Site icon Vistara News

Ujjain Case: ಅತ್ಯಾಚಾರಕ್ಕೊಳಗಾದ ಬಾಲಕಿಗೆ ನೆರವಾಗದವರ ಮೇಲೂ ಬೀಳಲಿದೆ ಕೇಸ್!‌

Ujjain Case

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾಗಿ (Ujjain Case) ನೆರವಿಗಾಗಿ ಬೇಡುತ್ತಿದ್ದ 12 ವರ್ಷದ ಬಾಲಕಿಗೆ ಸಹಾಯ ಮಾಡದ ವ್ಯಕ್ತಿಗಳ ಮೇಲೂ ಲೈಂಗಿಕ ದೌರ್ಜನ್ಯ ಕಾನೂನುಗಳ ಅಡಿಯಲ್ಲಿ (POCSO) ಕೇಸು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಬದ್‌ನಗರದಲ್ಲಿ 12 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾದ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲಿ, ಅರೆಬೆತ್ತಲೆ ಸ್ಥಿತಿಯಲ್ಲಿ ಮನೆ ಮನೆಯ ಮುಂದೆ ಹೋಗಿ ಸಹಾಯ ಯಾಚಿಸಿದ್ದಳು. ಆದರೆ ಯಾರೂ ಸಹಾಯ ಮಾಡಿರಲಿಲ್ಲ. ಕೆಲವರು ದೂರ ಓಡಿಸಿದ್ದರು. ಅಂತಿಮವಾಗಿ ಆಶ್ರಮದ ಅರ್ಚಕರು ಅವಳನ್ನು ಟವೆಲ್‌ ಹೊದೆಸಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಈ ಸಂತ್ರಸ್ತೆಗೆ ʼಸಹಾಯ ನೀಡದ ಅಥವಾ ಇದನ್ನು ವರದಿ ಮಾಡಲು ವಿಫಲರಾದ’ ಆರೋಪಗಳನ್ನು ಅಂಥವರ ಮೇಲೆ ಹಾಕಬಹುದು ಎಂದು ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಿದ್ದಕ್ಕಾಗಿ ಅಂತಹ ಒಬ್ಬ ಆಟೋ ರಿಕ್ಷಾ ಚಾಲಕನನ್ನು ಗುರುತಿಸಲಾಗಿದೆ. ರಾಕೇಶ್ ಮಾಳವೀಯ ಎಂದು ಗುರುತಿಸಲಾದ ಆಟೋ ರಿಕ್ಷಾ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸಿಸಿಟಿವಿ ಸಾಕ್ಷಿ ದೊರೆತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಉಜ್ಜಯಿನಿ) ಜಯಂತ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಇಂಥ ಇನ್ನಷ್ಟು ಜನರು ಕಂಡುಬಂದರೆ ಅವರ ಮೇಲೂ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಪೋಲೀಸರ ಪ್ರಕಾರ ಮಾಳವಿಯಾ ತನ್ನ ಆಟೋದಲ್ಲಿ ಹುಡುಗಿಯನ್ನು ಸಾಗಿಸಿದರು. ಸೀಟಿನಲ್ಲಿ ರಕ್ತದ ಕಲೆಗಳನ್ನು ಕಂಡರೂ ಅವರು ಪೊಲೀಸರಿಗೆ ಇದನ್ನು ತಿಳಿಸಲಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಎಷ್ಟು ಮಂದಿ ಬಾಲಕಿಗೆ ಸಹಾಯ ಮಾಡದ ಆರೋಪ ಎದುರಿಸಬೇಕಾಗುತ್ತದೆ ಎಂಬುದು ಅವರ ಹೇಳಿಕೆಯ ನಂತರವಷ್ಟೇ ತಿಳಿಯಲಿದೆ. ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದ ಆಘಾತಕಾರಿ ದೃಶ್ಯಗಳಲ್ಲಿ ಒಂದು ಎಂದರೆ, ಹುಡುಗಿ ಸಹಾಯಕ್ಕಾಗಿ ಕೇಳುತ್ತಿದ್ದಾಗ ಮನೆ ಬಾಗಿಲಲ್ಲಿ ನಿಂತಿರುವ ವ್ಯಕ್ತಿ ಅವಳನ್ನು ಓಡಿಸುತ್ತಿರುವುದು.

ಆದರೆ ಕೆಲವು ಮಂದಿ ಆಕೆಗೆ ಹಣದ ಸಹಾಯ ಮಾಡಿದ್ದರು. ಕೆಲವರು ಆಕೆಗೆ 50, 100 ರೂಪಾಯಿ ಕೊಟ್ಟರು. ದಾರಿಯಲ್ಲಿ ಆಕೆ ಟೋಲ್ ಬೂತ್ ದಾಟಿದಾಗ ಅಲ್ಲಿನ ಸಿಬ್ಬಂದಿ ಆಕೆಗೆ ಹಣ ಮತ್ತು ಬಟ್ಟೆ ಕೊಟ್ಟರು. ಕನಿಷ್ಠ 7-8 ಜನರು ಸಹಾಯ ಮಾಡಲು ಪ್ರಯತ್ನಿಸಿದರು ಎಂದಿದ್ದಾರೆ ಪೊಲೀಸ್.‌

ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮದುವೆಯ ಹೊಣೆಯನ್ನು ಮಹಾಕಲ್ ಪೊಲೀಸ್ ಠಾಣೆಯ ಪ್ರಭಾರಿ ಅಜಯ್ ವರ್ಮಾ ಹೊತ್ತುಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಬೆಂಬಲಿಸಲು ಅನೇಕರು ಮುಂದೆ ಬಂದಿದ್ದಾರೆ ಎಂದಿದ್ದಾರೆ. ಉಜ್ಜಯಿನಿ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ʼʼಮಗನಿಗೆ ಮರಣ ದಂಡನೆ ವಿಧಿಸಿʼʼ

ಏತನ್ಮಧ್ಯೆ, ಆರೋಪಿಯ ತಂದೆ – ಭರತ್ ಸೋನಿ – ತನ್ನ ಮಗನಿಗೆ ಮರಣದಂಡನೆ ವಿಧಿಸಬೇಕೆಂದು ಕೋರಿದ್ದಾರೆ. “ಇದು ನಾಚಿಕೆಗೇಡಿನ ಕೃತ್ಯ. ನಾನು ನಾನು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ, ಆದ್ದರಿಂದ ಅವನನ್ನು ಗಲ್ಲಿಗೇರಿಸಬೇಕು” ಎಂದು ಅವನ ತಂದೆ ಹೇಳಿದ್ದಾರೆ. ಬಾಲಕಿ ಪತ್ತೆಯಾದ ಮೂರು ದಿನಗಳ ನಂತರ ಸೋನಿಯನ್ನು ಗುರುವಾರ ಬಂಧಿಸಲಾಯಿತು. ತನಿಖೆಗಾಗಿ ಅಪರಾಧ ಸ್ಥಳಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸೋನಿ ಗಾಯಗೊಂಡಿದ್ದಾನೆ.

ಇದನ್ನೂ ಓದಿ: Ujjain Case: ತಪ್ಪಿಸಿಕೊಳ್ಳಲೆತ್ನಿಸಿದ ಬಾಲಕಿ ರೇಪ್ ಪ್ರಕರಣದ ಆರೋಪಿ, ಬೆನ್ನಟ್ಟಿ ಹಿಡಿದ ಪೊಲೀಸ್

Exit mobile version