Site icon Vistara News

ವಿಸ್ತಾರ ಸಂಪಾದಕೀಯ: ರಾವಿ ನದಿಗೆ ಭಾರತದ ಅಣೆಕಟ್ಟು ದಿಟ್ಟ ಹೆಜ್ಜೆ

Vistara Editorial, India built dam to Ravi River, Water crisis for Pakistan

ಮೂರು ದಶಕಗಳಿಂದಲೂ ನನೆಗುದಿಗೆ ಬಿದ್ದಿದ್ದ, ಶಾಹ್‌ಪುರ ಕಂಡಿ ಅಣೆಕಟ್ಟು (Shahpur Kandi dam) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ರಾವಿ ನದಿಯಿಂದ (Ravi River Water) ಪಾಕಿಸ್ತಾನಕ್ಕೆ ಹರಿಯುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ಪಾಕಿಸ್ತಾನದ ಕೃಷಿಗೆ ಭಾರಿ ಪೆಟ್ಟು ಬೀಳುವ ಜತೆಗೆ ಭಾರತದ ಲಕ್ಷಾಂತರ ರೈತರಿಗೆ ಈ ನದಿಯ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಇಚ್ಛಾಶಕ್ತಿ ಪ್ರದರ್ಶಿಸಿ ಅಣೆಕಟ್ಟೆ ನಿರ್ಮಾಣ ಮಾಡಿದ ಕೇಂದ್ರ ಸರ್ಕಾರದ ಕ್ರಮ ಅಭಿನಂದನಾರ್ಹವಾಗಿದೆ(Vistara Editorial).

ಜಮ್ಮು ಗಡಿ ಭಾಗದಲ್ಲಿ ಶಾಹ್‌ಪುರ ಕಂಡಿ ಅಣೆಕಟ್ಟೆಯಿಂದ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನ 32 ಸಾವಿರ ಹೆಕ್ಟೇರ್‌ ಜಮೀನುಗಳಿಗೆ ನೀರು ಹರಿಸಬಹುದಾಗಿದೆ. ಸುಮಾರು 1,150 ಕ್ಯುಸೆಕ್‌ ನೀರು ಉಳಿತಾಯವಾಗುವುದರಿಂದ ಲಕ್ಷಾಂತರ ರೈತರು ಉತ್ತಮ ಬೆಳೆ ಬೆಳೆಯಲು ಸಹಕಾರಿಯಾಗಲಿದೆ. ಅದರಲ್ಲೂ, ಜಮ್ಮು-ಕಾಶ್ಮೀರದ ಕಠುವಾ, ಸಾಂಬಾ ರೈತರು ಅಣೆಕಟ್ಟಿನ ಲಾಭ ಪಡೆಯಲಿದ್ದಾರೆ. ರಾವಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಬೇಕು ಎಂಬ ಯೋಜನೆಯು ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. 1995ರಲ್ಲಿ ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗ ಅಣೆಕಟ್ಟೆ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಆದರೆ, ಹತ್ತಾರು ಅಡೆತಡೆಗಳಿಂದಾಗಿ ಯೋಜನೆಯು ನನೆಗುದಿಗೆ ಬಿದ್ದಿತ್ತು. 2018ರಲ್ಲಿ ಅಣೆಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಯಿತು ಮತ್ತು ಆರು ವರ್ಷಗಳಲ್ಲಿಯೇ ಕಾಮಗಾರಿ ಪೂರ್ಣಗೊಂಡಿದೆ. ಈಗ ನದಿಯ ನೀರು ಪಾಕಿಸ್ತಾನಕ್ಕೆ ಹರಿಯದೆ, ಭಾರತದ ರೈತರು ಗದ್ದೆಗಳಿಗೆ ಹರಿಯುತ್ತಿದೆ.

