-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚಾರಣೆ (Independence day Fashion 2024) ಸಮೀಪಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ದಿನದಂದು ಧರಿಸಬಹುದಾದ ನಾನಾ ಬಗೆಯ ಡಿಸೆಂಟ್ ಲುಕ್ ನೀಡುವಂತಹ ಸಿಂಪಲ್ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಅಂದಹಾಗೆ, ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚಾರಣೆ ಸೆಲೆಬ್ರೇಷನ್‌ಗೆ ಧರಿಸಬಹುದಾದ ನಾನಾ ಬಗೆಯ ಎಥ್ನಿಕ್ ಡಿಸೈನರ್‌ವೇರ್‌ಗಳು ಬಿಡುಗಡೆಗೊಳ್ಳುತ್ತವೆ. ಆದರೆ, ಆಯಾ ಸೀಸನ್‌ಗೆ ತಕ್ಕಂತೆ ಹಾಗೂ ಜನರೇಷನ್‌ಗೆ ಮ್ಯಾಚ್ ಆಗುವಂತೆ ಡಿಸೈನ್‌ನಲ್ಲಿ ಬದಲಾವಣೆಗಳಾಗಿರುತ್ತವೆ. ಧರಿಸುವ ವ್ಯಕ್ತಿ ಹಾಗೂ ಕ್ಷೇತ್ರಕ್ಕೂ ಹೊಂದುವಂತಹ ಉಡುಗೆಗಳು ಎಂಟ್ರಿ ನೀಡುತ್ತವೆ. ಆ ದಿನದ ಕಾನ್ಸೆಪ್ಟ್ ಹಾಗೂ ಥೀಮ್ ಪ್ರತಿ ವರ್ಷ ಒಂದೇ ಆದರೂ ಹೊಸ ರೂಪದಲ್ಲಿ ಹಾಗೂ ನವವಿನ್ಯಾಸದಲ್ಲಿ ಬಿಡುಗಡೆಗೊಳ್ಳುತ್ತವೆ ಎನ್ನುತ್ತಾರೆ.
ಸಮೀಕ್ಷಾ ವರದಿ
ಅಪರೆಲ್ ಸಂಸ್ಥೆಯೊಂದರ ಸಮೀಕ್ಷೆಯೊಂದರ ಪ್ರಕಾರ, ಈ ವಿಶೇಷ ದಿನದಂದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅತಿ ಹೆಚ್ಚು ಮಂದಿ ಬಗೆಬಗೆಯ ಕುರ್ತಾ ಧರಿಸುತ್ತಾರಂತೆ. ಹಾಗಾಗಿ ಪ್ರತಿ ವರ್ಷವೂ ಈ ಸೀಸನ್‌ನಲ್ಲಿ ಅತಿ ಹೆಚ್ಚು ಕುರ್ತಾಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವಂತೆ.
ಯೂನಿಸೆಕ್ಸ್ ಕುರ್ತಾ
ಈ ಸಾಲಿನಲ್ಲಿ ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಧರಿಸಬಹುದಾದ ಯೂನಿ ಸೆಕ್ಸ್ ಕುರ್ತಾಗಳು ನಯಾ ಡಿಸೈನ್‌ನಲ್ಲಿ ಬಂದಿವೆ. ಇನ್ನು ಎಂದಿನಂತೆ ಪುಟ್ಟ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ವಯಸ್ಸಿನವರಿಗೂ ನಾನಾ ಡಿಸೈನ್‌ಗಳಲ್ಲಿ ಇವು ಎಂಟ್ರಿ ನೀಡಿದ್ದು, ಕಾಟನ್, ಖಾದಿ, ರಯಾನ್, ಲೆನಿನ್‌ನ ಪಾಕೆಟ್ ಕುರ್ತಾ, ಕುರ್ತಾ ಬಂದ್ಗಾಲ ಸೆಟ್, ಬಟನ್‌ಲೆಸ್ ಸ್ಲಿವ್‌ಲೆಸ್ ಕುರ್ತಾ ಹಾಗೂ ಜಿಪ್ ಕುರ್ತಾಗಳು ಈ ಬಾರಿ ಎಂಟ್ರಿ ಪಡೆದಿವೆ ಎನ್ನುತ್ತಾರೆ ಮಾರಾಟಗಾರರು.
ದೇಶ ಪ್ರೇಮ ಬಿಂಬಿಸುವ ಸಿಂಪಲ್ ಸೀರೆಗಳಿಗೆ ಡಿಮ್ಯಾಂಡ್
ಈ ವಿಶೇಷ ದಿನದಂದು ಸಿಂಪಲ್ ಎಥ್ನಿಕ್ ಡಿಸೈನರ್‌ವೇರ್‌ಗಳಿಗೆ ಅತಿ ಹೆಚ್ಚು ಬೇಡಿಕೆ. ಮಹಿಳೆಯರ ವಿಷಯಕ್ಕೆ ಬಂದಲ್ಲಿ, ಪಾಸ್ಟೆಲ್ ಹಾಗೂ ಕ್ರೀಮ್, ಹಾಫ್ ವೈಟ್, ವೈಟ್, ತಿರಂಗಾ ವರ್ಣದ ಖಾದಿ, ಕಾಟನ್‌ನ, ಸೆಮಿ ಸಿಲ್ಕ್ ಸಿಂಪಲ್ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ಆಗಮಿಸಿವೆ.
ಇದನ್ನೂ ಓದಿ: Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!
ತ್ರಿ ವರ್ಣದ ಲೆಹೆಂಗಾ & ಸಲ್ವಾರ್ ಕಮೀಜ್ ಸೆಟ್
ಇನ್ನು, ಯುವತಿಯರಿಗೆ ಇಷ್ಟವಾಗುವಂತಹ ಡಿಸೈನ್‌ನ ತ್ರಿವರ್ಣ ಶೇಡ್‌ನ ಲೆಹೆಂಗಾ, ಕಮೀಜ್, ಲಂಗ-ದಾವಣಿ ಸೆಟ್‌ಗಳು ರಾಷ್ಟ್ರಪ್ರೇಮ ಬಿಂಬಿಸುವ ಕಲರ್ ಕಾಂಬಿನೇಷನ್‌ಗಳಲ್ಲಿ ಬಂದಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)