ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಸ್ಫೋಟ, ಬೆಂಗಳೂರಿನ ಸುರಕ್ಷತೆ ಖಾತ್ರಿಪಡಿಸಿ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಸ್ಫೋಟ, ಬೆಂಗಳೂರಿನ ಸುರಕ್ಷತೆ ಖಾತ್ರಿಪಡಿಸಿ

ಈ ಪ್ರಕರಣವನ್ನು ಆದಷ್ಟು ಶೀಘ್ರ ತನಿಖೆ ಮಾಡಿ, ಅಪರಾಧಿಯನ್ನು ಹಾಗೂ ಈ ಸಂಚಿನ ಹಿಂದಿನ ರೂವಾರಿಗಳನ್ನು ಹೆಡೆಮುರಿ ಕಟ್ಟುವುದು ಪೊಲೀಸರ, ಆಡಳಿತದಲ್ಲಿರುವವರ ಆದ್ಯತೆಯಾಗಬೇಕು.

VISTARANEWS.COM


on

Blast in Bangalore Rameshwaram Cafe1
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಶುಕ್ರವಾರ ನಡೆದಿದೆ. ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಮಧ್ಯಾಹ್ನ ಭಾರಿ ಸ್ಫೋಟ ಸಂಭವಿಸಿದೆ. 8 ಮಂದಿಗೆ ತೀವ್ರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್‌ ಟೀಂ, ಬಾಂಬ್‌ ಸ್ಕ್ವಾಡ್‌ ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದೆ. ಸಿಸಿಬಿಯವರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಏಳೆಂಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗಿನ ತನಿಖೆಯಿಂದ ಖಚಿತವಾಗಿರುವುದು ಎಂದರೆ, ಇದು ಸಿಲಿಂಡರ್ ಅತವಾ ಇನ್ಯಾವುದೇ ಆಕಸ್ಮಿಕ ಸ್ಫೋಟ ಅಲ್ಲ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಹೇಳಿರುವಂತೆ ಇದು ಕಡಿಮೆ ಇಂಟೆನ್ಸಿಟಿಯ ಬಾಂಬ್.‌ ಆರೋಪಿ ಬಸ್‌ನಿಂದ ಇಳಿದು ಬಂದು ಹೋಟೆಲ್‌ನಲ್ಲಿ ತಿಂಡಿ ತಿಂದು ಬಾಂಬ್‌ ಇಟ್ಟು ಹೋದುದರ ವಿವರಗಳು ಸಿಸಿಟಿವಿಯಲ್ಲಿ ಗೊತ್ತಾಗಿದ್ದು, ಅದನ್ನು ಡಿಕೆಶಿ ತಿಳಿಸಿದ್ದಾರೆ. ʼಬಾಂಬ್‌ ಇಟ್ಟ ವ್ಯಕ್ತಿ ಯಾರು ಎಂಬುದು ಬಹುತೇಕ ಗೊತ್ತಾಗಿದೆ. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆʼ ಎಂದೂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಈ ಸ್ಫೋಟಕ್ಕೆ ಯಾವ ಯಾವ ಆಯಾಮಗಳಿವೆಯೋ ಗೊತ್ತಿಲ್ಲ. ಇದೊಂದು ವಿಧ್ವಂಸಕ ಕೃತ್ಯ ಎಂದು ಗೊತ್ತಾದ ಬಳಿಕ ಹಲವು ಆಯಾಮಗಳಲ್ಲಿ ತನಿಖೆ ನಡೆಯಬೇಕಾಗುತ್ತದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಇದು ಜನತೆಯನ್ನು ಭಯ ಬೀಳಿಸುವ ಭಯೋತ್ಪಾದಕ ಕೃತ್ಯ ಇರಬಹುದೇ? ಅಥವಾ ವೈಯಕ್ತಿಕ ದ್ವೇಷ ಇದರ ಹಿಂದಿದೆಯೇ? ಎಂಬ ಪ್ರಶ್ನೆಗಳಿವೆ. ಇತ್ತೀಚೆಗೆ ಹೆಚ್ಚಿನ ಔದ್ಯಮಿಕ ಯಶಸ್ಸು ಗಳಿಸುತ್ತಿರುವ ರಾಮೇಶ್ವರಂ ಕೆಫೆ ಚೈನ್‌ನ ಪ್ರತಿಷ್ಠೆಯನ್ನು ಕುಗ್ಗಿಸುವ ವೃತ್ತಿವೈರವೂ ಇದರ ಹಿಂದೆ ಇರಬಹುದು. ಅನಂತ್‌ ಅಂಬಾನಿ- ರಾಧಿಕಾ ಮರ್ಚೆಂಟ್‌ ಮದುವೆಗೆ ದಕ್ಷಿಣ ಭಾರತೀಯ ತಿನಿಸುಗಳನ್ನು ಒದಗಿಸುವ ವ್ಯವಹಾರವನ್ನು ರಾಮೇಶ್ವರಂ ಕೆಫೆ ಪಡೆದಿದ್ದು, ಇದನ್ನು ಸಹಿಸಲಾಗದ ವೃತ್ತಿವೈರಿಗಳು ಇದನ್ನು ಮಾಡಿರುವ ಸಾಧ್ಯತೆಯೂ ಹೊಳೆದಿದೆ. ಅಥವಾ ಬೇರೆ ಯಾರಿಗೋ ಗುರಿಯಿಟ್ಟು ಇನ್ಯಾರಿಗೋ ಧಕ್ಕೆಯಾದುದೂ ಇರಬಹುದು. ಹೀಗೆ ಪ್ರಕರಣದ ಅನೇಕ ಮುಖಗಳನ್ನು ತರ್ಕಿಸಿ ತನಿಖೆ ನಡೆಸುವುದು ತನಿಖಾ ತಂಡಗಳ ಕೆಲಸವಾಗಿದೆ.

