Site icon Vistara News

ವಿಸ್ತಾರ Explainer: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಏನಾಗುತ್ತಿದೆ? ಯಾರಿವನು ಶೇಖ್‌ ಶಹಜಹಾನ್‌?

sandeshkhali sheik shahjahan

ವಿಸ್ತಾರ Explainer: ಪಶ್ಚಿಮ ಬಂಗಾಳ (West Bengal) ರಾಜ್ಯದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ (Sandeshkhali) ಎಂಬ ಗ್ರಾಮ ಕಳೆದ ಎರಡು ತಿಂಗಳುಗಳಿಂದ ದೇಶವ್ಯಾಪಿ ಸುದ್ದಿಯಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಹಿಂಸಾಚಾರ (Sandeshkhali violence) ರಾಜಕೀಯ ಬಿರುಗಾಳಿ, ಅಭೂತಪೂರ್ವ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್‌ (Trinamool Congress) ನಾಯಕ ಶೇಖ್‌ ಶಹಜಹಾನ್‌ (Sheikh Shahjahan) ಎಂಬಾತ ಇಲ್ಲಿನ ಹಲವಾರು ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯವೇ (Physical Abuse) ಈ ಪ್ರಕರಣದ ಕೇಂದ್ರಬಿಂದು. ಆದರೆ ಬಹುಕೋಟಿ ಪಡಿತರ ಹಗರಣ, ಇಡಿ ಅಧಿಕಾರಿಗಳ ಮೇಲಿನ ದಾಳಿ, ತೃಣಮೂಲ ಕಾಂಗ್ರೆಸ್‌ನ ಪ್ರತಿಷ್ಠೆ, ಬಿಜೆಪಿಯ ಪ್ರತಿಭಟನೆ, ಸುಪ್ರೀಂ ಕೋರ್ಟ್‌ (Supreme court) ಆದೇಶ ಎಲ್ಲವೂ ಸೇರಿಕೊಂಡು ಬೃಹತ್‌ ಪ್ರಮಾಣಕ್ಕೆ ಬೆಳೆದಿದೆ.

ಎಲ್ಲಿಂದ ಆರಂಭ?

ಪ್ರಕರಣ ಬಿಗಡಾಯಿಸಲು ಆರಂಭಿಸಿದ್ದು ಜನವರಿ 5ರಂದು ಮುಂಜಾನೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಂದೇಶ್‌ಖಾಲಿಯಲ್ಲಿರುವ ಆರೋಪಿ ಶೇಖ್‌ ಶಹಜಹಾನ್‌ ನಿವಾಸಕ್ಕೆ ದಾಳಿ ನಡೆಸಲು ಬಂದಾಗ. ಬಹುಕೋಟಿ ಪಡಿತರ ವಿತರಣೆ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಟಿಎಂಸಿಯ ಪ್ರಭಾವಶಾಲಿ ನಾಯಕ, ಜಿಲ್ಲಾ ಪರಿಷತ್‌ ಸದಸ್ಯನೂ ಆಗಿರುವ ಶೇಖ್‌ ಶಹಜಹಾನ್ ಮನೆಗೆ ಇಡಿ ಅಧಿಕಾರಿಗಳು ದಾಳಿಯಿಟ್ಟರು. ಆದರೆ ಕೂಡಲೇ ಅಲ್ಲಿ ಶಹಜಹಾನ್‌ನ ಬೆಂಬಲಿಗರು ಸೇರಿ ಇಡಿ ಅಧಿಕಾರಿಗಳನ್ನು ತಡೆದದ್ದಲ್ಲದೆ, ಹಲ್ಲೆ ನಡೆಸಿದರು. ಅಧಿಕಾರಿಗಳು ಹೇಗೋ ಜೀವ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಬೇಕಾಯಿತು. ಇದಾದ ಬಳಿಕ ಶಹಜಹಾನ್‌ ಅಲ್ಲಿಂದಲೂ ನಾಪತ್ತೆಯಾದ.

ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆದದ್ದು ದೇಶಾದ್ಯಂತ ಸುದ್ದಿಯಾಯಿತು. ಬಿಜೆಒಇ ಹಾಗೂ ರಾಜ್ಯ ವಿಪಕ್ಷಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದನಿಯೆತ್ತಿದವು. ಇದರಿಂದ ದೌರ್ಜನ್ಯಕ್ಕೊಳಗಾಗಿದ್ದ ಸ್ಥಲೀಯ ಮಹಿಳೆಯರಿಗೂ ಧ್ವನಿ ಬಂದಂತಾಯಿತು. ಸಂತ್ರಸ್ತ ಮಹಿಳೆಯರು ಒಟ್ಟು ಸೇರಿದರು. ಶಹಜಹಾನ್‌ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡರು. ಕೂಡಲೇ ರಾಷ್ಟ್ರೀಯ ಮಾಧ್ಯಮದ ಗಮನ ಈ ಮಹಿಳೆಯರ ಕಡೆಗೆ ತಿರುಗಿತು. ಈ ಮಹಿಲೆಯರು ಶೇಖ್‌ ಶಹಜಹಾನ್‌ ಹಾಗೂ ಆತನ ಬೆಂಬಲಿಗರು, ತೃಣಮೂಲ ಕಾರ್ಯಕರ್ತರು ಸಂದೇಶ್‌ಖಾಲಿಯಲ್ಲಿ ನಡೆಸುತ್ತಿದ್ದ ಬರ್ಬರ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಬರ್ಬರ ಲೈಂಗಿಕ ದೌರ್ಜನ್ಯ

“ಶಹಜಹಾನ್‌ ಹಾಗೂ ಆತನ ಜನ ನಮ್ಮ ಭೂಮಿಯನ್ನು ಅವರ ಸಿಗಡಿ ಕೃಷಿಗಾಗಿ ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ನಮ್ಮನ್ನು ಹಿಂಸಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದಾರೆ” ಎಂದರು. “ಟಿಎಂಸಿ ಪಕ್ಷದ ಪುಂಡರು ಇಲ್ಲಿನ ಪ್ರತಿ ಮನೆಯನ್ನೂ ಗುಪ್ತವಾಗಿ ಸಮೀಕ್ಷೆ ಮಾಡುತ್ತಾರೆ. ಯಾವುದೇ ಸುಂದರ ಮಹಿಳೆ, ಯುವತಿ ಇದ್ದರೆ, ಅವಳನ್ನು ಪಕ್ಷದ ಕಚೇರಿಗೆ ಕರೆದೊಯ್ಯುತ್ತಾರೆ. ಆಕೆಯನ್ನು ರಾತ್ರಿಯಿಡೀ ಅಥವಾ ತಮಗೆ ತೃಪ್ತಿಯಾಗುವವರೆಗೂ ಅಲ್ಲಿಯೇ ಇರಿಸಿಕೊಳ್ಳುತ್ತಾರೆ” ಎಂದು ಈ ಪ್ರತಿಭಟನೆ ನಡೆಸಿದ ಮಹಿಳೆಯರು ಆರೋಪಿಸಿದರು.

ಶಹಜಹಾನ್‌ ವಿರುದ್ಧ ತನಿಖೆ ಸಂಸ್ಥೆಗಳು ಈಗ ಕ್ರಮಕ್ಕೆ ಮುಂದಾಗಿರುವುದು ತಮಗೆ ಮಾತನಾಡಲು ಧೈರ್ಯವನ್ನು ನೀಡಿದೆ ಎಂದರು ಈ ಸಂತ್ರಸ್ತ ಸ್ತ್ರೀಯರು. ಉತ್ತಮ್ ಸರ್ದಾರ್ ಮತ್ತು ಶಿಬಾಪ್ರಸಾದ್ ಹಜರಾ ಎಂಬ ಶಹಜಹಾನ್‌ನ ಇಬ್ಬರು ಸಹಚರರ ಮೇಲೆ ಆರೋಪ ಮಾಡಿದರು. “ನಮ್ಮ ಗಂಡಂದಿರಿಗೆ ನಮ್ಮ ಮೇಲೆ ಹಕ್ಕು ಇಲ್ಲದಂತೆ ಮಾಡಲಾಗಿದೆ. ಇವರ ದಬ್ಬಾಳಿಕೆಗೆ ಆತ ಹೆಂಡತಿಯನ್ನೂ ಬಿಟ್ಟು ಕೊಡಬೇಕಾಗುತ್ತಿದೆ. ನಮಗೆ ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಹಿಂಸೆ ಅಥವಾ ಲೈಂಗಿಕ ಕಿರುಕುಳದ ಭಯ ಯಾವಾಗಲೂ ಇರುತ್ತದೆ. ನಮಗೆ ಸುರಕ್ಷತೆ ಬೇಕು. ನಮ್ಮ ಬಹುತೇಕ ಪುರುಷರು ಗ್ರಾಮ ತೊರೆದು ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಸಂತ್ರಸ್ತ ಮಹಿಳೆಯರು ಬಿದಿರಿನ ಕೋಲು, ಪೊರಕೆ ಹಿಡಿದು ಪ್ರತಿಭಟನೆ ನಡೆಸಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಘೇರಾವ್ ಹಾಕಿದರು. ಉದ್ರಿಕ್ತರಾದ ಈ ಪ್ರತಿಭಟನಾನಿರತ ಮಹಿಳೆಯರು ಶಹಜಹಾನ್‌ ಒಡೆತನದ ಮೂರು ಕೋಳಿ ಫಾರಂಗಳನ್ನು ಸುಟ್ಟುಹಾಕಿದರು.

