ಸಂದರ್ಶನ : ಶೀಲಾ ಸಿ. ಶೆಟ್ಟಿ
ಈ ಸಾಲಿನ 66ನೇ ಗ್ರ್ಯಾಮಿ ಅವಾರ್ಡ್ ರೆಡ್‌ಕಾರ್ಪೆಟ್ ನಲ್ಲಿ ಕನ್ನಡದ ನಟಿ ಯಮುನಾ ಶ್ರೀನಿಧಿಯವರು ಸೀರೆಯಲ್ಲಿ (Actress Saree Fashion) ಹೆಜ್ಜೆ ಹಾಕಿ, ಕನ್ನಡಿಗರ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಈ ವರ್ಣರಂಜಿತ ಸಮಾರಂಭದಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಚಾರ. ಇನ್ನು, ಇಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳು ಗ್ಲಾಮರಸ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ, ಯಮುನಾ ಅವರು ಮಾತ್ರ, ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ವಿಸ್ತಾರ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ತಮ್ಮ ಸೀರೆ ಫ್ಯಾಷನ್ ಹಾಗೂ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಸ್ತಾರ ನ್ಯೂಸ್
ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆ ಧರಿಸುವ ಬಗ್ಗೆ ನೀವು ಯೋಚಿಸಿದ್ದೇಕೆ?
ಯಮುನಾ ಶ್ರೀ ನಿಧಿ
66ನೇ ಗ್ರ್ಯಾಮಿ ಅವಾರ್ಡ್ಸ್‌ಗೆ ಹಾಜರಾಗುತ್ತಿದ್ದೇನೆ ಎಂಬ ಸುದ್ದಿಯನ್ನು ನಾನು ಮೊದಲು ಬಹಿರಂಗಪಡಿಸಿದಾಗ, ನನಗೆ ಹೆಚ್ಚು ಮಂದಿ ಕೇಳಿದ ಮೊದಲ ಪ್ರಶ್ನೆಯೆಂದರೆ, “ನೀವು ಏನು ಧರಿಸಲಿದ್ದೀರಿ?” ಎಂಬುದಾಗಿತ್ತು. ಕಾರಣ, ವೆಸ್ಟರ್ನ್ ಗೌನ್ ಎಂದು ಹಲವರು ಭಾವಿಸಿದ್ದರು. ಆದರೆ, ನಾನು ಸಂಸ್ಕೃತಿ, ನಂಬಿಕೆ ಹಾಗೂ ಆಚರಣೆಗಳಿಗೆ ಪೂರಕವಾಗಿ ನಮ್ಮ ಮೌಲ್ಯಗಳನ್ನು ಹಾಗೂ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಸೀರೆಯನ್ನು ಆಯ್ಕೆ ಮಾಡಿದೆ.
ವಿಸ್ತಾರ ನ್ಯೂಸ್
ಅಂತಾರಾಷ್ಟ್ರೀಯ ಮಟ್ಟದ ಈ ಸಮಾರಂಭದಲ್ಲಿ ಸೀರೆಗೆ ಆದ್ಯತೆ ನೀಡಿದ ನೀಡಬೇಕೆಂಬ ಭಾವ ನಿಮಗೆ ಅನಿಸಿದ್ದು ಯಾಕೆ?
ಯಮುನಾ ಶ್ರೀ ನಿಧಿ
ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನಾನು ಏನನ್ನು ಧರಿಸಬೇಕು ಎಂಬುದು ನನಗೆ ಮೊದಲೇ ಸ್ಪಷ್ಟವಾಗಿ ತಿಳಿದಿತ್ತು. ಭಾರತೀಯ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ನನಗೆ ದೊರಕಿತ್ತು. ಗುಂಪಲ್ಲಿ ಒಬ್ಬಳಾಗಿ ಕಾಣುವ ಬದಲು, ಸಾಂಪ್ರದಾಯಿಕ ಸೀರೆಯನ್ನು ಉಟ್ಟು ಓಡಾಡಲು ನಿರ್ಧರಿಸಿದೆ. ಅಲ್ಲಿ ಭೇಟಿಯಾದ ಎಲ್ಲಾ ಪ್ರಸಿದ್ಧ ಗಾಯಕರು “ಸ್ಯಾರಿ” ಎಂದು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು!