ಆದರೆ ಇಂಥ ಉದ್ದೇಶಿತ ವಿಧ್ವಂಶಕ ಕೃತ್ಯಗಳು ನಡೆದಾಗ ಬೆಂಗಳೂರಿನ ಶ್ರೀಸಾಮಾನ್ಯರು ಈ ಹಿಂದಿನ ಬಾಂಬ್‌ ಸ್ಫೋಟಗಳನ್ನು ನೆನಪಿಸಿಕೊಳ್ಳುತ್ತಾರೆ. 2008ರ ಸರಣಿ ಬಾಂಬ್‌ ಸ್ಫೋಟಗಳು, 2013ರಲ್ಲಿ ಚರ್ಚ್‌ ಸ್ಟ್ರೀಟ್‌ನಲ್ಲಿ ನಡೆದ ಸ್ಫೋಟ, 2014ರಲ್ಲಿ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟಗಳು ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದವು. 2014ರಿಂದ ಈಚೆಗೆ ಬೆಂಗಳೂರಿನಲ್ಲಿ ಭಾರಿ ವಿಧ್ವಂಸಕ ಕೃತ್ಯಗಳು ಯಾವುವೂ ನಡೆದಿಲ್ಲ. ಇದಕ್ಕೆ ನಾವು ಇಲ್ಲಿನ ಪೊಲೀಸರಿಗೆ ಧನ್ಯವಾದ ಹೇಳಬೇಕು. ಸ್ಥಳೀಯ ಪೊಲೀಸರು, ಬೇಹುಗಾರಿಕೆ ಸಂಸ್ಥೆಗಳು, ಕೇಂದ್ರೀಯ ತನಿಖಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿ ಇಲ್ಲಿನ ಜನತೆಯ ಸುರಕ್ಷತೆಯನ್ನು ಖಾತ್ರಿಪಡಿಸಿದ್ದಾರೆ. ಹಾಗೆ ನೋಡಿದರೆ ಬೆಂಗಳೂರು ಶಾಂತಿಯುತವಾದ ಮೆಟ್ರೋ ಪಟ್ಟಣ. ದಿಲ್ಲಿ, ಮುಂಬಯಿ, ಕೋಲ್ಕತ್ತಾಗಳಿಗೆ ಹೋಲಿಸಿದರೆ ಇಲ್ಲಿನ ಅಪರಾಧದ ಪ್ರಮಾಣ ಕಡಿಮೆ. ದಕ್ಷಿಣ ಭಾರತದ ಮಧ್ಯಭಾಗದಲ್ಲಿ ಶಾಂತವಾಗಿ ಮಲಗಿರುವ ಈ ಪಟ್ಟಣ ಅತ್ತ ನಿವೃತ್ತರ ಸ್ವರ್ಗವೂ ಹೌದು; ಇತ್ತ ಭಾರತದಾದ್ಯಂತದಿಂದ ಬರುವ ದುಡಿಯುವ ಪ್ರಾಯದ ಯುವಜನತೆಯ ಸ್ವರ್ಗವೂ ಹೌದು. ಆದರೆ ಈ ಒಂದೇ ಒಂದು ಸ್ಫೋಟ, ಈ ನಂಬಿಕೆಯನ್ನು ನಡುಗಿಸಿದೆ.

