ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿರುವ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 20 ಗ್ರೇಸ್ ಮಾರ್ಕ್ಸ್ (SSLC Grace Marks) ಕೊಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರನ್ನು ಕೇಳಿ ಹೆಚ್ಚುವರಿ ಅಂಕವನ್ನು ಕೊಟ್ಟಿರಿ? ಹೀಗೆ ಅಂಕ ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣ ಗುಣಮಟ್ಟ ಕುಸಿದಿದ್ದು ಏಕೆ? ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ? ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧಗಳು ಕೇಳಿ ಬರುತ್ತಿವೆ. ಗ್ರೇಸ್ ಮಾರ್ಕ್ಸ್ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಣ ಸಚಿವರು ಹೇಳುವ ಪ್ರಕಾರ, ಎಸ್‌ಎಸ್‌ಎಲ್‌ಸಿಯಲ್ಲಿ ಈ ಹಿಂದೆಯೂ ಶೇಕಡಾ 5ರಷ್ಟು ಕೃಪಾಂಕಗಳು ಇತ್ತು. ಕೋವಿಡ್ ವೇಳೆ ಅದನ್ನು ಶೇಕಡಾ 10ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕಾಗಿ ಶೇಕಡಾ 20ರಷ್ಟು ಗ್ರೇಸ್ ಮಾರ್ಕ್ಸ್ ಕೊಡಲಾಗಿದೆ. ಮುಂದಿನ ವರ್ಷದಿಂದ ಇದು ಮುಂದುವರಿಯುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಕೃಪಾಂಕಗಳನ್ನು ಯಾಕೆ ಕೊಡಬೇಕಾಯಿತು ಎಂದು ನೋಡೋಣ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶ ಕುಸಿತ (SSLC Result 2024) ಕಂಡಿದೆ. 2022-23ರಲ್ಲಿ 83.89% ಇತ್ತು. ಈ ಬಾರಿ ಗಾಬರಿಗೊಳಿಸುವ ಪ್ರಮಾಣದಲ್ಲಿ, ಅಂದರೆ ಶೇ.30ರಷ್ಟು ಫಲಿತಾಂಶ ಕುಸಿದಿದೆ. ಅಂದರೆ ನಿಜವಾಗಿ ಬಂದಿರುವುದು ಶೇ. 53 ಫಲಿತಾಂಶ ಮಾತ್ರ. ಇದರಿಂದ ಗಾಬರಿಯಾದ ಶಿಕ್ಷಣ ಇಲಾಖೆ, ಮುಖಂಭಂಗ ತಪ್ಪಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಅನ್ನು ಕೊಟ್ಟಿದೆ. ಈ ವರೆಗೆ ಇದ್ದ ಪಾಸಿಂಗ್ ಮಾರ್ಕ್ಸ್ ಶೇಕಡಾ 35 ಅನ್ನು ಶೇಕಡಾ 25ಕ್ಕೆ ಇಳಿಸಿದೆ. ಅಂದರೆ 35 ಅಂಕಗಳ ಬದಲಿಗೆ 25 ಅಂಕವನ್ನು ಪಡೆದ ವಿದ್ಯಾರ್ಥಿಯೂ ಪಾಸ್ ಎಂದು ಮಾಡಲಾಗಿದೆ. ಅಲ್ಲದೆ, ಕೃಪಾಂಕದ ಪ್ರಮಾಣವನ್ನು ಶೇ. 10ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಈ ಎರಡೂ ಕ್ರಮದಿಂದಾಗಿ ಒಟ್ಟಾರೆ 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇಲ್ಲವಾದರೆ ಇಷ್ಟು ಮಕ್ಕಳು ನಪಾಸಾಗುತ್ತಿದ್ದರು. ಇಷ್ಟು ಕೃಪಾಂಕ ನೀಡಿದರೂ ದೊರೆತ ಫಲಿತಾಂಶ ಮಾತ್ರ 73.40% ಅಷ್ಟೇ. ಅಂದರೆ ಕಳೆದ ಸಲಕ್ಕಿಂತ ಶೇಕಡಾ 10.49ರಷ್ಟು ಕಡಿಮೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದರೂ ಕಡಿಮೆ ಫಲಿತಾಂಶ ದಾಖಲಾಗಿದೆ.
