Site icon Vistara News

ವಿಸ್ತಾರ ಸಂಪಾದಕೀಯ: ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯ ದರಪಟ್ಟಿ; ನಿಯಮ ಜಾರಿ ಬಿಗಿಯಾಗಲಿ

Private Hospitals

Billboards Mandatory In Private Hospitals In Karnataka; Good Decision By Health Department

ಕರ್ನಾಟಕ ಸೇರಿ ದೇಶಾದ್ಯಂತ ಶಿಕ್ಷಣ, ವೈದ್ಯಕೀಯ ಸೌಕರ್ಯಗಳು ಬಡವರಿಗೆ ಆಶಾದಾಯಕವಾಗುವ ಬದಲು ದಂಧೆಯಾಗಿ ಮಾರ್ಪಟ್ಟಿವೆ. ಕರ್ನಾಟಕದಲ್ಲಂತೂ (Karnataka) ಬಡವರು ಗುಣಮಟ್ಟದ ಶಿಕ್ಷಣ, ಅನಾರೋಗ್ಯಕ್ಕೀಡಾದರೆ ಉತ್ತಮ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ, ಖಾಸಗಿ ಆಸ್ಪತ್ರೆಗಳಂತೂ (Private Department) ಹೆಚ್ಚುವರಿಯಾಗಿ ಹಣ ಪೀಕುವ, ಎಗ್ಗಿಲ್ಲದೆ ಬಿಲ್‌ ಮಾಡುವ, ಬಡವರು ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಕೂಡ ಹೆದರುವ, ಲಕ್ಷಾಂತರ ರೂಪಾಯಿ ಕಟ್ಟಿಕೊಂಡೇ ಹೋಗಬೇಕು ಎನ್ನುವ ದುಸ್ಥಿತಿ ಇದೆ. ಆದರೆ, ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂಬುದಾಗಿ ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ಆಸ್ಪತ್ರೆಗಳು ಜನರಿಂದ ಹೆಚ್ಚುವರಿಯಾಗಿ ಹಣ ಪಡೆಯುವ ದಂಧೆ ನಿಲ್ಲಲಿದ್ದು, ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ (ಕೆ.ಪಿ.ಎಂ.ಇ) ಅಡಿಯಲ್ಲಿ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸಬೇಕು ಎಂಬುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ಆದೇಶ ಹೊರಡಿಸಿದ್ದಾರೆ. ಹೊರರೋಗಿಗಳ ವಿಭಾಗದ ಕೌನ್ಸೆಲಿಂಗ್‌ ಫೀ, ಸ್ಕ್ಯಾನಿಂಗ್‌, ಎಕ್ಸ್‌ರೇ, ಸರ್ಜರಿ, ಎಂಆರ್‌ಐ ಸೇರಿ ಹಲವು ವೈದ್ಯಕೀಯ ತಪಾಸಣೆ, ಚಿಕಿತ್ಸೆಗಳ ದರಪಟ್ಟಿಯನ್ನು ಆಸ್ಪತ್ರೆಗಳ ಮುಖ್ಯದ್ವಾರದಲ್ಲಿಯೇ ಪ್ರದರ್ಶಿಸಬೇಕು. ಚಿಕಿತ್ಸಾ ದರಪಟ್ಟಿಯಲ್ಲಿ ನಮೂದಿಸಿದ ಶುಲ್ಕವನ್ನೇ ರೋಗಿಗಳಿಂದ ಪಡೆಯಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಈಗಾಗಲೇ, ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರದರ್ಶಿಸಬೇಕು ಎಂಬ ನಿಯಮ ಇದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಜನರಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಲೇ ಇವೆ. ಈ ಬಾರಿ ಆರೋಗ್ಯ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಆಯಾ ಜಿಲ್ಲೆಗಳ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನದ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ತಪಾಸಣಾ ಅಧಿಕಾರಿಗಳು ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿಗಳ ಪ್ರದರ್ಶನ ಮಾಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ದರಪಟ್ಟಿ ಪ್ರದರ್ಶನ ಹಾಗೂ ನಿಯಮಗಳ ಉಲ್ಲಂಘನೆ ಮಾಡಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಕುರಿತು ಮಾರ್ಚ್‌ 20ರೊಳಗೆ ವರದಿ ಸಲ್ಲಿಸಬೇಕು ಎಂಬುದಾಗಿ ಸೂಚಿಸಿದ್ದಾರೆ. ಇದು ಆಯಾ ಜಿಲ್ಲೆಗಳು ಹಾಗೂ ತಾಲೂಕುಗಳ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಲು, ಕಠಿಣ ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮೊದಲಿನಿಂದಲೂ ದರಪಟ್ಟಿ ಪ್ರದರ್ಶನದ ನಿಯಮವಿದ್ದರೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಈಗ ಕಠಿಣ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನುಮುಂದಾದರೂ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಇನ್ನು, ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ, ಸಮರ್ಪಕ ಚಿಕಿತ್ಸಾ ಸಲಕರಣೆಗಳ ಕೊರತೆ, ಕನಿಷ್ಠ ಔಷಧಿ ತೆಗೆದುಕೊಳ್ಳಬೇಕು ಎಂದರೂ ಖಾಸಗಿ ಮೆಡಿಕಲ್‌ ಶಾಪ್‌ಗಳಿಗೆ ಕಳುಹಿಸುವ ವೈದ್ಯರು, ಗಂಭೀರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಮಾತ್ರ ಜೀವ ಉಳಿಯುತ್ತದೆ ಎಂಬ ದುಸ್ಥಿತಿ ಇದೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅಸಮರ್ಪಕ ನಿರ್ವಹಣೆ, ಬಡವರು ಎಂಬ ಅಸಡ್ಡೆ, ವೈದ್ಯರ ಕೊರತೆ, ಭ್ರಷ್ಟಾಚಾರಗಳೇ ಕಾರಣವಾಗಿವೆ. ಇದೇ ಕಾರಣಕ್ಕಾಗಿ ಬಡವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಸಾಲದ ಸುಳಿಗೆ ಸಿಲುಕುತ್ತಾರೆ. ಹಾಗಾಗಿ, ಆರೋಗ್ಯ ಇಲಾಖೆಯು ಖಾಸಗಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಜತೆಗೆ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯನ್ನೂ ಸುಧಾರಿಸಲಿ. ಬಡವರು ಕೂಡ ಅತಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹೊರಬರುವಂತಹ ದಿನಗಳು ಬರಲಿ. ಆಗ ಮಾತ್ರ, ಸರ್ಕಾರ, ಇಲಾಖೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನ ನಂಬಿಕೆ ಇಡಲು, ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಲಕ್ಷ ಲಕ್ಷ ರೂಪಾಯಿ ಕಳೆದುಕೊಳ್ಳದಿರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌; ಖಾಸಗಿ ಆಸ್ಪತ್ರೆ ಎಡವಟ್ಟಿಗೆ ಕಣ್ಣು‌ ಕಳೆದುಕೊಂಡ ಮಹಿಳೆ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version