Site icon Vistara News

ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಸ್ಫೋಟ, ಬೆಂಗಳೂರಿನ ಸುರಕ್ಷತೆ ಖಾತ್ರಿಪಡಿಸಿ

Blast in Bangalore Rameshwaram Cafe1

Rameshwaram Cafe Blast; Ensure Security In Bengaluru

ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಶುಕ್ರವಾರ ನಡೆದಿದೆ. ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದೆ. 8 ಮಂದಿಗೆ ತೀವ್ರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್‌ ಟೀಂ, ಬಾಂಬ್‌ ಸ್ಕ್ವಾಡ್‌ ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದೆ. ಸಿಸಿಬಿಯವರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಏಳೆಂಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗಿನ ತನಿಖೆಯಿಂದ ಖಚಿತವಾಗಿರುವುದು ಎಂದರೆ, ಇದು ಸಿಲಿಂಡರ್ ಅತವಾ ಇನ್ಯಾವುದೇ ಆಕಸ್ಮಿಕ ಸ್ಫೋಟ ಅಲ್ಲ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಹೇಳಿರುವಂತೆ ಇದು ಕಡಿಮೆ ಇಂಟೆನ್ಸಿಟಿಯ ಬಾಂಬ್.‌ ಆರೋಪಿ ಬಸ್‌ನಿಂದ ಇಳಿದು ಬಂದು ಹೋಟೆಲ್‌ನಲ್ಲಿ ತಿಂಡಿ ತಿಂದು ಬಾಂಬ್‌ ಇಟ್ಟು ಹೋದುದರ ವಿವರಗಳು ಸಿಸಿಟಿವಿಯಲ್ಲಿ ಗೊತ್ತಾಗಿದ್ದು, ಅದನ್ನು ಡಿಕೆಶಿ ತಿಳಿಸಿದ್ದಾರೆ. ʼಬಾಂಬ್‌ ಇಟ್ಟ ವ್ಯಕ್ತಿ ಯಾರು ಎಂಬುದು ಬಹುತೇಕ ಗೊತ್ತಾಗಿದೆ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆʼ ಎಂದೂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಈ ಸ್ಫೋಟಕ್ಕೆ ಯಾವ ಯಾವ ಆಯಾಮಗಳಿವೆಯೋ ಗೊತ್ತಿಲ್ಲ. ಇದೊಂದು ವಿಧ್ವಂಸಕ ಕೃತ್ಯ ಎಂದು ಗೊತ್ತಾದ ಬಳಿಕ ಹಲವು ಆಯಾಮಗಳಲ್ಲಿ ತನಿಖೆ ನಡೆಯಬೇಕಾಗುತ್ತದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಇದು ಜನತೆಯನ್ನು ಭಯ ಬೀಳಿಸುವ ಭಯೋತ್ಪಾದಕ ಕೃತ್ಯ ಇರಬಹುದೇ? ಅಥವಾ ವೈಯಕ್ತಿಕ ದ್ವೇಷ ಇದರ ಹಿಂದಿದೆಯೇ? ಎಂಬ ಪ್ರಶ್ನೆಗಳಿವೆ. ಇತ್ತೀಚೆಗೆ ಹೆಚ್ಚಿನ ಔದ್ಯಮಿಕ ಯಶಸ್ಸು ಗಳಿಸುತ್ತಿರುವ ರಾಮೇಶ್ವರಂ ಕೆಫೆ ಚೈನ್‌ನ ಪ್ರತಿಷ್ಠೆಯನ್ನು ಕುಗ್ಗಿಸುವ ವೃತ್ತಿವೈರವೂ ಇದರ ಹಿಂದೆ ಇರಬಹುದು. ಅನಂತ್‌ ಅಂಬಾನಿ- ರಾಧಿಕಾ ಮರ್ಚೆಂಟ್‌ ಮದುವೆಗೆ ದಕ್ಷಿಣ ಭಾರತೀಯ ತಿನಿಸುಗಳನ್ನು ಒದಗಿಸುವ ವ್ಯವಹಾರವನ್ನು ರಾಮೇಶ್ವರಂ ಕೆಫೆ ಪಡೆದಿದ್ದು, ಇದನ್ನು ಸಹಿಸಲಾಗದ ವೃತ್ತಿವೈರಿಗಳು ಇದನ್ನು ಮಾಡಿರುವ ಸಾಧ್ಯತೆಯೂ ಹೊಳೆದಿದೆ. ಅಥವಾ ಬೇರೆ ಯಾರಿಗೋ ಗುರಿಯಿಟ್ಟು ಇನ್ಯಾರಿಗೋ ಧಕ್ಕೆಯಾದುದೂ ಇರಬಹುದು. ಹೀಗೆ ಪ್ರಕರಣದ ಅನೇಕ ಮುಖಗಳನ್ನು ತರ್ಕಿಸಿ ತನಿಖೆ ನಡೆಸುವುದು ತನಿಖಾ ತಂಡಗಳ ಕೆಲಸವಾಗಿದೆ.

