ಅಮೆರಿಕದಲ್ಲಿ ಖಲಿಸ್ತಾನಿ ನಾಯಕ (Khalistan Leader) ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹತ್ಯೆಯ ಸಂಚಿನಲ್ಲಿ (Murder plot) ಭಾರತದ ʼರಾʼ (RAW) ಅಧಿಕಾರಿಯ ಕೈವಾಡದ ಕುರಿತು ಅಮೆರಿಕ(America)ದ ಆರೋಪಕ್ಕೆ ತಿರುಗೇಟು ನೀಡಿದ್ದ ರಷ್ಯಾ(America v/s Russia), ಅಮೆರಿಕವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎಂದು ಹೇಳಿತ್ತು. ಪನ್ನುನ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದ ಅಮೆರಿಕಕ್ಕೆ ಟಾಂಗ್ ನೀಡಿದ್ದ ರಷ್ಯಾ, ಭಾರತದಲ್ಲಿ ಆಂತರಿಕ ರಾಜಕೀಯ ಸ್ಥಿತಿಗತಿಯನ್ನು ಅಲ್ಲೋಲ ಕಲ್ಲೋಲ ಮಾಡಲು ಅಮೆರಿಕ ಯತ್ನಿಸುತ್ತಿದೆ. ಭಾರತೀಯ ರಾಷ್ಟ್ರೀಯತೆ ಮನಸ್ಥಿತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳದ ಅಮೆರಿಕ ಸುಖಾಸುಮ್ಮನೆ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಾಡುತ್ತಿದೆ. ಭಾರತದ ಆಂತರಿಕ ವಿಚಾರದಲ್ಲಿ ಅಮೆರಿಕ ನಿರಂತರವಾಗಿ ಮೂಗು ತೂರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಭಾರತವನ್ನು ಗೌರವಿಸುವ ಮನಸ್ಸು ಅಮೆರಿಕಕ್ಕೆ ಇಲ್ಲ. ಅಮೆರಿಕದ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿದ್ದು, ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದೆ.
ರಷ್ಯಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ, ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕ ಎಂದಿಗೂ ಬಯಸುವುದಿಲ್ಲ. ಭಾರತ ಮಾತ್ರ ಅಲ್ಲ ಬೇರೆ ಯಾವುದೇ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದಿಲ್ಲ ಎಂದು ಹೇಳಿದೆ. ಈ ಮಾತಿನಲ್ಲಿ ಸತ್ಯವೆಷ್ಟಿದೆ, ಸುಳ್ಳೆಷ್ಟು ಎಂಬುದು ಇಡೀ ಜಗತ್ತಿಗೇ ಗೊತ್ತು. ಈ ಭೂಮಿಯಲ್ಲಿ ಎಲ್ಲ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದೇಶ ಒಂದಿದ್ದರೆ ಅದು ಅಮೆರಿಕ. ರಷ್ಯ ಕೂಡ ಸುಮ್ಮಸುಮ್ಮನೇ ಆರೋಪ ಮಾಡಲಾರದು. ಅದರ ಬೇಹುಗಾರಿಕೆ ಶಕ್ತಿ ಕೂಡ ಬಲವಾಗಿಯೇ ಇದೆ. ಹೀಗಾಗಿ ಅದು ಹಂಚಿಕೊಂಡಿರುವ ಮಾಹಿತಿ ಪೂರ್ತಿ ಸುಳ್ಳು ಎನ್ನಲಾಗುವುದಿಲ್ಲ. ರಷ್ಯ ಹಾಗೂ ಅಮೆರಿಕ ಸಾಂಪ್ರದಾಯಿಕ ವೈರಿಗಳಾಗಿರುವುದರಿಂದ, ಆ ಅಂಶವೂ ರಷ್ಯದ ಹೇಳಿಕೆಯ ಹಿಂದೆ ಸ್ವಲ್ಪ ಕೆಲಸ ಮಾಡಿರಬಹುದು ಅನ್ನೋಣ.
