ವಿಸ್ತಾರ ಸಂಪಾದಕೀಯ: ದೇಶದಲ್ಲಿ ಮೂರು ಸೆಮಿಕಂಡಕ್ಟರ್ (Semiconductor) ಉತ್ಪಾದನಾ ಘಟಕಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM narendra modi) ಶಂಕುಸ್ಥಾಪನೆ ಮಾಡಿದ್ದಾರೆ. ಗುಜರಾತ್‌ನಲ್ಲಿ ಎರಡು ಮತ್ತು ಅಸ್ಸಾಂನಲ್ಲಿ ಒಂದು ಹೊಸ ಸೆಮಿಕಂಡಕ್ಟರ್ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು. ₹1.25 ಲಕ್ಷ ಕೋಟಿ ಮೌಲ್ಯದ ಈ ಯೋಜನೆಗಳು ಸೆಮಿಕಂಡಕ್ಟರ್ ಉತ್ಪಾದನೆಗೆ ಜಾಗತಿಕ ಕೇಂದ್ರವಾಗುವತ್ತ ಭಾರತದ ನಿರ್ಣಾಯಕ ಹೆಜ್ಜೆಯಾಗಿದೆ. ಟಾಟಾ ಗ್ರೂಪ್ ಈ ಎರಡು ಉದ್ಯಮಗಳನ್ನು ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಭಾರತ ಸೆಮಿಕಂಡಕ್ಟರ್ (semiconductor) ಉತ್ಪಾದನೆಯ ಜಾಗತಿಕ ಕೇಂದ್ರವಾಗಲಿದೆ ಎಂದು ಪ್ರಧಾನಿ ಭವಿಷ್ಯ ನುಡಿದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ತಲೆದೋರಿತ್ತು. ಕಚ್ಚಾವಸ್ತುಗಳ ಪೂರೈಕೆ ಕೊರತೆ ಇದಕ್ಕೆ ಕಾರಣವಾಗಿತ್ತು. ಉತ್ಪಾದನೆ, ವಿಶ್ವಾಸಾರ್ಹ ಮತ್ತು ನಿರಂತರ ಪೂರೈಕೆ ಸರಪಳಿಯನ್ನು ಕಾಯ್ದುಕೊಂಡರೆ ಭಾರತ ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದಾಗಿದೆ.
ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ಇನ್ನೂ ಆರಂಭಿಕ ಹಂತದಲ್ಲಿದೆ. ವಿವಿಧ ಸ್ಥಳೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ವಲಯದಲ್ಲಿ ಭಾರತದ ವಿಶಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ಉದ್ದೇಶಿಸಿವೆ. ಸಾಫ್ಟ್‌ವೇರ್ ಹಾಗೂ ಇಂಜಿನಿಯರಿಂಗ್ ವಲಯದಲ್ಲಿ ಭಾರತದ ಪ್ರತಿಭೆಗಳು ಸಾಧಿಸಿರುವ ಎತ್ತರದ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಅದನ್ನು ನಮ್ಮ ದೇಶದಲ್ಲಿಯೇ, ʼಮೇಕ್ ಇನ್ ಇಂಡಿಯಾʼ ಸ್ವರೂಪದಲ್ಲಿ ಬಳಸಿಕೊಂಡು ಚಿಪ್ ಉತ್ಪಾದನೆ ಉದ್ಯಮವನ್ನು ಗರಿಷ್ಠ ಮಟ್ಟಕ್ಕೆ ಮುಟ್ಟಿಸಬಹುದಾಗಿದೆ. “ಮೇಡ್ ಇನ್ ಇಂಡಿಯಾ ಚಿಪ್, ಡಿಸೈನ್ಡ್ ಇನ್ ಇಂಡಿಯಾ ಚಿಪ್, ಭಾರತವನ್ನು ಸ್ವಾವಲಂಬನೆ ಮತ್ತು ಆಧುನಿಕತೆಯತ್ತ ಕೊಂಡೊಯ್ಯಲಿದೆ” ಎಂದು ಪ್ರಧಾನಿ ನುಡಿದಿರುವುದು ಇದೇ ಕಾರಣದಿಂದ. ನಾವು ಈಗಾಗಲೇ ಬಾಹ್ಯಾಕಾಶ, ಪರಮಾಣು ಮತ್ತು ಡಿಜಿಟಲ್ ಶಕ್ತಿಯಾಗಿ ಹೊಮ್ಮಿದ್ದೇವೆ. ಸೆಮಿಕಂಡಕ್ಟರ್ ಉತ್ಪನ್ನಗಳ ವಾಣಿಜ್ಯ ಉತ್ಪಾದನೆಯೂ ಈ ಹಂತವನ್ನು ಮುಟ್ಟಿ ಭಾರತವು ಈ ವಲಯದಲ್ಲಿ ಜಾಗತಿಕ ಶಕ್ತಿಯಾಗುವ ದಿನ ದೂರವಿಲ್ಲ.
