Site icon Vistara News

ಜಮೀನಿನಲ್ಲಿ ಕೆಲಸ ಮಾಡಲು ನಿರಾಕರಿಸಿದ ಮಹಿಳೆಯ ಮೇಲೆ ಹಲ್ಲೆ; ಖಾಸಗಿ ಅಂಗಕ್ಕೆ ಖಾರದ ಪುಡಿ ಎರಚಿ ವಿಕೃತಿ ಮೆರೆದ ಸಂಬಂಧಿಕರು

Viral News

Viral News

ಹೈದರಾಬಾದ್‌: ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 27 ವರ್ಷದ ಚೆಂಚು ಬುಡಕಟ್ಟು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅವರ ಖಾಸಗಿ ಅಂಗಗಳಿಗೆ ಮೆಣಸಿನ ಹುಡಿ ಎರಚಿ ವಿಕೃತಿ ಮೆರೆಯಲಾಗಿದೆ. ಹೈದರಾಬಾದ್‌ನಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ನಾಗರ್‌ಕರ್ನೂಲ್‌ (Nagarkurnool)ನಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಸದ್ಯ ಮಹಿಳೆ ನಿಜಾಮ್‌ನ ಆಸ್ಪತ್ರೆ (NIMS)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕಾ (Mallu Bhatti Vikramarka) ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು (Viral News).

ಜೂನ್‌ 8ರಂದು ನಡೆದಿದ್ದ ಘಟನೆ

ಈ ಅಮಾನುಷ ಘಟನೆ ಜೂನ್ 8ರಂದು ನಡೆದಿದ್ದು, ತಡವಾಗಿ ಅಂದರೆ ಜೂನ್ 19ರಂದು ಪೊಲೀಸರ ಗಮನಕ್ಕೆ ಬಂದಿದೆ. ಜೂನ್ 20ರಂದು ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಿಂಗಸ್ವಾಮಿ, ಲಕ್ಷ್ಮೀ, ಬಂಡಿ ವೆಂಕಟೇಶ್ ಮತ್ತು ಬಂಡಿ ಶಿವಮ್ಮ ಬಂಧಿತರು. ಅಚ್ಚರಿ ಎಂದರೆ ಲಕ್ಷ್ಮೀ ಮತ್ತು ಲಿಂಗಸ್ವಾಮಿ ಸಂತ್ರಸ್ತೆಯ ಸಹೋದರಿ ಮತ್ತು ಬಾವ (ಸಹೋದರಿಯ ಪತಿ). ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಜಾಗದ ಮಾಲೀಕ ಬಂಡಿ ವೆಂಕಟೇಶ್ ಸೂಚನೆ ಮೇರೆಗೆ ಅವರು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನವೀಯತೆ ಮರೆತು ಹಲ್ಲೆ

ಜೂನ್‌ 8ರಂದು ಆರೋಪಿಗಳು ಮಹಿಳೆ ಮೇಲೆ ದಾಳಿ ನಡೆಸಿದರು. ದೊಣ್ಣೆಯಿಂದ ಮನಸೋಇಚ್ಛೆ ಧಳಿಸಿದ ಆರೋಪಿಗಳು ಬಳಿಕ ಮಹಿಳೆ ಕಣ್ಣು, ಮುಖ, ಖಾಸಗಿ ಅಂಗಗಳಿಗೆ ಖಾರದ ಪುಡಿ ಎರಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ ಡೀಸೆಲ್‌ ಎರಚಿ ಅವರ ಮೇಲೆ ಬೆಂಕಿ ಹಚ್ಚಿದ್ದಾರೆ. ಬಳಿಕ ಕೂಡಿಟ್ಟಿದ್ದಾರೆ. ಸುಮಾರು 11 ದಿನ ಮಹಿಳೆ ನರಕಯಾತನೆ ಅನುಭವಿಸಿದ್ದಾರೆ.

ಕೊನೆಗೆ ಜೂನ್‌ 19ರಂದು ಊರವರ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಪೊಲೀಸರು ಕೂಡಲೇ ಮಹಿಳೆಯನನು ಆಸ್ಪತ್ರೆಗೆ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರಣವೇನು?

ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು ದಾಳಿ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಮಹಿಳೆ ಮತ್ತು ಆಕೆಯ ಸಹೋದರಿ ಕುಟುಂಬದ ನಡುವೆ ಹಳೆ ವೈಶಮ್ಯವಿತ್ತು. ಈ ಮಧ್ಯೆ ಮಹಿಳೆ ಸ್ಥಳದ ಮಾಲೀಕ ಬಂಡಿ ವೆಂಕಟೇಶ್‌ ಬಳಿಯಿಂದ ಸಾಲ ಪಡೆದುಕೊಂಡಿದ್ದರು. ಸಾಲ ತೀರಿಸಲು ಆತನ ಜಮೀನಿನಲ್ಲಿ ಕೂಲಿ ಕೆಲಸ ಮಾಡಬೇಕು ಎನ್ನುವ ಒಪ್ಪಂದ ನಡೆದಿತ್ತು. ಆದರೆ ಸಂತ್ರಸ್ತೆ ಸಹೋದರಿಯೊಂದಿಗಿನ ಮನಸ್ತಾಪದಿಂದ ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಒಂಟಿ ಮಹಿಳೆ ಮೇಲೆ ಪುರುಷರ ಗುಂಪಿನಿಂದ ಅಮಾನುಷ ಹಲ್ಲೆ; ಸಹಾಯಕ್ಕೆ ಬದಲು ಮೊಬೈಲ್‌ ಚಿತ್ರೀಕರಣ!

ಸದ್ಯ ಆಸ್ಪತ್ರೆಗೆ ಭೇಟಿ ನೀಡಿದ ಮಲ್ಲು ಭಟ್ಟಿ ವಿಕ್ರಮಾರ್ಕಾ ಅವರು, ಸಂತ್ರಸ್ತೆ ಚೇತರಿಸಿಕೊಳ್ಳುವವರೆಗೆ ಎಲ್ಲ ಚಿಕಿತ್ಸೆಯ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಮಹಿಳೆ ಸ್ವಂತ ಮನೆ ಹೊಂದಿಲ್ಲದಿದ್ದರೆ ಸರ್ಕಾರವು ಇಂದಿರಮ್ಮ ವಸತಿ ಯೋಜನೆಯಡಿ ಮನೆಯನ್ನು ಒದಗಿಸಲಿದೆ ಎಂದು ಹೇಳಿದ್ದಾರೆ. ಜತೆಗೆ ಮಕ್ಕಳಿಗೆ ಸರ್ಕಾರಿ ಸಮಾಜ ಕಲ್ಯಾಣ ಶಾಲೆಯಲ್ಲಿ ಶಿಕ್ಷಣ ಮತ್ತು ಕೃಷಿಗಾಗಿ ಭೂಮಿಯನ್ನು ನೀಡುವುದಾಗಿ ತಿಳಿಸಿದ್ದಾರೆ.

Exit mobile version