Site icon Vistara News

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Pakistan

Vistara Editorial: Let Pakistan admit its mistakes and correct them

ಕೆಲವು ದಿನಗಳ ಹಿಂದೆ ಪಾಕ್‌(Pakistan) ಸಂಸತ್‌ನಲ್ಲೇ ಅಲ್ಲಿನ ವಿಪಕ್ಷ ನಾಯಕನೇ ಭಾರತವನ್ನು ಹಾಡಿ ಹೊಗಳಿರುವ ವಿಡಿಯೋವೊಂದು ವೈರಲ್‌(Viral Video) ಆಗಿತ್ತು. ಇದೀಗ ಮತ್ತೊಬ್ಬ ಸಂಸದ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌ ಭಾರತ ಮತ್ತು ಪಾಕಿಸ್ತಾನವನ್ನು ಹೋಲಿಕೆ ಮಾಡಿ ಮಾತನಾಡಿದ್ದು, ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನದ ಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ದಾರೆ. ಇದೀಗ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ಪ್ರಪಂಚದಲ್ಲೇ ಭಾರತ ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿದೆ. ನಾವು ಮಾತ್ರ ಹಣಕಾಸಿನ ಸಹಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿಪಕ್ಷ ನಾಯಕ ಮೌಲಾನ ಫಜ್ಲೂರ್‌ ರೆಹಮಾನ್‌ ಹೇಳಿದ್ದರು. ಅವರು ಪಾಕಿಸ್ತಾನ ಸಂಸತ್‌ನಲ್ಲಿ ಸರ್ಕಾರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್‌ ಪವರ್‌ಫುಲ್‌ ರಾಷ್ಟ್ರವಾಗಿ ಬೆಳೆಯುತ್ತಿದೆ ಪಾಕಿಸ್ತಾನ ಮಾತ್ರ ದಿವಾಳಿತನದತ್ತ ಸಾಗುತ್ತಿದೆ. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಇಂದು ಭಾರತದ ಸ್ಥಿತಿ ಎಲ್ಲಿದೆ ಹಾಗೂ ನಮ್ಮ ಸ್ಥಿತಿ ಎಲ್ಲಿದೆ? ಇಷ್ಟಕ್ಕೆಲ್ಲಾ ಯಾರು ಹೊಣೆ ಎಂದು ಕಟುವಾಗಿ ಪ್ರಶ್ನಿಸಿದ್ದರು.

ಪಾಕಿಸ್ತಾನದ ವೈಫಲ್ಯಗಳ ಪಟ್ಟಿ ಮಾಡಹೊರಟರೆ ಮುಗಿಯುವುದೇ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಧುನಿಕ ಶಿಕ್ಷಣ ಕಲಿಸುವ ಶಾಲೆಗಳಿಲ್ಲ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅಲ್ಲಿ ಒಟ್ಟು 2.62 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮತಾಂಧತೆ ಕಲಿಸುವ ಮದ್ರಸ ಶಿಕ್ಷಣ ಮಾತ್ರ ವ್ಯಾಪಕವಾಗಿದೆ. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ಪಾಕ್‌ನ ವಿದೇಶಿ ವಿನಿಮಯ ಮೀಸಲು ನಿಧಿ ಆಮದನ್ನು ಪೂರೈಸಲು ಸಾಕಾಗುತ್ತಿಲ್ಲ.

ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಈಗಾಗಲೇ ಐಎಂಎಫ್‌ 3 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂದು ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ. ಇದಕ್ಕಾಗಿಯೇ, ಆಡಳಿತ ಕಾರ್ಯತಂತ್ರದ ಘಟಕಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಐಎಂಎಫ್‌ ಪಾಕಿಸ್ತಾನಕ್ಕೆ ಸೂಚಿದ ಶಿಫಾರಸ್ಸಿನ ಪಟ್ಟಿಯಲ್ಲಿ ನಷ್ಟದಲ್ಲಿರುವ ಸರ್ಕಾರಿ ಉದ್ಯಮಗಳ ಖಾಸಗೀಕರಣವೂ ಸೇರಿದೆ.

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಕಾಶ್ಮೀರ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸುತ್ತ ಭಾರತಕ್ಕೆ ಮುಜುಗರ ಸೃಷ್ಟಿಸಲು ವಿಫಲ ಪ್ರಯತ್ನ ಮಾಡುತ್ತಿರುವ ಪಾಕ್‌ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಗಮನಿಸಲಿ. ಅಲ್ಲಿನ ರಾಜಕೀಯ ನಾಯಕರೇ ತಮ್ಮ ಸ್ಥಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಾಗ, ತಿದ್ದಿಕೊಳ್ಳಲು ಸರಿಯಾದ ಕಾಲ ಬಂದಿದೆ ಎಂದರ್ಥ.

ಇದನ್ನೂ ಓದಿ: CAA: ಪಾಕಿಸ್ತಾನದಿಂದ ಬಂದ ಹಿಂದುಗಳಿಗೆ ಸಿಎಎ ಅನ್ವಯ ಭಾರತದ ಪೌರತ್ವ; ದೆಹಲಿಯಲ್ಲಿ ಸಂಭ್ರಮ, Video ಇಲ್ಲಿದೆ

Exit mobile version