ಸಂದರ್ಶನ : ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್ ನಟಿ ಹಾಗೂ ಮಾಡೆಲ್ ಇತಿ ಆಚಾರ್ಯ, ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸತತವಾಗಿ 3 ನೇ ಬಾರಿ ರೆಡ್ ಕಾರ್ಪೆಟ್ ವಾಕ್ ಮಾಡಿ, ಹ್ಯಾಟ್ರಿಕ್ ಬಾರಿಸಿದ್ದಾರೆ. ಯಾರಿದು ಇತಿ ಆಚಾರ್ಯ? ಕಳೆದೆರಡು ಬಾರಿಯೂ ಕಾನ್ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್ ಪ್ರತಿನಿಧಿಸಿರುವ ಇತಿ ಆಚಾರ್ಯ, ಸಾಕಷ್ಟು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇಕೆ! ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿಯೂ ರ್ಯಾಂಪ್ ವಾಕ್ ಮಾಡಿದ್ದಾರೆ. ಇಂಟರ್‌ನ್ಯಾಷನಲ್ ಆಲ್ಬಂ ಸಿಂಗರ್ ಮರ್ಲಿನ್ ಬಾಬಾಜೀ ಜೊತೆ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿ ಕಾನ್‌ನಲ್ಲಿ ಲ್ಯಾವೆಂಡರ್ ಎಲಾಂಗೆಟೆಡ್ ನೆಟ್ ಗೌನ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಕಳೆದ ಬಾರಿಯೂ ಇದೇ ರೀತಿ ಟ್ರೆಂಡಿ ಡಿಸೈನರ್ ಗೌನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ದೂರದ ಫ್ರಾನ್ಸ್‌ನಿಂದಲೇ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡ ಇತಿ ಆಚಾರ್ಯ ಪುಟ್ಟ ಸಂದರ್ಶನ (Cannes 2024 Sandalwood Actress Interview) ನೀಡಿದರು.
ಕಾನ್ 2024 ರೆಡ್‌ಕಾರ್ಪೆಟ್‌ನಲ್ಲಿ ನಿಮ್ಮ ಲುಕ್ ಬಗ್ಗೆ ನೀವು ಹೇಳುವುದೇನು?
ಸ್ಕೈ ಬ್ಲ್ಯೂ ಶೇಡ್‌ನ ಶಿಮ್ಮರ್ ಅಸೆಮ್ಮಿಟ್ರಿಕಲ್ ಸಿಂಗಲ್ ಶೋಲ್ಡರ್ ಫಿಶ್ ಟೇಲ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೂ, ಹೆಚ್ಚು ಹೈಲೈಟಾದ ಗೌನ್ ಇದು.
ಕಾನ್ ರೆಡ್‌ಕಾರ್ಪೆಟ್ ವಾಕ್ ನಿಮಗೆ ಕಲಿಸಿದ್ದೇನು?
ಈಗಾಗಲೇ ಸತತವಾಗಿ 3ನೇ ಬಾರಿ ವಾಕ್ ಮಾಡಿರುವುದು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕೇವಲ ಫ್ಯಾಷನ್ ಮಾತ್ರವಲ್ಲ, ಸಿನಿಮಾ ಕುರಿತಂತೆಯೂ ಸಾಕಷ್ಟು ವಿಚಾರ-ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಸಿದೆ.
ನಿಮ್ಮ ಪ್ರಕಾರ, ಕಾನ್ ಫೆಸ್ಟಿವಲ್ ಚಿತ್ರಣ ಹೇಗಿತ್ತು?
ಜಾಗತೀಕ ಮಟ್ಟದ ಫ್ಯಾಷನ್ ಸ್ಟಾರ್‌ಗಳು ವಾಕ್ ಮಾಡುವುದನ್ನು ನೋಡುವುದೇ ಒಂದು ಖುಷಿ!. 23 ಸಾವಿರಕ್ಕೂ ಹೆಚ್ಚು ಇಂಟರ್‌ನ್ಯಾಷನಲ್ ಬ್ರಾಂಡ್‌ಗಳು ಭಾಗವಹಿಸಿದ್ದವು. ಬೆಂಗಳೂರಿನ ಜ್ಯುವೆಲರಿ ಬ್ರಾಂಡ್ ಕೂಡ ಕಾಣಿಸಿಕೊಂಡಿತು. ಪ್ರಪಂಚಾದಾದ್ಯಂತ ಇರುವ ಡಿಸೈನರ್‌ಗಳಿಗೆ ಇದು ದೊಡ್ಡ ವೇದಿಕೆಯಾಗಿದ್ದು, ಪ್ರಾಕ್ಟಿಕಲ್ ಪಾಠದ ಪ್ರದರ್ಶನದಂತಿತ್ತು.
ಕಾನ್ ಫ್ಯಾಷನ್‌ನಲ್ಲಿ ವಾಕ್ ಮಾಡುವುದು ಸುಲಭವೇ!
ಖಂಡಿತಾ ಇಲ್ಲ! ಇಂಡಿಯನ್ ನಟಿಯರಿಗೆ ಡಿಸೈನರ್ ಜೊತೆ ಹೋಗಲು ಅವಕಾಶವಿರುವುದಿಲ್ಲ. ಒಬ್ಬರೇ ಭಾರಿ ಗಾತ್ರದ ಡಿಸೈನರ್‌ವೇರ್ ಧರಿಸಿ ವಾಕ್ ಮಾಡಬೇಕಾಗುತ್ತದೆ. ಜಾರಿ ಬಿದ್ದರೇ ನಗೆಪಾಟಲಿಗೀಡಾಗುವುದಂತೂ ಗ್ಯಾರಂಟಿ!
ಇದನ್ನೂ ಓದಿ: Summer Dress Fashion: ಸೀಸನ್ ಎಂಡ್ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್!
ಕಾನ್‌ನಲ್ಲಿ 3 ನೇ ಬಾರಿ ವಾಕ್ ಮಾಡಿದ ಮೊದಲ ಕನ್ನಡ ನಟಿಯಾದ ನಿಮ್ಮ ಅಭಿಪ್ರಾಯವೇನು?
ಹೆಮ್ಮೆ ಎಂದೆನಿಸುತ್ತದೆ. ಕನ್ನಡದ ನಟಿಯರೂ ಕಡಿಮೆಯೇನಿಲ್ಲ! ಎಂಬುದನ್ನು ಅಂತರಾಷ್ಟ್ರೀಯ ಮಟ್ಟದ ರೆಡ್‌ಕಾರ್ಪೆಟ್‌ನಲ್ಲಿ 3 ಬಾರಿ ವಾಕ್ ಮಾಡುವುದರ ಮೂಲಕ ಪ್ರೂವ್ ಮಾಡಿ ತೋರಿಸಿದ್ದೇನೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)