ಮುಂಬಯಿಯ ಘಾಟ್‌ಕೋಪರ್‌ನಲ್ಲಿ ಅಪ್ಪಳಿಸಿದ ಭಾರಿ ಧೂಳು ಬಿರುಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಜಾಹೀರಾತು ಫಲಕ ಕುಸಿದು 14 ಮಂದಿ ಸಾವನ್ನಪ್ಪಿದ್ದಾರೆ. 59 ಜನರು ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ವೇಗವಾಗಿ ಧೂಳಿನ ಸಮೇತ ಬಂದ ಬಿರುಗಾಳಿ, ಭಾರೀ ಮಳೆ ಹಿನ್ನೆಲೆ ಮುಂಬೈ ನಗರದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಜನಸಂದಣಿ ಇರುವ ಪ್ರದೇಶದಲ್ಲಿ ಬೃಹದಾಕಾರದ ಹೋರ್ಡಿಂಗ್ ಬಿರುಗಾಳಿಗೆ ಕುಸಿದು ಬಿದ್ದಿದೆ. ಬೃಹದಾಕಾರದ ಹೋರ್ಡಿಂಗ್ ನ ಕಬ್ಬಿಣದ ರಾಡ್ ಗಳು ಹಿಂದಕ್ಕೆ ವಾಲಿಕೊಂಡು ಸಂಪೂರ್ಣವಾಗಿ ನೆಲಕಚ್ಚಿದೆ. ದುರ್ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಹೋರ್ಡಿಂಗ್ ಕೆಳಗೆ ಸಿಲುಕಿಕೊಂಡಿದ್ದಾರೆ. ಹೋರ್ಡಿಂಗ್ ಬಿದ್ದ ಪರಿಣಾಮ ಅಲ್ಲಿದ್ದ ಅಂಗಡಿಗಳು, ವಾಹನಗಳು ಸಹ ಜಖಂ ಆಗಿದೆ. ಇನ್ನೊಂದು ಇಂಥದೇ ಘಟನೆಯಲ್ಲಿ, ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಹಲವಾರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಹಲವರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.
ಇದು ಅಪರೂಪದ ಪ್ರಕರಣವಲ್ಲ. ಈ ಹಿಂದೆಯೂ ಇಂಥ ಘಟನೆಗಳು ಆದದ್ದುಂಟು. ಈ ಬೃಹತ್ ಜಾಹೀರಾತು ಫಲಕಗಳು ನಾಲ್ಕು- ಐದು ಮಹಡಿ ಕಟ್ಟಡಗಳಷ್ಟು ಎತ್ತರವಾಗಿರುತ್ತವೆ. ವೈಜ್ಞಾನಿಕವಾಗಿ ಇದನ್ನು ನಿರ್ಮಿಸದೇ ಹೋದರೆ ಇವು ಬಿದ್ದಾಗ ಹಲವು ಜೀವಗಳಿಗೆ ಮಾರಣಾಂತಿಕ ಆಗುವ ಸಂಭವ ಇದ್ದೇ ಇರುತ್ತದೆ. ಜೊತೆಗೆ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್‌ಗಳ ಕಾಟವೂ ಇದೆ. ಇವು ನಗರಗಳ ಸೌಂದರ್ಯವನ್ನು ಊನಗೊಳಿಸುವಲ್ಲಿ ಕುಖ್ಯಾತವಾಗಿವೆ.