ತೃಣಮೂಲ ಕಾಂಗ್ರೆಸ್‌ನ ರಕ್ಷಣೆ

ಇಷ್ಟಾದರೂ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್‌ ಮಾತ್ರ ಕಮಕ್‌ ಕಿಮಕ್‌ ಎನ್ನಲಿಲ್ಲ. ಬಿಜೆಪಿ ಮತ್ತಿತರ ವಿಪಕ್ಷಗಳು ಪ್ರತಿಭಟನೆಯನ್ನು ಜೋರಾಗಿಸಿದವು. ಆಡಳಿತಾರೂಢ ಟಿಎಂಸಿ ಆರೋಪಿಗೆ ರಕ್ಷಣೆ ನೀಡುತ್ತಿದೆ ಎಂದು ಬಿಜೆಪಿ, ಸಿಪಿ(ಐಎಂ) ಮತ್ತು ಕಾಂಗ್ರೆಸ್ ಆರೋಪಿಸಿದವು. ಮಹಿಳೆಯರ ಪ್ರತಿಭಟನೆಯ ಪರಿಣಾಮ ಸಂದೇಶಖಾಲಿಯಲ್ಲಿ ಪರಿಸ್ಥಿತಿ ಅವಲೋಕಿಸಲು ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅಲ್ಲಿಗೆ ಆಗಮಿಸಿದರು. ಅಲ್ಲಿದ್ದ ಮಹಿಳೆಯರೊಂದಿಗೆ ಮಾತನಾಡಿದ ನಂತರ ಬೋಸ್, “ಇದು ಘೋರ, ಆಘಾತಕಾರಿ, ಮನಸ್ಸನ್ನು ಛಿದ್ರಗೊಳಿಸುವ ಸಂಗತಿಯಾಗಿದೆ. ಮಾಡಬಾರದಂತಹದನ್ನು ಮಾಡಲಾಗಿದೆ. ಕೇಳಬಾರದ ಅನೇಕ ವಿಷಯಗಳನ್ನು ನಾನು ಕೇಳಿದ್ದೇನೆ. ಇದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ” ಎಂದು ಹೇಳಿಕೆ ನೀಡಿದರು. ಬೋಸ್ ಅವರು ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದರು.

ಪೊಲೀಸರು ಸಂದೇಶ್‌ಖಾಲಿಯ ಮಾಜಿ ಸಿಪಿಎಂ ಶಾಸಕ ನಿರಪದಾ ಸರ್ದಾರ್‌, ಸ್ಥಳೀಯ ಬಿಜೆಪಿ ನಾಯಕ ವಿಕಾಸ್‌ ಸಿಂಗ್‌ ಎಂಬವರನ್ನು ಆಳುವ ಸರ್ಕಾರದ ಸೂಚನೆಯಂತೆ ಬಂಧಿಸಿದರು. ಆರೋಪಿಗಳನ್ನು ಮುಟ್ಟದೆ ಬೇರೆಯವರನ್ನು ಬಂಧಿಸಿದ ಕ್ರಮವನ್ನು ಪ್ರತಿಭಟಿಸಲಾಯಿತು. ಸಂದೇಶ್‌ಖಾಲಿಗೆ ಹೋಗಲು ಹೊರಟ ಬಿಜೆಪಿ ನಿಯೋಗವನ್ನು ಅರ್ಧ ದಾರಿಯಲ್ಲೇ ಪೊಲೀಸರು ತಡೆದು ವಾಪಸ್‌ ಕಳಿಸಿದರು. ಈ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ರಾಜ್ಯದ ಬಿಜೆಪಿ ಅಧ್ಯಕ್ಷಷ ಸುಕಾಂತ ಮುಜುಂದಾರ್‌ ಗಾಯಗೊಂಡರು. ರಾಷ್ಟ್ರೀಯ ಮಹಿಲೆ ಆಯೋಗ, ರಾಷ್ಟ್ರೀಯ ಬುಡಕಟ್ಟು ಜಾತಿಗಳ ಆಯೋಗದ ಸಂದೇಶ್‌ಖಾಲಿಗೆ ಹೋಗಲು ಮುಂದಾದಾಗಲೂ ತಡೆಯಲಾಯಿತು.

