Site icon Vistara News

ವಿಸ್ತಾರ ಸಂಪಾದಕೀಯ: ಪುಕ್ಕಟೆ ವಿದ್ಯುತ್ ಗಿಮಿಕ್‌ನಿಂದಾಗಿ ರಾಜ್ಯವೇ ಕಗ್ಗತ್ತಲೆಯಲ್ಲಿ ಮುಳುಗದಿರಲಿ!

Vistara Editorial, Free Electricity scheme costs karnataka

ವರಾತ್ರಿ ಸಮಯದಲ್ಲಿ ರಾಜ್ಯದ ಜನರಿಗೆ ಇಂಧನ ಇಲಾಖೆ ವಿದ್ಯುತ್ ಕಡಿತದ (Power Cuts) ಹಬ್ಬದ ಕೊಡುಗೆ ನೀಡಿದೆ. ರಾಜ್ಯದಲ್ಲಿ ಒಂದು ಕಡೆ ಬರದ ಪೆಟ್ಟು, ಮಗದೊಂದು ಕಡೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಕಾಟದಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್‌ ಮಾಡುತ್ತಿರುವುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಎರಡು ದಿನದ ಗಡುವನ್ನು ನೀಡಿದೆ. ಅಷ್ಟರಲ್ಲಿ ವಿದ್ಯುತ್‌ ಸಮಸ್ಯೆ ಬಗೆಹರಿಯದೇ ಇದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.‌ ಇದ್ದಕ್ಕಿದ್ದಂತೆ ಸೃಷ್ಟಿಯಾಗಿರುವ ಈ ಪವರ್‌ ಕಟ್‌ ಭೂತದ ಕಾರಣವೇನು?(Vistara Editorial)