ವಿಸ್ತಾರ ನ್ಯೂಸ್
ನೀವು ಧರಿಸಿದ್ದ ಡಿಸೈನರ್ ಸೀರೆಯ ಬಗ್ಗೆ ವಿವರಿಸಿ?
ಯಮುನಾ ಶ್ರೀನಿಧಿ
ನಾನು ಧರಿಸಿದ ಕಾಟನ್ ಮಿಶ್ರಣದ ಹಾರ್ಡ್‌ಸಿಲ್ಕ್ ಸೀರೆಯು ಲಾಸ್ ಏಂಜಲೀಸ್ನ ವಿಂಟರ್ ಸೀಸನ್‌ನಲ್ಲೂ ಬೆಚ್ಚಗಿರಿಸಿತ್ತು. ಇನ್ನು ಸೀರೆಯ ಬಣ್ಣ ಬಿಳಿಯಾಗಿತ್ತು. ಇದು ವಿಶ್ವ ಶಾಂತಿಯ ಧ್ಯೋತಕವಾಗಿತ್ತು. ಸೀರೆ ಮೇಲಿನ ನವಿಲು ಗರಿ ಮತ್ತು ಕೊಳಲಿನ ಕಸೂತಿ ಭಗವಾನ್ ಕೃಷ್ಣ ಮತ್ತು ದೈವಿಕ ಸಂಗೀತವನ್ನು ಪ್ರತಿನಿಧಿಸುತ್ತಿತ್ತು.
ವಿಸ್ತಾರ ನ್ಯೂಸ್
ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಯಮುನಾ ಶ್ರೀನಿಧಿ
ನನ್ನ ವ್ಯಕ್ತಿತ್ವಕ್ಕೆ ಅನುಗುಣವಾದ ಫ್ಯಾಷನ್ ಸ್ಟೇಟ್‌ಮೆಂಟ್ ನನ್ನದು. ಕಂಫರ್ಟ್ ಲೆವೆಲ್ ಮತ್ತು ಸ್ಟೈಲ್‌ಗೆ ಅನುಸಾರವಾಗಿ ಡ್ರೆಸ್ಸಿಂಗ್ ಮಾಡುವುದು ನನ್ನ ಸ್ಟೈಲಿಂಗ್‌ನಲ್ಲಿದೆ.
ವಿಸ್ತಾರ ನ್ಯೂಸ್
ನಿಮ್ಮ ಪ್ರಕಾರ, ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶಿಗರಿಗೆ ಇರುವ ಅಭಿಪ್ರಾಯವೇನು ?
ಯಮುನಾ ಶ್ರೀನಿಧಿ
ಕಳೆದ ಕೆಲವು ವರ್ಷದಿಂದ ಸಾಕಷ್ಟು ಬದಲಾವಣೆಯಾಗಿದ್ದು, ಕೇವಲ ನಾವು ಧರಿಸುವ ಧಿರಿಸುಗಳನ್ನು ಇಷ್ಟಪಡುವುದು ಮಾತ್ರವಲ್ಲ, ಅದರೊಂದಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಹಾರ- ಉಡುಗೆ, ಪ್ರವಾಸೋದ್ಯಮ, ಇತಿಹಾಸ, ತಂತ್ರಜ್ಞಾನ ಮತ್ತು ಬೆಳವಣಿಗೆಯ ತಿಳಿದುಕೊಳ್ಳಲು ವಿದೇಶಿಗರು ಆಸಕ್ತಿ ತೋರಿಸುತ್ತಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Galentine’s day Partywears: ಗ್ಯಾಲೆಂಟೈನ್ಸ್ ಡೇಯಂದು ಟ್ರೆಂಡಿಯಾದ 3 ಶೈಲಿಯ ಬಿಂದಾಸ್ ಪಾರ್ಟಿವೇರ್ಸ್