ಆದರೆ ಇಂಥ ಉದ್ದೇಶಿತ ವಿಧ್ವಂಶಕ ಕೃತ್ಯಗಳು ನಡೆದಾಗ ಬೆಂಗಳೂರಿನ ಶ್ರೀಸಾಮಾನ್ಯರು ಈ ಹಿಂದಿನ ಬಾಂಬ್‌ ಸ್ಫೋಟಗಳನ್ನು ನೆನಪಿಸಿಕೊಳ್ಳುತ್ತಾರೆ. 2008ರ ಸರಣಿ ಬಾಂಬ್‌ ಸ್ಫೋಟಗಳು, 2013ರಲ್ಲಿ ಚರ್ಚ್‌ ಸ್ಟ್ರೀಟ್‌ನಲ್ಲಿ ನಡೆದ ಸ್ಫೋಟ, 2014ರಲ್ಲಿ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟಗಳು ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದವು. 2014ರಿಂದ ಈಚೆಗೆ ಬೆಂಗಳೂರಿನಲ್ಲಿ ಭಾರಿ ವಿಧ್ವಂಸಕ ಕೃತ್ಯಗಳು ಯಾವುವೂ ನಡೆದಿಲ್ಲ. ಇದಕ್ಕೆ ನಾವು ಇಲ್ಲಿನ ಪೊಲೀಸರಿಗೆ ಧನ್ಯವಾದ ಹೇಳಬೇಕು. ಸ್ಥಳೀಯ ಪೊಲೀಸರು, ಬೇಹುಗಾರಿಕೆ ಸಂಸ್ಥೆಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಇಲ್ಲಿನ ಜನತೆಯ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ. ಹಾಗೆ ನೋಡಿದರೆ ಬೆಂಗಳೂರು ಶಾಂತಿಯುತವಾದ ಮೆಟ್ರೋ ಪಟ್ಟಣ. ದಿಲ್ಲಿ, ಮುಂಬಯಿ, ಕೋಲ್ಕತ್ತಾಗಳಿಗೆ ಹೋಲಿಸಿದರೆ ಇಲ್ಲಿನ ಅಪರಾಧದ ಪ್ರಮಾಣ ಕಡಿಮೆ. ದಕ್ಷಿಣ ಭಾರತದ ಮಧ್ಯಭಾಗದಲ್ಲಿ ಶಾಂತವಾಗಿ ಮಲಗಿರುವ ಈ ಪಟ್ಟಣ ಅತ್ತ ನಿವೃತ್ತರ ಸ್ವರ್ಗವೂ ಹೌದು; ಇತ್ತ ಭಾರತದಾದ್ಯಂತದಿಂದ ಬರುವ ದುಡಿಯುವ ಪ್ರಾಯದ ಯುವಜನತೆಯ ಸ್ವರ್ಗವೂ ಹೌದು. ಆದರೆ ಈ ಒಂದೇ ಒಂದು ಸ್ಫೋಟ, ಈ ನಂಬಿಕೆಯನ್ನು ನಡುಗಿಸಿದೆ.

ಇದನ್ನೂ ಓದಿ: Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

ಈ ಪ್ರಕರಣವನ್ನು ಆದಷ್ಟು ಶೀಘ್ರ ತನಿಖೆ ಮಾಡಿ, ಅಪರಾಧಿಯನ್ನು ಹಾಗೂ ಈ ಸಂಚಿನ ಹಿಂದಿನ ರೂವಾರಿಗಳನ್ನು ಹೆಡೆಮುರಿ ಕಟ್ಟುವುದು ಪೊಲೀಸರ, ಆಡಳಿತದಲ್ಲಿರುವವರ ಆದ್ಯತೆಯಾಗಬೇಕು. ಬೆಂಗಳೂರಿನಲ್ಲಿ ಉಗ್ರರು ನೆಲೆಯಾಗುತ್ತಿದ್ದಾರೆ ಎನ್ನುವುದಕ್ಕೆ ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಎನ್‌ಐಎ ಸಂಸ್ಥೆಯು ಇಲ್ಲಿ ಅಡಗಿದ್ದ ಹಲವು ಉಗ್ರರನ್ನು ಬಂಧಿಸಿದೆ. ಭಯೋತ್ಪಾದಕ ಕೃತ್ಯ ಇದಲ್ಲ ಎನ್ನಲು ಸಾಕ್ಷ್ಯಾಧಾರಗಳಿಲ್ಲ. ಅಂತಾರಾಷ್ಟ್ರೀಯ ಉಗ್ರರ ಸ್ಲೀಪರ್‌ ಸೆಲ್‌ಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ ಎನ್ನಲು ಅನುಮಾನ ಬೇಕಿಲ್ಲ. ಇವರ ಕೈವಾಡ ತಳ್ಳಿ ಹಾಕಲಾಗುವುದಿಲ್ಲ. ಇದೀಗ ಪೊಲೀಸರು ಬೆಂಗಳೂರಿನ ಜನರ ಸುರಕ್ಷತೆಯನ್ನು ಖಾತ್ರಿಪಡಿಸಬೇಕಿದೆ. ಇಲ್ಲವಾದರೆ, ಭಾರಿ ಅಂತಾರಾಷ್ಟ್ರೀಯ ಹೂಡಿಕೆಗೆ ತೆರೆದುಕೊಂಡಿರುವ ಬೆಂಗಳೂರನ್ನು ಕಾರ್ಪೊರೇಟ್‌ಗಳು ಆತಂಕದಿಂದ ಗಮನಿಸುವಂತಾಗಬಹುದು. ಹಾಗೆಯೇ ಇಲ್ಲಿನ ಜನತೆಯ ಜೀವವೂ ಬಹಳ ಮುಖ್ಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version