Site icon Vistara News

ವಿಸ್ತಾರ Explainer: ʼಒಂದು ದೇಶ, ಒಂದು ಚುನಾವಣೆʼ ವರದಿ ಸಲ್ಲಿಕೆಯಾಯ್ತು; ಮುಂದೇನು, ಯಾಕೆ, ಹೇಗೆ?

Lok Sabha Election

Lok Sabha Election: 60% Voter Turnout Recorded Across 11 States, Union Territories Till 5 PM

ವಿಸ್ತಾರ Explainer: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ನೇತೃತ್ವದ ಸಮಿತಿಯು ʻಒಂದು ರಾಷ್ಟ್ರ, ಒಂದು ಚುನಾವಣೆ’ (One nation, One Election) ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಲೋಕಸಭೆ ಚುನಾವಣೆಯ (Lok sabha Election 2024) ಸನಿಹದಲ್ಲೇ ಬಂದಿರುವ ಈ ವರದಿ, ಇದರ ನಂತರದ ಅವಧಿಗೆ (2029) ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಪ್ರಸ್ತಾಪ ಇಟ್ಟಿದೆ.

ʼಒಂದು ದೇಶ, ಒಂದು ಚುನಾವಣೆʼ (One nation, One Election) ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಈ ಬಗ್ಗೆ ಆಗಾಗ ದನಿ ಎತ್ತಲಾಗುತ್ತದೆ. ʼಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯು 2019ರಲ್ಲಿ ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. ಆದರೆ ಪ್ರತಿಪಕ್ಷಗಳಿಂದ ಇದು ಭಾರೀ ಟೀಕೆಗೆ ಗುರಿಯಾಗಿದೆ.

ಸದ್ಯ ವರದಿ ಸಲ್ಲಿಸಿರುವ ಸಮಿತಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಸ್ಥಾಪಿಸಲಾಗಿತ್ತು. ಅಂದಿನಿಂದ ಈ ಸಮಿತಿ ಈ ಕುರಿತ ಹಲವು ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಿದೆ. 39 ರಾಜಕೀಯ ಪಕ್ಷಗಳು, ಅರ್ಥಶಾಸ್ತ್ರಜ್ಞರು ಮತ್ತು ಭಾರತದ ಚುನಾವಣಾ ಆಯೋಗದ ಜೊತೆ ಸಮಾಲೋಚಿಸಿದೆ. ಈ ಪರಿಕಲ್ಪನೆಯನ್ನು ಬೆಂಬಲಿಸಿದೆ; ಆದರೆ ಅಸ್ತಿತ್ವದಲ್ಲಿರುವ ಚುನಾವಣಾ ಪ್ರಕ್ರಿಯೆಯನ್ನು ಮರು- ಹೊಂದಾಣಿಕೆ ಮಾಡಲು ಕಾನೂನುಬದ್ಧವಾದ ಕಾರ್ಯವಿಧಾನಕ್ಕೆ ಶಿಫಾರಸು ಮಾಡಿದೆ.

“ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂದು ಸರ್ವಾನುಮತದ ಅಭಿಪ್ರಾಯವನ್ನು ಹೊಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳೊಂದಿಗೆ ಸಹ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸಬಹುದು” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ವರದಿಯು ಹೇಳಿದೆ.

ʻಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು?

ಸರಳವಾಗಿ ಹೇಳುವುದಾದರೆ, ಭಾರತದ ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳ ಸದಸ್ಯರ ಆಯ್ಕೆಗೆ ಮತದಾನ ಏಕಕಾಲದಲ್ಲಿ ನಡೆಯುವುದು. ಏಕಕಾಲದಲ್ಲಿ ಸಾಧ್ಯವಾಗದಿದ್ದರೆ ಒಂದೇ ವರ್ಷದಲ್ಲಿ ನಡೆಸುವುದು. ಪ್ರಸ್ತುತ ಕ್ಷಣದಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದ ಆಯ್ಕೆಗೆ ಚುನಾವಣೆ ಏಪ್ರಿಲ್- ಮೇ ತಿಂಗಳಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಕೆಲವು ರಾಜ್ಯ ಸರ್ಕಾರಗಳಿಗೂ ಮತದಾನ ನಡೆಯಲಿದೆ. ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾಗಳು ಈ ಸಮಯದಲ್ಲಿ ಅಸೆಂಬ್ಲಿ ಎಲೆಕ್ಷನ್‌ ಕಾಣಲಿವೆ.

ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ಗಳಲ್ಲಿ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಆರು ವರ್ಷಗಳ ಬಳಿಕ ಮೊದಲ ಅಸೆಂಬ್ಲಿ ಚುನಾವಣೆಯನ್ನು ಸೆಪ್ಟೆಂಬರ್ 30ರ ಮೊದಲು ನಡೆಸಬೇಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಆದೇಶವಿದೆ. ಉಳಿದ ರಾಜ್ಯಗಳಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣಗಳು ಕಳೆದ ವರ್ಷ ವಿವಿಧ ಸಮಯಗಳಲ್ಲಿ ಮತದಾನ ಕಂಡಿದ್ದವು.