ಅನ್ಯ ದೇಶಗಳ ವಿಚಾರದಲ್ಲಿ ಮೂಗು ತೂರಿಸುವ ಅಮೆರಿಕದ ಚಾಳಿಗೆ ಸಾಕಷ್ಟು ಇತಿಹಾಸವಿದೆ. ಅದು ಕ್ಯೂಬಾದ, ರಷ್ಯದ ಅಧ್ಯಕ್ಷರ ಹತ್ಯೆಗೆ ಯತ್ನಿಸಿದೆ; ಅಫ್ಘಾನಿಸ್ತಾನವನ್ನು ಭಯೋತ್ಪಾದಕರನ್ನು ಬೆಳೆಸಿ ಪೂರ್ತಿ ನಾಶ ಮಾಡಿದೆ. ಪಾಕ್ ಅದೇ ಹಾದಿಯಲ್ಲಿದೆ. ಗಲ್ಫ್ ದೇಶಗಳಲ್ಲಿ ಅಮೆರಿಕದ ಮೂಗಿನ ನೇರಕ್ಕೆ ಕುಣಿಯದ ಇರಾನ್, ಟರ್ಕಿ, ಮುಂತಾದ ದೇಶಗಳನ್ನು ಬೆದರಿಸುತ್ತದೆ. ನ್ಯಾಟೋ ಮೂಲಕ ಯುರೋಪ್ ದೇಶಗಳನ್ನು ಕುಣಿಸುತ್ತಿದೆ. ಲ್ಯಾಟಿನ್ ಅಮೆರಿಕದ ಡ್ರಗ್ಸ್ ಜಾಲವನ್ನು ಗುಮ್ಮನಗುಸಕನಂತೆ ಪೋಷಿಸಿದೆ. ವಿಯೆಟ್ನಾಂ ಮೊದಲಾದ ದೇಶಗಳನ್ನು ನೇರ ಮಿಲಿಟರಿ ದಾಳಿ ಮೂಲಕ ಬಗ್ಗುಬಡಿಯಲು ಯತ್ನಿಸಿದೆ. ಅಮೆರಿಕ ಎಸಗದ ಕುಕೃತ್ಯವೇ ಇಲ್ಲ. ಇಂಥ ದೇಶದ ಮಿಲಿಟರಿ ಮತ್ತು ಬೇಹುಗಾರಿಕೆ ನಮ್ಮ ದೇಶದ ಚುನಾವಣೆಯಲ್ಲಿ ಕರಾಮತ್ತಿಗೆ ಮುಂದಾದರೆ ಆಶ್ಚರ್ಯವಿಲ್ಲ.
ಅಮೆರಿಕದ ಹಿತಾಸಕ್ತಿ ಭಾರತದಲ್ಲಿ ಬಹಳಷ್ಟಿದೆ. ಅಲ್ಲಿನ ಮೆಡಿಕಲ್ ಲಾಬಿ, ಸೋಯಾ ಲಾಬಿ, ತೈಲ ಲಾಬಿ, ಶಸ್ತ್ರಾಸ್ತ್ರ ಲಾಬಿ ಇತ್ಯಾದಿಗಳು ಇಲ್ಲಿ ಪ್ರಭಾವ ಬೀರಲು ಯತ್ನಿಸುತ್ತಲೇ ಇರುತ್ತವೆ. ಉದಾಹರಣೆಗೆ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಬೇಡಿ ಎಂದು ಇತ್ತೀಚೆಗೆ ಬೆದರಿಕೆ ಒಡ್ಡಿತ್ತು. ಭಾರತದ ರಸಗೊಬ್ಬರ ಸಬ್ಸಿಡಿ, ಭತ್ತದ ಇಳುವರಿಯ ಹೆಚ್ಚಳ ಇತ್ಯಾದಿಗಳ ಬಗ್ಗೆ ಅದರ ಕೊಂಕು ಇದೆ. ಶಸ್ತ್ರಾಸ್ತ್ರಗಳಲ್ಲಿ ಸ್ವಾವಲಂಬನೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಬೆಳವಣಿಗೆ, ಸುಸ್ಥಿರ ಇಂಧನದಲ್ಲಿ ಮುನ್ನಡೆ, ರಾಷ್ಟ್ರೀಯವಾದಿ ಚಿಂತನೆಯ ಆಡಳಿತ ಇತ್ಯಾದಿಗಳು ಅಮೆರಿಕದ ಕಣ್ಣು ಕುಕ್ಕಿರಲೂಬಹುದು. ಸದ್ಯ ಅದು ಪನ್ನುನ್ ಹತ್ಯೆ ಸಂಚಿನ ನೆಪ ಹಿಡಿದುಕೊಂಡು ಭಾರತಕ್ಕೆ ಮುಜುಗರ ಸೃಷ್ಟಿಸುವ ಯತ್ನದಲ್ಲಿದೆ. ಆದರೆ ಪನ್ನುನ್ ಭಾರತಕ್ಕೆ ಪೀಡಕನಾದ ಒಬ್ಬ ಭಯೋತ್ಪಾದಕ ಎಂಬುದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ.
ಆದರೆ ಭಾರತ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಆಗದ ದಡ್ಡ ದೇಶವಲ್ಲ. ನಮಗೆ ನಮ್ಮದೇ ರಾಜನೀತಿಯಿದೆ, ಸಂವಿಧಾನವಿದೆ. ನಮ್ಮ ಸಾರ್ವಭೌಮತ್ವವನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನಮ್ಮ ಚುನಾವಣೆಗಳು ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ. ಅಮೆರಿಕದ ಕೈವಾಡವನ್ನು ಪತ್ತೆ ಹಚ್ಚುವಷ್ಟು, ಅದನ್ನು ಮೊಳಕೆಯಲ್ಲೇ ನಿಗ್ರಹಿಸುವಷ್ಟು ಶಕ್ತವಾಗಿದೆ ನಮ್ಮ ಬೇಹುಗಾರಿಕೆ ಶಕ್ತಿ.
ಇದನ್ನೂ ಓದಿ: China Missile : ಪಾಕಿಸ್ತಾನಕ್ಕೆ ಗುಟ್ಟಾಗಿ ಕ್ಷಿಪಣಿ ಕಳುಹಿಸಿದ ಚೀನಾದ ಎರಡು ಕಂಪನಿಗಳಿಗೆ ಅಮೆರಿಕದ ನಿರ್ಬಂಧ