ಬೆಂಗಳೂರಿನಲ್ಲೂ ಇಂಥ ಜಾಹೀರಾತು ಫಲಕಗಳ ಹಾವಳಿ ಸಾಕಷ್ಟಿದೆ. ಇವುಗಳಲ್ಲಿ ಅನಧಿಕೃತ ಎಷ್ಟು, ಅನಧಿಕೃತ ಎಷ್ಟು ಯಾರೂ ಹೇಳಲಾರರು. ಕಳೆದ ವರ್ಷ ಹೈಕೋರ್ಟ್, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳ ಬಗ್ಗೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪರಿಣಾಮ ನಗರವನ್ನು ತರಾತುರಿಯಿಂದ ಕ್ಲೀನ್ ಮಾಡಲಾಗಿತ್ತು. ಇದೀಗ ಬಿಬಿಎಂಪಿ ನೂತನ ಬೈಲಾ ತಂದಿದೆ. ಅದರಂತೆ ದೊಡ್ಡ ಹೋರ್ಡಿಂಗ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೋರ್ಡಿಂಗ್‌ನ ಗಾತ್ರವು ರಸ್ತೆಯ ಅಗಲ, ವೃತ್ತ ಅಥವಾ ಜಂಕ್ಷನ್ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, 80 ರಿಂದ 100 ಅಡಿ ಅಗಲದ ರಸ್ತೆಯಲ್ಲಿ (ಒಳಗಿನ ವರ್ತುಲ ರಸ್ತೆ) 1,000 ಚದರ ಅಡಿ ಹೋರ್ಡಿಂಗ್ ಅನ್ನು ಪ್ರದರ್ಶಿಸಲು ಅನುಮತಿಸಲಾಗಿದೆ. ಜಾಹೀರಾತುದಾರರು ಪ್ರತಿ 100 ಮೀಟರ್‌ಗಳಿಗೆ ಅಂತಹ ಬೋರ್ಡ್‌ಗಳನ್ನು ಸ್ಥಾಪಿಸಬಹುದು. ಕನಿಷ್ಠ ಜಾಹೀರಾತು ಪ್ರದೇಶವು 800 ಚದರ ಅಡಿಗಳಾಗಿದ್ದರೆ, ಗರಿಷ್ಠ 3,000 ಚದರ ಅಡಿ. ಗರಿಷ್ಠ ಎತ್ತರ 75 ಅಡಿಗಳವರೆಗೂ ಹೋಗಬಹುದು. ಅಂದರೆ ಸುಮಾರು ಏಳು ಮಹಡಿ ಎತ್ತರ!
ಇಂಥ ಒಂದು ಬೃಹತ್ ಫಲಕ ಗಾಳಿಗೆ ಬಿದ್ದರೆ ಎಂಥ ಅನಾಹುತ ಆದೀತು ಎಂಬುದನ್ನು ಊಹಿಸಬಹುದು. ನೂತನ ಹೋರ್ಡಿಂಗ್ ನೀತಿಯಿಂದ ವಾರ್ಷಿಕ 500 ಕೋಟಿ ರೂಪಾಯಿ ಗಳಿಸುವ ಇರಾದೆ ಬಿಬಿಎಂಪಿಗೆ ಇದೆ. ಆದರೆ ಅದರಡಿ ಓಡಾಡುವ ಜನರ ಸುರಕ್ಷತೆಯ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ? ಇಂಥ ಅಪಘಾತದ ಸಂತ್ರಸ್ತರಿಗೆ ಗರಿಷ್ಠ ವಿಮೆ ನೀಡುವ ಕಾಯಿದೆ ಇರಬೇಕಲ್ಲವೆ? ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇಂಥ ಅಪಘಾತಗಳು ಸಂಭವಿಸಿದಾಗ, ನಮ್ಮ ಸುತ್ತಮುತ್ತಲೂ ಯಾವಾಗ ಬೇಕಾದರೂ ಸಂಭವನೀಯ ಅಪಾಯಗಳ ಕುರಿತು ಕೂಡ ನಾವು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ.
ಇದನ್ನೂ ಓದಿ: ICC World Cup 2023 : ಜಸ್ಟ್ ಮಿಸ್; ಪ್ರೇಕ್ಷಕರ ಸೀಟ್ಗಳ ಮೇಲೆ ಬಿದ್ದ ಬೃಹತ್ ಹೋರ್ಡಿಂಗ್