ವಾಷಿಂಗ್ಟನ್: ರಷ್ಯಾದ ಪ್ರಮುಖ ನಗರ ಮಾಸ್ಕೋ ಸಂಗೀತ ಹಾಲ್‌ನಲ್ಲಿ ನಡೆದ ಭಯಾನಕ ಗ್ರೆನೇಡ್ ಹಾಗೂ ಗುಂಡಿನ ದಾಳಿಯನ್ನು (Moscow Attack) ಇಸ್ಲಾಮಿಕ್ ಸ್ಟೇಟ್ (Islamic state) ಭಯೋತ್ಪಾದಕರು ನಡೆಸಿರುವುದು ಖಚಿತವಾಗಿದೆ. ಐಸಿಸ್-ಕೆ (ISIS-K) ಕೈವಾಡವನ್ನು ದೃಢೀಕರಿಸುವ ಗುಪ್ತಚರ ಮಾಹಿತಿಯನ್ನು ಅಮೆರಿಕ ಬೇಹುಗಾರಿಕೆ ಇಲಾಖೆ ಖಚಿತಪಡಿಸಿದೆ.
ISIS-K ಎಂದು ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್‌ನ ಅಫ್ಘಾನ್ ಶಾಖೆಯ ಕಿರಾತಕರ ಬಗ್ಗೆ ವಿವರ ಹಾಗೂ ರಷ್ಯಾದ ಮೇಲೆ ದಾಳಿ ಮಾಡಿರುವುದರ ಹಿಂದೆ ಅವರ ಉದ್ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ:
ISIS-K ಎಂದರೇನು?
ISIS-K ಎಂದರೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್. ಖೊರಾಸನ್ ಎಂದರೆ ಇರಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನದ ಭಾಗಗಳನ್ನು ಒಳಗೊಂಡಿರುವ ಪ್ರದೇಶದ ಹಳೆಯ ಪದ. 2014ರ ಕೊನೆಯಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಇದು ಸ್ಥಾಪನೆಯಾಯಿತು ಮತ್ತು ಜಿಹಾದಿಸ್ಟರ ತೀವ್ರ ಕ್ರೂರತೆಗೆ ಕುಖ್ಯಾತಿ ಪಡೆಯಿತು.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪಿನ ಅತ್ಯಂತ ಸಕ್ರಿಯ ಪ್ರಾದೇಶಿಕ ಅಂಗಸಂಸ್ಥೆಗಳಲ್ಲಿ ಒಂದಾದ ISIS-K, 2018ರ ಸುಮಾರಿಗೆ ತನ್ನ ಸದಸ್ಯತ್ವ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿದೆ. ತಾಲಿಬಾನ್ ಮತ್ತು ಅಮೆರಿಕದ ಪಡೆಗಳು ಇದರ ಮೇಲೆ ದಾಳಿಯೆಸಗಿ ಭಾರೀ ನಷ್ಟವನ್ನುಂಟುಮಾಡಿವೆ. 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ಹಿಂದೆಗೆದವು. ಇದಾದ ಬಳಿಕ ಅಫ್ಘಾನಿಸ್ತಾನ ಸೇರಿದತೆ ಈ ಪ್ರಾಂತ್ಯದಲ್ಲಿ ಐಸಿಸ್-ಕೆದಂತಹ ಉಗ್ರಗಾಮಿ ಗುಂಪುಗಳ ವಿರುದ್ಧದ ಗುಪ್ತಚರ ಮಾಹಿತಿ ಪಡೆಯುವ ವ್ಯವಸ್ಥೆ ಹಿನ್ನಡೆ ಕಂಡಿತು.
ಗುಂಪು ಯಾವ ದಾಳಿಗಳನ್ನು ನಡೆಸಿದೆ?
ISIS-K ಅಫ್ಘಾನಿಸ್ತಾನದ ಒಳಗೆ ಮತ್ತು ಹೊರಗೆ ಮಸೀದಿಗಳ ಮೇಲೂ ಸೇರಿದಂತೆ ಹಲವಾರು ಮಾರಕ ದಾಳಿಗಳ ಇತಿಹಾಸವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಇರಾನ್‌ನಲ್ಲಿ ಅವಳಿ ಬಾಂಬ್ ದಾಳಿಗಳನ್ನು ನಡೆಸಿ ಸುಮಾರು 100 ಜನರನ್ನು ಕೊಂದಿತು. ಸೆಪ್ಟೆಂಬರ್ 2022ರಲ್ಲಿ ISIS-K ಉಗ್ರಗಾಮಿಗಳು ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಮಾರಣಾಂತಿಕ ಆತ್ಮಹತ್ಯಾ ಬಾಂಬ್ ದಾಳಿ ಮಾಡಿದರು.
