– ಸೋಮೇಶ್ವರ ಗುರುಮಠ
ಪ್ರತಿವರ್ವೂ ಸೆಪ್ಟೆಂಬರ್ ೧೬ರಂದು “ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನʼʼವನ್ನು ಆಚರಿಸಲಾಗುತ್ತದೆ. ೧೯೮೭ರ ಸೆಪ್ಟೆಂಬರ್ ೧೬ರಂದು ಕೆನಡಾದ ಮಾಂಟ್ರಿಯಲ್ ನಗರದಲ್ಲಿ ಓಝೋನ್ ಪದರ ಉಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ನಡುವೆ ಒಪ್ಪಂದವೊಂದು ನಡೆದಿತ್ತು. ಈ ಐತಿಹಾಸಿಕ ಒಪ್ಪಂದದ ನೆನಪಿಗಾಗಿ ವಿಶ್ವಸಂಸ್ಥೆಯು ೧೯೯೪ರಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲು ನಿರ್ಧರಿಸಿತು. ಅಂತೆಯೇ ಈ ವರ್ಷದ ಓಝೋನ್ ದಿನದ ಘೋಷವಾಕ್ಯ “ಭೂಮಿಯ ಮೇಲಿನ ಜೀವಸಂರಕ್ಷಣೆಗಾಗಿ ಜಾಗತಿಕ ಸಹಕಾರ” ಎಂಬುದಾಗಿದೆ.
ಈ “ಓಝೋನ್” ಎಂದರೇನು? ಓಝೋನ್, ಆಮ್ಲಜನಕದ ಒಂದು ರೂಪ. ಓಝೋನಿನ ಒಂದು ಅಣುವಿನಲ್ಲಿ ಆಮ್ಲಜನಕದ ಮೂರು ಪರಮಾಣುಗಳು ಬಂಧಗೊಂಡಿರುತ್ತವೆ. ಆಮ್ಲಜನಕದ ಒಂದು ಅಣುವಿನಲ್ಲಿ, ಆಮ್ಲಜನಕದ ಎರಡು ಪರಮಾಣುಗಳು ಬಂಧಗೊಂಡಿರುತ್ತವೆ. ಭೂಮಿಯ ಮೇಲಿನ ಹವಾಗೋಲವನ್ನು ದಾಟಿ ಹೋದಂತೆಲ್ಲ ಶಾಖ ಕಡಿಮೆಯಾಗುತ್ತ ಹೋಗುತ್ತದೆ. ಗಾಳಿ ವಿರಳವಾಗುತ್ತಿರುತ್ತದೆ. ಇದನ್ನು ʻಸ್ತರಗೋಲ’ ಎನ್ನಲಾಗುತ್ತದೆ. ಈ ಸ್ತರಗೋಲದ ಮೇಲ್ಭಾಗವೇ ಓಝೋನ್ ಪದರವಾಗಿದೆ. ಇದು ಸಾಮಾನ್ಯವಾಗಿ ೧೫ರಿಂದ ೩೦ ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಅಂದಾಜು ೨ರಿಂದ ೫ ಮಿ.ಮೀ. ದಪ್ಪದ ಹೊದಿಕೆಯಾದ ಓಝೋನ್ ತುಂಬಾ ಅಸ್ಥಿರವಾದದ್ದು. ಏಕೆಂದರೆ, ಸೂರ‍್ಯನ ಕಿರಣಗಳಲ್ಲಿ ಕಂಡುಬರುವ ೨೪೦ ನ್ಯಾನೋ ಮೀಟರ್‌ಗಳಿಗಿಂತ ಹೆಚ್ಚು ಅಲೆಯುದ್ದವನ್ನು ಹೊಂದಿರುವ ಯು.ವಿ. ಕಿರಣಗಳನ್ನು ಹೀರಿಕೊಂಡು ಆಮ್ಲಜನಕದ ಅಣು ಮತ್ತು ಪರಮಾಣುಗಳಾಗಿ ಒಡೆಯುತ್ತದೆ. ಈ ಆಮ್ಲಜನಕದ ಅಣು ಮತ್ತು ಪರಮಾಣುಗಳು ೨೪೦ ನ್ಯಾನೋ ಮೀಟರ್‌ಗಳಿಗಿಂತ ಕಡಿಮೆ ಅಲೆಯುದ್ದದ ಯು.ವಿ. ಕಿರಣಗಳನ್ನ ಹೀರಿಕೊಂಡು ‘ಓಝೋನ್’ ಅಣುವಾಗಿ ಪರಿವರ್ತನೆಯಾಗುತ್ತದೆ. ಈ ರೀತಿ ಆಮ್ಲಜನಕ ಮತ್ತು ಓಝೋನ್ ಸಂತುಲನ ಸ್ಥಿತಿಯನ್ನು ಹೊಂದಿರುತ್ತವೆ. ಭೂಮಿಯ ಮೇಲಿನ ಜೀವ ಜಂತುಗಳನ್ನು ಅತ್ಯಂತ ಅಪಾಯಕಾರಿಯಾಗಿರುವ ಯು.ವಿ. ಕಿರಣಗಳಿಂದ ರಕ್ಷಿಸುತ್ತದೆ.
