ಸಿಆರ್‌ಪಿಎಫ್(CRPF), ಬಿಎಸ್‌ಎಫ್ (BSF) ಮತ್ತು ಸಿಐಎಸ್‌ಎಫ್ (CISF) ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಫೆ.20ರಿಂದ ನಡೆಯಲಿದ್ದು(Recruitment Examination), ಇದೇ ಮೊದಲ ಬಾರಿಗೆ ಕನ್ನಡ (Kannada) ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ಕೇಂದ್ರ ಗೃಹ ಸಚಿವಾಲಯವು (Central Government) ಕಲ್ಪಿಸಿದೆ. ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಗಳ ನೇಮಕಾತಿಯನ್ನು ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೇ ಪ್ರಾದೇಶಿಕಗಳಲ್ಲೂ ನಡೆಸಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಸರ್ಕಾರ ನಿರ್ಧರಿಸಿತ್ತು ಮತ್ತು ಅದನ್ನೀಗ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹವಾಗಿದೆ. ಕನ್ನಡದ ಜತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲೂ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ(Vistara Editorial).
ದೇಶಾದ್ಯಂತ 128 ನಗರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ಮತ್ತು ಕೇಂದ್ರ ಸಶಸ್ತ್ರ ಹಾಗೂ ಮೀಸಲು ಪಡೆಯಲ್ಲಿ ಸ್ಥಳೀಯ ಯುವಕರು ಪಾಲ್ಗೊಳ್ಳುವುದನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರ ಸರ್ಕಾರವು ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಪ್ರಾದೇಶಿಕ ಭಾಷೆಗಳ ಮೇಲೆ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳ ಮೇಲೆ ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಹೇರುತ್ತಿದೆ ಎಂಬ ಆರೋಪವಿದೆ. ಆದರೆ, ಈ ಆರೋಪವನ್ನು ಹೋಗಲಾಡಿಸುವ ಪ್ರಯತ್ನಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಂಚೂರು ಬೆಳವಣಿಗೆಯನ್ನು ಕಾಣುತ್ತಿದ್ದೇವೆ, ಆ ಮೂಲಕ ಪ್ರಾದೇಶಿಕ ಭಾಷೆಗಳಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತಿರುವುದು ಅಭಿನಂದನಾರ್ಹವಾಗಿದೆ.
ಇಂಥ ವಿಕೇಂದ್ರೀಕೃತ ಕ್ರಮಗಳಿಂದಲೇ ಒಕ್ಕೂಟ ವ್ಯವಸ್ಥೆಯೊಂದು ಗಟ್ಟಿಯಾಗುತ್ತದೆ. ಹಿಂದಿ ಅಥವಾ ಇಂಗ್ಲಿಷ್ ಎಂಬ ಎರಡೇ ಭಾಷೆಗಳಲ್ಲಿ ಆಡಳಿತ ವ್ಯವಸ್ಥೆ ಅಥವಾ ನೇಮಕಾತಿ ಪರೀಕ್ಷಾ ವ್ಯವಸ್ಥೆಗಳನ್ನು ಕೇಂದ್ರೀಕರಿಸಿದಾಗ ಅದು ಕೆಲವೇ ಕೆಲವರಿಗೆ ಮಾತ್ರ ನೆರವಾಗುತ್ತದೆ. ಹೇಗೆ ಮೀಸಲಾತಿಯು ಸಮಾಜದ ತಳಮಟ್ಟದಲ್ಲಿ ಸಾಮಾಜಿಕ ನ್ಯಾಯವನ್ನು ಹಬ್ಬಿಸಲು ನೆರವಾಯಿತೋ, ಹಾಗೆಯೇ ಸ್ಥಳೀಯ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ಎಂಬುದು ಕೂಡ ನೆರವಾಗಲಿದೆ. ಹಾಗಾಗಿ, ಈ ಕೇಂದ್ರ ಸರ್ಕಾರದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುತ್ತಿರುವುದರ ಸಕಾರಾತ್ಮಕ ಪರಿಣಾಮಗಳು ಅನುಭವಕ್ಕೆ ಬರಲಿವೆ.
