ಬೆಂಗಳೂರು: ರಾಜ್ಯದ ವಸತಿ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಹಬ್ಬ, ನಾಡಹಬ್ಬ ಹಾಗೂ ಜಯಂತಿಗಳನ್ನು ಹೊರತುಪಡಿಸಿ, ಯುಗಾದಿ, ರಂಜಾನ್, ಕ್ರಿಸ್‌ಮಸ್‌ನಂತಹ ಯಾವುದೇ ಧಾರ್ಮಿಕ ಹಬ್ಬವನ್ನು ಆಚರಿಸುವಂತಿಲ್ಲ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆಯನ್ನು ಹೊರಡಿಸಿತ್ತು. ಈ ಆದೇಶಕ್ಕೆ ಎಲ್ಲೆಡೆ ವಿರೋಧ ಶುರುವಾಗುತ್ತಿದ್ದಂತೆ, ಇದೀಗ ಧಾರ್ಮಿಕ ಹಬ್ಬಗಳ ಆಚರಣೆಗೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆಯಲಾಗಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಅಚರಣೆ ಮಾಡಬಾರದು ಎಂಬ ಆದೇಶವನ್ನು ಫೆ.15ರಂದು ಹೊರಡಿಸಿತ್ತು. ಕೇವಲ 10 ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಒಂದು ವೇಳೆ ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ ಆಯಾ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶಗಳು ಕೇಳಿ ಬಂದಿದ್ದವು. ಹಲವರ ಟೀಕೆಗಳನ್ನು ಎದುರಿಸಿದ ನಂತರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಆದೇಶವನ್ನು ಹಿಂಪಡೆದಿದೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.
ಹಿಂದು ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದ್ದ ಬಿಜೆಪಿ
ರಾಜ್ಯದಲ್ಲಿ ತಾಲಿಬಾನ್ ಕಟ್ಟಳೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದೆ. ಕಾಂಗ್ರೆಸ್ ಹಿಂದು ವಿರೋಧಿ ಸರ್ಕಾರ ಎಂದು ಬಿಜೆಪಿ ಟ್ವೀಟ್ (ಎಕ್ಸ್) ಮೂಲಕ ಕಿಡಿಕಾರಿತ್ತು. ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಲು ಅವಕಾಶ ಕೊಡುವ ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರ, ಬಹುಸಂಖ್ಯಾತ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಸರಸ್ವತಿ ಪೂಜೆ, ಗಣೇಶ ಹಬ್ಬಗಳನ್ನು ಆಚರಣೆ ಮಾಡದಂತೆ ಫತ್ವಾ ಹೊರಡಿಸಿದೆ.
ನಾಳೆ ಶಾಲೆಗಳ ಹೆಸರಲ್ಲೂ ಧಾರ್ಮಿಕತೆ ಇದೆ ಅದನ್ನೂ ಬದಲಾವಣೆ ಮಾಡಬೇಕೆಂದು ರಾಜ್ಯದ ತಾಲಿಬಾನ್ ಸರ್ಕಾರ ಆದೇಶ ಹೊರಡಿಸಿದರೂ ಅಚ್ಚರಿ ಇಲ್ಲ. ತನ್ನ ಕರ್ಮಕಾಂಡಗಳನ್ನು ಮುಚ್ಚಿಕೊಳ್ಳಲು, ಅಭಿವೃದ್ಧಿಯನ್ನು ಮರೆಮಾಚಲು, ಗ್ಯಾರಂಟಿಗಳಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಈ ರೀತಿ ಜನರ ಭಾವನೆಗಳನ್ನು ಕೆರಳಿಸಿ, ಅಶಾಂತಿ ಸೃಷ್ಟಿಸುವ ಮೂಲಕ ಈ ಚರ್ಚೆಗಳಲ್ಲಿ ಜನರು ಇರುವಂತೆ ಮಾಡುತ್ತಿದೆ. ಕನ್ನಡಿಗರೇ ಜಾಗೃತರಾಗಿ, ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ ಕೋಮು ಸಂಘರ್ಷ ಹುಟ್ಟು ಹಾಕಿದೆ. ಸಿದ್ದರಾಮಯ್ಯರವರೇ, ಕೂಡಲೇ ಈ ಆದೇಶ ವಾಪಸ್ ಪಡೆಯದೇ ಹೋದರೆ ತಕ್ಕ ಪ್ರತಿಫಲ ಅನುಭವಿಸುವಿರಿ ಜಾಗ್ರತೆ ಎಂದು ಎಚ್ಚರಿಸಿದ್ದರು.
ಏನಿತ್ತು ಆದೇಶದಲ್ಲಿ?
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಬರುವ ವಸತಿ ಶಾಲಾ- ಕಾಲೇಜುಗಳಲ್ಲಿ ಇನ್ನು ಮುಂದೆ ಧಾರ್ಮಿಕ ಹಬ್ಬಗಳನ್ನು (Religious festivals) ಆಚರಿಸುವಂತಿಲ್ಲ. ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸುವಂತೆ (National Festivals) ಆದೇಶಿಸಲಾಗಿತ್ತು.
ಎಲ್ಲಾ ವಸತಿ ಶಾಲಾ- ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕು. ಆದರೆ ಕೆಲವು ರಾಷ್ಟ್ರೀಯ ಹಬ್ಬಗಳಲ್ಲದೇ ಇತರೆ ಧಾರ್ಮಿಕ ಹಬ್ಬಗಳಾದ ಯುಗಾದಿ, ರಂಜಾನ್, ಕ್ರಿಸ್‌ಮಸ್, ಈದ್ ಮಿಲಾದ್, ಸಂಕ್ರಾಂತಿ ಇತರೆ ಹಬ್ಬಗಳನ್ನು ಆಚರಣೆ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿತ್ತು.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಈ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಕೇವಲ 10 ರಾಷ್ಟ್ರೀಯ ಹಬ್ಬಗಳ ಆಚರಣೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ ಆಯಾ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿತ್ತು.
1) ಗಣರಾಜ್ಯೋತ್ಸವ
2) ಸ್ವಾತಂತ್ರ್ಯ ದಿನಾಚರಣೆ
3) ಗಾಂಧಿ ಜಯಂತಿ
4) ಕನ್ನಡ ರಾಜ್ಯೋತ್ಸವ
5) ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
6) ವಾಲ್ಮೀಕಿ ಜಯಂತಿ
7) ಕನಕದಾಸ ಜಯಂತಿ
8) ಬಸವ ಜಯಂತಿ
9) ಸಂವಿಧಾನ ಜಯಂತಿ
10) ಯೋಗ ದಿನಾಚರಣೆ
ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಕಾಲೇಜುಗಳಲ್ಲಿ ಈ ಮೇಲಿನ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸುವಂತೆ ಆದೇಶಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