ನಮಗೆಲ್ಲ ಅರಿವಿರುವಂತೆ ಈ ಯು.ವಿ. ಕಿರಣಗಳು ಭೂಮಿಗೆ ಬಿದ್ದುದೇ ಆದರೆ ಬೆಳೆಗಳು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತವೆ. ಮಾನವನಿಗೆ ಚರ್ಮದ ಕ್ಯಾನ್ಸರ್, ದೃಷ್ಟಿಯ ದೋಷ ಕೂಡ ಉಂಟಾಗಬಹುದು. ಅಂತೆಯೇ ಈ ಓಝೋನ್ ಪದರವಿಲ್ಲದಿದ್ದರೆ ಭೂಮಿಯು ಮತ್ತಷ್ಟು ತಾಪಮಾನದಿಂದ ಕುದಿಯಬೇಕಾಗುತ್ತದೆ. ಓಝೋನ್ ಪದರಕ್ಕೆ ಆಗುತ್ತಿರುವ ಹಾನಿಯು ಸಂಪೂರ್ಣವಾಗಿ ಮಾನವನಿಂದಲೇ ಆಗುತ್ತಿದೆ. ಇಂಗಾಲದ ಡೈ ಆಕ್ಸೈಡ್ ವಿಸರ್ಜನೆ, ಪಳೆಯುಳಿಕೆ ಇಂಧನಗಳನ್ನು ಸುಡುವುದು, ಸಾರಜನಕದ ಆಕ್ಸೈಡ್ ರಚನೆಯಾಗುವಂತೆ ಮಾಡುವುದು, ರೆಫ್ರಿಜರೇಟರ್, ರೋಗ ನಿರೋಧಕ ಔಷಧಿಗಳು, ಶುಚಿಕಾರಕಗಳು, ಪ್ಲಾಸ್ಟಿಕ್ ನೊರೆಯಲ್ಲಿ ಪ್ರಚೋದಕಗಳನ್ನಾಗಿ ಕ್ಲೋರೋಫ್ಲೋರೋ ಇಂಗಾಲದ ಸಂಯೋಜನಾ ಅಂಶಗಳನ್ನು ಬಳಸುವುದು ಇತ್ಯಾದಿಗಳು ಕಾರಣವಾಗುತ್ತಿವೆ.
ಇನ್ನು ಕ್ಲೋರೋಫ್ಲೋರೋಗಳು ಭೂಮಿಯ ಮೇಲೆ ಹಾನಿ ಅಥವಾ ವಿಷಕಾರಿಯಾಗಿರುವುದಿಲ್ಲ, ಬದಲಿಗೆ ಇದು ವಾಯುಮಂಡಲ ಸೇರಿದಾಗ ಅಲ್ಲಿ ಸಂಚಯಗೊಂಡು ಓಝೋನ್ ಪದರದ ನಾಶಕ್ಕೆ ನಾಂದಿ ಹಾಡುತ್ತವೆ. ಆಶ್ಚರ್ಯವೆಂಬಂತೆ ಇವುಗಳು ಭೂಮಿಯಿಂದ ವಾಯುಮಂಡಲ ತಲುಪಲು ವರ್ಷಗಳನ್ನು ತೆಗೆದುಕೊಳ್ಳುತ್ತವಾದರೂ, ಅಲ್ಲಿ ಸೇರಿದ ನಂತರ ಓಝೋನ್ ಪದರವನ್ನು ರಂಧ್ರಗೊಳಿಸಿಬಿಡುತ್ತವೆ. ಈ ಪ್ರಕ್ರಿಯೆ ಹೇಗಿರುತ್ತದೆಂದರೆ – ವಾಯುಮಂಡಲ ಸೇರಿದ ಕ್ಲೋರೋಫ್ಲೋರೋಗಳು ಅದೃಶ್ಯ ಕಿರಣಗಳ ಬಲವಾದ ವಿಕಿರಣಕ್ಕೆ ಒಳಗಾಗಿ, ಒಡೆದು ಪ್ರತ್ಯೇಕವಾಗುತ್ತವೆ. ಆಗ ಬಿಡುಗಡೆಯಾಗುವ ಕ್ಲೋರಿನ್ ಅನಿಲವು ಓಝೋನ್ ಕಣದ ಮೇಲೆ ದಾಳಿ ಮಾಡಿ, ಅಲ್ಲಿರುವ ಮೂರು ಆಮ್ಲಜನಕ ಅಣುಗಳಲ್ಲಿ ಒಂದನ್ನು ದೂರ ತಳ್ಳುತ್ತದೆ. ಇದರ ಫಲವಾಗಿ ಕ್ಲೋರಿನ್ ಮಾನಾಕ್ಸೈಡ್ ಕಣ ರಚಿತವಾಗುತ್ತದೆ. ಓಝೋನ್ ಪದರ ನಾಶವಾಗುತ್ತದೆ.
