Site icon Vistara News

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

Pakistan PM

Vistara Editorial: Pakistan Should Concentrate On It's Own Problem Instead Of Make Allegations On India

ಭಾರತದ ಆಂತರಿಕ ವಿಚಾರಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಗಾದೆ ತೆಗೆದ ಪಾಕಿಸ್ತಾನಕ್ಕೆ ಭಾರತ ಮತ್ತೆ ತಕ್ಕ ಮಾರುತ್ತರ ನೀಡಿದೆ. ಪಾಕಿಸ್ತಾನ ಎಲ್ಲ ಆಯಾಮಗಳಲ್ಲಿ ಅತ್ಯಂತ ಸಂಶಯಾತ್ಮಕ ಚಟುವಟಿಕೆ, ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ಗಳನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರತಿನಿಧಿ ಮನೀರ್‌ ಅಕ್ರಮ್‌, ಕಾಶ್ಮೀರ ವಿವಾದ, ಪೌರತ್ವ ತಿದ್ದುಪಡಿ ಕಾಯ್ದೆ(CAA) ಮತ್ತು ಅಯೋಧ್ಯೆಯ ರಾಮ ಮಂದಿರ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಗುರುತರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರುಚಿರಾ, ಪಾಕಿಸ್ತಾನ ಸದಾ ಕುಕೃತ್ಯಗಳ ಮೂಲಕವೇ ಕುಖ್ಯಾತಿಯನ್ನು ಪಡೆದಿದೆ ಎಂದು ತಿರುಗೇಟು ಕೊಟ್ಟರು. ಸವಾಲಿನ ಸ್ಥಿತಿಯಲ್ಲೂ ಭಾರತ ಶಾಂತಿ ಕಾಪಾಡಲು ಯತ್ನಿಸುತ್ತಿದೆ. ರಚನಾತ್ಮಕ ಮಾತುಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಪಾಕ್‌ ಹೇಳಿಕೆ ಅವರ ವಿನಾಶಕಾರಿ ಮನೋಭಾವವನ್ನು ತೋರಿಸುತ್ತದೆ. ರಾಜತಾಂತ್ರಿಕವಾಗಿ ವಿಷಯಗಳನ್ನು ಚರ್ಚಿಸುವುದಕ್ಕೆ ಭಾರತ ಯಾವಾಗಲೂ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಭಯೋತ್ಪಾದನೆ ಎಂಬುದು ಎಲ್ಲಾ ಧರ್ಮಗಳು ಪ್ರತಿಪಾದಿಸುವ ಶಾಂತಿ ಮತ್ತು ಸೌಹಾರ್ದತೆಗೆ ನೇರ ತದ್ವಿರುದ್ಧವಾದ ವಿಚಾರವಾಗಿದೆ. ಅದು ಒಳ್ಳೆಯ ವಿಚಾರಗಳಿಗೆ ಅಡ್ಡಿಯಾಗಿ ನಿಂತಿದ್ದು, ಹಗೆತನವನ್ನು ಹುಟ್ಟುಹಾಕುತ್ತದೆ ಮತ್ತು ವಿಶ್ವಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಆಧಾರವಾಗಿರುವ ಗೌರವ ಮತ್ತು ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯರು ಒಟ್ಟಾಗಿ ನಿಂತಿ ಪ್ರಪಂಚಾದ್ಯಂತ ಶಾಂತಿ ಸೌಹಾರ್ದತೆ ಕಾಪಾಡಲು ಪಣತೊಡಬೇಕಿದೆ. ಇಡೀ ಪ್ರಪಂಚವೇ ಒಂದು ಕುಟುಂಬ. ನನ್ನ ದೇಶ ಇದರಲ್ಲಿ ನಂಬಿಕೆಯನ್ನಿಟ್ಟುಕೊಂಡಿದೆ ಎಂದು ರುಚಿರಾ ಹೇಳಿದರು. ಧರ್ಮ ಅಥವಾ ನಂಬಿಕೆಯ ಆಧಾರದ ಮೇಲೆ ಹೆಚ್ಚುತ್ತಿರುವ ಅಸಹಿಷ್ಣುತೆ, ತಾರತಮ್ಯ ಮತ್ತು ಹಿಂಸಾಚಾರ ಪಾಕಿಸ್ತಾನದಲ್ಲೇ ಇದೀಗ ಹೆಚ್ಚು ಕಂಡುಬರುತ್ತಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಇನ್ನಿಲ್ಲದ ದೌರ್ಜನ್ಯ ನಡೆಯುತ್ತಿದೆ. ಅಸಹಾಯಕರಾಗಿ ಅವರು ಭಾರತದತ್ತ ರಕ್ಷಣೆಗಾಗಿ ನೋಡುತ್ತಿದ್ದಾರೆ. ಇಸ್ಲಾಂ ಧರ್ಮನಿಂದನೆಯ ಹೆಸರಿನಲ್ಲಿ ಅಲ್ಲಿನ ಹಿಂದೂಗಳನ್ನು ದಮನಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆ ಗಮನಿಸಬೇಕಿದೆ.