ಇಂದು ಚಿಪ್ ಅಥವಾ ಸೆಮಿಕಂಡಕ್ಟರ್ ಇಲ್ಲದೇ ಯಾವುದೇ ಎಲೆಕ್ಟ್ರಾನಿಕ್ಸ್ ಸಾಧನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಭಾಗದಲ್ಲಿ ಹೆಚ್ಚಿನ ಸಾಮರ್ಥ್ಯ ಅಭಿವೃದ್ಧಿ ಮಾಡಿಕೊಳ್ಳದೇ ಹೋದರೆ ಕಷ್ಟವಿದೆ. ಈಗ ಇದರ ಉತ್ಪಾದನೆ ಕೆಲವೇ ದೇಶಗಳ ಬಳಿ ಇದೆ. ಚೀನಾದ ಪೂರ್ವ ಸಮುದ್ರದ ಭಾಗದಲ್ಲಿರುವ ತೈವಾನ್ ದ್ವೀಪರಾಷ್ಟ್ರ ಸೆಮಿಕಂಡಕ್ಟರ್ ವಿಭಾಗದಲ್ಲಿ ಜಾಗತಿಕ ಮಾರುಕಟ್ಟೆಯ ಶೇಕಡ 56.4 ಪಾಲನ್ನು ಇದು ಹೊಂದಿದೆ. ಅದರಲ್ಲೂ ಮುಂದುವರಿದ ತಂತ್ರಜ್ಞಾನಗಳಿಗೆ ಬೇಕಾದ ಚಿಪ್ ಶೇಕಡ 90ರಷ್ಟು ಇಲ್ಲೇ ಉತ್ಪಾದನೆಯಾಗುತ್ತಿದೆ. ತಂತ್ರಜ್ಞಾನ ದಿಗ್ಗಜ ಕಂಪನಿಗಳು ಅಮೆರಿಕದಲ್ಲೇ ಬೀಡುಬಿಟ್ಟಿದ್ದರೂ ಚಿಪ್’ಗಾಗಿ ತೈವಾನ್ ಮೇಲೆಯೇ ಅವಲಂಬನೆ. ಆದರೆ ಈ ತೈವಾನ್ ಅನ್ನು ಚೀನಾ ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿದೆ. ಇದೀಗ ಧೊಲೆರಾದಲ್ಲಿ ಟಾಟಾ ಸಮೂಹದ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತಲೆಎತ್ತಲಿರುವುದು ಇದೇ ತೈವಾನಿನ ‘ಪವರ್’ ಚಿಪ್ ಸೆಮಿಕಂಡಕ್ಟರ್ ಮನುಫಾಕ್ಚರಿಂಗ್ ಕಾರ್ಪೋರೇಷನ್’ ಸಹಭಾಗಿತ್ವದಲ್ಲಿ. ಸೆಮಿಕಂಡಕ್ಟರ್ ವಿಭಾಗದಲ್ಲಿ ತಂತ್ರಜ್ಞಾನ ಪರಿಣತರಾದ ತೈವಾನಿಗರು ಭಾರತದ ಶಕ್ತಿಶಾಲಿ ಕಂಪನಿಯೊಂದರ ಜತೆ ಕೈಜೋಡಿಸಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ತಂತ್ರಜ್ಞರ ವಿಷಯದಲ್ಲಿ ಭಾರತ ಎಂದೂ ಹಿಂದೆ ಬಿದ್ದಿಲ್ಲ. ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಎಂಜಿನಿಯರ್‌ಗಳನ್ನು ತಯಾರು ಮಾಡುವ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 6 ಲಕ್ಷ ಎಲೆಕ್ಟ್ರಾನಿಕ್ಸ್ ಎಂಜಿನಿಯರುಗಳು ಹೊರಬೀಳುತ್ತಾರೆ. ಚಿಪ್ ಉದ್ಯಮದ ಉಗಮ ಎಂದರೆ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಉದ್ಯಮ. ಸಾಕಷ್ಟು ಮಾನವ ಸಂಪನ್ಮೂಲ ಹೊಂದಿರುವ ಭಾರತದ ವಿದ್ಯಾವಂತ ಯುವಕರಿಗೆ ಇದರಿಂದ ವರವೇ ಆಗಲಿದೆ. ಒಂದೆಡೆ ಚಿಪ್ ಉದ್ಯಮದಲ್ಲಿ ಕೆಲವೇ ದೇಶಗಳ ಏಕಸ್ವಾಮ್ಯವನ್ನು ಮುರಿದು, ಚಿಪ್ ರಫ್ತನ್ನೂ ಸಾಧಿಸಿಕೊಂಡರೆ ಭಾರತವೂ ತಂತ್ರಜ್ಞಾನ ದೈತ್ಯ ಎನ್ನಿಸಿಕೊಳ್ಳುತ್ತದೆ. ಜೊತೆಗೆ ಉದ್ಯಗಸೃಷ್ಟಿಯೂ ಸಾಧ್ಯ. ಇದರಿಂದ ಜಿಡಿಪಿಯೂ ದೊಡ್ಡ ಬೆಳವಣಿಗೆ ಕಾಣಲಿದೆ. ಅಂಥ ದಿನಗಳು ಬರಲಿ ಎಂದು ಆಶಿಸೋಣ.
ಇದನ್ನೂ ಓದಿ: Semiconductor : ಧೊಲೆರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ, ಜಾಗತಿಕ ಭವಿತವ್ಯದಲ್ಲಿ ಏನಿದರ ಪ್ರಾಮುಖ್ಯ?