅತ್ತಿಬೆಲೆ ಸಮೀಪದ ಬಳ್ಳೂರು ಕೆರೆಯಲ್ಲಿ ನಡೆದಿದೆ. ಅತ್ತಿಬೆಲೆ ವಾಸಿ ಧನುಷ್ (14) ಮೃತ ಬಾಲಕ.
ರೈನ್ ಬೋ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕ, ಭಾನುವಾರ ಶಾಲೆಗೆ ರಜೆ ಇದಿದ್ದದ್ದರಿಂದ ಸ್ನೇಹಿತರ ಜತೆ ಈಜಲು ಕೆರೆಗೆ ಹೋಗಿದ್ದ. ಈ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಬಸ್- ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು
ಕೊಡಗು: ಖಾಸಗಿ ಬಸ್ ಹಾಗೂ ದ್ವಿಚಕ್ರ ನಡುವೆ ಭೀಕರ ಅಪಘಾತ (Road Accident) ಸಂಭವಿಸಿ, ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ನಡೆದಿದೆ. ಸುಂಟಿಕೊಪ್ಪ ನಿವಾಸಿ ಪಟ್ಟೆಮನೆ ಲೋಕೇಶ್ ಕುಮಾರ್ (59) ಮೃತ ದುರ್ದೈವಿ.
ಕಳೆದ ಹಲವು ವರ್ಷಗಳಿಂದ ಲೋಕೇಶ್ ವಾಹನ ಚಾಲಕರಾಗಿದ್ದರು. ಸುಂಟಿಕೊಪ್ಪದ ಗದ್ದೆಹಳ್ಳ ಬಳಿ ತೆರಳುತ್ತಿದ್ದಾಗ ಖಾಸಗಿ ಬಸ್‌ನೊಂದಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಗುಂಡಿನ ದಾಳಿ; ರೌಡಿಶೀಟರ್ ಸ್ಥಳದಲ್ಲೇ ಸಾವು
ವಿಜಯಪುರ: ಭೀಮಾ ತೀರದಲ್ಲಿ ಗುಂಡಿನ ದಾಳಿ ನಡೆದು, ರೌಡಿಶೀಟರ್ ಮೃತಪಟ್ಟಿದ್ದಾನೆ. ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆಯ ಮನೆ ಬಳಿ ಇದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ (Shootout Case) ನಡೆಸಿ ರೌಡಿಶೀಟರ್‌ನ ಕೊಲ್ಲಲಾಗಿದೆ.
ಅಶೋಕ ಮಲ್ಲಪ್ಪ ಗಂಟಗಲ್ಲಿ ಮೃತ. ಮನೆಯಿಂದ ಚಡಚಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಹಂತಕರು ದಾಳಿ ಮಾಡಿದ್ದಾರೆ. ಅಶೋಕ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡಿಗಳು ತಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಅಶೋಕ ಹೊರಬಂದಿದ್ದ. ಕೊಲೆ ಹಾಗೂ ಇತರೆ ಕೇಸ್‌ಗಳಲ್ಲಿ ಅಪರಾಧಿಯಾಗಿದ್ದ ವ್ಯಕ್ತಿಯನ್ನು ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ಮೂಡಿದೆ. ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Electric Shock: ಕುಷ್ಟಗಿಯಲ್ಲಿ ವಿದ್ಯುತ್ ತಂತಿ ತಗುಲಿ ರೈತ, 2 ಎತ್ತುಗಳ ಸಾವು