ದೇಶದ ಗಾತ್ರ ಮತ್ತು ಪ್ರದೇಶಗಳ ನಡುವಿನ ಭೌಗೋಳಿಕ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಗಮನಿಸಿದರೆ, ಏಕಕಾಲದ ಚುನಾವಣೆಗೆ ಹಲವು ಸವಾಲುಗಳಿವೆ. ಸಾರಿಗೆ ಸಂಪರ್ಕ, ಸಂಪನ್ಮೂಲ, ಸಾಂವಿಧಾನಿಕ, ಕಾನೂನು ಮತ್ತು ಪ್ರಾಯೋಗಿಕ ಸಮಸ್ಯೆಗಳು ಇವೆ.

ಏಕಕಾಲದ ಚುನಾವಣೆ ಏಕೆ?

ಕಳೆದ ವರ್ಷ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಘೋಷಿಸುವ ಮೊದಲು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದರ ಹಿಂದಿನ ಉದ್ದೇಶವನ್ನು ಲೋಕಸಭೆಯ ಮುಂದಿಟ್ಟರು.

ಪ್ರತಿ ವರ್ಷವೂ ಒಂದೊಂದು ಚುನಾವಣೆ ನಡೆಸುವುದರಿಂದ ಹಲವಾರು ಬಾರಿ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ನಿಯೋಜನೆ ಮಾಡಬೇಕಾಗುತ್ತದೆ. ಇದನ್ನು ಕಡಿತಗೊಳಿಸುವುದರಿಂದ ಸಾರ್ವಜನಿಕ ಖಜಾನೆಗೆ ಉಳಿತಾಯ; ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ವೆಚ್ಚವನ್ನು ಕಡಿಮೆ ಮಾಡುವುದರಿಂದ ಏಕಕಾಲಿಕ ಚುನಾವಣೆಗಳು ಹಣಕಾಸಿನ ಉಳಿತಾಯಕ್ಕೆ ಕಾರಣವಾಗುತ್ತವೆ.

ಅಸಮಕಾಲಿಕ ಚುನಾವಣೆ ಎಂದರೆ ನೀತಿ ಸಂಹಿತೆ ಪದೇ ಪದೆ ಜಾರಿಗೆ ಬರುತ್ತಿರುತ್ತದೆ. ಇದು ಕೇಂದ್ರ ಅಥವಾ ರಾಜ್ಯದ ಕಲ್ಯಾಣ ಯೋಜನೆಗಳ ಜಾರಿಯ ಮೇಲೆ, ಆಡಳಿತಾತ್ಮಕ ನಿರ್ಧಾರಗಳ ಮೇಲೆ, ಸೇವಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಏಕಕಾಲದ ಚುನಾವಣೆಯು ಮತದಾನದ ಪ್ರಮಾಣವನ್ನು ಸುಧಾರಿಸಬಹುದು. ಇದು ಪ್ರಸ್ತುತ ರಾಜ್ಯದಿಂದ ರಾಜ್ಯಕ್ಕೆ ಮತ್ತು ಸಾರ್ವತ್ರಿಕ ಚುನಾವಣೆಯಿಂದ ಅಸೆಂಬ್ಲಿ ಚುನಾವಣೆಗೆ ಬೇರೆ ಬೇರೆ ಇದೆ.

ಏಕಕಾಲ ಚುನಾವಣೆ ಹೇಗೆ ಸಾಧ್ಯ?

ಸದ್ಯ ಎಲ್ಲ ವಿಧಾನಸಭೆಗಳ ಕಾಲಾವಧಿ ಬೇರೆ ಬೇರೆ ಇದೆ. ಸಂವಿಧಾನದ ತಿದ್ದುಪಡಿಯಿಲ್ಲದೆ ಇದನ್ನು ಏಕಕಾಲಕ್ಕೆ ತರುವುದು ಅಸಾಧ್ಯ. ಆ ತಿದ್ದುಪಡಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಪ್ರಮುಖ ರಾಜಕೀಯ ಪಕ್ಷಗಳು ಅನುಮೋದಿಸಬೇಕು.

ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡುವುದು ಇನ್ನೊಂದು ದಾರಿ. ಅವುಗಳೆಂದರೆ ಆರ್ಟಿಕಲ್ 83 (ಸಂಸತ್ತಿನ ಅವಧಿ), ಆರ್ಟಿಕಲ್ 85 (ರಾಷ್ಟ್ರಪತಿಯಿಂದ ಲೋಕಸಭೆಯ ವಿಸರ್ಜನೆ), ಆರ್ಟಿಕಲ್ 172 (ರಾಜ್ಯ ಶಾಸಕಾಂಗಗಳ ಅವಧಿ), ಮತ್ತು ಆರ್ಟಿಕಲ್ 174 (ರಾಜ್ಯ ಶಾಸಕಾಂಗಗಳ ವಿಸರ್ಜನೆ), ಹಾಗೆಯೇ ವಿಧಿ 356 (ರಾಷ್ಟ್ರಪತಿಗಳ ಆಳ್ವಿಕೆ ಹೇರಿಕೆ). ಆದರೆ ಇದರಿಂದ ಕೇಂದ್ರ ಸರ್ಕಾರ ಭಾರತದ ಒಕ್ಕೂಟ ರಚನೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಬಹುದು.

ಇವುಗಳು ಪ್ರಮುಖ. ಏಕೆಂದರೆ, ಒಂದು ರಾಜ್ಯ ಅಥವಾ ಕೇಂದ್ರ ಸರ್ಕಾರ ವಿಶ್ವಾಸಮತ ಗಳಿಸಲು ವಿಫಲವಾದರೆ ಅಥವಾ ಅದರ ಅವಧಿ ಮುಗಿಯುವ ಮೊದಲು ವಿಸರ್ಜಿಸಲ್ಪಟ್ಟರೆ ಏನು ಮಾಡಬೇಕು ಎಂಬುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ರಾಜ್ಯಗಳಿಗೆ ಹೊಸದಾಗಿ ಚುನಾವಣೆ ನಡೆಸುವಂತೆ ಕೇಂದ್ರ ಆದೇಶ ನೀಡುವುದು ಅಸಾಧ್ಯ.

ಚುನಾವಣಾ ಆಯೋಗದ 2015ರ ವರದಿ

ಒಂಬತ್ತು ವರ್ಷಗಳ ಹಿಂದೆ ಭಾರತೀಯ ಚುನಾವಣಾ ಆಯೋಗ ಸಹ ಸಹ ʼಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿತು. ಅದರ ಪ್ರಕಾರ, ಅವಿಶ್ವಾಸ ನಿರ್ಣಯಗಳು ಹೊಸ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯ ನಾಮನಿರ್ದೇಶನವನ್ನು ಒಳಗೊಂಡಿರಬೇಕು. ಹೊಸ ನಾಯಕ ತಕ್ಷಣವೇ ಪರೀಕ್ಷೆಯನ್ನು ಎದುರಿಸಬೇಕು. ಅವಧಿ ಮುಂಚೆಯೇ ಸರ್ಕಾರ ವಿಸರ್ಜನೆಗೊಂಡರೆ, ಹೊಸ ಸರ್ಕಾರಕ್ಕೆ ಮತದಾನ ನಡೆಸಬಹುದು. ಆದರೆ ನಿಗದಿತ ಐದು ವರ್ಷಗಳಲ್ಲಿ ಉಳಿದ ಅವಧಿಗೆ ಮಾತ್ರ ಸರ್ಕಾರ ಕಾರ್ಯಾಚರಿಸಬೇಕು.

ಚುನಾವಣೆ ಚಕ್ರವನ್ನು ಸಿಂಕ್ ಮಾಡಲು ಅಧಿಕಾರಾವಧಿ ವಿಸ್ತರಿಸುವುದು ಅಥವಾ ಕಡಿಮೆ ಮಾಡುವುದು ಸೇರಿದಂತೆ ವಿವಿಧ ರೀತಿಯ ಕ್ರಮಗಳನ್ನು ಸೂಚಿಸಲಾಗಿದೆ. ಆದರೆ ಇದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ಅವರು “ಸಂವಿಧಾನದ ಮೂಲ ಸಂರಚನೆಯನ್ನು ಬುಡಮೇಲು ಮಾಡುವ ಹುನ್ನಾರ” ಎಂದು ಕರೆದಿದ್ದಾರೆ. “ನಿರಂಕುಶಪ್ರಭುತ್ವವನ್ನು ಪ್ರಜಾಪ್ರಭುತ್ವದ ವೇಷಭೂಷಣದಲ್ಲಿ ಪ್ರವೇಶಿಸಲು ಅನುವು ಮಾಡಿಕೊಡುವ ವ್ಯವಸ್ಥೆ” ಎಂದಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಇದನ್ನು “ಇದು ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಬೆದರಿಕೆ. ಇದು ಅಪ್ರಾಯೋಗಿಕ. ಭಾರತದ ಸಂವಿಧಾನದಲ್ಲಿ ಇದನ್ನು ಪ್ರತಿಪಾದಿಸಲಾಗಿಲ್ಲ” ಎಂದಿದ್ದಾರೆ. ಆಮ್ ಆದ್ಮಿ ಪಕ್ಷವೂ ಈ ಕಲ್ಪನೆಯನ್ನು ವಿರೋಧಿಸಿದೆ. “ಇದು ಸಂಸದೀಯ ಪ್ರಜಾಪ್ರಭುತ್ವದ ಕಲ್ಪನೆ ಮತ್ತು ಸಂವಿಧಾನದ ಮೂಲ ರಚನೆಗೆ ಹಾನಿ ಮಾಡುತ್ತದೆ” ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು “ಪ್ರಜಾಪ್ರಭುತ್ವ ವಿರೋಧಿ” ಎಂದು ಟೀಕಿಸಿದೆ.