ಪಾಕಿಸ್ತಾನದ ಹುಳುಕುಗಳು ಲೋಕದ ಕಣ್ಣಿನ ಮುಂದೆ ಸಾಕಷ್ಟು ಸ್ಪಷ್ಟವಾಗಿಯೇ ಇವೆ. ಅದು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜಿಹಾದಿ ಉಗ್ರರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದನ್ನು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ನಿರ್ವಹಿಸುತ್ತದೆ. ಅಲ್ಲಿಂದ ಕಾಶ್ಮೀರಕ್ಕೆ ಅಕ್ರಮವಾಗಿ ನುಸುಳುವ ಈ ಉಗ್ರರು ಅಲ್ಲಿ ನರಮೇಧ ನಡೆಸುತ್ತಾರೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ದೀರ್ಘಾವಧಿಯ ಎನ್‌ಕೌಂಟರ್‌ಗಳು ಹಾಗೂ ಅಲ್ಲಿ ಹುತಾತ್ಮರಾದ ಭಾರತೀಯ ಯೋಧರನ್ನು ನೆನಪಿಸಿಕೊಳ್ಳಬಹುದು. ಹಿಂದೂ, ಕ್ರೈಸ್ತ, ಸಿಖ್‌ ಧರ್ಮದ ಮಹಿಳೆಯರ ಮೇಲೆ ಪಾಕ್‌ನಲ್ಲಿ ದೌರ್ಜನ್ಯ ಎಸಗಲಾಗುತ್ತಿದೆ. ಮಾನವ ಹಕ್ಕುಗಳು ಜಗತ್ತಿನಲ್ಲೇ ಕೆಟ್ಟದಾಗಿದ್ದರೆ, ಅದು ಪಾಕಿಸ್ತಾನದಲ್ಲಿ ಮಾತ್ರ. ಪ್ರತಿ ವರ್ಷ ಪಾಕಿಸ್ತಾನದಲ್ಲಿ ಒಂದು ಸಾವಿರ ಅಲ್ಪಸಂಖ್ಯಾತ ಮಹಿಳೆಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿ- 2024ರ ಪ್ರಕಾರ, ಕಳೆದ ವರ್ಷದಲ್ಲಿ ಪಾಕಿಸ್ತಾನ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇಲ್ಲಿ ಬೇರೆ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಉಗ್ರ ದಾಳಿ ಘಟನೆಗಳು ನಡೆದಿವೆ. 2023ರಲ್ಲಿ ಇಲ್ಲಿ 490 ದಾಳಿಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಸಾಬೀತಾದ ಸಂಗತಿ. ಮತಾಂಧರನ್ನು, ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿ, ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿ ಅದು ಸೃಷ್ಟಿಸಿದ ಅನಾಹುತ, ಮಾನವ ಹಕ್ಕು ಉಲ್ಲಂಘನೆ ಅಷ್ಟಿಷ್ಟಲ್ಲ. ಇಂಥ ದೇಶಕ್ಕೆ ಭಾರತಕ್ಕೆ ಉಪದೇಶ ಮಾಡುವ ನೈತಿಕ ನೆಲೆಯಿಲ್ಲ. ಕಾಶ್ಮೀರದ ಬಗೆಗೂ ಮಾತಾಡುವ ಹಕ್ಕು ಆ ದೇಶಕ್ಕೆ ಇಲ್ಲ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಮೂರು ವರ್ಷಗಳಾದವು. ಈ ಸಮಯದಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಅದಕ್ಕಾಗಿಯೇ ಆ ದೇಶ ಮೈಪರಚಿಕೊಳ್ಳುತ್ತಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ.

ಇದನ್ನೂ ಓದಿ: United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Exit mobile version