ರಾಜ್ಯದಲ್ಲಿ ಸದ್ಯ ತೀವ್ರ ವಿದ್ಯುತ್ ಕೊರತೆ ಬಗ್ಗೆ ಬಹಿರಂಗವಾಗಿ ಇಂಧನ ಇಲಾಖೆ ಒಪ್ಪಿಕೊಂಡಿದ್ದು, ವಿಪಕ್ಷಗಳ ಟೀಕೆ ಬೆನ್ನಲ್ಲೇ ವಿಸ್ತ್ರತ ಅಂಕಿ ಅಂಶಗಳನ್ನು ಇಂಧನ ಇಲಾಖೆಯು ರಾಜ್ಯ ಸರ್ಕಾರಕ್ಕೆ ನೀಡಿದೆ. ಮುಂಗಾರು ಮಳೆ ಅಭಾವದಿಂದ ಬೆಳೆಗಳಿಗೆ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳಿಂದ ಅತಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ. ಪವನ ವಿದ್ಯುತ್ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನೆಯೂ ತೀವ್ರ ಕುಸಿತ ಕಂಡಿದೆ. ಅಕ್ಟೋಬರ್‌ನಲ್ಲಿ ಈ ವರ್ಷ 15 ಸಾವಿರ ಮೆಗಾ ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದೆ. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ 9,032 ಮೆಗಾ ವ್ಯಾಟ್ ವಿದ್ಯುತ್ ನಿತ್ಯ ಬೇಡಿಕೆ ಇರುತ್ತಿತ್ತು. 1500-2000 ಮೆಗಾವ್ಯಾಟ್ ವಿದ್ಯುತ್ ಕೊರತೆ ‌ಸಮಸ್ಯೆಯನ್ನು ಇಲಾಖೆ ಎದುರಿಸುತ್ತಿದೆ. ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಆಗಸ್ಟ್‌ನಲ್ಲಿ ದಾಖಲೆ ಎಂಬಂತೆ 16,950 ಮೆಗಾ ವ್ಯಾಟ್ ವಿದ್ಯುತ್‌ಗೆ ಡಿಮ್ಯಾಂಡ್ ಎದುರಾಗಿತ್ತು. ಹೀಗಾಗಿ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಹರಸಾಹಸ ಪಡುತ್ತಿದೆ. ರೈತರು ಕೃಷಿ ಪಂಪ್ ಸೆಟ್‌ಗಳ ಬಳಕೆ ಹೆಚ್ಚಿಸಿದ್ದರಿಂದ ಅನಿವಾರ್ಯವಾಗಿ ವಿದ್ಯುತ್ ಡಿಮ್ಯಾಂಡ್ ಹೆಚ್ಚಿದೆ. ಕಲ್ಲಿದ್ದಲಿನ ಗುಣಮಟ್ಟ ಕೂಡ ಸರಿಯಾಗಿರದೇ ಇರುವುದು ವಿದ್ಯುತ್‌ ಉತ್ಪಾದನೆ ಕುಸಿಯಲು ಕಾರಣ. ಇದರಿಂದಾಗಿ ಇಂಧನ ಇಲಾಖೆ ವಿದ್ಯುತ್‌ ಕಡಿತದ ಮೊರೆಹೋಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿದ್ಯುತ್‌ ಕಡಿತ ಶುರುವಾಗಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ಸಮರ್ಪಕ ವಿದ್ಯುತ್‌ ಪೂರೈಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿದ್ಯುತ್‌ ಕಡಿತ ಅಥವಾ ಲೋಡ್‌ ಶೆಡ್ಡಿಂಗ್‌ ಎಂಬುದು ಒಂದು ಸಮಸ್ಯೆ ಮಾತ್ರವಲ್ಲ; ಅದು ಹಲವಾರು ಇತರ ಸಮಸ್ಯೆಗಳ ತಾಯಿಬೇರು. ಲೋಡ್‌ ಶೆಡ್ಡಿಂಗ್‌ನಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಕಡಿತವಾಗಿ, ಬೆಳೆಗಳು ಕರಟಿಹೋಗಬಹುದು. ಬೆಳೆ ಕುಸಿಯಬಹುದು. ಡೀಸೆಲ್‌ ಪಂಪ್‌ ಬಳಸಬಹುದಾದ ಶಕ್ತಿಯುಳ್ಳ ರೈತರು ಕೆಲವೇ ಮಂದಿ. ಇನ್ನು ಕೈಗಾರಿಕೆಗಳಿಗೆ ಪವರ್‌ ಬೇಕೇ ಬೇಕು. ಅದಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ. ಪವರ್‌ ಪೂರೈಕೆ ಇಲ್ಲದೇ ಹೋದರೆ ಕೈಗಾರಿಕಾ ಉತ್ಪಾದನೆಯೂ ತೀವ್ರ ಕುಸಿತ ಕಾಣಲಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು ಮುಚ್ಚಿಯೇ ಹೋಗಬಹುದು. ಆರೋಗ್ಯ ಸೇವಾ ವಿಭಾಗದಲ್ಲಿ ಹಲವು ಔಷಧಿಗಳು ಶೀತಲ ಸಂಗ್ರಹವನ್ನು ಅಪೇಕ್ಷಿಸುತ್ತವೆ. ಕೃಷಿ, ಮುಖ್ಯವಾಗಿ ತೋಟಗಾರಿಕೆ ಬೆಳೆಗಳ ಸಂಗ್ರಹಾಗಾರಗಳಿಗೆ ವಿದ್ಯುತ್‌ ಬೇಕೇ ಬೇಕು. ಒಂದು ಗಂಟೆ ಒದ್ಯುತ್‌ ಕೊರತೆಯಾದರೂ ಅಗಾಧ ಪ್ರಮಾಣದ ತರಕಾರಿ, ಹಣ್ಣು ಇತ್ಯಾದಿಗಳು ಕೊಳೆತುಹೋಗಬಹುದು. ಇದರಿಂದ ಪೂರೈಕೆಯ ಕೊರತೆ, ಬೆಲೆ ಏರಿಕೆ, ಹಣದುಬ್ಬರ; ಹೀಗೆ ಪವರ್‌ ಕಟ್‌ ಎಂಬುದು ಹಲವು ಸಮಸ್ಯೆಗಳನ್ನು ಏಕಕಾಲದಲ್ಲಿ ಸೃಷ್ಟಿಸುತ್ತದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಟೀಮ್ ಇಂಡಿಯಾದ ಸ್ಫೂರ್ತಿ ಹೆಚ್ಚಿಸಿದ ರೋಹಿತ್‌ ಶರ್ಮಾ ದಾಖಲೆ