ಹೈಕೋರ್ಟ್‌ ಕಿಡಿಕಿಡಿ

ಶಹಜಹಾನ್‌ ಶೇಖ್‌ ಪರಾರಿಯಾಗುತ್ತಲೇ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿತು. ಶಹಜಹಾನ್‌ ಶೇಖನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿತು. ನಂತರ ಆತನನ್ನು ಬಂಧಿಸಲಾಯಿತು. ಆತನ ಬಂಧನ ಆದ ಬಳಿಕವೇ ನಿರ್ವಾಹವಿಲ್ಲದೆ ತೃಣಮೂಲ ಕಾಂಗ್ರೆಸ್‌ ಆತನನ್ನು ಪಕ್ಷದಿಂದ ಉಚ್ಛಾಟಿಸಿತು. ಪ್ರಕರಣದಲ್ಲಿ ಶಹಜಹಾನ್‌ ಶೇಖ್‌ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು, “ಟಿಎಂಸಿ ನಾಯಕನಿಗೆ ಯಾವುದೇ ಕರುಣೆ, ದಯೆ ತೋರುವುದಿಲ್ಲ” ಎಂದು ಖಡಕ್‌ ಆಗಿ ಹೇಳಿತು. ಇಡಿ ಅಧಿಕಾರಿಗಳ ಮೇಲಿನ ದಾಳಿ ಸೇರಿ ಎಲ್ಲ ಪ್ರಕರಣಗಳನ್ನು ಸಿಬಿಐಗೆ ನೀಡಿ ಆದೇಶ ಹೊರಡಿಸಿದ್ದಲ್ಲದೆ, ಅವುಗಳ ದಾಖಲೆಯನ್ನು ಸಿಬಿಐಗೆ ನೀಡಬೇಕು ಎಂದು ಹೈಕೋರ್ಟ್‌ ಆದೇಶಿಸಿತು.

ಆದರೆ, ಶೇಖ್‌ ಶಹಜಹಾನ್‌ನನ್ನು ಸಿಬಿಐಗೆ ವಹಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತು. ಅಷ್ಟೇ ಅಲ್ಲ, ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಕೋಲ್ಕೊತಾ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು. ಹೈಕೋರ್ಟ್‌ ಮತ್ತೆ ಆದೇಶ ಹೊರಡಿಸಿ, ಸಿಬಿಐಗೆ ಒಪ್ಪಿಸಲು ತಿಳಿಸಿತು. ಅದರಂತೆ ಶಹಜಹಾನ್‌ನನ್ನು ಸಿಬಿಐ ವಶಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯ ಪೊಲೀಸರು ನೀಡಿದ್ದಾರೆ.

ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್‌, ಬ್ಯಾಂಕ್‌ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ.

