ಭಾರತ ಮತ್ತು ಕೆನಡಾದ ದ್ವಿಪಕ್ಷೀಯ ಸಂಬಂಧ ಬಿಗಡಾಯಿಸಿದೆ. ಮಂಗಳವಾರ ನಡೆದ ಎರಡು ಬೆಳವಣಿಗೆಗಳು ಅದು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿವೆ. ಮೊದಲಿಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಆರೋಪಿಸಿದರು. ಇದರ ಹಿಂದೆಯೇ ಅಲ್ಲಿನ ವಿದೇಶಾಂಗ ಇಲಾಖೆ ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳಿಸಲಾಗುತ್ತಿದೆ ಎಂದು ಹೇಳಿತು. ಇಷ್ಟಾದ ಮೇಲೆ ಭಾರತ ಸುಮ್ಮನಿರುವ ಸಂಭವವಿರಲಿಲ್ಲ. ಕೂಡಲೇ ಭಾರತದ ವಿದೇಶಾಂಗ ಇಲಾಖೆಯು ದಿಲ್ಲಿಯಲ್ಲಿ ಕೆನಡಾದ ರಾಜತಾಂತ್ರಿಕರನ್ನು ಕರೆಸಿಕೊಂಡು ಗಂಭೀರ ಎಚ್ಚರಿಕೆ ನೀಡಿ, ಗೇಟ್ಪಾಸ್ ನೀಡಿತು; ಐದು ದಿನಗಳೊಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಿತು. ಉಭಯ ದೇಶಗಳ ನಡುವಿನ ವ್ಯಾಪಾರ- ವ್ಯವಹಾರ ಮಾತುಕತೆಗಳೂ ನಿಂತುಹೋಗಿವೆ. ಸದ್ಯ ಜಾರಿಯಲ್ಲಿರುವ ರಫ್ತು- ಆಮದು ಯಾವಾಗ ನಿಲ್ಲುತ್ತದೋ ತಿಳಿಯದು. ಕೆನಡಾದ ಮೂರ್ಖತನ ಹಾಗೂ ಉದ್ಧಟತನಗಳು ಈ ಹಂತಕ್ಕೆ ಬಂದು ನಿಲ್ಲುವಂತೆ ಮಾಡಿದೆ(Vistara Editorial).
ಭಾರತದಲ್ಲಿ ನಡೆದ ಜಿ20 ಶೃಂಗಸಭೆಗೆ ಬಂದಾಗಲೇ ಕೆನಡಾದ ಪ್ರಧಾನಿ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜತೆಗೆ ಮುಜುಗರವಾಗುವಂಥ ಮಾತುಕತೆಗೆ ನಾಂದಿ ಹಾಡಿದ್ದರು. ʼಕೆನಡಾದ ಆಂತರಿಕ ವ್ಯವಹಾರಗಳಲ್ಲಿ ಭಾರತ ಹಸ್ತಕ್ಷೇಪ ನಡೆಸುತ್ತಿದೆ. ಈ ಬಗ್ಗೆ ಮೋದಿಯವರಲ್ಲಿ ಕಳವಳ ವ್ಯಕ್ತಪಡಿಸಿದ್ದೇನೆʼ ಎಂದು ದೂರಿದ್ದರು. ಇದೊಂದು ಮೂರ್ಖ ಹೇಳಿಕೆ. ಜಸ್ಟಿನ್ ಟ್ರುಡೊ ಅವರ ಹೇಳಿಕೆಯನ್ನು ಉಲ್ಟಾ ಮಾಡಿದರೆ ಸತ್ಯ ಕಾಣಬಹುದು. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾ ಹಸ್ತಕ್ಷೇಪ ನಡೆಸುತ್ತಿದೆಯೇ ಹೊರತು ನಾವಲ್ಲ. ಕೆನಡಾದಲ್ಲಿ ಭಾರತೀಯ ಹಿಂದೂಗಳ ದೇವಾಲಯಗಳ ಮೇಲೆ ದಾಳಿ ನಡೆಸಿ ಅಪವಿತ್ರಗೊಳಿಸುವ ಕೆಲಸ ನಡೆಯುತ್ತಿದೆ. ಭಾರತ ಮೂಲದ ಹಿಂದೂಗಳ ಮೇಲೆ ಸತತ ದಾಳಿಗಳು ನಡೆಯುತ್ತಿವೆ. ಇದರ ಹಿಂದಿರುವವರು ಖಲಿಸ್ತಾನ್ ಉಗ್ರಗಾಮಿಗಳು ಎಂದು ಎಲ್ಲರಿಗೂ ತಿಳಿದಿದೆ. ಭಾರತೀಯ ರಾಯಭಾರ ಕಚೇರಿಯ ಮುಂದೆ ಖಲಿಸ್ತಾನ್ ಸಹಾನುಭೂತಿಪರರು ಪದೇಪದೆ ಪ್ರತಿಭಟನೆ ನಡೆಸಿ ಮುಜುಗರ ಸೃಷ್ಟಿಸುತ್ತಿದ್ದಾರೆ. ಇದೆಲ್ಲವನ್ನೂ ಕೆನಡಾದ ಆಡಳಿತಗಾರರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದಾರೆ ಹೊರತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಭಾರತೀಯರ ಮೇಲೆ ಈ ಖಲಿಸ್ತಾನಿ ಉಗ್ರರು ಹಲ್ಲೆ ನಡೆಸಿದಾಗಲೂ ಭಾರತ ದೂರು ನೀಡಿದೆ; ಎಚ್ಚರಿಸಿದೆ. ಆದರೆ ಕೆನಡಾ ಎಚ್ಚೆತ್ತುಕೊಂಡಿಲ್ಲ.
