Site icon Vistara News

Valmiki Corporation Scam: ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತೆ 5 ದಿನ ಇಡಿ ಕಸ್ಟಡಿಗೆ

b nagendra valmiki corporation scam 2

ಬೆಂಗಳೂರು: ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement Directorate) ಬಂಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರಿಗೆ ಮತ್ತೆ 5 ದಿನಗಳ ನ್ಯಾಯಾಂಗ ಬಂಧನ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಇಂದು ನಾಗೇಂದ್ರ ಅವರ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ಮತ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಡಿ ಹಾಜರ್ ಪಡಿಸಿತ್ತು. ತನಿಖೆ ಇನ್ನಷ್ಟು ನಡೆಯಬೇಕಿರುವ ಹಿನ್ನೆಲೆಯಲ್ಲಿ ಮತ್ತೆ ಕಸ್ಟಡಿಗೆ ಕೇಳಿತ್ತು. ಇವತ್ತು ಸೇರಿ ಜುಲೈ 22 ರವರೆಗೂ ಇಡಿ ವಶಕ್ಕೆ ನೀಡಿ 82ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದಾರೆ.

ಮಾಚಿ ಸಚಿವ ನಾಗೇಂದ್ರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು. ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸರ್ಚಿಂಗ್ ಮುಗಿದಿದೆ. ಸೀಜಿಂಗ್ ಕಾರ್ಯ ಮುಗಿದಿದೆ. ಆರೋಪಿಯ ವಿಚಾರಣೆಯೂ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆಯುವ ಅವಶ್ಯಕತೆ ಇಲ್ಲ. ಇಡಿ ಅಧಿಕಾರಿಗಳು ಪೊಲೀಸರಲ್ಲ. ಅವರನ್ನು ಕಸ್ಟಡಿಗೆ ಪಡೆದ ಉದ್ದೇಶ ಮುಗಿದಿದೆ. ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡೋದೇನಿದೆ? ಎಂದು ಪ್ರಶ್ನಿಸಿದ ನಾಗೇಂದ್ರ ಪರ ವಕೀಲ ಶ್ಯಾಮ್ ಸುಂದರ್‌, ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿದರು.

ಇಡಿ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಾದರು. ದಾಳಿ ವೇಳೆ ಸಾಕಷ್ಟು ಮಾಹಿತಿ ಸಂಗ್ರಹಿಸಲಾಗಿದೆ. ಕಂತೆ ಕಂತೆ ಹಣ ಪತ್ತೆಯಾಗಿದೆ. ಆರೋಪಿ ಎಲ್ಲವೂ ಗೊತ್ತಿದ್ದು ಅಪರಾಧ ಕೃತ್ಯ ಎಸಗಿದ್ದಾರೆ. ಆರೋಪಿ ತನ್ನ ಸಹಚರರಿಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆ ಮೇರೆಗೆ ನಿಗಮದಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ. ಈಗಾಗಲೇ ಕೆಲವು ಆರೋಪಿಗಳ‌ ಮೊಬೈಲ್ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿ ನಾಗೇಂದ್ರ ಪತ್ನಿಯನ್ನು ವಿಚಾರಣೆ ನಡೆಸಿ ‌ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇನ್ನಷ್ಟು ಮಾಹಿತಿ ಬೇಕಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಮನವಿ ಮಾಡಿದರು. ಇಲ್ಲಿಯವರೆಗೆ ನಡೆದ ತನಿಖಾ ಮಾಹಿತಿ ದಾಖಲೆಗಳನ್ನೊಳಗೊಂಡ ಕಡತಗಳನ್ನು ಇಡಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಸಿದರು.

ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಹಣದ ಅವ್ಯವಹಾರದಲ್ಲಿ ನಾಗೇಂದ್ರ ಪತ್ನಿಯ ಅಕೌಂಟ್‌ನಲ್ಲಿ ಕೂಡ ಅನಧಿಕೃತ ಹಣ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಲಾಗಿದೆ.

ಕಳೆದೊಂದು ವಾರದಿಂದ ನಾಗೇಂದ್ರ ಇಡಿ ವಶದಲ್ಲಿದ್ದಾರೆ. ಅವರ ಮನೆ ಸೇರಿ 23 ಕಡೆಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ಮಾಡಿತ್ತು. 6 ದಿನಗಳ ಕಾಲದ ಇಡಿ ವಿಚಾರಣೆ ವಿಚಾರಣೆಯಲ್ಲಿ ನಾಗೇಂದ್ರ ಸಮರ್ಪಕವಾಗಿ ಉತ್ತರ ನೀಡಿಲ್ಲ. ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಕೂಡ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿಗೆ ಬೇಕಾಗಿದ್ದಾರೆ. ಈಗಾಗಲೇ ಬಂಧಿತ ಆರೋಪಿಗಳನ್ನು ಪ್ರಶ್ನಿಸಿದಾಗ ದದ್ದಲ್‌ ಪಿಎಯ ಕೈವಾಡ ಕೂಡ ಇದರಲ್ಲಿ ಕಂಡುಬಂದಿದೆ.

ಆದರೆ ಮನೆಗೆ ಇಡಿ ದಾಳಿಯ ಬಳಿಕ ಇಡಿ ಬಂಧನ ತಪ್ಪಿಸಿಕೊಳ್ಳಲು ದದ್ದಲ್‌ ಎಸ್‌ಐಟಿ ಮುಂದೆ ಹಾಜರಾಗಿ ಇಡೀ ದಿನ ಕೂತಿದ್ದರು. ನಂತರ ಅಲ್ಲಿಂದ ಹೊರಬಿದ್ದು ಮೂರು ದಿವಸ ಕಣ್ಮರೆಯಾಗಿದ್ದ ದದ್ದಲ್‌, ನಾಲ್ಕನೇ ದಿವಸ ವಿಧಾನಮಂಡಲ ಅಧಿವೇಶನ ಶುರುವಾದಾಗ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಇಡಿ ನೋಟೀಸ್‌ ನೀಡಿದೆ ಎನ್ನಲಾಗಿದೆ. ಆದರೆ ನನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದಿದ್ದಾರೆ ದದ್ದಲ್.‌ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಸ್ಪೀಕರ್‌ ಅನುಮತಿ ಇಲ್ಲದೆ ಶಾಸಕರನ್ನು ಇಡಿ ಬಂಧಿಸುವಂತಿಲ್ಲ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Exit mobile version