ಆದ್ದರಿಂದಲೇ ಜಾಣ್ಮೆಯುಳ್ಳ ಆಡಳಿತಗಾರರು ಸಮರ್ಪಕ ವಿದ್ಯುತ್‌ ಪೂರೈಕೆಯತ್ತ ಮೊದಲ ಗಮನ ಹರಿಸುತ್ತಾರೆ. ಉಪ ಮುಖ್ಯಮಂತ್ರಿಗಳೇನೋ ಸೋಲಾರ್‌ ವಿದ್ಯುತ್‌ ಉತ್ಪಾದನೆ ಹಾಗೂ ಖರೀದಿಯ ಮಾತನಾಡಿದ್ದಾರೆ. ಆದರೆ ಇದು ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಹಾಗಾಗಬಾರದು. ಇದಕ್ಕೆ ಸಮರ್ಪಕ ದೂರದೃಷ್ಟಿ ಯೋಜನೆ ಹಾಗೂ ಅನುಷ್ಠಾನ ಬೇಕಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾವಿರಾರು ಮೆಗಾ ವ್ಯಾಟ್‌ಗಳಷ್ಟು ವಿದ್ಯುತ್‌ ತಯಾರಿಸಬಹುದಾದ ಸೋಲಾರ್‌ ಸ್ಥಾವರಗಳನ್ನು ನಿರ್ಮಿಸಲು ಸಾಧ್ಯವಿದೆ. ಹಾಗೆಯೇ ಮುಂಗಾರು ಚೆನ್ನಾಗಿ ಬಂದು ವಿದ್ಯುತ್‌ ಸಾಕಷ್ಟಿರುವ ಇತರ ರಾಜ್ಯಗಳಿಂದಲೂ ವಿದ್ಯುತ್‌ ಖರೀದಿಸಬಹುದಾಗಿದೆ. ಇನ್ನು ವಿದ್ಯುತ್‌ ಸೋರಿಕೆಯ ಪ್ರಮಾಣ ಜಾಸ್ತಿಯೇ ಇದೆ. ಎಲ್ಲೆಲ್ಲಿ ಸೋರಿಕೆಯಿದೆ ಎಂಬುದನ್ನು ಗಮನಿಸಿ ಕಟ್ಟುನಿಟ್ಟಾಗಿ ತಡೆಗಟ್ಟಿದರೆ ಅದು ಕೂಡ ಉಳಿತಾಯವಾಗಿ ಜನರ ಬಳಕೆಗೆ ಒದಗುತ್ತದೆ. ಇದನ್ನೆಲ್ಲ ಸರ್ಕಾರ ಸಾಧ್ಯವಾಗಿಸಲಿ. ಆಗ ಜನತೆಯ ಬವಣೆ ನೀಗುತ್ತದೆ.

ಹಾಗೆಯೇ ಉಚಿತ ವಿದ್ಯುತ್‌ ಯೋಜನೆಯ ನೀಡುವಿಕೆಯನ್ನು ಕೂಡ ಸರ್ಕಾರ ಮರುಪರಿಶೀಲಿಸಬೇಕು. ಈ ಯೋಜನೆಯನ್ನೇನೋ ಸರ್ಕಾರ ನೀಡಿದೆ. ಆದರೆ ಈ ಯೋಜನೆಯಲ್ಲಿ ಎಷ್ಟು ನಿಜಕ್ಕೂ ಸದ್ಬಳಕೆಯಾಗುತ್ತಿದೆ, ಎಷ್ಟು ವಿದ್ಯುತ್‌ ದುರ್ವ್ಯಯವಾಗುತ್ತಿದೆ ಎಂಬುದನ್ನು ಯಾರೂ ಗಮನಿಸುತ್ತಿಲ್ಲ. ಉಚಿತ್‌ ವಿದ್ಯುತ್‌ ಯೋಜನೆಯಿಂದಾಗಿ ವಿದ್ಯುತ್‌ ಬಳಕೆ ಹೆಚ್ಚಿರುವ ಸಾಧ್ಯತೆ ಇದೆ. ಇದೂ ಪವರ್‌ ಕಟ್‌ಗೆ ಕಾರಣವಾಗಿರಬಹುದು. ಪುಕ್ಕಟೆ ವಿದ್ಯುತ್ ಗಿಮಿಕ್‌ನಿಂದಾಗಿ ರಾಜ್ಯವೇ ಕಗ್ಗತ್ತಲೆಯಲ್ಲಿ ಮುಳುಗದಿರಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version