ಯಾರಿವನು ಶೇಖ್‌ ಶಹಜಹಾನ್?‌

55 ದಿನಗಳ ಕಾಲ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದ ಶೇಖ್, ಸಂದೇಶ್‌ಖಾಲಿ ಪ್ರದೇಶದಲ್ಲಿ ಲೈಂಗಿಕ ಕಿರುಕುಳದ ಆರೋಪ, ಪಡಿತರ ವಿತರಣೆ ಹಗರಣದ ಆರೋಪಿಯಾಗಿದ್ದಾನೆ. ಜೊತೆಗೆ 10,000 ಕೋಟಿ ರೂ.ಮೌಲ್ಯದ ಭೂಕಬಳಿಕೆ ಆರೋಪವನ್ನೂ ಹೊತ್ತಿದ್ದಾನೆ. ಈತ ಬಾಂಗ್ಲಾ ದೇಶದಿಂದ ಪಶ್ಚಿಮ ಬಂಗಾಳಕ್ಕೆ ಬಂದ ನಿರಾಶ್ರಿತ. ಆರಂಭದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ವಂಚನೆ, ಸುಲಿಗೆಯಿಂದ ಬಹಳ ಬೇಗ ಸಾಕಷ್ಟು ಸಂಪತ್ತು ಗಳಿಸಿದ. ಸಂದೇಶ್‌ಖಾಲಿಯನ್ನಿಡೀ ಹೆದರಿಸಿ ಬೆದರಿಸಿ ಹದ್ದಬಸ್ತಿನಲ್ಲಿ ಇಟ್ಟ.

ಪಡಿತರ ಹಗರಣದಲ್ಲಿ ಈಗಾಗಲೇ ಬಂಧಿತರಾಗಿರುವ ಮಾಜಿ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರ ನಿಕಟವರ್ತಿ ಈ ಶೇಖ್. ಉತ್ತರ 24 ಪರಗಣ ಜಿಲ್ಲೆಯ ಬಾಂಗ್ಲಾ ದೇಶದ ಗಡಿಯ ಸಮೀಪದಲ್ಲಿರುವ ಸಂದೇಶ್‌ಖಾಲಿ ಅವನ ಭದ್ರಕೋಟೆಯಾಗಿದೆ. ಆರಂಭದಲ್ಲಿ ಗದ್ದೆ ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಶೇಖ್ ಕಾರ್ಮಿಕರನ್ನು ಸಂಘಟಿಸಿ ಒಕ್ಕೂಟವನ್ನು ಕಟ್ಟಿದ. ನಂತರ ರಾಜಕೀಯಕ್ಕೆ ಪ್ರವೇಶಿಸಿದ. ಮಲ್ಲಿಕ್ ಬೆಂಬಲದೊಂದಿಗೆ ಎಡಪಕ್ಷಕ್ಕೆ ಪ್ರವೇಶ ಪಡೆದ. ಬಂಗಾಳದಲ್ಲಿ ರಾಜಕೀಯ ಬದಲಾವಣೆಯ ಅಲೆಯೊಂದಿಗೆ ಶೇಖ್ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ.

ಸ್ಥಳೀಯ ಮೀನುಗಾರಿಕೆ ಹಾಗೂ ಸಿಗಡಿ ಕೃಷಿಯನ್ನು ಈತ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ, ಇದಕ್ಕೆ ಬೇಕಾದ ಜಮೀನನ್ನು ಸ್ಥಳಿಯರಿಂದ ಬಲವಂತವಾಗಿ ಕಿತ್ತುಕೊಂಡು, ಅವರನ್ನು ಹಣ ಕೊಡದೇ ಹೊರದಬ್ಬುತ್ತಿದ್ದ. ಸ್ಥಳೀಯ ಪೊಲೀಸರು ಇವನ ಲಂಚಕ್ಕೆ ಬಾಯಿ ಒಡ್ಡಿ ಸುಮ್ಮನಿದ್ದರು. ಹೀಗಾಗಿ ಇವನು ಆಡಿದ್ದೇ ಆಟವಾಗಿತ್ತು. ಈತನಿಂದ ನೊಂದ ಹಲವು ಮಹಿಳೆಯರು, ಪುರುಷರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವನನ್ನು ವಿರೋಧಿಸಿದ ಹಲವು ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆದರೆ ಯಾವ ಪ್ರಕರಣವೂ ಈತನ ವಿರುದ್ಧ ಸಾಬೀತಾಗಿಲ್ಲ.

ಇದನ್ನೂ ಓದಿ: ED Raids: ಸಂದೇಶಖಾಲಿಯ ವಿವಿಧೆಡೆ ಇ.ಡಿ ದಾಳಿ; ಶೇಖ್ ಶಹಜಹಾನ್‌ನ ಸಹಚರರ ನಿವಾಸಗಳಲ್ಲಿ ಶೋಧ

Exit mobile version