2021ರಲ್ಲಿ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಗುಂಡಿನ ದಾಳಿಗೆ ಈ ಗುಂಪು ಕಾರಣವಾಗಿದೆ. ಅಮೆರಿಕದ ಪಡೆಗಳ ಹಿಂದೆಗೆತದಿಂದ ಅಸ್ತವ್ಯಸ್ತವಾಗಿದ್ದ ದೇಶದಿಂದ ಪಡೆಗಳ ಸ್ಥಳಾಂತರದ ಸಮಯದಲ್ಲಿ ಈ ದಾಳಿ ನಡೆದಿದ್ದು, 13 ಯುಎಸ್ ಸೈನಿಕರು ಮತ್ತು ಹಲವಾರು ನಾಗರಿಕರ ಬಲಿ ಪಡೆದಿತ್ತು.
ಈ ತಿಂಗಳ ಆರಂಭದಲ್ಲಿ, ಮಧ್ಯಪ್ರಾಚ್ಯದ ಹೊಣೆ ಹೊತ್ತಿರುವ ಅಮೆರಿಕದ ಉನ್ನತ ಜನರಲ್ ಒಬ್ಬರು, ಐಸಿಸ್-ಕೆ ಅಫ್ಘಾನಿಸ್ತಾನದ ಹೊರಗೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ಹಿತಾಸಕ್ತಿಗಳ ಮೇಲೆ “ಆರು ತಿಂಗಳೊಳಗೆ ಮತ್ತು ಯಾವುದೇ ಎಚ್ಚರಿಕೆಯಿಲ್ಲದೆ” ದಾಳಿ ಮಾಡಬಹುದು ಎಂದು ಹೇಳಿದ್ದರು.
ರಷ್ಯಾದ ಮೇಲೆ ಏಕೆ ದಾಳಿ?
ಶುಕ್ರವಾರ ರಷ್ಯಾದಲ್ಲಿ ISIS-K ನಡೆಸಿದ ದಾಳಿಯು ಭಯಾನಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಗುಂಪು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತೀವ್ರವಾಗಿ ದ್ವೇಷಿಸುತ್ತಿದೆ. “ಐಎಸ್ಐಎಸ್-ಕೆ ಕಳೆದ ಎರಡು ವರ್ಷಗಳಿಂದ ರಷ್ಯಾದಲ್ಲಿ ಸ್ಥಿರವಾಗಿದೆ. ಪುಟಿನ್ ಅನ್ನು ಆಗಾಗ್ಗೆ ಟೀಕಿಸುತ್ತಿದೆ” ಎಂದು ವಾಷಿಂಗ್ಟನ್ ಮೂಲದ ಸಂಶೋಧನಾ ಗುಂಪು ಸೌಫನ್ ಸೆಂಟರ್‌ನ ಕಾಲಿನ್ ಕ್ಲಾರ್ಕ್ ಹೇಳಿದ್ದಾರೆ.
ವಾಷಿಂಗ್ಟನ್ ಮೂಲದ ವಿಲ್ಸನ್ ಸೆಂಟರ್‌ನ ಮೈಕೆಲ್ ಕುಗೆಲ್‌ಮನ್ ಅವರು, “ನಿರಂತರವಾಗಿ ಮುಸ್ಲಿಮರ ಮೇಲೆ ದಬ್ಬಾಳಿಕೆ ಎಸಗುವ ಚಟುವಟಿಕೆಗಳಲ್ಲಿ ರಷ್ಯಾ ಭಾಗಿಯಾಗಿದೆ ಎಂದು ಐಸಿಸ್ ಭಾವಿಸಿದೆ” ಎಂದು ಹೇಳುತ್ತಾರೆ. ಮಾಸ್ಕೋ ವಿರುದ್ಧ ತಮ್ಮದೇ ಆದ ದ್ವೇಷದ ಭಾವನೆಯನ್ನು ಹೊಂದಿರುವ ಹಲವಾರು ಮಧ್ಯ ಏಷ್ಯಾದ ಉಗ್ರಗಾಮಿಗಳ ತಂಡಗಳು ಈ ಗುಂಪಿನ ಸದಸ್ಯರಾಗಿವೆ.
ಇದನ್ನೂ ಓದಿ: Moscow Attack: ಮಾಸ್ಕೋದಲ್ಲಿ ಐಸಿಸ್ ಉಗ್ರರ ಭಯಾನಕ ದಾಳಿ; 40 ಸಾವು; ಸಂಗೀತ ಕೇಳಲು ಬಂದವರ ಮೇಲೆ ಯದ್ವಾತದ್ವಾ ಗುಂಡಿಕ್ಕಿದರು