ಇದನ್ನೂ ಓದಿ: Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

ಈ ಪ್ರಕರಣವನ್ನು ಆದಷ್ಟು ಶೀಘ್ರ ತನಿಖೆ ಮಾಡಿ, ಅಪರಾಧಿಯನ್ನು ಹಾಗೂ ಈ ಸಂಚಿನ ಹಿಂದಿನ ರೂವಾರಿಗಳನ್ನು ಹೆಡೆಮುರಿ ಕಟ್ಟುವುದು ಪೊಲೀಸರ, ಆಡಳಿತದಲ್ಲಿರುವವರ ಆದ್ಯತೆಯಾಗಬೇಕು. ಬೆಂಗಳೂರಿನಲ್ಲಿ ಉಗ್ರರು ನೆಲೆಯಾಗುತ್ತಿದ್ದಾರೆ ಎನ್ನುವುದಕ್ಕೆ ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಎನ್‌ಐಎ ಸಂಸ್ಥೆಯು ಇಲ್ಲಿ ಅಡಗಿದ್ದ ಹಲವು ಉಗ್ರರನ್ನು ಬಂಧಿಸಿದೆ. ಭಯೋತ್ಪಾದಕ ಕೃತ್ಯ ಇದಲ್ಲ ಎನ್ನಲು ಸಾಕ್ಷ್ಯಾಧಾರಗಳಿಲ್ಲ. ಅಂತಾರಾಷ್ಟ್ರೀಯ ಉಗ್ರರ ಸ್ಲೀಪರ್‌ ಸೆಲ್‌ಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ ಎನ್ನಲು ಅನುಮಾನ ಬೇಕಿಲ್ಲ. ಇವರ ಕೈವಾಡ ತಳ್ಳಿ ಹಾಕಲಾಗುವುದಿಲ್ಲ. ಇದೀಗ ಪೊಲೀಸರು ಬೆಂಗಳೂರಿನ ಜನರ ಸುರಕ್ಷತೆಯನ್ನು ಖಾತ್ರಿಪಡಿಸಬೇಕಿದೆ. ಇಲ್ಲವಾದರೆ, ಭಾರಿ ಅಂತಾರಾಷ್ಟ್ರೀಯ ಹೂಡಿಕೆಗೆ ತೆರೆದುಕೊಂಡಿರುವ ಬೆಂಗಳೂರನ್ನು ಕಾರ್ಪೊರೇಟ್‌ಗಳು ಆತಂಕದಿಂದ ಗಮನಿಸುವಂತಾಗಬಹುದು. ಹಾಗೆಯೇ ಇಲ್ಲಿನ ಜನತೆಯ ಜೀವವೂ ಬಹಳ ಮುಖ್ಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ.

VISTARANEWS.COM


on

Siddaramaiah
Koo

ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್‌ ಮಾರ್ಕ್ಸ್‌ (SSLC Grace Marks) ಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವರು ಹೇಳುವ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಹಿಂದೆಯೂ ಶೇಕಡಾ 5ರಷ್ಟು ಕೃಪಾಂಕಗಳು ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್‌ ಕೊಡಲಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕೃಪಾಂಕಗಳನ್ನು ಯಾಕೆ ಕೊಡಬೇಕಾಯಿತು ಎಂದು ನೋಡೋಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇತ್ತು. ಈ ಬಾರಿ ಗಾಬರಿಗೊಳಿಸುವ ಪ್ರಮಾಣದಲ್ಲಿ, ಅಂದರೆ ಶೇ.30ರಷ್ಟು ಫಲಿತಾಂಶ ಕುಸಿದಿದೆ. ಅಂದರೆ ನಿಜವಾಗಿ ಬಂದಿರುವುದು ಶೇ. 53 ಫಲಿತಾಂಶ ಮಾತ್ರ. ಇದರಿಂದ ಗಾಬರಿಯಾದ ಶಿಕ್ಷಣ ಇಲಾಖೆ, ಮುಖಂಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಈ ವರೆಗೆ ಇದ್ದ ಪಾಸಿಂಗ್‌ ಮಾರ್ಕ್ಸ್‌ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್‌ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಇಲ್ಲವಾದರೆ ಇಷ್ಟು ಮಕ್ಕಳು ನಪಾಸಾಗುತ್ತಿದ್ದರು. ಇಷ್ಟು ಕೃಪಾಂಕ ನೀಡಿದರೂ ದೊರೆತ ಫಲಿತಾಂಶ ಮಾತ್ರ 73.40% ಅಷ್ಟೇ. ಅಂದರೆ ಕಳೆದ ಸಲಕ್ಕಿಂತ ಶೇಕಡಾ 10.49ರಷ್ಟು ಕಡಿಮೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದರೂ ಕಡಿಮೆ ಫಲಿತಾಂಶ ದಾಖಲಾಗಿದೆ.

ಇದೇಕೆ ಹೀಗಾಯಿತು? ಇದು ವೆಬ್‌ ಕಾಸ್ಟಿಂಗ್‌ನಿಂದ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಮೇಲ್ವಿಚಾರಣೆ ಬಿಗಿಯಾಗಿದೆ. ಅಂದರೆ ನಕಲು ಮಾಡಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಹೇಳಬಹುದು. ಅಂದರೆ ಪರೋಕ್ಷವಾಗಿ, ನಕಲು ಮಾಡುವುದಕ್ಕೆ ಅವಕಾಶ ಇದ್ದುದರಿಂದಲೇ ಮೊದಲು ಇಷ್ಟೊಂದು ಫಲಿತಾಂಶ ಬರುತ್ತಿತ್ತು ಎಂದು ಒಪ್ಪಿಕೊಂಡಂತಾಯಿತಲ್ಲವೆ? ಈ ಸಲದ ಫಲಿತಾಂಶ ಕಡಿಮೆ ಎನ್ನುವುದಕ್ಕಿಂತಲೂ, ನಕಲು ಮಾಡಿಯೇ ನಾವು ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೆವು ಎನ್ನುವ ಕಟುವಾಸ್ತವ ನಮ್ಮನ್ನು ಹೆಚ್ಚು ಕುಟುಕಬೇಕು.

