ಬೆಂಗಳೂರು: ಮಿಸಸ್ ಇಂಡಿಯಾ ಕರ್ನಾಟಕ ಎಂಬ ವಿಭಿನ್ನ ಸ್ಪರ್ಧೆಯ ಅಂತಿಮ ಸುತ್ತು ಇಲ್ಲಿನ ಯಲಹಂಕದಲ್ಲಿ ಆಗಸ್ಟ್ 8ರಿಂದ ಆರಂಭವಾಗಿದ್ದು, ೧೦ರವರೆಗೆ ನಡೆಯಲಿದೆ. ಇದು ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆಯಾಗಿದ್ದು, ಪ್ರತಿಭಾ ಸಂಶೀಮಠ್ ನೇತೃತ್ವ ವಹಿಸಿದ್ದಾರೆ.
ವಿಭಿನ್ನ ಸ್ಪರ್ಧೆಯ ಆರಂಭ ಹೇಗೆ?
ಪ್ರತಿಭಾ ಸಂಶೀಮಠ್ ಅವರು 2015ನೇ ಸಾಲಿನ ಅಂತಾರಾಷ್ಟ್ರೀಯ ‘ಕ್ಲಾಸಿಕ್ ಮಿಸಸ್ ಏಷಿಯಾ ಇಂಟರ್ನಾಶನಲ್ ಫೋಟೋಜೆನಿಕ್ʼ ಎಂಬ ಸೌಂದರ್ಯ ಸ್ಪರ್ಧೆಯ ವಿಜೇತರಾಗಿದ್ದಾರೆ. ವಿವಾಹಿತ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯ ಸಾಧಿಸುವ ಮೂಲಕ “ಮಿಸಸ್ ಇಂಡಿಯಾ” ಕಿರೀಟ ಗೆದ್ದ ದಕ್ಷಿಣ ಭಾರತದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪ್ರತಿಭಾ ಪಾತ್ರರಾಗಿದ್ದಾರೆ. ಇವರು ಕರ್ನಾಟಕದವರಾಗಿದ್ದು, ರಾಜ್ಯಕ್ಕೆ ಕೀರ್ತಿ ತಂದವರು.
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಆಯೋಜನೆ
ವಿವಾಹಿತ ಮಹಿಳೆಯರಿಗಾಗಿ ದಕ್ಷಿಣ ಭಾರತದಲ್ಲಿ ಯಾವುದೇ ರೀತಿಯ ಸೌಂದರ್ಯ ಸ್ಪರ್ಧೆ ಆಯೋಜನೆ ಆಗದಿರುವ ಹಿನ್ನೆಲೆಯಲ್ಲಿ ಪ್ರತಿಭಾ ಸಂಶೀಮಠ್ ಅವರು ದಕ್ಷಿಣ ಭಾರತದ ವಿವಾಹಿತ ಮಹಿಳೆಯರಿಗಾಗಿ ʼಮಿಸಸ್ ಇಂಡಿಯಾ ಕರ್ನಾಟಕʼ ಎಂಬ ವಿಶಿಷ್ಟವಾದ ಸ್ಪರ್ಧೆಗೆ 2016ರಲ್ಲಿ ಚಾಲನೆ ನೀಡಿದರು. ಇದು ಕನ್ನಡದ ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಿದ ಪ್ರಥಮ ಹಾಗೂ ಅತಿ ದೊಡ್ಡ ಸೌಂದರ್ಯ ಸ್ಪರ್ಧೆಯಾಗಿದೆ. ಇದರಲ್ಲಿ ಕರ್ನಾಟಕದ ಮಹಿಳಯರು ಮಾತ್ರವಲ್ಲದೆ, ಇತರ ರಾಜ್ಯದ ಕನ್ನಡಿಗರೂ ಭಾಗವಹಿಸಬಹುದಾಗಿದೆ. ಈ ಸಾಲಿನಲ್ಲಿ ನಡೆಯುತ್ತಿರುವ ʼಮಿಸಸ್ ಇಂಡಿಯಾ ಕರ್ನಾಟಕʼ ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗವಿದೆ.
ಯಾಕೆ ಈ ಸ್ಪರ್ಧೆ?