ಇದನ್ನೂ ಓದಿ | ಸಕ್ಕರೆ ಕಡಿಮೆ ತಿನ್ನಿ, ಪರಿಸರ ಉಳಿಸಿ ಎನ್ನುತ್ತಿದ್ದಾರೆ ಸ್ಪೇನ್ ವಿಜ್ಞಾನಿಗಳು !; ಅದು ಹೇಗೆ ಸಾಧ್ಯ?
ಈ ರೀತಿಯ ನಾಶ ಪ್ರಕ್ರಿಯೆ ಮುಂದುವರಿದಂತೆಲ್ಲ, ಮುಕ್ತವಾಗಿರುವ ಒಂದು ಆಮ್ಲಜನಕದ ಕಣವು ಹೊಸದಾಗಿ ರಚಿತವಾದ ಕ್ಲೋರಿನ್ ಮಾನಾಕ್ಸೈಡ್ ಜೊತೆ ಸೇರಿ ಮತ್ತೊಂದು ಆಮ್ಲಜನಕದ ಕಣವನ್ನು ದೂರ ತಳ್ಳುತ್ತದೆ. ಇದರ ಪರಿಣಾಮವಾಗಿ ಕ್ಲೋರಿನ್ ಕಣ ಸ್ವತಂತ್ರವಾಗಿ ಚಕ್ರಸ್ವರೂಪವನ್ನು ಪುನರ್ ಪ್ರಾರಂಭಿಸುತ್ತದೆ. ಇದರಿಂದ ಓಝೋನ್ ಕಣಗಳು ಹೆಚ್ಚಿನ ಪ್ರಮಾಣದಲ್ಲಿ ಶಿಥಿಲವಾಗಿ ಪದರವು ಬರಿದಾಗುತ್ತದೆ.
ಇನ್ನು ಕ್ಲೋರಿಕ್ ಮತ್ತು ಬ್ರೋಮಿನ್ ಒಳಗೊಂಡ ಕ್ಲೋರೋಫ್ಲೋರೋ ಕಾರ್ಬನ್ ಹಾಗೂ ಹ್ಯಾಲೋಜನ್ ರಾಸಾಯನಿಕಗಳು ಓಝೋನ್ ಪದರ ನಾಶಕ್ಕೆ ಕಾರಣವಾಗುವಂಥವು. ನಾವು ನಿತ್ಯ ಬಳಸುವ ರೆಫ್ರಿಜೆರೇಟರ್ ಮತ್ತು ಹವಾನಿಯಂತ್ರಕಗಳಲ್ಲಿ ಮುಖ್ಯವಾಗಿ ಕ್ಲೋರೋಫ್ಲೋರೋ ಕಾರ್ಬನ್ನನ್ನು ಬಳಸಲಾಗುತ್ತದೆ. ಫ್ರಿಜ್ ಹಳೆಯದಾಯಿತೆಂದು ಎಸೆದಾಗಲೂ ಅದರಿಂದ ಕ್ಲೋರೋಫ್ಲೋರೋ ಕಾರ್ಬನ್ ಉತ್ಪತ್ತಿಯಾಗಿ ಓಝೋನ್ ಪದರ ನಾಶಕ್ಕೆ ಕಾರಣವಾಗುತ್ತದೆ. ದುರಂತವೆಂದರೆ ಒಂದು ಕ್ಲೋರೋಫ್ಲೋರೋ ಕಾರ್ಬನ್ ಅಣು ೧೦೦ ವರ್ಷಗಳ ಕಾಲ ಭಿನ್ನವಾಗದೆ ಹಾಗೇ ಉಳಿಯಬಲ್ಲದ್ದಾಗಿದೆಯಲ್ಲದೇ, ಇಂಥ ಒಂದು ಕಣ ೨೦ ಸಾವಿರ ಓಝೋನ್ ಅಣುಗಳನ್ನು ನಾಶಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಓಝೋನ್ ನಾಶ ತಾಪಮಾನ ಏರಿಕೆಗೂ ಮತ್ತು ʻಹಸಿರುಮನೆ’ ಪರಿಣಾಮಕ್ಕೂ ಕಾರಣವಾಗಬಲ್ಲದು.