ಸೇನಾ ಪರೀಕ್ಷೆಗಳಿಗೆ ದೈಹಿಕ ಪರೀಕ್ಷೆಯೇ ಪ್ರಧಾನ ಎಂಬುದು ನಿಜವಾದರೂ, ಇತ್ತೀಚೆಗೆ ಲಿಖಿತ ಪರೀಕ್ಷೆಗಳು ಕೂಡ ಅಭ್ಯರ್ಥಿಯ ಗುಣಮಟ್ಟವನ್ನು ಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರೀಯ ಸಶಸ್ತ್ರ ಹಾಗೂ ಮೀಸಲು ಪೊಲೀಸ್ ಪಡೆಗಳು ಹಿಂದಿ ಬಲ್ಲ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತದೆ ಎಂದೇನೂ ಇಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಕಾರ್ಯಾಚರಿಸುತ್ತವೆ. ಸ್ಥಳೀಯ ಭಾಷೆಗಳನ್ನು ಎಲ್ಲರೂ ಕಲಿಯುವುದು ಅಗತ್ಯವಾಗುತ್ತದೆ. ಆದ್ದರಿಂದ ಹಿಂದಿ ವಲಯದ ರಾಜ್ಯಗಳ ಸೈನಿಕರು ಕೂಡ ದಕ್ಷಿಣ ರಾಜ್ಯಗಳಲ್ಲಿ ನೇಮಕವಾದರೆ ಅಲ್ಲಿನ ಭಾಷೆಗಳನ್ನು ಕಲಿಯುವುದು ಅನಿವಾರ್ಯ. ಮಲ್ಟಿನ್ಯಾಷನಲ್ ಕಂಪನಿಗಳು ಕೂಡ ಇಂದು ಸ್ಥಳೀಯ ಭಾಷಿಕರನ್ನು ಒಲಿಸಿಕೊಳ್ಳಲು ಆಯಾ ಭಾಷೆಯಲ್ಲಿ ಹೆಚ್ಚಿನ ಆದ್ಯತೆಯ ವಹಿವಾಟನ್ನು ನಡೆಸುತ್ತಿವೆ. ಹೀಗೆ ಪ್ರಾದೇಶಿಕ ಭಾಷೆಗಳು ಕೂಡ ಇಂದು ವಿಶ್ವಾತ್ಮಕವಾಗುತ್ತಿವೆ.
ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಸರಳ ಎನಿಸಿದರೂ, ಅದರ ಹಿಂದೆ ಸಾಕಷ್ಟು ಹೋರಾಟಗಳಿವೆ. ದಶಕಗಳ ಬೇಡಿಕೆಯ ಫಲವಿದು. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರು. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ.
ಇಷ್ಟಾಗಿಯೂ ಇನ್ನೂ ಅನೇಕ ಕೇಂದ್ರ ಸರ್ಕಾರಿ ವಲಯಗಳಲ್ಲಿ ಹಿಂದಿಯೇ ಯಜಮಾನಿಕೆಯ ಸ್ಥಾನದಲ್ಲಿದೆ. ಬ್ಯಾಂಕಿಂಗ್ ಪರೀಕ್ಷೆಗಳು, ಸ್ಟಾಫ್ ಸೆಲೆಕ್ಷನ್ ಕಮಿಷನ್ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದರೆ, ಉತ್ತರ ಭಾರತದಲ್ಲಿ ದಕ್ಷಿಣ ಭಾರತೀಯರು ಹುಡುಕಿದರೂ ಕಾಣಸಿಗುವುದಿಲ್ಲ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚಲು ಇದು ಕಾರಣವಾಗಿದೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್ ವಲಯದಲ್ಲಿ ಕನ್ನಡಿಗರ ನೇಮಕದ ಪ್ರಮಾಣ ತೀರಾ ಕಡಿಮೆ. ಇನ್ನು ಯು ಪಿ ಎಸ್ ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ಲ್ಲಿಯೇ ಬರೆಯಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕೂಡ ಗಮನ ಹರಿಸಿ ಈ ತಾರತಮ್ಯವನ್ನು ಆದಷ್ಟು ಬೇಗ ಸರಿಪಡಿಸಬೇಕು.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಬಗೆಗಿನ ತಪ್ಪು ಕಲ್ಪನೆ ನಿವಾರಣೆ ಆಗಲಿ