Site icon Vistara News

ಈ ʻಪುಷ್ಪʼ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಪಶ್ಚಿಮ ಬಂಗಾಳ ಅರಣ್ಯಾಧಿಕಾರಿ ಟ್ವೀಟ್‌ ವೈರಲ್

pushpa teak

ಕೋಲ್ಕೊತ್ತಾ: ವೋಲ್ವೋ ಸ್ಲೀಪರ್‌ ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ತೇಗದ ಮರವನ್ನು ಪಶ್ಚಿಮ ಬಂಗಾಳದ ಅರಣ್ಯಾಧಿಕಾರಿಗಳು ಸೀಝ್‌ ಮಾಡಿದ್ದಾರೆ. ರಕ್ತಚಂದನ ಮರಗಳ ಕಳವಿನ ಕಥಾವಸ್ತು ಹೊಂದಿರುವ ʼಪುಷ್ಪ: ದಿ ರೈಸ್‌ʼ ಸಿನಿಮಾಗೆ ಹೋಲಿಸಿ ಅರಣ್ಯಾಧಿಕಾರಿ ಈ ಬಗ್ಗೆ ಮಾಡಿರುವ ಟ್ವೀಟ್‌ ಈಗ ವೈರಲ್‌ ಆಗಿದೆ. ‌

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್‌ ಕಸ್ವಾನ್‌ ಎಂಬವರು ಈ ಟ್ವೀಟ್‌ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಹಿಡಿದ ವೋಲ್ವೋ ಸ್ಲೀಪರ್‌ ಬಸ್‌ ಹಾಗೂ ಅದರಲ್ಲಿ ಗುಟ್ಟಾಗಿ ಸಾಗಿಸಲಾಗುತ್ತಿದ್ದ ತೇಗದ ಮರಗಳ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ.

ʻʻಕಳೆದ ರಾತ್ರಿ 3.30 ಗಂಟೆಗೆ ನಮ್ಮ ತಂಡದ ಕಾರ್ಯಾಚರಣೆ ಹಾಗೂ ಉತ್ತಮ ಮಾಹಿತಿಮೂಲದ ನೆರವು. ತೇಗದ ಮರದ ಸ್ಮಗ್ಲಿಂಗ್‌ಗೆ ಸ್ಲೀಪರ್‌ ವೋಲ್ವೋ ಬಸ್‌ ಬಳಸುವುದನ್ನು ಊಹಿಸಿಕೊಳ್ಳಿ. ಈ ಪುಷ್ಪ ನಮ್ಮ ತಂಡವನ್ನು ಅಂಡರ್‌ ಎಸ್ಟಿಮೇಟ್‌ ಮಾಡಿದ್ದ. ಈಗ ನಮ್ಮ ಬಳಿ ಡೀಲಕ್ಸ್‌ ಬಸ್‌ ಇದೆ ಎಂಬುದು ಒಳ್ಳೆಯ ವಿಷಯʼʼ ಎಂದು ಐಎಫ್‌ಎಸ್‌ ಅಧಿಕಾರಿ ಪ್ರವೀಣ್‌ ಕಾಸ್ವಾನ್‌ ಟ್ವೀಟ್‌ ಮಾಡಿದ್ದರು.

ತೆಲುಗಿನಲ್ಲಿ ಅಲ್ಲು ಅರ್ಜುನ್‌ ನಟನೆಯ ʼಪುಷ್ಪ: ದಿ ರೈಸ್‌ʼ ಪ್ಯಾನ್‌ ಇಂಡಿಯಾ ಚಿತ್ರ ಇತ್ತೀಚೆಗೆ ಬ್ಲಾಕ್‌ಬಸ್ಟರ್‌ ಆಗಿತ್ತು. ಇದರಲ್ಲಿನ ನಾಯಕ ಪುಷ್ಪ, ರಕ್ತಚಂದನ ಮರಗಳನ್ನು ನವನವೀನ ವಿಧಾನಗಳ ಮೂಲಕ ಸ್ಮಗ್ಲಿಂಗ್‌ ಮಾಡುತ್ತಿರುತ್ತಾನೆ ಹಾಗೂ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುತ್ತಾನೆ. ಈ ಸಿನಿಮಾದ ಜತೆ ಅಧಿಕಾರಿ ಮಾಡಿರುವ ಈ ಹೋಲಿಕೆ ಈಗ ಟ್ವಿಟರ್‌ನಲ್ಲಿ ನಾನಾ ಬಗೆಯ ಪ್ರತಿಕ್ರಿಯೆ, ವಿನೋದಗಳಿಗೆ ಕಾರಣವಾಗಿದೆ.

ʼʼಪುಷ್ಪನನ್ನು ನೆನಪಿಸಿಕೊಳ್ಳುವುದು ಇಲ್ಲಿ ಸೂಕ್ತವಾಗಿದೆ, ಗ್ರೇಟ ವರ್ಕ್‌ʼʼ ಎಂದು ಒಬ್ಬರು ಹೇಳಿದ್ದರೆ, ʼʼಪುಷ್ಪ ಕೂಡ ತನ್ನ ಕೆರಿಯರ್‌ನ ಆರಂಭದಲ್ಲಿ ಸಿಕ್ಕಿಬಿದ್ದಿದ್ದʼʼ ಎಂದು ಇನ್ನೊಬ್ಬರು ಬರೆದಿದ್ದಾರೆ.

ʻʻಪುಷ್ಪ-2 ಮಾಡಲು ಯೋಜಿಸಿದ್ದಾರೆ. ಅದರ ಬದಲು ಕನ್ನಡದ ಖ್ಯಾತ ಹೀರೋಗಳಾದ ಡಾ.ರಾಜ್‌ಕುಮಾರ್‌ ಮತ್ತು ಶಿವರಾಜ್‌ಕುಮಾರ್‌ ಅವರು ಪ್ರಾಮಾಣಿಕ ಅಧಿಕಾರಿಗಳಾಗಿ ನಟಿಸಿರುವ ʻಗಂಧದ ಗುಡಿ-1ʼ ಹಾಗೂ ʻಗಂಧದ ಗುಡಿ- 2′ ಥರದ ಚಿತ್ರಗಳನ್ನು ಮಾಡಬೇಕಿದೆʼʼ ಎಂದು ಕೂಡ ಕನ್ನಡಿಗರೊಬ್ಬರು ಪ್ರತಿಕ್ರಿಯೆಯಾಗಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Jawan: ಶಾರುಖ್ ಎದುರು ವಿಲನ್ ಆದ ವಿಜಯ್ ಸೇತುಪತಿ, ಅಸಲಿ ಕಹಾನಿ ಇಲ್ಲಿದೆ

Exit mobile version