ಭಾರತದಲ್ಲಿ ದಶಕಗಳ ಹಿಂದೆ ಉಲ್ಬಣಗೊಂಡು ಇದೀಗ ಉಪಶಮನಗೊಂಡಿರುವ ಹುಣ್ಣನ್ನು ಕೆರೆದು ಮತ್ತೆ ಉಲ್ಬಣಗೊಳಿಸುವ ಕೆಲಸವನ್ನು ಕೆನಡಾ ಮಾಡುತ್ತಿದೆ. ಕೆನಡಾದಲ್ಲಿ ಸಾಕಷ್ಟು ಮಂದಿ ಭಾರತೀಯರು, ಹೆಚ್ಚಿನವರು ಪಂಜಾಬ್ ಮೂಲದ ಸಿಕ್ಖರು ಹೋಗಿ ನೆಲೆಸಿದ್ದಾರೆ. ಉದ್ಯೋಗಕ್ಕಾಗಿ ಹೋದ ಇವರು ಅಲ್ಲಿನ ಪ್ರಜೆಗಳಾಗಿದ್ದಾರೆ. ಇವರಲ್ಲಿ ಅಧಿಕ ಮಂದಿ ಸಜ್ಜನರು; ಎರಡೂ ದೇಶಗಳ ಘನತೆಯನ್ನೂ ಕಾಪಾಡುವವರು. ಆದರೆ ದುರ್ಜನರೂ ಸಾಕಷ್ಟಿದ್ದಾರೆ. ಒಂದು ಕಾಲದಲ್ಲಿ ಅಮೃತಸರದ ಸ್ವರ್ಣಮಂದಿರವನ್ನು ಅಪವಿತ್ರಗೊಳಿಸಿದ, ಖಲಿಸ್ತಾನ್ ಚಳವಳಿಯ ಹೆಸರಲ್ಲಿ ಪಂಜಾಬ್ನ ಯುವಜನತೆಯ ಮನಸ್ಸುಗಳನ್ನು ಕೆಡಿಸಿ ಸರ್ವನಾಶ ಮಾಡಿದ ಭಿಂದ್ರಾನ್ವಾಲೆಯ ಸಂತಾನಗಳು ಇಂದಿಗೂ ಕೆನಡಾದ ನೆಲದಲ್ಲಿ ಆಶ್ರಯ ಪಡೆದಿವೆ. ಇಂಥ ಡಜನ್ಗೂ ಹೆಚ್ಚು ಉಗ್ರರ ಹೆಸರನ್ನು ಭಾರತ ಸರ್ಕಾರ ಕೆನಡಾಗೆ ನೀಡಿದ್ದು, ಅವರನ್ನು ತಮಗೊಪ್ಪಿಸುವಂತೆ ಹೇಳಿದೆ. ಆದರೆ ಅವರು ಕೆನಡಾದ ಪ್ರಜೆಗಳೆಂದೂ, ಅವರ ಪ್ರತಿಭಟನೆಯ ಸ್ವಾತಂತ್ರ್ಯಕ್ಕೆ ತಾನು ಧಕ್ಕೆ ತರುವುದಿಲ್ಲವೆಂದೂ ಕೆನಡಾ ಹೇಳುತ್ತಲೇ ಇದೆ. ʼಭಾರತ ತನ್ನ ಸಾರ್ವಭೌಮತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆʼ ಎಂದು ಪ್ರಲಾಪಿಸುತ್ತಿರುವ ಈ ದೇಶದ ನಾಯಕತ್ವಕ್ಕೆ, ನಿಜಕ್ಕೂ ಭಾರತದ ಹಳೆಯ ಗಾಯವನ್ನು ಕೆದಕಲು ತಾನು ಸಹಾಯ ಮಾಡುತ್ತಿದ್ದೇನೆ ಎಂದು ಗೊತ್ತಿದೆ; ಆದರೆ ಒಪ್ಪಿಕೊಳ್ಳಲಾಗದ ಉದ್ಧಟತನ. ಕೆನಡಾದಲ್ಲಿರುವ ಶ್ರೀಮಂತ ಸಿಕ್ಖರ, ತಾಲಿಬಾನಿಗಳ ಮರ್ಜಿಯಲ್ಲಿ ಅದು ಬಿದ್ದಂತಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಳೆಯ ಮೆಲುಕುಗಳೊಂದಿಗೆ ಹೊಸ ಸಂಸತ್ ಭವನಕ್ಕೆ ಅಡಿಯಿಟ್ಟ ಪ್ರಜಾಪ್ರಭುತ್ವ