ಸರಿ, ಈಗ ಪರೀಕ್ಷಾ ಪದ್ಧತಿ ಬಿಗಿಯಾದಂತಾಯಿತು. ಆದರೆ ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್‌ ಮಾರ್ಕ್ಸ್‌ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ. ಕೃಪಾಂಕಗಳ ಬದಲು ಸರ್ಕಾರ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಕಲಿಕೆ, ಸ್ಪರ್ಧಾತ್ಮಕ ಶಿಕ್ಷಣದ ಪರಿಚಯ, ಗಟ್ಟಿಮುಟ್ಟಾದ ಶಾಲೆ ಕಟ್ಟಡ ತರಗತಿಗಳು, ಪ್ರಯೋಗಾಲಯ ಹಾಗೂ ಲ್ಯಾಬ್‌ಗಳು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ- ಇವುಗಳನ್ನೆಲ್ಲ ಕಲ್ಪಿಸಬೇಕು. ಆಗ ಉತ್ತಮ ಫಲಿತಾಂಶ ಕೊಡಿ ಎಂದು ಕಟ್ಟುನಿಟ್ಟು ಮಾಡುವುದರಲ್ಲಿ ಅರ್ಥವಿದೆ. ಶಿಕ್ಷಕರಿಂದ ಎಲ್ಲ ಸಾಧ್ಯತೆಗಳನ್ನೂ ಕಿತ್ತುಕೊಂಡು ಒಳ್ಳೆಯ ಫಲಿತಾಂಶ ನೀಡಿ ಎಂದರೆ ಹೇಗೆ ಸಾಧ್ಯ?

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ.

VISTARANEWS.COM


on

Pakistan
Koo

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಗೃಹ ಸಚಿವರು ಆಗಾಗ ಹೇಳಿಕೆಗಳ ಮೂಲಕ ನಿವಾರಿಸುತ್ತ ಬಂದಿದ್ದಾರೆ. ಸಿಎಎ ಬಗ್ಗೆ ಅಪಪ್ರಚಾರಗಳ ಮೂಲಕ ಈಗಲೂ ಮುಸ್ಲಿಮರನ್ನು ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಇರುವುದಲ್ಲ.

VISTARANEWS.COM


on

CAA
Koo

ಭಾರಿ ಆಕ್ಷೇಪದ ಮಧ್ಯೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಮೊದಲ ಕಂತಿನಲ್ಲಿ 14 ಜನರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ. ಎಲ್ಲರಿಗೂ ಪೌರತ್ವ ಪ್ರಮಾಣಪತ್ರವನ್ನು ಬುಧವಾರ ವಿತರಿಸಲಾಯಿತು. ಈ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು, 14 ಜನರು ಆನ್​ಲೈನ್​ ಮೂಲಕ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಭಾರತೀಯ ಪೌರತ್ವ ನೀಡಿದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಮಟ್ಟದ ಸಮಿತಿಗಳು ಗೊತ್ತುಪಡಿಸಿದ ಅಧಿಕಾರಿಗಳ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿಗಳನ್ನು ಅಖೈರು ಮಾಡಲಾಗಿದೆ.

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯಿದೆಯನ್ನು ಈ ವರ್ಷ ಜಾರಿ ಮಾಡಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತಕ್ಕೆ ಬಂದಿದ್ದಲ್ಲಿ ಅವರಿಗೆ ಭಾರತದ ನಾಗರಿಕತ್ವ ನೀಡಲು ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿಗೆ ತಂದಿದೆ. 2019ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಕಾಯ್ದೆಯಡಿ ಬರುತ್ತಾರೆ. 2019ರಲ್ಲಿ ಜಾರಿಯಾದರೂ ಇದರ ನಿಯಮಗಳನ್ನು ರೂಪಿಸಲು ಸರ್ಕಾರ 4 ವರ್ಷ ಸಮಯಾವಕಾಶ ತೆಗೆದುಕೊಂಡಿತು. 2024ರ ಮಾರ್ಚ್ 11ರಂದು ಅಧಿಕೃತ ನಿಯಮಾವಳಿಗಳನ್ನು ರೂಪಿಸಿ ಆದೇಶ ಹೊರಡಿಸಿತು. ನಿಗದಿಪಡಿಸಿದ ಪೋರ್ಟಲ್​ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು. ಇವುಗಳನ್ನು ಜಿಲ್ಲಾ ಮಟ್ಟದ ಸಮಿತಿ (ಡಿಎಲ್​ಸಿ), ರಾಜ್ಯ ಮಟ್ಟದ ಸಶಕ್ತ ಸಮಿತಿಯಿಂದ (ಇಸಿ) ಪರಿಶೀಲನೆ ಮಾಡಿದ ಬಳಿಕ ಪೌರತ್ವ ನೀಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಇದೊಂದು ಐತಿಹಾಸಿಕ ಘಟ್ಟ. ಇತಿಹಾಸದ ಸಂಕಷ್ಟಗಳಲ್ಲಿ ನೊಂದವರು ಒಂದು ನೆಲೆಯನ್ನು ಪಡೆಯಲು ಇಂದು ಸಾಧ್ಯವಾಗಿದೆ. ಯಥಾಪ್ರಕಾರ, ಕೇಂದ್ರ ಸರ್ಕಾರದ ಎದುರಾಳಿಗಳು ಈ ಕ್ರಮವನ್ನು ಹಳಿಯುತ್ತಿದ್ದಾರೆ. ಇದು ಸಂಸತ್​ನಲ್ಲಿ ಅಂಗೀಕಾರಗೊಂಡಾಗ ದೆಹಲಿಯಯಲ್ಲಿ ಮತ್ತು ಅಸ್ಸಾಂನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳ ಬಳಿಕ ಜಾರಿಗೆ ತಂದಿದೆ. ಪಶ್ಚಿಮ ಬಂಗಾಳ, ಕೇರಳದಂಥ ಕೆಲವು ರಾಜ್ಯಗಳು ಇದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದೂ ಉಂಟು. ಆದರೆ ಕಾಲಕ್ರಮೇಣ ಇದರ ಕುರಿತು ಇದ್ದ ಪ್ರತಿಭಟನೆಯ ಅಂಶ ಕಡಿಮೆಯಾಗಿದೆ. ಆದರೆ ಇದರ ಬಗೆಗೆ ಕೆಲವು ವಲಯದಲ್ಲಿ ಇನ್ನೂ ತಪ್ಪು ಕಲ್ಪನೆ ಉಳಿದಂತಿದೆ. ಇದು ನಿವಾರಣೆ ಆಗುವುದು ಮತ್ತು ಎಲ್ಲರೂ ಇದರ ಜಾರಿಗೆ ಸಹಕರಿಸುವುದು ಮುಖ್ಯ.

