ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಣ್ಣುಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಮನೆ ಎದುರು ತಿರುಗಾಡುತ್ತಿರುವಾಗ ಚಿನ್ನದ ಸರ ಕಿತ್ತುಕೊಂಡು ಹೋಗುವುದು, ಅವರ ಮೇಲೆ ಹಲ್ಲೆ ನಡೆಸುವುದು, ಮೊಬೈಲ್, ಪರ್ಸ್ ಎಗರಿಸುವುದು ಸೇರಿ ಹಲವು ರೀತಿಯ ಪ್ರಕರಣಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.
ಹೌದು, ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದಾನೆ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್ ಕೊಟ್ಟಿದ್ದಾನೆ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದಾರೆ. ಅವರ ಹಿಂದೆಯೇ ಓಡಿ ಬಂದ ದುರುಳನು, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದಾನೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗೆಯೇ, ನಗರದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಜನ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಸಿಸಿಟಿವಿ ದೃಶ್ಯಾವಳಿ
ಶುಕ್ರವಾರ (ಆಗಸ್ಟ್ 2) ಬೆಳಗಿನ ಜಾವ ಮಹಿಳೆಯು ಮನೆಯ ಬಳಿಯಲ್ಲೇ ವಾಕಿಂಗ್ ಮಾಡುವಾಗ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ವಿಡಿಯೊ ವೈರಲ್ ಆದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಕೂಡ ಭಯಪಡುವಂತಾಗಿದೆ. ಹೆಣ್ಣುಮಕ್ಕಳ ಆಭರಣ, ಮೊಬೈಲ್ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸೇರಿ ಹಲವು ಕೃತ್ಯ ಎಸಗುತ್ತಿರುವ ಇಂತಹ ದುಷ್ಕರ್ಮಿಗಳನ್ನು ಪೊಲೀಸರು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವು ವಾರಗಳಿಂದ ಸಕ್ರಿಯವಾಗಿರುವ ಎಟಿಎಂ ಕಳ್ಳರ ಗ್ಯಾಂಗ್‌ಗಳು ಕೂಡ ಪೊಲೀಸರಿಗೆ ತಲೆನೋವಾಗಿವೆ. ಹರಿಯಾಣ ಮೂಲದ ಎರಡು ಗ್ಯಾಂಗ್‌ಗಳು ಸತತವಾಗಿ ಎಟಿಎಂಗಳಿಂದ ಹಣ ಎತ್ತುತ್ತಿವೆ. ಗುರುತೇ ಸಿಗದಂತೆ ದರೋಡೆ ಮಾಡುತ್ತಿರುವ ಈ ಗ್ಯಾಂಗ್‌ಗಳು ಪೊಲೀಸರಿಗೆ ತಲೆನೋವಾಗಿವೆ.
ಬೆಳ್ಳಂದೂರು ಠಾಣೆ ವ್ಯಾಪ್ತಿಯ ಎಕ್ಸಿಸ್ ಬ್ಯಾಂಕ್ ಎಟಿಎಂನಿಂದ ಕಳ್ಳತನ ಮಾಡಲಾಗಿದೆ. ಇಕೋ ಎರ್ಟಿಗಾ ಕಾರ್‌ನಲ್ಲಿ ಬಂದು ಕಳವು ಮಾಡಲಾಗಿದೆ. ಪರಿಶೀಲಿಸಿದಾಗ ಕಾರು ಕೂಡ ಕಳವು ಮಾಲು ಎಂಬುದು ಗೊತ್ತಾಗಿದೆ. ಆರೋಪಿಗಳು ಮೈಮೇಲೆ ಹೊದಿಕೆ ಹೊದ್ದುಕೊಂಡು ಎಟಿಎಂ ಒಳಗೆ ಹೋಗಿ ಕೃತ್ಯ ನಡೆಸುತ್ತಿದ್ದಾರೆ. ಹೀಗಾಗಿ ಇವರು ಗುರುತು ಕಾಣಿಸದಾಗಿದೆ.
ಇದನ್ನೂ ಓದಿ: Kangana Ranaut: ಮಲಗುವ ಕೋಣೆಗಳಲ್ಲಿ ಲೈಂಗಿಕತೆ ಏಕೆ ಉಳಿಯಬಾರದು?; ಒಲಿಂಪಿಕ್ಸ್ ಆಯೋಜಕರ ವಿರುದ್ಧ ಕಂಗನಾ ಆಕ್ರೋಶ