ಅಣೆಕಟ್ಟೆಯು ರೈತರಿಗೆ ಅನುಕೂಲವಾಗುವ ಜತೆಗೆ ಜಲವಿದ್ಯುತ್‌ ಉತ್ಪಾದನೆ ಯೋಜನೆಯ ಜಾರಿಗೂ ಭಾರಿ ಅನುಕೂಲವಾಗಲಿದೆ. ಇದಕ್ಕೂ ಮೊದಲು ರಾವಿ ನದಿಯ ನೀರು ಹಳೆಯ ಲಖನ್‌ಪುರ ಡ್ಯಾಮ್‌ನಿಂದ ಪಾಕಿಸ್ತಾನದ ಕಡೆ ಹರಿಯುತ್ತಿತ್ತು. ಈಗ ಮಾಧೋಪುರ ಕಾಲುವೆ ಮೂಲಕ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ ಜಮೀನುಗಳಿಗೆ ನೀರು ಹರಿಸಲಾಗುತ್ತದೆ. 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತ ಹಾಗೂ ಪಾಕಿಸ್ತಾನವು ಒಪ್ಪಂದ ಮಾಡಿಕೊಂಡಿವೆ. ಅದರಂತೆ, ಭಾರತದ ಹಲವು ನದಿಗಳ ನೀರನ್ನು ಪಾಕಿಸ್ತಾನ ಬಳಸುತ್ತಿದೆ. ಈ ಹಿಂದಿನ ಆಡಳಿತದಲ್ಲಿ ತೋರಿದ ನಿರ್ಲಕ್ಷ್ಯ ಮತ್ತು ಪಾಕಿಸ್ತಾನ ಜತೆಗಿನ ಸಂಬಂಧ ದೃಷ್ಟಿಯಿಂದಾಗಿ ಒಪ್ಪಂದದ ಅನ್ವಯ ದೊರೆತ ನೀರನ್ನು ಭಾರತ ಬಳಸುತ್ತಿರಲಿಲ್ಲ. ಆದರೆ, ಈಗ ನ್ಯಾಯಯುತವಾಗಿ ನಮಗೆ ದೊರೆತ ನೀರನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ ಭಾರತವು ಯಶಸ್ವಿಯಾಗಿದೆ. ಆ ಮೂಲಕ, ಪಾಕಿಸ್ತಾನಕ್ಕೆ ಸ್ಪಷ್ಟ ಎಚ್ಚರಿಕೆಯನ್ನೂ ರವಾನಿಸಿದೆ. ನೆರೆಯ ರಾಷ್ಟ್ರಕ್ಕೆ ಯಾವೆಲ್ಲ ಹಂತದಲ್ಲಿ, ಯಾವೆಲ್ಲ ವಲಯದಲ್ಲಿ ಪೆಟ್ಟು ನೀಡಲು ಸಾಧ್ಯವೋ ಅಲ್ಲೆಲ್ಲ ಭಾರತವು ಯಶಸ್ಸು ಸಾಧಿಸುತ್ತಿದೆ. ಇದು ಭಾರತೀಯರಿಗೆ ಹೆಮ್ಮೆ ವಿಷಯವಾಗಿದೆ.

ಭಾರತ ಮತ್ತು ಪಾಕಿಸ್ತಾನಗಳೆರಡೂ ಏಕಕಾಲಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡು, 75 ವಸಂತಗಳನ್ನು ಕಂಡಿವೆ. ಭಾರತವು ಈಗ ಜಾಗತಿಕ ಮಟ್ಟದಲ್ಲಿ ಯಾವ ಸ್ಥಾನದಲ್ಲಿದೆ ಮತ್ತು ಪಾಕಿಸ್ತಾನ ಯಾವ ಸ್ಥಾನದಲಿಲ್ಲ ಎಂದು ನೋಡಿದರೆ, ಉಭಯ ರಾಷ್ಟ್ರಗಳ ಮಧ್ಯೆ ಅಜಗಜಾಂತರವಿದೆ. ಯಾವ ವಿಷಯದಲ್ಲೂ, ಯಾವ ಕ್ಷೇತ್ರದಲ್ಲೂ ಇಂದು ಪಾಕಿಸ್ತಾನವು ಭಾರತದ ಸನಿಹದಲ್ಲೂ ಇಲ್ಲ. ಪ್ರಗತಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೀತಿ-ವಿಶ್ವಾಸಗಳಿಂದ ಮುನ್ನಡೆದ ಪರಿಣಾಮ ಇಂದು ಭಾರತವು ಜಗತ್ತಿನ ಅಗ್ರಮಾನ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಆರ್ಥಿಕವಾಗಿ ಐದನೇ ಅತಿದೊಡ್ಡ ರಾಷ್ಟ್ರವಾಗಿ ಉದಯಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ಇಂದು ಭಾರತೀಯರ ಪಾರುಪತ್ಯವಿದೆ. ಆದರೆ, ಈ ವಿಷಯದಲ್ಲಿ ಪಾಕಿಸ್ತಾನವು ಬಹಳ ಹಿಂದಿದೆ.