ಅಲ್ಪಸಂಖ್ಯಾತರನ್ನು ಗುರಿಯಾಗಿಸಲು ಸಿಎಎ ಮತ್ತು ಅಷ್ಟೇ ವಿವಾದಾತ್ಮಕ ಎನ್ಆರ್​​ಸಿ ಅಥವಾ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ತರಲಾಗಿದೆ ಎಂಬ ಭಯವನ್ನು ಗೃಹ ಸಚಿವರು ಆಗಾಗ ಹೇಳಿಕೆಗಳ ಮೂಲಕ ನಿವಾರಿಸುತ್ತ ಬಂದಿದ್ದಾರೆ. ಸಿಎಎ ಬಗ್ಗೆ ಅಪಪ್ರಚಾರಗಳ ಮೂಲಕ ಈಗಲೂ ಮುಸ್ಲಿಮರನ್ನು ದಾರಿ ತಪ್ಪಿಸಲು ಯತ್ನಿಸಲಾಗುತ್ತಿದೆ. ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಮಾತ್ರ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಇದು ಯಾರ ಪೌರತ್ವವನ್ನೂ ಕಸಿದುಕೊಳ್ಳಲು ಇರುವುದಲ್ಲ. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಕೈಬಿಟ್ಟ ಕಾರಣ ವಿರೋಧ ಪಕ್ಷಗಳಿಂದ ಮತ್ತು ಮುಸ್ಲಿಂ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಇದರಲ್ಲಿ ಹುರುಳಿಲ್ಲ. ಮುಸ್ಲಿಮರಿಗೂ ಈ ಕಾಯಿದೆಗೂ ಯಾವುದೇ ಸಂಬಂಧವಿಲ್ಲ.

ಹಿಂದೂ, ಸಿಖ್, ಬೌದ್ಧರಿಗೆ ಭಾರತ ಹೊರತುಪಡಿಸಿ ಪೌರತ್ವ ಪಡೆಯಲು ಬೇರೆ ದೇಶಗಳೇ ಇಲ್ಲ. ಇತಿಹಾಸವನ್ನು ನೋಡಿದರೆ, ಭಾರತ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆ ನಡೆದಿರುವುದು ತಿಳಿಯುತ್ತದೆ. ಧರ್ಮದ ಕಾರಣಕ್ಕಾಗಿ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿರುವ ಸಮುದಾಯಗಳಲ್ಲಿ ಅನೇಕರ ಟ್ರಾವೆಲ್‌ ಡಾಕ್ಯುಮೆಂಟ್‌ಗಳ ಅವಧಿ ಮುಗಿದಿದೆ ಅಥವಾ ಅಪೂರ್ಣ ದಾಖಲೆಗಳಿವೆ ಅಥವಾ ಅವರ ಬಳಿ ದಾಖಲೆಗಳೇ ಇಲ್ಲ. ಮೋದಿ ಸರ್ಕಾರವು ತನ್ನ ಮೊದಲನೇ ಅವಧಿಯಲ್ಲಿ ಈ ರೀತಿಯ ವಲಸಿಗರಿಗೆ ಪಾಸ್‌ಪೋರ್ಟ್‌ ಅಧಿನಿಯಮ (ಭಾರತ ಪ್ರವೇಶಕ್ಕೆ) 1920ರ ಹಾಗೂ ವಿದೇಶಿ ಅಧಿನಿಯಮ 1946ರ ಪ್ರತಿಕೂಲ ದಂಡನಾರ್ಹ ಅಂಶಗಳಿಂದಲೂ ವಿನಾಯಿತಿ ನೀಡಿದೆ. ಇದಷ್ಟೇ ಅಲ್ಲದೇ 2016ರಲ್ಲಿ ಮೋದಿ ಸರ್ಕಾರ ಈ ನಿರಾಶ್ರಿತರಿಗೆ ದೀರ್ಘ‌ಕಾಲಿಕ ವೀಸಾ ಪಡೆಯಲೂ ಅರ್ಹರನ್ನಾಗಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಒಟ್ಟಲ್ಲಿ, ಧಾರ್ಮಿಕ ಹಿಂಸೆಗೆ ತುತ್ತಾಗಿರುವವರಿಗೆ ನಾಗರಿಕತೆ ದೊರಕುವಂತೆ ಮಾಡಲು ಸಶಕ್ತಗೊಳಿಸುತ್ತದೆ.