ಹಿಂದೊಮ್ಮೆ ೧೯೭೪ರಲ್ಲಿ ಅಂಟಾರ್ಟಿಕಾ ಪ್ರದೇಶದ ಮೇಲೆ ಓಝೋನ್ ಪದರದ ರಂಧ್ರವು ಕಾಣಿಸಿಕೊಂಡಾಗಿನಿಂದ ಇದರ ಕುರಿತ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಸರಹದ್ದನ್ನು ಮೀರಿದ ಪರಿಸರ ಮಾಲಿನ್ಯ ನಿಯಂತ್ರಿಸುವ ಬಗ್ಗೆ ೧೯೭೪ರಲ್ಲಿ ಜರುಗಿದ ಹೆಲ್ಸಿಂಕಿ ಸಮಾವೇಶದಲ್ಲಿ ಬಾಲ್ಟಿಕ್ ಸಮುದ್ರಕ್ಕೆ ತ್ಯಾಜ್ಯ ವಸ್ತುಗಳನ್ನು ಎಸೆದಿರುವ ಬಗ್ಗೆ ಹಲವಾರು ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಜೊತೆಗೆ ೧೯೮೯ರಲ್ಲಿ ಜರುಗಿದ್ದ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಅಮೆರಿಕವು ವಿಶ್ವದ ೨೪ ಕೈಗಾರಿಕಾ ಪ್ರಧಾನ ರಾಷ್ಟ್ರಗಳೊಡನೆ ಓಝೋನ್ ಪದರ ಬರಿದಾಗಲು ಕಾರಣವಾಗುವ ಅನಿಲ ವಿಸರ್ಜನಾ ನಿಯಂತ್ರಣಕ್ಕೆ ಒಪ್ಪಿಗೆ ಸೂಚಿಸಿತ್ತಂತೆ. ಆದರೆ ಇಂದಿನ ಸ್ಥಿತಿಗತಿಗಳೇ ಇನ್ನೂ ವಿಭಿನ್ನ ರೀತಿಯಲ್ಲಿ ಪ್ರಕೃತಿ ವಿನಾಶದ ಬಗ್ಗೆ ಮುನ್ಸೂಚನೆ ನೀಡುತ್ತಿವೆ. ವಿಶ್ವದ ದೊಡ್ಡಣ್ಣ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ʻಹವಾಮಾನ ವೈಪರೀತ್ಯ’ ಸಮಾವೇಶಗಳು ಫಲ ನೀಡುತ್ತಿಲ್ಲ, ಭಾರತೀಯ ಸರ್ಕಾರದ ಪರಿಸರ ಸಂರಕ್ಷಣಾ ನೀತಿಗಳು ಜನಮನವನ್ನು ತಲುಪಿಲ್ಲ ಎಂಬುದಕ್ಕೆ ಅವರ ಅಸಹಕಾರಗಳೇ ನಿದರ್ಶನವಾಗುತ್ತಿವೆ. ಇಂತಿರುವಾಗ ಈಗ ಎಚ್ಚೆತ್ತುಕೊಳ್ಳದಿದ್ದರೆ ನಾಳೆ ನಮ್ಮ ಜೀವಪದರಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಹೀಗಾಗಿ ಸದ್ಯದ ತುರ್ತು ಹೊಣೆ ಓಝೋನ್ ರಕ್ಷಣೆ ಎನ್ನುವುದನ್ನು ಮರೆಯುವಂತಿಲ್ಲ.
ಇದನ್ನೂ ಓದಿ | ಪರಿಸರದಿಂದ ನಾವೆಲ್ಲರೂ ಬಹಳಷ್ಟು ಪಾಠ ಕಲಿಯಬಹುದು; ಶಿವಾನಂದ ಕಳವೆ