ಇದೇಕೆ ಹೀಗಾಯಿತು? ಇದು ವೆಬ್ ಕಾಸ್ಟಿಂಗ್‌ನಿಂದ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಹೀಗಾಗಿ ಮೇಲ್ವಿಚಾರಣೆ ಬಿಗಿಯಾಗಿದೆ. ಅಂದರೆ ನಕಲು ಮಾಡಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಹೇಳಬಹುದು. ಅಂದರೆ ಪರೋಕ್ಷವಾಗಿ, ನಕಲು ಮಾಡುವುದಕ್ಕೆ ಅವಕಾಶ ಇದ್ದುದರಿಂದಲೇ ಮೊದಲು ಇಷ್ಟೊಂದು ಫಲಿತಾಂಶ ಬರುತ್ತಿತ್ತು ಎಂದು ಒಪ್ಪಿಕೊಂಡಂತಾಯಿತಲ್ಲವೆ? ಈ ಸಲದ ಫಲಿತಾಂಶ ಕಡಿಮೆ ಎನ್ನುವುದಕ್ಕಿಂತಲೂ, ನಕಲು ಮಾಡಿಯೇ ನಾವು ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದೆವು ಎನ್ನುವ ಕಟುವಾಸ್ತವ ನಮ್ಮನ್ನು ಹೆಚ್ಚು ಕುಟುಕಬೇಕು.
ಸರಿ, ಈಗ ಪರೀಕ್ಷಾ ಪದ್ಧತಿ ಬಿಗಿಯಾದಂತಾಯಿತು. ಆದರೆ ಕೃಪಾಂಕಗಳನ್ನು ನೀಡಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದು ಇಲಾಖೆ ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಕೃಪಾಂಕ ಪಡೆದು ಪಿಯುಸಿಗೋ ಇತರ ಕೋರ್ಸ್‌ಗಳಿಗೋ ಹೋದ ವಿದ್ಯಾರ್ಥಿ ಅಲ್ಲಿ ಕಂಗಾಲಾಗುತ್ತಾನೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೇ ತೊಂದರೆ. ಇಲ್ಲಿ ಕೃಪಾಂಕ ಪಡೆದವರು ಅಲ್ಲೂ ಅದನ್ನೇ ನಿರೀಕ್ಷಿಸಿದರೆ ಆಶ್ಚರ್ಯವಿಲ್ಲ. ಆದರೆ ಅಲ್ಲಿ ಹಾಗೆ ನಡೆಯುವುದಿಲ್ಲ. ಜೀವನದಲ್ಲಿಯೂ ಯಾರೂ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ. ಪ್ರತಿಭೆಯಿಂದಲೇ ಮೇಲೆ ಬರಬೇಕಾಗುತ್ತದೆ. ಕೃಪಾಂಕಗಳ ಬದಲು ಸರ್ಕಾರ ಗುಣಮಟ್ಟದ ಬೋಧನೆ, ಅರ್ಹ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್ ಕಲಿಕೆ, ಸ್ಪರ್ಧಾತ್ಮಕ ಶಿಕ್ಷಣದ ಪರಿಚಯ, ಗಟ್ಟಿಮುಟ್ಟಾದ ಶಾಲೆ ಕಟ್ಟಡ ತರಗತಿಗಳು, ಪ್ರಯೋಗಾಲಯ ಹಾಗೂ ಲ್ಯಾಬ್‌ಗಳು, ಅನ್ಯ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ- ಇವುಗಳನ್ನೆಲ್ಲ ಕಲ್ಪಿಸಬೇಕು. ಆಗ ಉತ್ತಮ ಫಲಿತಾಂಶ ಕೊಡಿ ಎಂದು ಕಟ್ಟುನಿಟ್ಟು ಮಾಡುವುದರಲ್ಲಿ ಅರ್ಥವಿದೆ. ಶಿಕ್ಷಕರಿಂದ ಎಲ್ಲ ಸಾಧ್ಯತೆಗಳನ್ನೂ ಕಿತ್ತುಕೊಂಡು ಒಳ್ಳೆಯ ಫಲಿತಾಂಶ ನೀಡಿ ಎಂದರೆ ಹೇಗೆ ಸಾಧ್ಯ?
ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!