Site icon Vistara News

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

Electricity Bil

Vistara Editorial: Reduction in electricity price is a laudable move

ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ (Karnataka Electricity regulatory Commission) ವಿದ್ಯುತ್‌ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದೆ. ಬುಧವಾರ ಸಂಜೆ ವೇಳೆ ವಿದ್ಯುತ್‌ ದರ ಪರಿಷ್ಕರಣೆ ಘೋಷಣೆಯಾಗಿದೆ. ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ ಭಾರಿ ಸರ್‌ಪ್ರೈಸ್‌ ನೀಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂಬ ಆರೋಪ, ಗುಲ್ಲುಗಳ ನಡುವೆಯೇ ಇದೊಂದು ಸಿಹಿಯಾದ ಶಾಕ್.‌ ಪರಿಷ್ಕೃತ ದರ ಮಾರ್ಚ್ 1ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ.‌ ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆಇಆರ್‌ಸಿ ಹೇಳಿದೆ. ಅಪರೂಪದಲ್ಲಿ ಅಪರೂಪವಾಗಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆದಾರರು ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದೆ. ಇದೊಂದು ಶ್ಲಾಘನೀಯ ಕ್ರಮ.

ಮುಖ್ಯವಾಗಿ ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ 100 ಯೂನಿಟ್‌ಗಳಿಗಿಂತ ಹೆಚ್ಚಿನ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ. ಇದರ ಲಾಭ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಸಿಗಲಿದೆ. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್‌ ವಿದ್ಯುತ್‌ಗೆ 1 ರೂಪಾಯಿ 25 ಪೈಸೆ ಇಳಿಕೆ. ಕೈಗಾರಿಕೆಗಳಿಗೆ ಬಳಸುವ ವಿದ್ಯುತ್‌ ದರದಲ್ಲಿ ಯುನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್‌ ದರ ಒಂದು ಯುನಿಟ್‌ಗೆ 40 ಪೈಸೆ ಇಳಿಕೆ. ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ 50 ಪೈಸೆ ಇಳಿಕೆ. ಖಾಸಗಿ ಏತ ನೀರಾವರಿ ವಿದ್ಯುತ್‌ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್‌ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ. ಇನ್ನು ಗೃಹ ಜ್ಯೋತಿ (Gruha Jyothi) ಉಚಿತ ವಿದ್ಯುತ್‌ ಬಳಕೆದಾರರಿಗೆ ಇದರ ಹೊರೆ ತಟ್ಟುವುದಿಲ್ಲ. ಯಾಕೆಂದರೆ, ಗೃಹಜ್ಯೋತಿಗೆ ಇರುವ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 200 ಯೂನಿಟ್‌ ವರೆಗೆ ವಿದ್ಯುತ್‌ ಬಳಸುವವರು ಬಿಲ್‌ ಕಟ್ಟಬೇಕಿಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಬಿಲ್‌ ಬರುತ್ತದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಿವೃತ್ತ ಐಎಎಸ್‌ ಜಿ. ಗುರುಚರಣ್‌ ಅವರ ಏಕಸದಸ್ಯ ಆಯೋಗವೊಂದನ್ನು ರಚಿಸಲಾಗಿದ್ದು, ಇದು ಎಸ್ಕಾಂಗಳ ಸುಧಾರಣೆಯ ಬಗ್ಗೆ ವರದಿಯೊಂದನ್ನು ನೀಡಿತ್ತು. ಇದರಲ್ಲಿ ಕರ್ನಾಟಕದ ಇಂಧನ ವಲಯದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತ್ತು. ಇಂಧನ ಉತ್ಪಾದನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವು ನಾಯಕತ್ವ ವಹಿಸಿದೆ. ಕರ್ನಾಟಕವು ನವೀಕರಿಸಬಹುದಾದ, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವಾಗಿದೆ. ಆಧುನಿಕ ಗ್ರಿಡ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕೋಟ್ಯಂತರ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಿದೆ. ಆದರೆ ರಾಜ್ಯದ ಪೂರ್ಣ ಸಾಮರ್ಥ್ಯವನ್ನು ಇನ್ನೂ ಶೋಧಿಸಬೇಕಿದೆ. ಇನ್ನಷ್ಟು ಪರಿಣಾಮಕಾರಿ, ಸುಸ್ಥಿರವಾಗಿ ಬೆಳೆಯಬಲ್ಲ ಸಾಧ್ಯತೆಯನ್ನು ರಾಜ್ಯದ ಇಂಧನ ವಲಯ ಹೊಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಅದು ನಿಜವಾದುದು ಎಂದು ಈ ಬೆಳವಣಿಗೆ ತೋರಿಸಿದೆ.

ಇದನ್ನೂ ಓದಿ: Biggest Surprise! : ಹೀಗೂ ಉಂಟೆ! ರಾಜ್ಯದಲ್ಲಿ ವಿದ್ಯುತ್‌ ದರ ಭಾರಿ ಇಳಿಕೆ! ನಿಜಕ್ಕೂ ಶಾಕ್!‌

ವಿದ್ಯುತ್‌ ಬೆಲೆ ಮತ್ತು ವಿದ್ಯುತ್ತಿನ ಲಭ್ಯತೆ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮುಖ್ಯವಾದುದು. ವಿದ್ಯುತ್‌ ಬೆಲೆ ಏರಿದಂತೆಲ್ಲ ಕೈಗಾರಿಕೆಗಳ, ಕೃಷಿಯ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಕೈಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಗ್ರಾಹಕನವರೆಗೆ ಬರುವಾಗ ಅದರ ಬೆಲೆ ವರ್ಧಿಸುತ್ತದೆ. ಪೆಟ್ರೋಲ್‌ ಬೆಲೆ ಹೇಗೋ ಹಾಗೇ ವಿದ್ಯುತ್‌ ಬೆಲೆ ಹೆಚ್ಚಳವೂ ಹೀಗೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಕಾರಣವಾದ ವಿದ್ಯುತ್‌ ಬೆಲೆಯನ್ನು ಉಳಿಸಿಕೊಳ್ಳುವುದೊಂದೇ ದಾರಿ. ಗೃಹಜ್ಯೋತಿ ಯೋಜನೆಯ ಮೂಲಕ ಮಧ್ಯಮ ವರ್ಗದವರ ಒಂದು ಹೊರೆಯನ್ನು ಸರ್ಕಾರ ಇಳಿಸಿದೆ. ವಿದ್ಯುತ್‌ ದರ ಇಳಿಕೆಯ ಮೂಲಕ ಅದನ್ನು ಇನ್ನಷ್ಟು ಹಗುರವಾಗಿಸಿದೆ. ಈ ಶ್ಲಾಘನೀಯ ಕ್ರಮದಿಂದ ಉಂಟಾಗುವ ಉಳಿಕೆಯನ್ನು ಮಧ್ಯಮ, ಕೆಳಮಧ್ಯಮ ವರ್ಗದವರು ಇತರ ವೆಚ್ಚಗಳನ್ನು ಸರಿದೂಗಿಸಲು ಬಳಸಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version