ಈ ವೇದಿಕೆಯು ಮಹಿಳೆಯರಿಗೆ ಜೀವನದಲ್ಲಿ ಹೆಚ್ಚು ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ. ವಯಸ್ಸು ಎಂದರೆ ಕೇವಲ ಸಂಖ್ಯೆ ಎಂದು ಈ ಸ್ಪರ್ಧೆ ನಂಬಿರುತ್ತದೆ. ಹೀಗಾಗಿ ಈ ಸ್ಪರ್ಧೆಯಲ್ಲಿ 60 ವಯಸ್ಸಿನ ಮೇಲ್ಪಟ್ಟ ಮಹಿಳೆಯರೂ ಭಾಗವಹಿಸಬಹುದು. ಅವರಿಗಾಗಿ “ಸೂಪರ್ ಕ್ಲಾಸಿಕ್” ಎಂಬ ವಿಶೇಷ ವರ್ಗವನ್ನು ಮಾಡಲಾಗಿದೆ ಎಂದು ಪ್ರತಿಬಾ ಸಂಶೀಮಠ್ ತಿಳಿಸಿದ್ದಾರೆ.
ಪ್ರತಿವರ್ಷವೂ ಈ ಸ್ಪರ್ಧೆಯನ್ನು ವಿನೂತವಾಗಿ ಆಯೋಜಿಸಲಾಗುತ್ತದೆ. ಇದರಿಂದ ರಾಜ್ಯದ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ. ರಿ-ಯೂಸ್, ರಿ-ಸ್ಟೈಲ್, ರಿ-ಸೈಕಲ್ : ಈ 3 ‘ಆರ್’ ಗಳ ಸಿದ್ಧಾಂತವನ್ನು ಈ ಸ್ಪರ್ಧೆಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರತಿಭಾ ತಿಳಿಸಿದ್ದಾರೆ.
ಏನಿರಲಿದೆ ಈ ಸ್ಪರ್ಧೆಯಲ್ಲಿ?
ಪೈಜಾಮ ಹಾಗೂ ಇತರ ವಿಭಿನ್ನ ಉಡುಪಗಳನ್ನು ಧರಿಸಿ ಫೋಟೋಶೂಟ್ ಮಾಡಿಸಲಾಗುತ್ತದೆ. ಅಲ್ಲದೆ, ಈ ಸ್ಪರ್ಧೆಯಲ್ಲಿ ಗಿಲ್ಲಿ ದಾಂಡು, ಲಗೋರಿ, ಖೋ-ಖೋ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಡಿಸಲಾಗುತ್ತದೆ. ಈ ಮೂಲಕ ಭಾರತೀಯ ಕ್ರೀಡೆಗಳನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರತಿಭಾ ಹೇಳಿದ್ದಾರೆ.
ಈ ವರ್ಷ ಏನಿರಲಿದೆ?
ಈ ಸ್ಪರ್ಧೆ ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಅಗಸ್ಟ್ 8ರಿಂದ ಆರಂಭಗೊಂಡು ಆಗಸ್ಟ್ ೧೦ಕ್ಕೆ ಅಂತಿಮ ಸುತ್ತು ನಡೆಯಲಿದೆ. ಈ ಬಾರಿ ಸ್ಪರ್ಧಿಗಳು ಕರ್ನಾಟಕದ ಕೈಮಗ್ಗ ಸೀರೆಗಳನ್ನೇ ಧರಿಸಲಿದ್ದಾರೆ. ಈ ವಿಭಿನ್ನ ಯೋಚನೆಗೆ ಸ್ಫೂರ್ತಿಯಾಗಿದ್ದು, ನನ್ನ ಮಗಳು ಎಂದು ಪ್ರತಿಭಾ ಹೇಳುತ್ತಾರೆ. ಇಳಕಲ್ ಸೀರೆ ಖರೀದಿಸುವ ಸಂದರ್ಭದಲ್ಲಿ ರಾಜ್ಯದ ಕೈಮಗ್ಗ ವಸ್ತುಗಳನ್ನು ಪ್ರದರ್ಶಿಸಿ ಅವುಗಳಿಗೆ ಉತ್ತೇಜನ ನೀಡಬೇಕು ಎಂಬ ಯೋಚನೆ ಮೂಡಿತು ಎಂದು ಪ್ರತಿಭಾ ತಿಳಿಸಿದ್ದಾರೆ.
ಇದರಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಅಲ್ಲದೆ, ಮುಂಬೈ ಮತ್ತು ಮಸ್ಕತ್ ಪ್ರದೇಶದಿಂದ ಕೂಡ ಸ್ಪರ್ಧಿಗಳು ಆಗಮಿಸಲಿದ್ದು, ಒಟ್ಟು 36 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಗೃಹಿಣಿಯರೂ ಸೇರಿದಂತೆ ವೈದ್ಯಕೀಯ, ಸಾಫ್ಟ್‌ವೇರ್ ಇಂಜಿನಿಯರಿಂಗ್, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರಗಳ ಮಹಿಳೆಯರೂ ಭಾಗವಹಿಸುತ್ತಾರೆ.