ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರಿಸರ ಪ್ರೇಮಿಯಾಗಿದ್ದರೆ ಸಾಲದು, ಧರಿಸುವ ಉಡುಪುಗಳು ಇಕೋ ಫ್ರೆಂಡ್ಲಿ ಆಗಿರಬೇಕು ಎನ್ನುತ್ತಾರೆ ದೇಸಿ ಡಿಸೈನರ್ ಗಳು. ಹೌದು. ಇದಕ್ಕೆ ಪೂರಕ ಎಂಬಂತೆ, ಇದೀಗ ಸಾಕಷ್ಟು ಬಗೆಯ ಇಕೋ ಫ್ರೆಂಡ್ಲಿ ಫ್ಯಾಷನ್ ದಿರಸುಗಳು ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸಿದ್ದು, ನಿಮ್ಮ ವಾರ್ಡ್ ರೋಬ್ ಅನ್ನು ಬದಲಿಸಿಕೊಳ್ಳಬಹುದು.
ಯಾವುದು ಟ್ರೆಂಡಿ?
“ಯಾವುದೇ ವಿನ್ಯಾಸವಾಗಿರಬಹುದು, ಧರಿಸಿದಾಕ್ಷಣ ಹಿತವೆನಿಸುವ ಮನ ಮೆಚ್ಚುವ ಕೆಮಿಕಲ್ ರಹಿತ ದಿರಸು, ನೈಸರ್ಗಿಕ ವಿನ್ಯಾಸ, ಹಣ್ಣು ತರಕಾರಿಗಳ ಬಣ್ಣ, ಚರ್ಮಕ್ಕೆ ಕೊಂಚವೂ ಅಲರ್ಜಿಯಾಗದ ಉಡುಪುಗಳು ಇಂದು ದೇಸಿ ಡಿಸೈನರ್‌ಗಳ ಕೈಗಳಲ್ಲಿ ಸೃಷ್ಟಿಯಾಗತೊಡಗಿವೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗತೊಡಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್ ಸೀಮಾ ಎಸ್. ಕೆ.
ಎಲ್ಲಿ ಲಭ್ಯ?
ದೇಸಿ ಬೋಟಿಕ್‌ಗಳು ಇಲ್ಲವೇ ದೇಸಿ ಮೇಳಗಳಲ್ಲಿ ಇವುಗಳ ಮಾರಾಟ ಹೆಚ್ಚು. ಟಾಪ್, ಕುರ್ತಾ, ಸೀರೆ, ಜಾಕೆಟ್, ಚೂಡಿದಾರ್, ಸಲ್ವಾರ್, ದುಪಟ್ಟಾ ಹೀಗೆ ನಾನಾ ಬಗೆಯ ಪರಿಸರ ಸ್ನೇಹಿ ಉಡುಪುಗಳು ಲಭ್ಯ. ಆದರೆ, ಬೆಲೆ ಮಾತ್ರ ತುಸು ಹೆಚ್ಚು. ಸಮೀಕ್ಷೆ ಯೊಂದರ ಪ್ರಕಾರ, ಎಕೋ ಫ್ರೆಂಡ್ಲಿ ಉಡುಪುಗಳನ್ನು ಕೊಳ್ಳುವುದರಲ್ಲಿ ಹೈ ಪ್ರೊಫೈಲ್ ಮಂದಿಯೇ ಮುಂದಿದ್ದಾರಂತೆ. ಪರಿಣಾಮ, ಇದೀಗ ಆರ್ಡರ್ ಪಡೆದು ಈ ಉಡುಪುಗಳನ್ನು ಸಿದ್ಧಪಡಿಸಿಕೊಡುವ ಕಸ್ಟಮೈಸ್ಡ್ ಬೋಟಿಕ್‌ಗಳು ಉದ್ಯಾನ ನಗರಿಯಲ್ಲಿವೆ.
ಕಾಟನ್/ಖಾದಿಗೆ ಅಗ್ರ ಸ್ಥಾನ
ಎಕೋ ಫ್ರೆಂಡ್ಲಿ ಉಡುಪುಗಳಲ್ಲಿ ಕಾಟನ್ ಹಾಗೂ ಖಾದಿ ಹ್ಯಾಂಡ್ಲೂಮ್ ಉಡುಪುಗಳಿಗೆ ಹೆಚ್ಚು ಬೇಡಿಕೆಯಿದೆ.
ಇದನ್ನೂ ಓದಿ| ಫ್ರಿಲ್- ಫ್ಲೇರ್ ಗೌನ್‌ಗೆ ಫ್ಯಾಷನ್ ಪ್ರಿಯರು ಫಿದಾ!
ವೆಜಿಟೇಬಲ್ ಡೈಯಿಂಗ್ ಡಿಸೈನರ್‌ವೇರ್‌ಗಳು
ಡಿಸೈನರ್ ಸೀಮಾ ಅವರು ಹೇಳುವಂತೆ, ಎಲೆಗಳಿಂದ ಹಸಿರು ಬಣ್ಣ, ಸಿಹಿ ಚೆರ‍್ರಿಗಳಿಂದ ಗುಲಾಬಿ, ಜ್ಯೂಸಿ ಬೆರ‍್ರಿಗಳಿಂದ ಬ್ಲ್ಯೂ, ಬೇರು ಹಾಗೂ ಸಸ್ಯಗಳ ಕಾಂಡಗಳಿಂದ ಬ್ರೌನ್ ಬಣ್ಣಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲೂ ಇಂದು ಬಾಳೆಹಣ್ಣು ಹಾಗೂ ಬ್ಯಾಂಬೋ ಫೈಬರ್ ಬಳಸಿದ ಬಣ್ಣಗಳಿಂದ ತಯಾರಾದ ಆರೋಗ್ಯಕರ ಉಡುಪುಗಳು ವಿದೇಶೀಗರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)