ಆದರೆ, ಎಲ್ಲ ವಿರೋಧ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಸ್ಥಳೀಯ ಕಾಂಗ್ರೆಸ್ ಘಟಕವು ಕೇಂದ್ರಾಡಳಿತ ಪ್ರದೇಶದಲ್ಲಿ ಏಕಕಾಲಕ ಚುನಾವಣೆ ನಡೆಸಬಹುದು ಎಂದು ಹೇಳಿವೆ.

1967ರವರೆಗೆ ಭಾರತದಲ್ಲಿ ಏಕಕಾಲಿಕ ಮತದಾನಗಳು ರೂಢಿಯಲ್ಲಿತ್ತು. ಆದರೆ ಅಂತಹ ನಾಲ್ಕು ಮತದಾನ ಮಾತ್ರ ನಡೆದವು. ಕೆಲವು ರಾಜ್ಯಗಳ ಶಾಸಕಾಂಗಗಳ ಅವಧಿಪೂರ್ವ ವಿಸರ್ಜನೆಯ ನಂತರ ವಿನ್ಯಾಸ ಬುಡಮೇಲಾಯಿತು.

ಸವಾಲುಗಳು ಏನು?

ಆಡಳಿತಕ್ಕೆ ಹೆಚ್ಚಿನ ಅಡ್ಡಿಯಾಗದಂತೆ ಚುನಾವಣಾ ಚಕ್ರವನ್ನು ಸಿಂಕ್ ಮಾಡುವುದು, ಎಲ್ಲಾ ರಾಜಕೀಯ ಪಕ್ಷಗಳ ಸಮ್ಮತಿ ಪಡೆಯುವುದು, ಸದನಗಳ ವಿಸರ್ಜನೆ, ರಾಷ್ಟ್ರಪತಿ ಆಳ್ವಿಕೆ ಅಥವಾ ಹಂಗ್ ಅಸೆಂಬ್ಲಿ ಕಾರಣದಿಂದ ಉಂಟಾಗುವ ತೊಡಕನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

ಪ್ರಾದೇಶಿಕ ಪಕ್ಷಗಳು ಸೀಮಿತ ಸಂಪನ್ಮೂಲಗಳನ್ನು ಹೊಂದಿರುತ್ತವೆ. ಲೋಕಸಭೆ ಚುನಾವಣೆಯಲ್ಲಿ ವಿಜೃಂಭಿಸುವ ಭಾರಿ ಹಣಕಾಸು ಹೊಂದಿರುವ ಪಕ್ಷಗಳ ಮುಂದೆ ಈ ಪಕ್ಷಗಳು ನೆಲಕಚ್ಚಬಹುದು; ಮತದಾರರಿಗೆ ರಾಷ್ಟ್ರೀಯ ಚುನಾವಣೆಯ ಸನ್ನಿವೇಶದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗದಿರಬಹುದು.

ಮತ್ತೊಂದು ಕಳವಳದ ಅಂಶವೆಂದರೆ ಇವಿಎಂಎಸ್ ಅಥವಾ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಂಗ್ರಹಿಸಲು ಉಂಟಾಗುವ ವೆಚ್ಚ. ಇದು ಪ್ರತಿ 15 ವರ್ಷಗಳಿಗೊಮ್ಮೆ ಸುಮಾರು ₹10,000 ಕೋಟಿ ಆಗಲಿದೆ ಎಂದು ಚುನಾವಣಾ ಸಮಿತಿ ಹೇಳಿದೆ.

ಜನತೆಯ ಅಭಿಪ್ರಾಯವೇನು?

ʼಒಂದು ರಾಷ್ಟ್ರ, ಒಂದು ಚುನಾವಣೆ’ ಸಮಿತಿಯು ಸಾರ್ವಜನಿಕರಿಂದ ಸುಮಾರು 21,000 ಸಲಹೆಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ 81 ಪ್ರತಿಶತಕ್ಕೂ ಹೆಚ್ಚು ಪರವಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: One Nation, One Election: ಯಂತ್ರಗಳ ಸಿದ್ಧತೆಗೆ ಒಂದು ವರ್ಷ ಸಮಯ ಬೇಕು: ಚುನಾವಣಾ ಆಯೋಗ

Exit mobile version