ಆ ದೇಶಕ್ಕೆ ತನ್ನ ಅಧ್ಯಕ್ಷನಿಗೊಂದು ಹೊಸ ವಿಮಾನ ತೆಗೆಸಿಕೊಡುವ ಯೋಗ್ಯತೆಯಿಲ್ಲ. ಅದು ದಶಕಗಳಷ್ಟು ಹಳೆಯದಾದ ವಿಮಾನ; ಹೋದಬಂದಲ್ಲಿ ಹಾಳಾಗುವುದು ಅದರ ಹಣೆಬರಹವಾಗಿದೆ. ಅಲ್ಲಿನ ಅಧ್ಯಕ್ಷರ ಅಧಿಕೃತ ನಿವಾಸ ಈಗಲೋ ಆಗಲೋ ಬೀಳುವಂತಿದೆ. ಅದನ್ನು ದುರಸ್ತಿ ಮಾಡುವಲ್ಲಿಯೂ ಅಲ್ಲಿನ ಆಳುವವರಲ್ಲಿ ಒಮ್ಮತವಿಲ್ಲ. ಅಧ್ಯಕ್ಷರೇ ಬಾಡಿಗೆ ಕಟ್ಟಡದಲ್ಲಿ ಇದ್ದಾರೆ. ಆದರೆ ತಾನು ಪ್ರಭಾವಿ ಎಂಬ ಹುಸಿ ಧೋರಣೆ ಈ ದೇಶಕ್ಕೆ ಇದ್ದಂತಿದೆ. ತನ್ನದೇ ಹಳೆಯ ಹಳವಂಡಗಳಲ್ಲಿ ದಿನ ಕಳೆದರೆ, ವಾಸ್ತವ ಸ್ಥಿತಿಯ ಅರಿವು ಮಾಡಿಕೊಳ್ಳದೇ ಹೋದರೆ ಹೀಗಾಗುತ್ತದೆ. ಇಂಥ ದೇಶ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಂಥ ದೇಶಕ್ಕೆ ತಾನು ಪಾಠ ಹೇಳಬಹುದು ಎಂದುಕೊಂಡಿರುವುದು ಹಾಸ್ಯಾಸ್ಪದ. ಜಸ್ಟಿನ್ ಟ್ರುಡೊ ಮತ್ತು ಅಲ್ಲಿನ ಇತರ ಆಡಳಿತಗಾರರು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಭಾರತಕ್ಕೆ ಪಾಠ ಕಲಿಸಬೇಕು ಎಂದು ಅಲ್ಲಿ ಹಾರಾಡುತ್ತಿರುವವರು ನೈಜ ಸಿಕ್ಖರಲ್ಲ; ಇವರು ಪ್ರತ್ಯೇಕತಾವಾದಿಗಳು, ಹಿಂಸಾವಾದಿಗಳು. ಇವರನ್ನು ಮುಂದಿಟ್ಟುಕೊಂಡು ಹೊರಟರೆ ಆ ದೇಶವೇ ಹಿಂಸೆಯ ಫಲವನ್ನು ಉಣ್ಣಬೇಕಾದೀತು. ಖಲಿಸ್ತಾನಿ ಉಗ್ರ ನಿಜ್ಜರ್ನನ್ನು ಕೊಂದವರು ಭಾರತೀಯ ಏಜೆನ್ಸಿಯವರೋ ಅಲ್ಲವೋ ಎನ್ನುವುದು ಬೇರೆ ಮಾತು; ಆದರೆ ಈ ಉಗ್ರರು ಅಂಥದೊಂದು ಶಿಕ್ಷೆಗೆ ಅರ್ಹರೇ ಆಗಿದ್ದರು ಎನ್ನುವುದಂತೂ ಒಪ್ಪಬೇಕಾದುದು.
ಕೆನಡಾವನ್ನು ಓಲೈಸಿ ಭಾರತಕ್ಕೆ ಏನೂ ಆಗಬೇಕಾಗಿಲ್ಲ. ಆದರೆ ಕೆನಡಾದಲ್ಲಿ ಸಿಕ್ಖರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಇವರು ಭಾರತಕ್ಕೆ ಬಂದು ಹೋಗಬೇಕಾದರೆ ಭಾರತದ ಸಮ್ಮತಿ ಅಗತ್ಯ. ಆದ್ದರಿಂದ ಸಿಕ್ಖರು ಕೂಡ ಈ ವಿಚಾರದಲ್ಲಿ ಕೆನಡಾದ ಮನವೊಲಿಸುವ ಕೆಲಸ ಮಾಡಬೇಕಾದುದು ಅಗತ್ಯ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.