ಸಂವಿಧಾನದ ಅನುಚ್ಛೇದ 25, ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಇಷ್ಟವಾದ ಧರ್ಮವನ್ನು ಮುಕ್ತವಾಗಿ ಅನುಸರಿಸಲು, ಆಚರಿಸಲು ಸಮಾನ ಹಕ್ಕನ್ನು ನೀಡುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ರೀತಿಯಲ್ಲೂ ಈ ಅಂಶಗಳನ್ನು ಉಲ್ಲಂಘಿಸಿಲ್ಲ. ಸಿಎಎಯಿಂದಾಗಿ ಭಾರತೀಯ ಅಲ್ಪಸಂಖ್ಯಾತರ ಹಕ್ಕುಗಳ, ಭಾರತೀಯ ಜಾತ್ಯತೀತ ಮೌಲ್ಯಗಳ ಮತ್ತು ಸಂಪ್ರದಾಯಗಳ ಹನನವಾಗುವುದಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಸಿಎಎ ಎನ್ನುವುದು ಅನ್ಯಾಯವನ್ನು ಎದುರಿಸುತ್ತಿರುವ ಸಾವಿರಾರು ನಿರ್ವಸಿತ ಕುಟುಂಬಗಳನ್ನು ಸಬಲೀಕರಣಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಇದು ಸಮರ್ಪಕವಾಗಿ ಅನುಷ್ಠಾನಕ್ಕೂ ಬರುತ್ತಿದೆ ಎಂದು ಸಂತೋಷಪಡೋಣ.

ಇದನ್ನೂ ಓದಿ: CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

SSLC Result: ಶಾಲೆಗಳನ್ನು ಪ್ರಯೋಗಶಾಲೆಗಳಂತೆ ನೋಡುವ ಮನಸ್ಥಿತಿ ಪ್ರತಿಯೊಂದು ಸರಕಾರದ್ದಾಗಿದೆ. ಇದಕ್ಕೆ ಇತ್ತೀಚೆಗೆ ಪದವಿ ಶಿಕ್ಷಣದಲ್ಲಿ ಮಾಡುತ್ತಿರುವ ಬದಲಾವಣೆಯೇ ದೃಷ್ಟಾಂತ. ನಾಲ್ಕು ವರ್ಷಗಳ ಪದವಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿರುವ ಈ ಕ್ರಮದಿಂದಾಗಿ, ರಾಜ್ಯ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪ್ರತ್ಯೇಕತೆ ಕಾಪಾಡಿಕೊಂಡು, ಎನ್‌ಇಪಿಯಿಂದ ದೊರೆಯಬಹುದಾದ ಲಾಭಗಳಿಂದ ವಂಚಿತವಾಗಲಿದೆ.

VISTARANEWS.COM


on

SSLC Result
Koo

ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ, ಊಹಿಸಿದಂತೆಯೇ ಆಗಿದೆ. ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ ಎದ್ದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕಲಿಕೆಯ ಗುಣಮಟ್ಟ ಕುಸಿದಿದೆ (SSLC Result) ಎಂದು ಖಾಸಗಿ ಶಾಲಾ ಒಕ್ಕೂಟ (ಕ್ಯಾಮ್ಸ್) ಅಸಮಾಧಾನ ಹೊರಹಾಕಿದೆ. ಸರ್ಕಾರಿ ಶಾಲಾ ಶಿಕ್ಷಣದ ಬಗ್ಗೆ ಹೆತ್ತವರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಸಂಕಲಿಸಿದರೆ ದಾರುಣ ಚಿತ್ರ ಸಿಗಬಹುದು; ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಹೆತ್ತವರು ಕೆಳಮಧ್ಯಮ ವರ್ಗದ, ಕೆಳವರ್ಗದವರಾದುದರಿಂದ ಅವರಿಗೆ ಬೇರೆ ದಾರಿಯಿಲ್ಲ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿರುವವರು, ಅಲ್ಲಿಗೆ ಕಳಿಸುತ್ತಿರುವುದೇಕೆ ಎಂದು ಕೇಳಿದರೆ ಸರ್ಕಾರಿ ಶಿಕ್ಷಣದ ಕಳಪೆ ಗುಣಮಟ್ಟದತ್ತ ಬೆಟ್ಟು ಮಾಡುತ್ತಾರೆ. ಆದರೆ ಇದೂ ಪೂರ್ತಿ ಸತ್ಯವಲ್ಲ. ಯಾಕೆಂದರೆ ಹಲವಾರು ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇದು ಒಟ್ಟಾರೆಯಾಗಿ ರಾಜ್ಯ ಶೈಕ್ಷಣಿಕ ಪಠ್ಯದ ಸಮಸ್ಯೆಗಳತ್ತ ಬೆಟ್ಟು ಮಾಡುತ್ತದೆ. ಒಟ್ಟಾರೆಯಾಗಿ ಪಠ್ಯದ ಸಮಸ್ಯೆ ಹಾಗೂ ಕಲಿಕೆಯ ಸಮಸ್ಯೆಗಳು ಒಗ್ಗೂಡಿ ಇಂದಿನ ಈ ಸ್ಥಿತಿಗೆ ತಂದಿವೆ.