ದ್ವೇಷವನ್ನು ತುಂಬಿಕೊಂಡು, ಧಾರ್ಮಿಕ ಸಂಕುಚಿತವನ್ನೇ ಮುಂದೆ ಮಾಡಿಕೊಂಡ ಬಂದ ಪಾಕಿಸ್ತಾನವು ಆರ್ಥಿಕ ಸಂಕಟದ ಸ್ಥಿತಿಯಲ್ಲಿದೆ. ಅಲ್ಲಿಯ ಜನರ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಹೊಟ್ಟಿಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ, ಹಸಿದ ತನ್ನ ಜನರ ಹೊಟ್ಟೆಯನ್ನು ತುಂಬಿಸುವ ಬದಲು, ಭಾರತದ ಜತೆಗೆ ಶಸ್ತ್ರಾಸ್ತ್ರ ಪೈಪೋಟಿಗೆ ಇಳಿದು ಪಾಕಿಸ್ತಾನ ಪಾತಾಳಕ್ಕೆ ಕುಸಿದಿದೆ. ಭಾರತದ ವಿರುದ್ಧ ಉಗ್ರರಿಗೆ ನೆಲೆ ಒದಗಿಸಿ, ಈಗ ಅದರ ದುಷ್ಪರಿಣಾಮವನ್ನು ಎದುರಿಸುತ್ತಿದೆ. ಸ್ನೇಹಿತರನ್ನು ಬದಲಿಸಬಹುದು ಹೊರತ ನೆರೆ ಹೊರೆಯವರೆನ್ನಲ್ಲ ಎಂಬ ಮಾತಿನಂತೆ ಪಾಕಿಸ್ತಾನವು ಭಾರತದ ಜತೆಗೆ ಸ್ನೇಹದಿಂದಲೇ ವರ್ತಿಸಿದ್ದರೆ, ನದಿ ನೀರು ಹಂಚಿಕೆ, ಕಾಶ್ಮೀರ ವಿಷಯ ಸೇರಿದಂತೆ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತಿದ್ದವು. ಆದರೆ, ಪಾಕಿಸ್ತಾನ ಆರಿಸಿಕೊಂಡ ಹಾದಿಯು ಭಾರತದ ಹಾದಿಗಿಂತಲೂ ಭಿನ್ನ ಮತ್ತು ವಿಧ್ವಂಸಕಕಾರಿಯಾಗಿತ್ತು. ಆದರೆ, ಭಾರತ ಮಾತ್ರ ಪ್ರಜಾಸತ್ತಾತ್ಮಕ ಹಾದಿಯಲ್ಲಿ ನಡೆದ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಈಗ ಯಶಸ್ವಿಯಾಗುತ್ತಿದೆ. ತನ್ನ ಹಕ್ಕುಗಳನ್ನು ಯಾರ ಮುಲಾಜಿಲ್ಲದೇ ಪಡೆದುಕೊಳ್ಳುತ್ತಿದೆ. ಇದಕ್ಕೆ ರಾವಿ ನದಿಗೆ ಕಟ್ಟಲಾದ ಅಣೆಕಟ್ಟೆ ಹೊಸ ಸಾಕ್ಷಿಯಾಗಿದೆ. ಪಾಕಿಸ್ತಾನವು ಇನ್ನಾದರೂ ಭಾರತದ ಶಕ್ತಿಯನ್ನು ಅರಿತಕೊಂಡು ಮುನ್ನಡೆಯಲಿ. ಇಲ್ಲದಿದ್ದರೆ, ಅದಕ್ಕೆ ಎಲ್ಲ ನಿಟ್ಟಿನಿಂದಲೂ ಸೋಲೇ ಸಿಗಲಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೆಂಗಳೂರಿನ ಜಲ ದಾಹ ನೀಗಿಸಿ

Exit mobile version