ಸರ್ಕಾರ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸರ್ಕಾರ ಯಾವುದೇ ಪರಿಣಾಮಕಾರಿ ರೂಪುರೇಷೆಗಳನ್ನು ರೂಪಿಸುತ್ತಿಲ್ಲ. ಬದಲಿಗೆ ಶಿಕ್ಷಣ ಇಲಾಖೆ ದಿನಕ್ಕೊಂದು ನಿಯಮಗಳನ್ನು ಮಾಡುತ್ತಿದೆ. ಆದರೆ ತಾವೇ ನಡೆಸುವ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡದೇ, ಕೇವಲ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನಿಯಮ ಎಂಬಂತೆ ವರ್ತಿಸುತ್ತಿದೆ ಎಂದು ಶಾಲಾ ಒಕ್ಕೂಟ ಆಕ್ರೋಶ ಹೊರಹಾಕಿದೆ. ಇದೂ ನಿಜ. ಶಾಲೆಗಳನ್ನು ಪ್ರಯೋಗಶಾಲೆಗಳಂತೆ ನೋಡುವ ಮನಸ್ಥಿತಿ ಪ್ರತಿಯೊಂದು ಸರಕಾರದ್ದಾಗಿದೆ. ಇದಕ್ಕೆ ಇತ್ತೀಚೆಗೆ ಪದವಿ ಶಿಕ್ಷಣದಲ್ಲಿ ಮಾಡುತ್ತಿರುವ ಬದಲಾವಣೆಯೇ ದೃಷ್ಟಾಂತ. ನಾಲ್ಕು ವರ್ಷಗಳ ಪದವಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿರುವ ಈ ಕ್ರಮದಿಂದಾಗಿ, ರಾಜ್ಯ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪ್ರತ್ಯೇಕತೆ ಕಾಪಾಡಿಕೊಂಡು, ಎನ್‌ಇಪಿಯಿಂದ ದೊರೆಯಬಹುದಾದ ಲಾಭಗಳಿಂದ ವಂಚಿತವಾಗಲಿದೆ.

ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲೆ ಶಿಕ್ಷಣದ ಗುಣಮಟ್ಟ ಕಾಪಾಡದೇ ಇರುವುದರಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕುಸಿತ ಉಂಟಾಗಿದೆ. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರಾಶದಾಯವಾಗಿದೆ. ಸಿಸಿಟಿವಿ ಹಾಕಿದ್ದಕ್ಕೆ ಫಲಿತಾಂಶ ಕಡಿಮೆ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಅಧಿಕಾರಿಗಳ ಬಳಿ ಚರ್ಚೆ ಮಾಡಿದಾಗ, ಮಕ್ಕಳು ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರನ್ನು ಪಾಸ್ ಮಾಡಬೇಕು ಎನ್ನುತ್ತಾರೆ. ಹೀಗಾಗಿ ಗ್ರೇಸ್‌ ಅಂಕ ಕೊಡಲಾಗಿದೆ. ಹತ್ತು ವರ್ಷಗಳಿಂದ ಶಾಲೆಯಲ್ಲಿ ಕಲಿತರೂ 10ನೇ ತರಗತಿಗೆ ಬಂದಾಗ ಕನಿಷ್ಠ 25 ಅಂಕ ಗಳಿಸಲೂ ಆಗದ ಮಕ್ಕಳ ಸಂಖ್ಯೆ ಹೆಚ್ಚು ಇದೆ ಎಂದರೆ ಏನರ್ಥ? ಇದು ಶಿಕ್ಷಣವೇ? ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್‌ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಸರಿಯಲ್ಲ. ಇದು ಕ್ರಿಕೆಟ್‌ನಲ್ಲಿ ಬೌಂಡರಿಗೆ ಬಾಲ್‌ ಹೋಗುತ್ತಿಲ್ಲ ಎಂದು ಬೌಂಡರಿ ವ್ಯಾಪ್ತಿಯನ್ನೇ ಕುಗ್ಗಿಸಿದಂತೆ! ಇದರಿಂದ ಆಟಗಾರರ ಪ್ರತಿಭೆಯೇನೂ ಹೆಚ್ಚುವುದಿಲ್ಲ!

ಇದನ್ನೂ ಓದಿ:ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

ಪ್ರತಿ ಸಲ ಸರ್ಕಾರ ಬಂದಾಗಲೂ ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಆಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಶಿಕ್ಷಣ ಇಲಾಖೆಯಿಂದ ಗುಣಮಟ್ಟದ ಪಠ್ಯ ಪುಸ್ತಕ ರಚನೆ ಆಗದೇ ಇದ್ದಲ್ಲಿ ಇದರ ಅಡ್ಡಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಮಕ್ಕಳಿಗೆ ಬೇಕಾದಂತಹ ಸಂಯೋಜಿತ ಪಠ್ಯ ರಚನೆಯಾಗದೆ ಇದ್ದರೆ, ಪೋಷಕರು ಅನಿವಾರ್ಯವಾಗಿ CBSE-ICSE ಕಡೆ ಹೋಗಬೇಕಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳು ನೆರೆಹೊರೆ ರಾಜ್ಯಗಳ ಪಠ್ಯಕ್ಕೆ ಹಾಗೂ ರಾಷ್ಟ್ರಮಟ್ಟದ ಶಿಕ್ಷಣಕ್ಕೆ ಸ್ಪರ್ಧಾತ್ಮಕವಾಗಿ ಸಿದ್ಧ ಮಾಡುವುದು ಸರ್ಕಾರದ ಆದ್ಯ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಸದಾ ರಾಜಕೀಯ. ವಿದ್ಯಾರ್ಥಿಗಳ ಹಿತದೃಷ್ಟಿಗಿಂತ ತಮ್ಮ ಸಿದ್ಧಾಂತಗಳನ್ನು ಹೇರುವುದೇ ಪಕ್ಷಗಳ ಆದ್ಯತೆಯಾಗಿದೆ. ಶಿಕ್ಷಣ ತಜ್ಞರನ್ನು ಮುಂದಿಟ್ಟುಕೊಂಡು ಪಠ್ಯಕ್ರಮ ರಚಿಸುವುದಕ್ಕಿಂತಲೂ ರಾಜಕೀಯ ಚಿಂತನೆಯ ತಜ್ಞರನ್ನು ಸಮಿತಿಯಲ್ಲಿ ನೇಮಿಸಿಕೊಂಡು ಪಠ್ಯ ರಚಿಸಲಾಗುತ್ತಿದೆ. ಇದು ಮಕ್ಕಳ ಬಾಳಿನಲ್ಲಿ ಆಡುವ ಚೆಲ್ಲಾಟ. ಇದು ನಿಲ್ಲಬೇಕು. ಇಲ್ಲವಾದರೆ ಈ ಫಲಿತಾಂಶ ಕುಸಿತ ಹಾಗೂ ಅವಮಾನ ಮುಂದುವರಿಯಲಿದೆ.

Continue Reading
Advertisement
ipl 2024
ಪ್ರಮುಖ ಸುದ್ದಿ2 hours ago

IPL 2024 : ಲಕ್ನೊ ವಿರುದ್ಧವೂ ಸೋತ ಮುಂಬೈ; ಹತ್ತನೇ ಸ್ಥಾನ ಕಾಯಂ

Anjali Murder Case
ಕರ್ನಾಟಕ2 hours ago

Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

Kanhaiya Kumar
ದೇಶ3 hours ago

Kanhaiya Kumar: ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ ಮೇಲೆ ಹಲ್ಲೆ; ವಿಡಿಯೊ ಇಲ್ಲಿದೆ

Murder Case
ಬೆಂಗಳೂರು3 hours ago

Murder Case: ಯಲಹಂಕದಲ್ಲಿ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ

Siddaramaiah
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

Pavithra Jayaram
ಸಿನಿಮಾ3 hours ago

ನಟಿ ಪವಿತ್ರ ಜಯರಾಮ್‌ ಸಾವಿನ ಬೆನ್ನಲ್ಲೇ ಪ್ರಿಯತಮ ಚಂದ್ರಕಾಂತ್ ಆತ್ಮಹತ್ಯೆ; ಖಿನ್ನತೆಗೆ ನಟ ಬಲಿ?

Rohit Sharma
ಕ್ರೀಡೆ3 hours ago

Rohit Sharma : ಆಡಿಯೊ ಬಂದ್ ಮಾಡಪ್ಪ; ಕ್ಯಾಮೆರಾಮನ್​ಗೆ ಕೈಮುಗಿದು ಬೇಡಿಕೊಂಡ ರೋಹಿತ್​ ಶರ್ಮಾ

Road Accident
ಪ್ರಮುಖ ಸುದ್ದಿ4 hours ago

Road Accident: ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ; 20ಕ್ಕೂ ಹೆಚ್ಚು ಮಂದಿಗೆ ಗಾಯ

Virat Kohli
ಕ್ರೀಡೆ4 hours ago

Virat kohli : ಪಾಕಿಸ್ತಾನಕ್ಕೆ ಬರುವೆ ಎಂದು ಅಲ್ಲಿನ ಪರ್ವತಾರೋಹಿಗೆ ಭರವಸೆ ಕೊಟ್ಟಿದ್ದ ವಿರಾಟ್​ ಕೊಹ್ಲಿ! ಇಲ್ಲಿದೆ ವಿಡಿಯೊ

Narendra modi
ದೇಶ4 hours ago

Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ6 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ20 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ21 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